Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಸಮುಯೇಲ 6 - ಕನ್ನಡ ಸತ್ಯವೇದವು J.V. (BSI)


ಫಿಲಿಷ್ಟಿಯರು ದೇವರ ಮಂಜೂಷವನ್ನು ಹಿಂದಕ್ಕೆ ಕಳುಹಿಸಿದ್ದು

1 ಯೆಹೋವನ ಮಂಜೂಷವು ಫಿಲಿಷ್ಟಿಯರ ದೇಶದಲ್ಲಿ ಏಳು ತಿಂಗಳಿದ್ದ ನಂತರ

2 ಫಿಲಿಷ್ಟಿಯರು ಪೂಜಾರಿಗಳನ್ನೂ ಕಣಿಹೇಳುವವರನ್ನೂ ಕರೆದು ಅವರಿಗೆ - ಯೆಹೋವನ ಮಂಜೂಷವನ್ನು ಏನು ಮಾಡಬೇಕು? ಅದನ್ನು ತಿರಿಗಿ ಅದರ ಸ್ಥಳಕ್ಕೆ ಹೇಗೆ ಕಳುಹಿಸಬೇಕು? ತಿಳಿಸಿರಿ ಅನ್ನಲು ಅವರು -

3 ನೀವು ಇಸ್ರಾಯೇಲ್‍ದೇವರ ಮಂಜೂಷವನ್ನು ಸುಮ್ಮನೆ ಕಳುಹಿಸಬಾರದು; ಪ್ರಾಯಶ್ಚಿತ್ತದ್ರವ್ಯದೊಡನೆ ಕಳುಹಿಸಿದರೆ ಮಾತ್ರ ಗುಣಹೊಂದುವಿರಿ; ಆತನ ಶಿಕ್ಷಾಹಸ್ತವು ನಿಮ್ಮನ್ನು ಬಾಧಿಸುತ್ತಿದ್ದದ್ದಕ್ಕೆ ಕಾರಣವು ಗೊತ್ತಾಗುವದು ಎಂದು ಹೇಳಿದರು.

4 ಜನರು - ನಾವು ಪ್ರಾಯಶ್ಚಿತ್ತಾರ್ಥವಾಗಿ ಕಳುಹಿಸತಕ್ಕದ್ದೇನು ಎನ್ನಲು ಅವರು - ನಿಮಗೂ ನಿಮ್ಮ ಪ್ರಭುಗಳಿಗೂ ಒಂದೇ ವಿಧ ವ್ಯಾಧಿಯಿರುವದರಿಂದ ಪ್ರಭುಗಳ ಸಂಖ್ಯೆಗೆ ಸರಿಯಾಗಿ ಬಂಗಾರದ ಐದು ಗಡ್ಡೆಗಳನ್ನೂ ಇಲಿಗಳನ್ನೂ ಮಾಡಿಸಬೇಕು.

5 ನೀವು ನಿಮ್ಮ ದೇಶನಿವಾಸಿಗಳ ವಿನಾಶಕ್ಕೆ ಕಾರಣವಾಗಿರುವ ಗಡ್ಡೆ ಮತ್ತು ಇಲಿ ಇವುಗಳ ಸ್ವರೂಪಗಳನ್ನು ಚಿನ್ನದಿಂದ ಮಾಡಿಸಿ ಇಸ್ರಾಯೇಲ್‍ದೇವರಿಗೆ ಬಹುಮಾನವಾಗಿ ಕೊಟ್ಟರೆ ಆತನ ಶಿಕ್ಷಾಹಸ್ತವು ನಿಮ್ಮನ್ನೂ ನಿಮ್ಮ ದೇವತೆಗಳನ್ನೂ ಪ್ರಾಂತಗಳನ್ನೂ ಬಿಟ್ಟುಹೋದೀತು.

6 ಐಗುಪ್ತ್ಯರಂತೆಯೂ ಫರೋಹನಂತೆಯೂ ನಿಮ್ಮ ಹೃದಯಗಳನ್ನು ಕಠಿಣಪಡಿಸಿಕೊಳ್ಳುವದೇಕೆ? ಇಸ್ರಾಯೇಲ್ಯರನ್ನು ಕಳುಹಿಸಲೊಲ್ಲದ ಇವರನ್ನು ಯೆಹೋವನು ಎಷ್ಟೋ ವಿಧವಾಗಿ ಬಾಧಿಸಬೇಕಾಯಿತಲ್ಲಾ.

7 ಈಗ ನೀವು ಒಂದು ಹೊಸ ಬಂಡಿಯನ್ನು ಮಾಡಿಸಿ ಅದಕ್ಕೆ ಹಾಲು ಕರೆಯುವ ಮತ್ತು ಎಂದೂ ನೊಗಹೊರದ ಎರಡು ಹಸುಗಳನ್ನು

8 ಹೂಡಿ ಆ ಬಂಡಿಯ ಮೇಲೆ ಯೆಹೋವನ ಮಂಜೂಷವನ್ನೂ ನೀವು ಪ್ರಾಯಶ್ಚಿತ್ತಾರ್ಥವಾಗಿ ಕೊಡುವ ಬಂಗಾರದ ವಸ್ತುಗಳುಳ್ಳ ಚಿಕ್ಕ ಪೆಟ್ಟಿಗೆಯನ್ನೂ ಇಟ್ಟು ಕಳುಹಿಸಿಬಿಡಿರಿ. ಆ ಹಸುಗಳ ಕರುಗಳನ್ನು ಮನೆಗೆ ತೆಗೆದುಕೊಂಡು ಹೋಗಿರಿ.

9 ಅದು ತಾನಾಗಿ ಸ್ವದೇಶದ ದಾರಿ ಹಿಡಿದು ಬೇತ್‍ಷೆಮೆಷಿನ ಕಡೆಗೆ ಹೋದರೆ ಈ ದೊಡ್ಡ ಕೇಡನ್ನು ಬರಮಾಡಿದವನು ಯೆಹೋವನೇ ಎಂದೂ ಆ ಮಾರ್ಗ ಹಿಡಿಯದಿದ್ದರೆ ಆತನ ಹಸ್ತವು ನಮ್ಮನ್ನು ಮುಟ್ಟಲಿಲ್ಲ, ಅದು ನಮ್ಮ ಅದೃಷ್ಟವೇ ಎಂದೂ ತಿಳಿದುಕೊಳ್ಳಿರಿ ಅಂದರು.

10 ಅದೇ ಪ್ರಕಾರ ಫಿಲಿಷ್ಟಿಯರು ಹಾಲು ಕರೆಯುವ ಎರಡು ಹಸುಗಳನ್ನು ತೆಗೆದುಕೊಂಡು ಬಂಡಿಗೆ ಹೂಡಿ ಅವುಗಳ ಕರುಗಳನ್ನು ಮನೆಯಲ್ಲಿ ಕಟ್ಟಿಹಾಕಿ

11 ಯೆಹೋವನ ಮಂಜೂಷವನ್ನೂ ಚಿನ್ನದ ಇಲಿಗಳೂ ಗಡ್ಡೆಗಳೂ ಉಳ್ಳ ಚಿಕ್ಕ ಪೆಟ್ಟಿಗೆಯನ್ನೂ ಬಂಡಿಯ ಮೇಲಿಟ್ಟರು.

12 ಕೂಡಲೆ ಆ ಹಸುಗಳು ಬೇತ್‍ಷೆಮೆಷಿನ ರಾಜಮಾರ್ಗವನ್ನು ಹಿಡಿದು ಕೂಗುತ್ತಾ ನೆಟ್ಟಗೆ ಮುಂದೆ ನಡೆದವು; ಎಡಬಲಕ್ಕೆ ತಿರುಗಲಿಲ್ಲ. ಫಿಲಿಷ್ಟಿಯ ಪ್ರಭುಗಳು ಬೇತ್‍ಷೆಮೆಷಿನ ಎಲ್ಲೆಯವರೆಗೂ ಅವುಗಳ ಹಿಂದೆ ಹೋದರು.

13 ಬೇತ್‍ಷೆಮೆಷಿನವರು ಅಲ್ಲಿನ ತಗ್ಗಿನಲ್ಲಿ ಗೋದಿಯ ಬೆಳೆಯನ್ನು ಕೊಯ್ಯುತ್ತಿದ್ದರು. ಅವರು ಕಣ್ಣೆತ್ತಿ ಯೆಹೋವನ ಮಂಜೂಷವನ್ನು ನೋಡಿ ಬಹುಸಂತೋಷಪಟ್ಟರು.

14 ಬಂಡಿಯು ಬೇತ್‍ಷೆಮೆಷಿನವನಾದ ಯೆಹೋಶುವನ ಹೊಲದಲ್ಲಿದ್ದ ದೊಡ್ಡ ಕಲ್ಲಿನ ಬಳಿಯಲ್ಲಿ ಬಂದು ನಿಲ್ಲಲು ಅವರು ಹೋಗಿ ಬಂಡಿಯ ಕಟ್ಟಿಗೆಗಳನ್ನು ಒಡೆದು ಅಗ್ನಿಮಾಡಿ ಆ ಹಸುಗಳನ್ನು ಯೆಹೋವನಿಗೋಸ್ಕರ ಆಹುತಿಕೊಟ್ಟರು.

15 ಲೇವಿಯರು ಯೆಹೋವನ ಮಂಜೂಷವನ್ನೂ ಚಿನ್ನದ ವಸ್ತುಗಳುಳ್ಳ ಚಿಕ್ಕ ಪೆಟ್ಟಿಗೆಯನ್ನೂ ಇಳಿಸಿ ಆ ದೊಡ್ಡ ಕಲ್ಲಿನ ಮೇಲಿಟ್ಟರು. ಬೇತ್‍ಷೆಮೆಷಿನವರು ಅದೇ ದಿವಸ ಯೆಹೋವನಿಗೆ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸಿದರು.

16 ಇದನ್ನೆಲ್ಲಾ ನೋಡಿದ ಮೇಲೆ ಫಿಲಿಷ್ಟಿಯರ ಐದು ಮಂದಿ ಪ್ರಭುಗಳು ಅದೇ ದಿವಸ ಎಕ್ರೋನಿಗೆ ಹಿಂದಿರುಗಿದರು.

17 ಫಿಲಿಷ್ಟಿಯರು ಯೆಹೋವನಿಗೆ ಸಮರ್ಪಿಸಿದ ಚಿನ್ನದ ಗಡ್ಡೆಗಳು ಅಷ್ಡೋದ್, ಗಾಜಾ, ಅಷ್ಕೆಲೋನ್, ಗತ್ಊರು, ಎಕ್ರೋನ್ ಎಂಬ ಅವರ ಸಂಸ್ಥಾನಗಳ ಸಂಖ್ಯೆಗೂ

18 ಅವರು ಕಳುಹಿಸಿದ ಬಂಗಾರದ ಇಲಿಗಳು ಫಿಲಿಷ್ಟಿಯರ ಐದು ಮಂದಿ ಪ್ರಭುಗಳ ಅಧೀನದಲ್ಲಿದ್ದ ಎಲ್ಲಾ ಗ್ರಾಮನಗರಗಳ ಸಂಖ್ಯೆಗೂ ಸರಿಯಾಗಿದ್ದವು. ಬೇತ್‍ಷೆಮೆಷಿನವನಾದ ಯೆಹೋಶುವನ ಹೊಲದಲ್ಲಿ ಇಂದಿನವರೆಗೂ ಇರುವ ಯೆಹೋವನ ಮಂಜೂಷವು ಇಡಲ್ಪಟ್ಟ ಆ ದೊಡ್ಡ ಕಲ್ಲೇ ಈ ಗ್ರಾಮನಗರಗಳಿಗೆ ಮೇರೆಯಾಗಿದೆ.

19 ಬೇತ್‍ಷೆಮೆಷಿನವರು ಯೆಹೋವನ ಮಂಜೂಷದಲ್ಲಿ ಹಣಿಕಿನೋಡಿದ್ದರಿಂದ ಯೆಹೋವನು ಅವರಲ್ಲಿ ಎಪ್ಪತ್ತು ಮಂದಿಯನ್ನು ಸಾಯಿಸಿದನು. ಇದಲ್ಲದೆ ಐವತ್ತು ಸಾವಿರ ಜನರು ಮರಣಹೊಂದಿದರು. ಯೆಹೋವನು ತಮ್ಮಲ್ಲಿ ಮಹಾನಾಶನವನ್ನುಂಟುಮಾಡಿದದರಿಂದ ಬೇತ್‍ಷೆಮೆಷಿನವರು ಗೋಳಾಡಿ -

20 ಅಗಮ್ಯದೇವರಾದ ಯೆಹೋವನ ಮುಂದೆ ಯಾರು ನಿಂತಾರು? ಇನ್ನು ಮೇಲೆ ಈತನು ಹೋಗತಕ್ಕ ಸ್ಥಳವಾವದು ಎಂದು ಮಾತಾಡಿಕೊಂಡು

21 ಕಿರ್ಯತ್ಯಾರೀವಿುನವರ ಬಳಿಗೆ ದೂತರನ್ನು ಕಳುಹಿಸಿ ಅವರಿಗೆ - ಫಿಲಿಷ್ಟಿಯರು ಯೆಹೋವನ ಮಂಜೂಷವನ್ನು ಕಳುಹಿಸಿದ್ದಾರೆ; ನೀವು ಬಂದು ಅದನ್ನು ತೆಗೆದುಕೊಂಡು ಹೋಗಿರಿ ಎಂದು ಹೇಳಿಸಿದರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು