1 ಸಮುಯೇಲ 31 - ಕನ್ನಡ ಸತ್ಯವೇದವು J.V. (BSI)ಸೌಲನ ಮತ್ತು ಅವನ ಮಕ್ಕಳ ಮರಣ; ಇಸ್ರಾಯೇಲ್ಯರ ಅಪಜಯ 1 ಫಿಲಿಷ್ಟಿಯರು ಇಸ್ರಾಯೇಲ್ಯರೊಡನೆ ಯುದ್ಧಮಾಡಿದರು. ಇಸ್ರಾಯೇಲ್ಯರು ಅವರಿಂದ ಅಪಜಯ ಹೊಂದಿ ಗಿಲ್ಬೋವ ಬೆಟ್ಟದಲ್ಲಿ ಹತರಾದರು. 2 ಫಿಲಿಷ್ಟಿಯರು ಸೌಲನನ್ನೂ ಅವನ ಮಕ್ಕಳನ್ನೂ ಬಿಡದೆ ಹಿಂದಟ್ಟಿ ಅವನ ಮಕ್ಕಳಾದ ಯೋನಾತಾನನನ್ನೂ ಅಬೀನಾದಾಬನನ್ನೂ ಮಲ್ಕೀಷೂವನನ್ನೂ ಕೊಂದರು. 3 ಸೌಲನಿದ್ದ ಕಡೆಯಲ್ಲಿ ಯುದ್ಧವು ಬಹುಘೋರವಾಗಿತ್ತು. ಬಿಲ್ಲುಗಾರರು ಅವನಿಗೆ ಗುರಿಯಿಟ್ಟರು. 4 ಆದದರಿಂದ ಸೌಲನು ಬಹುಭೀತನಾಗಿ ತನ್ನ ಆಯುಧವಾಹಕನಿಗೆ - ನಿನ್ನ ಕತ್ತಿಯನ್ನು ಹಿರಿದು ನನ್ನನ್ನು ತಿವಿದು ಕೊಲ್ಲು; ಇಲ್ಲವಾದರೆ ಸುನ್ನತಿಯಿಲ್ಲದ ಈ ಜನರು ಬಂದು ನನ್ನನ್ನು ತಿವಿದು ಅಪಕೀರ್ತಿಯನ್ನುಂಟುಮಾಡಾರು ಎಂದು ಹೇಳಲು ಅವನು ಹೆದರಿ ಒಲ್ಲೆನು ಅಂದನು. ಆದದರಿಂದ ಸೌಲನು ತಾನೇ ಕತ್ತಿಯನ್ನು ಹಿರಿದು ಅದರ ಮೇಲೆ ಬಿದ್ದನು. 5 ಸೌಲನು ಸತ್ತದ್ದನ್ನು ಆಯುಧವಾಹಕನು ಕಂಡು ತಾನೂ ತನ್ನ ಕತ್ತಿಯ ಮೇಲೆ ಬಿದ್ದು ಅಲ್ಲಿಯೇ ಸತ್ತನು. 6 ಹೀಗೆ ಸೌಲನೂ ಅವನ ಮೂರು ಮಂದಿ ಮಕ್ಕಳೂ ಅವನ ಆಯುಧವಾಹಕನೂ ಎಲ್ಲಾ ಆಳುಗಳೂ ಅದೇ ದಿವಸದಲ್ಲಿ ಸತ್ತರು. 7 ಇಸ್ರಾಯೇಲ್ ಭಟರು ಸೋತರು, ಸೌಲನೂ ಅವನ ಮಕ್ಕಳೂ ಸತ್ತರು ಎಂಬ ವರ್ತಮಾನವನ್ನು ತಗ್ಗಿನ ಆಚೆಯಲ್ಲಿಯೂ ಯೊರ್ದನಿನ ಆಚೆಯಲ್ಲಿಯೂ ವಾಸವಾಗಿದ್ದ ಇಸ್ರಾಯೇಲ್ಯರು ಕೇಳಿ ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು; ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸಿಸಿದರು. 8 ಮರುದಿನ ಬೆಳಿಗ್ಗೆ ಫಿಲಿಷ್ಟಿಯರು ಸತ್ತವರ ಒಡವೆಗಳನ್ನು ಸುಲುಕೊಳ್ಳುವದಕ್ಕೆ ಬಂದಾಗ ಸೌಲನೂ ಅವನ ಮೂರು ಮಂದಿ ಮಕ್ಕಳೂ ಗಿಲ್ಬೋವ ಬೆಟ್ಟದಲ್ಲಿ ಸತ್ತುಬಿದ್ದಿರುವದನ್ನು ಕಂಡು 9 ಸೌಲನ ತಲೆಯನ್ನು ಕಡಿದು ಅವನ ಆಯುಧಗಳನ್ನು ತೆಗೆದುಕೊಂಡು ಅವುಗಳನ್ನು ತಮ್ಮ ದೇಶದ ಎಲ್ಲಾ ಕಡೆಗೂ ಕಳುಹಿಸಿ ತಮ್ಮ ಎಲ್ಲಾ ಜನರಿಗೂ ದೇವಸ್ಥಾನಗಳಿಗೂ ಜಯವಾರ್ತೆಯನ್ನು ಮುಟ್ಟಿಸಿದರು. 10 ಅವನ ಆಯುಧಗಳನ್ನು ಅಷ್ಟೋರೆತ್ ದೇವತೆಯ ಗುಡಿಯಲ್ಲಿಟ್ಟರು; ಅವನ ಶವವನ್ನು ಬೇತ್ಷೆಯಾನಿನ ಕೋಟೆ ಗೋಡೆಗೆ ನೇತುಹಾಕಿದರು. 11 ಫಿಲಿಷ್ಟಿಯರು ಸೌಲನಿಗೆ ಏನೇನು ಮಾಡಿದರೆಂಬ ವರ್ತಮಾನವು ಯಾಬೆಷ್ ಗಿಲ್ಯಾದಿನವರಿಗೆ ಮುಟ್ಟಿದಾಗ 12 ಅವರಲ್ಲಿದ್ದ ಶೂರರೆಲ್ಲರೂ ಹೊರಟು ರಾತ್ರಿಯೆಲ್ಲಾ ನಡೆದುಹೋಗಿ ಸೌಲನ ಮತ್ತು ಅವನ ಮಕ್ಕಳ ಶವಗಳನ್ನು ಬೇತ್ಷೆಯಾನಿನ ಗೋಡೆಯಿಂದ ಇಳಿಸಿ ಯಾಬೇಷಿಗೆ ತೆಗೆದುಕೊಂಡು ಬಂದು ಅಲ್ಲಿ ಅವುಗಳನ್ನು ಸುಟ್ಟುಬಿಟ್ಟರು. 13 ಅವರ ಎಲುಬುಗಳನ್ನು ಯಾಬೇಷಿನಲ್ಲಿದ್ದ ಪಿಚುಲ ವೃಕ್ಷದ ಕೆಳಗೆ ಸಮಾಧಿಮಾಡಿ ಏಳು ದಿವಸ ಉಪವಾಸವಾಗಿದ್ದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India