1 ಸಮುಯೇಲ 30 - ಕನ್ನಡ ಸತ್ಯವೇದವು J.V. (BSI)ದಾವೀದನು ತನ್ನ ಊರಾದ ಚಿಕ್ಲಗನ್ನು ಸುಟ್ಟ ಅಮಾಲೇಕ್ಯರನ್ನು ಸಂಹರಿಸಿದ್ದು 1 ದಾವೀದನೂ ಅವನ ಜನರೂ ಮೂರನೆಯ ದಿನ ಚಿಕ್ಲಗ್ ಊರನ್ನು ಮುಟ್ಟಿದರು. ಅಷ್ಟರೊಳಗೆ ಅಮಾಲೇಕ್ಯರು ದಂಡೆತ್ತಿ ದಕ್ಷಿಣಪ್ರಾಂತಕ್ಕೂ ಚಿಕ್ಲಗ್ ಊರಿಗೂ ಬಂದು ಚಿಕ್ಲಗ್ ಊರನ್ನು ಸುಟ್ಟು ಹಾಳುಮಾಡಿ 2 ಅದರಲ್ಲಿದ್ದ ಎಲ್ಲಾ ಹೆಂಗಸರನ್ನೂ ಚಿಕ್ಕವರನ್ನೂ ದೊಡ್ಡವರನ್ನೂ ಸೆರೆಹಿಡಿದುಕೊಂಡು ಹೋಗಿದ್ದರು; ಆದರೆ ಯಾರನ್ನೂ ಕೊಂದಿರಲಿಲ್ಲ. 3 ದಾವೀದನೂ ಅವನ ಜನರೂ ತಮ್ಮ ಊರಿಗೆ ಬಂದಾಗ ಅದು ಸುಡಲ್ಪಟ್ಟಿರುವದನ್ನೂ ತಮ್ಮ ಹೆಂಡತಿಯರೂ ಗಂಡುಹೆಣ್ಣು ಮಕ್ಕಳೂ ಸೆರೆಯಾಗಿ ಒಯ್ಯಲ್ಪಟ್ಟಿರುವದನ್ನೂ ಕಂಡು 4 ಅವರು ತಮ್ಮಿಂದಾಗುವಷ್ಟು ಕಾಲ ಗಟ್ಟಿಯಾಗಿ ಅತ್ತರು. 5 ದಾವೀದನ ಇಬ್ಬರು ಹೆಂಡತಿಯರಾದ ಇಜ್ರೇಲಿನವಳಾದ ಅಹೀನೋವಮಳೂ ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳೂ ಸೆರೆಯಾಗಿ ಹೋಗಿದ್ದರು. 6 ಇದಲ್ಲದೆ ಜನರು ತಮ್ಮ ಗಂಡುಹೆಣ್ಣು ಮಕ್ಕಳಿಗಾಗಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡು ದಾವೀದನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದದರಿಂದ ಅವನು ಬಲು ಇಕ್ಕಟ್ಟಿನಲ್ಲಿ ಬಿದ್ದನು. ಆದರೂ ಅವನು ತನ್ನ ದೇವರಾದ ಯೆಹೋವನಲ್ಲಿ ತನ್ನನ್ನು ಬಲಪಡಿಸಿಕೊಂಡು 7 ಅಹೀಮೆಲೆಕನ ಮಗನಾದ ಎಬ್ಯಾತಾರನಿಗೆ - ದಯವಿಟ್ಟು ಏಫೋದನ್ನು ಇಲ್ಲಿಗೆ ತೆಗೆದುಕೊಂಡು ಬಾ ಎಂದು ಹೇಳಲು ಅವನು ತಂದನು. 8 ಆಗ ದಾವೀದನು ಯೆಹೋವನನ್ನು - ನಾನು ಆ ಗುಂಪನ್ನು ಹಿಂದಟ್ಟಬಹುದೋ? ಅದು ನನಗೆ ಸಿಕ್ಕುವದೋ ಎಂದು ಕೇಳಲು ಅತನು - ಹಿಂದಟ್ಟು, ಅದು ನಿನಗೆ ಸಿಕ್ಕುವದು; ನೀನು ಎಲ್ಲರನ್ನೂ ಬಿಡಿಸಿಕೊಂಡು ಬರುವಿ ಎಂದು ಉತ್ತರಕೊಟ್ಟನು. 9 ದಾವೀದನೂ ಅವನ ಸಂಗಡ ಇದ್ದ ಆರುನೂರು ಮಂದಿ ಸೈನಿಕರೂ ಹೊರಟು ಬೆಸೋರ್ ಹಳ್ಳಕ್ಕೆ ಬಂದ ಮೇಲೆ 10 ಆ ಹಳ್ಳದಿಂದ ಮೇಲೆ ಹತ್ತಲಾರದಷ್ಟು ಆಯಾಸಗೊಂಡ ಇನ್ನೂರು ಜನರು ಅಲ್ಲೇ ನಿಂತುಬಿಟ್ಟದರಿಂದ ದಾವೀದನು ಉಳಿದ ನಾನೂರು ಜನರನ್ನೇ ಕರೆದುಕೊಂಡು ಮುಂದೆ ನಡೆದನು. 11 ಅವನ ಜನರು ಅಡವಿಯಲ್ಲಿ ಒಬ್ಬ ಐಗುಪ್ತ್ಯನು ಬಿದ್ದಿರುವದನ್ನು ಕಂಡು ಅವನನ್ನು ದಾವೀದನ ಬಳಿಗೆ ತಂದು ಅವನಿಗೆ ರೊಟ್ಟಿ ತಿನ್ನಿಸಿ ನೀರು ಕುಡಿಸಿ 12 ಅಂಜೂರ ಹಣ್ಣಿನ ಉಂಡೆಯನ್ನೂ ಎರಡು ದ್ರಾಕ್ಷೇಗೊಂಚಲುಗಳನ್ನೂ ಕೊಟ್ಟರು. ಮೂರು ದಿವಸ ಹಗಲಿರುಳು ಅನ್ನಪಾನವಿಲ್ಲದ್ದರಿಂದ ಬಹಳವಾಗಿ ಬಳಲಿಹೋಗಿದ್ದ ಇವನು ಅವುಗಳನ್ನು ತಿನ್ನುತ್ತಲೇ ಚೇತರಿಸಿಕೊಂಡನು. 13 ಆಗ ದಾವೀದನು ಅವನನ್ನು - ನೀನು ಯಾರ ಕಡೆಯವನು? ಎಲ್ಲಿಯವನು ಎಂದು ಕೇಳಲು ಅವನು - ನಾನು ಐಗುಪ್ತ್ಯನು; ಒಬ್ಬ ಅಮಾಲೇಕ್ಯನ ದಾಸನು. ನಾನು ಮೂರು ದಿನಗಳ ಹಿಂದೆ ಅಸ್ವಸ್ಥನಾಗಿ ಮಲಗಿಕೊಂಡದರಿಂದ ನನ್ನ ಯಜಮಾನನು ನನ್ನನ್ನು ಬಿಟ್ಟುಹೋದನು. 14 ನಾವು ಕೆರೇತ್ಯರೂ ಯೆಹೂದ್ಯರೂ ಕಾಲೇಬ್ಯರೂ ಇರುವ ದಕ್ಷಿಣಪ್ರಾಂತವನ್ನು ಸೂರೆಮಾಡಿ ಚಿಕ್ಲಗ್ ಊರನ್ನು ಸುಟ್ಟುಬಿಟ್ಟು ಬಂದೆವು ಎಂದು ಉತ್ತರಕೊಟ್ಟನು. 15 ಅನಂತರ ದಾವೀದನು - ನೀನು ನನ್ನನ್ನು ಆ ಗುಂಪು ಇರುವ ಸ್ಥಳಕ್ಕೆ ಕರಕೊಂಡು ಹೋಗುವಿಯೋ ಎಂದು ಕೇಳಿದ್ದಕ್ಕೆ ಅವನು - ನೀನು ನನ್ನನ್ನು ಕೊಲ್ಲುವದಿಲ್ಲವೆಂದೂ ನನ್ನ ಯಜಮಾನನ ಕೈಗೆ ಒಪ್ಪಿಸುವದಿಲ್ಲವೆಂದೂ ದೇವರ ಹೆಸರಿನಲ್ಲಿ ಪ್ರಮಾಣಮಾಡಿದರೆ ನಿನ್ನನ್ನು ಆ ಗುಂಪಿನವರ ಬಳಿಗೆ ಕರಕೊಂಡು ಹೋಗುವೆನು ಅಂದನು. 16 ಅವರು ಅಲ್ಲಿಗೆ ಹೋದಾಗ ಆ ಗುಂಪಿನವರು ತಮಗೆ ಫಿಲಿಷ್ಟಿಯ ಯೆಹೂದ ಪ್ರಾಂತಗಳಲ್ಲಿ ದೊರಕಿದ ದೊಡ್ಡ ಕೊಳ್ಳೆಯ ನಿವಿುತ್ತವಾಗಿ ಸಂತೋಷಿಸಿ ಉಂಡು ಕುಡಿದು ಕುಣಿದಾಡುತ್ತಾ ಅಲ್ಲಿನ ಬೈಲಿನಲ್ಲಿ ವ್ಯಾಪಿಸಿಕೊಂಡಿದ್ದರು. 17 ದಾವೀದನು ಮರುದಿನ ಹೊತ್ತಾರೆಯಿಂದ ಸೂರ್ಯಾಸ್ತಮಾನದವರೆಗೂ ಅವರನ್ನು ಸಂಹರಿಸಿದನು. ಒಂಟೆಗಳನ್ನು ಹತ್ತಿ ಓಡಿಹೋದ ನಾನೂರು ಮಂದಿ ಪ್ರಾಯಸ್ಥರ ಹೊರತು ಬೇರೆ ಯಾರೂ ತಪ್ಪಿಸಿಕೊಳ್ಳಲಿಲ್ಲ. 18 ದಾವೀದನು ತನ್ನ ಇಬ್ಬರು ಹೆಂಡತಿಯರನ್ನೂ ಅಮಾಲೇಕ್ಯರು ಒಯ್ದಿದ್ದ ಎಲ್ಲಾ ಕೊಳ್ಳೆಯನ್ನೂ ಬಿಡಿಸಿಕೊಂಡನು. 19 ಅಮಾಲೇಕ್ಯರು ಒಯ್ದಿದ್ದ ಚಿಕ್ಕ ದೊಡ್ಡ ಒಡವೆಗಳಾಗಲಿ ಗಂಡುಹೆಣ್ಣು ಮಕ್ಕಳಾಗಲಿ ಒಂದನ್ನೂ ಬಿಡದೆ ಎಲ್ಲವನ್ನೂ ತಿರಿಗಿ ತೆಗೆದುಕೊಂಡು ಬಂದನು. 20 ಇದಲ್ಲದೆ ದಾವೀದನು ಶತ್ರುಗಳ ದನಕುರಿಗಳನ್ನು ತೆಗೆದುಕೊಂಡನು. ಅವನ ಜನರು - ಇವು ದಾವೀದನ ಕೊಳ್ಳೆ ಎಂದು ಹೇಳಿ ಅವುಗಳನ್ನು ತಮ್ಮ ದನಗಳ ಮುಂದಾಗಿ ಹೊಡಕೊಂಡು ಬಂದರು. 21 ಅನಂತರ ದಾವೀದನು ಮೊದಲು ಆಯಾಸದಿಂದ ತನ್ನ ಹಿಂದೆ ಬರಲಾರದೆ ಬೆಸೋರ್ ಹಳ್ಳದ ಹತ್ತಿರ ಇಳಿದಿದ್ದ ಇನ್ನೂರು ಜನರ ಬಳಿಗೆ ಹೋಗುತ್ತಿರುವಾಗ ಅವರು ಅವನನ್ನೂ ಅವನೊಂದಿಗಿದ್ದ ಜನರನ್ನೂ ಎದುರುಗೊಳ್ಳಬಂದರು. ದಾವೀದನು ಅವರನ್ನು ಸಂಧಿಸಿ ಅವರ ಕ್ಷೇಮಸಮಾಚಾರವನ್ನು ವಿಚಾರಿಸಿದನು. 22 ಆಗ ದಾವೀದನ ಜೊತೆಯಲ್ಲಿ ಹೋಗಿದ್ದ ಜನರಲ್ಲಿ ದುಷ್ಟರೂ ಮುರ್ಖರೂ ಆದ ಕೆಲವು ಮಂದಿ - ಇವರು ನಮ್ಮ ಸಂಗಡ ಬಾರದ್ದರಿಂದ ನಾವು ಬಿಡಿಸಿಕೊಂಡು ಬಂದ ಕೊಳ್ಳೆಯಲ್ಲಿ ಇವರಿಗೆ ಏನೂ ಸಿಕ್ಕುವದಿಲ್ಲ. ತಮ್ಮತಮ್ಮ ಹೆಂಡರುಮಕ್ಕಳನ್ನು ಕರಕೊಂಡು ಹೋಗಿಬಿಡಲಿ ಅಂದರು. 23 ಆಗ ದಾವೀದನು ಅವರಿಗೆ - ಸಹೋದರರೇ, ಯೆಹೋವನು ನಮ್ಮನ್ನು ಕಾಪಾಡಿ ನಮಗೆ ವಿರೋಧವಾಗಿ ಬಂದಿದ್ದ ಶತ್ರುಗಳ ಗುಂಪನ್ನು ನಮ್ಮ ಕೈಗೆ ಒಪ್ಪಿಸಿ ನಮಗೆ ಇಷ್ಟನ್ನೆಲ್ಲಾ ಕೊಟ್ಟ ಮೇಲೆ ನೀವು ಹೀಗೆ ಮಾಡಬಾರದು. 24 ಈ ವಿಷಯದಲ್ಲಿ ನಿಮ್ಮ ಮಾತನ್ನು ಯಾರು ಕೇಳುವರು? ಯುದ್ಧಮಾಡಿದವನಿಗೆ ಸಿಕ್ಕುವಷ್ಟು ಪಾಲು ಸಾಮಾನು ಕಾಯ್ದವನಿಗೂ ಸಿಕ್ಕಬೇಕು. ಉಭಯರಿಗೂ ಸಮಭಾಗವಾಗಬೇಕು ಎಂದು ಉತ್ತರಕೊಟ್ಟನು. 25 ದಾವೀದನು ಇಸ್ರಾಯೇಲ್ಯರಲ್ಲಿ ಇದನ್ನು ಕಟ್ಟಳೆಯನ್ನಾಗಿ ನೇವಿುಸಿದ್ದರಿಂದ ಇಂದಿನವರೆಗೂ ಹಾಗೆಯೇ ನಡೆಯುತ್ತಾ ಬಂದಿದೆ. 26 ದಾವೀದನು ಚಿಕ್ಲಗಿಗೆ ಬಂದನಂತರ ತನ್ನ ಸ್ನೇಹಿತರಾದ ಯೆಹೂದಹಿರಿಯರಿಗೆ ಕೊಳ್ಳೆಯ ಒಂದು ಭಾಗವನ್ನು ಕಳುಹಿಸಿ - ಇಗೋ, ಯೆಹೋವನ ಶತ್ರುಗಳನ್ನು ಸೂರೆಮಾಡಿ ತಂದವುಗಳಲ್ಲಿ ಇದು ನಿಮಗೆ ಬಹುಮಾನವಾಗಿರಲಿ ಎಂದು ಹೇಳಿಸಿದನು. 27 ಬಹುಮಾನ ಹೊಂದಿದವರು ಯಾರಂದರೆ - ಬೇತೇಲಿನವರು, ದಕ್ಷಿಣಪ್ರಾಂತದ ರಾಮೋತಿನವರು, ಯತ್ತೀರಿನವರು, 28 ಅರೋಯೇರಿನವರು, ಸಿಪ್ಮೋತಿನವರು, ಎಷ್ಟೆಮೋವದವರು, 29 ರಾಕಾಲಿನವರು, ಎರಹ್ಮೇಲ್ಯರು, ಕೇನ್ಯರು, 30 ಹೊರ್ಮದವರು, ಬೋರಾಷಾನಿನವರು, ಅತಾಕಿನವರು, 31 ಹೆಬ್ರೋನಿನವರು ಮತ್ತು ದಾವೀದನೂ ಅವನ ಜನರೂ ಸಂಚರಿಸುತ್ತಿದ್ದ ಇತರ ಎಲ್ಲಾ ಸ್ಥಳಗಳವರು ಇವರೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India