1 ಸಮುಯೇಲ 28 - ಕನ್ನಡ ಸತ್ಯವೇದವು J.V. (BSI)1 ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರಾಯೇಲ್ಯರೊಡನೆ ಯುದ್ಧಮಾಡುವದಕ್ಕಾಗಿ ಸೈನ್ಯವನ್ನು ಕೂಡಿಸತೊಡಗಿದರು. ಆಗ ಆಕೀಷನು ದಾವೀದನಿಗೆ - ನೀನೂ ನಿನ್ನ ಜನರೂ ಯುದ್ಧಕ್ಕೆ ನನ್ನ ಜೊತೆಯಲ್ಲೇ ಬರಬೇಕೆಂದು ನಿನಗೆ ಗೊತ್ತಿರುತ್ತದಲ್ಲವೋ ಎನ್ನಲು ದಾವೀದನು - 2 ಹೌದು, ನಿನ್ನ ದಾಸನ ಸಾಹಸವು ಗೊತ್ತಾಗುವದು ಅಂದನು. ಆಕೀಷನು ಅವನಿಗೆ - ಹಾಗಾದರೆ ಯುದ್ಧಕಾಲದಲ್ಲೆಲ್ಲಾ ನಿನ್ನನ್ನೇ ನನ್ನ ಮೈಗಾವಲಿಗೆ ನೇವಿುಸಿಕೊಳ್ಳುವೆನು ಅಂದನು. ಫಿಲಿಷ್ಟಿಯರು ಯುದ್ಧಕ್ಕೆ ಬಂದಲ್ಲಿ ಸೌಲನು ಅದರ ಫಲವೇನಾಗುವದೆಂದು ಏಂದೋರಿನ ಒಬ್ಬ ಯಕ್ಷಿಣಿಯನ್ನು ವಿಚಾರಿಸಿದ್ದು. 3 ಸಮುವೇಲನು ಮೃತಿಹೊಂದಿದ್ದನು. ಇಸ್ರಾಯೇಲ್ಯರು ಅವನಿಗೋಸ್ಕರ ಗೋಳಾಡಿ ಅವನ ಶವವನ್ನು ಅವನ ಸ್ವಂತ ಊರಾದ ರಾಮದಲ್ಲಿ ಸಮಾಧಿಮಾಡಿದ್ದರು. ಸೌಲನು ಸತ್ತವರಲ್ಲಿ ವಿಚಾರಿಸುವವರನ್ನೂ ಬೇತಾಳಿಕರನ್ನೂ ದೇಶದಿಂದ ಹೊರಡಿಸಿಬಿಟ್ಟಿದ್ದನು. 4 ಫಿಲಿಷ್ಟಿಯರು ಸೈನ್ಯಕೂಡಿಸಿಕೊಂಡು ಬಂದು ಶೂನೇವಿುನಲ್ಲಿ ಪಾಳೆಯಮಾಡಿಕೊಂಡಿದ್ದರು. ಸೌಲನು ಎಲ್ಲಾ ಇಸ್ರಾಯೇಲ್ಯರೊಡನೆ ಬಂದು ಗಿಲ್ಬೋವದಲ್ಲಿ ಇಳುಕೊಂಡನು. 5 ಅವನು ಫಿಲಿಷ್ಟಿಯರ ಪಾಳೆಯವನ್ನು ಕಂಡು ಬಹಳ ಭಯದಿಂದ ಎದೆಯೊಡೆದವನಾದನು. 6 ಅವನು ಯೆಹೋವನ ಸನ್ನಿಧಿಯಲ್ಲಿ ವಿಚಾರಿಸಿದರೂ ಆತನು ಅವನಿಗೆ ಕನಸುಗಳಿಂದಾಗಲಿ ಊರೀವಿುನಿಂದಾಗಲಿ ಪ್ರವಾದಿಗಳಿಂದಾಗಲಿ ಉತ್ತರಕೊಡಲೇ ಇಲ್ಲ. 7 ಆದದರಿಂದ ಅವನು ತನ್ನ ಸೇವಕರಿಗೆ - ಸತ್ತವರಲ್ಲಿ ವಿಚಾರಿಸಬಲ್ಲ ಒಬ್ಬ ಸ್ತ್ರೀಯನ್ನು ಹುಡುಕಿರಿ; ನಾನು ಆಕೆಯ ಹತ್ತಿರ ಹೋಗಿ ವಿಚಾರಿಸುವೆನು ಎಂದು ಹೇಳಲಾಗಿ ಅವರು - ಅಂಥವಳೊಬ್ಬಳು ಏಂದೋರಿನಲ್ಲಿದ್ದಾಳೆ ಅಂದರು. 8 ಆಗ ಸೌಲನು ವಸ್ತ್ರಾದಿಗಳಿಂದ ತನ್ನನ್ನು ಮಾರ್ಪಡಿಸಿಕೊಂಡು ಇಬ್ಬರು ಸೇವಕರೊಡನೆ ಹೊರಟು ರಾತ್ರಿಯಲ್ಲಿ ಆಕೆಯ ಮನೆ ಸೇರಿ - ದಯವಿಟ್ಟು ನನಗೋಸ್ಕರ ಸತ್ತವರಲ್ಲಿ ವಿಚಾರಿಸಿ ಕಣಿಹೇಳು; ನಾನು ಯಾವನ ಹೆಸರನ್ನು ಹೇಳುತ್ತೇನೋ ಅವನನ್ನು ಇಲ್ಲಿಗೆ ಬರಮಾಡು ಎಂದು ಆಕೆಯನ್ನು ಬೇಡಿಕೊಂಡನು. 9 ಆಗ ಆಕೆಯು ಅವನಿಗೆ - ಸೌಲನು ಮಾಡಿದ್ದು ನಿನಗೆ ಗೊತ್ತುಂಟು; ಅವನು ಸತ್ತವರಲ್ಲಿ ವಿಚಾರಿಸುವವರನ್ನೂ ಬೇತಾಳಿಕರನ್ನೂ ದೇಶದಿಂದ ಹೊರಡಿಸಿಬಿಟ್ಟನಲ್ಲಾ; ಹೀಗಿದ್ದರೂ ನಾನು ಸಾಯುವಂತೆ ನೀನು ನನ್ನ ಪ್ರಾಣಕ್ಕೆ ಉರಲೊಡ್ಡುವದೇಕೆ ಅಂದಳು. 10 ಅದಕ್ಕೆ ಸೌಲನು - ಯೆಹೋವನಾಣೆ, ಈ ವಿಷಯದಲ್ಲಿ ನೀನು ದಂಡನೆಗೆ ಗುರಿಯಾಗುವದಿಲ್ಲ ಎಂದು ಆಕೆಗೆ ಯೆಹೋವನ ಹೆಸರಿನಲ್ಲಿ ಪ್ರಮಾಣಮಾಡಿದನು. 11 ಆಗ ಸ್ತ್ರೀಯು - ನಿನಗೆ ಯಾರನ್ನು ಬರಮಾಡಬೇಕು ಎನ್ನಲು - ಸಮುವೇಲನನ್ನು ಎಂದು ಉತ್ತರಕೊಟ್ಟನು. 12 ಆ ಸ್ತ್ರೀಯು ಸಮುವೇಲನನ್ನು ಕಂಡ ಕೂಡಲೆ ಗಟ್ಟಿಯಾಗಿ ಕೂಗಿ ಸೌಲನಿಗೆ - ನೀನು ನನ್ನನ್ನು ವಂಚಿಸಿದ್ದೇಕೆ? ನೀನು ಸೌಲನಲ್ಲವೋ ಅಂದಳು. 13 ಅರಸನು - ಹೆದರಬೇಡ; ನಿನಗೇನು ಕಾಣಿಸುತ್ತದೆ ಎಂದು ಆಕೆಯನ್ನು ಕೇಳಲು - ಭೂವಿುಯೊಳಗಿಂದ ಒಬ್ಬ ದೇವನು ಬರುತ್ತಿರುವದನ್ನು ನೋಡುತ್ತೇನೆ ಎಂದು ಉತ್ತರಕೊಟ್ಟಳು. 14 ಅವನು ತಿರಿಗಿ - ಅವನ ರೂಪ ಹೇಗಿದೆ ಎಂದು ಕೇಳಲು ಆಕೆಯು - ನಿಲುವಂಗಿಯನ್ನು ತೊಟ್ಟುಕೊಂಡ ಒಬ್ಬ ಮುದುಕನು ಬರುತ್ತಾನೆ ಎಂದು ಹೇಳಿದಳು. ಅವನು ಸಮುವೇಲನೇ ಎಂದು ಸೌಲನು ತಿಳಿದು ನೆಲದ ಮಟ್ಟಿಗೂ ಬೊಗ್ಗಿ ನಮಸ್ಕರಿಸಿದನು. 15 ಆಗ ಸಮುವೇಲನು ಸೌಲನನ್ನು - ನೀನು ನನ್ನ ವಿಶ್ರಾಂತಿಯನ್ನು ಕೆಡಿಸಿದ್ದೇಕೆ? ನನ್ನನ್ನು ಇಲ್ಲಿಗೆ ಯಾಕೆ ಬರಮಾಡಿದಿ ಎಂದು ಕೇಳಿದನು. ಅದಕ್ಕೆ ಸೌಲನು - ನಾನು ಬಲು ಇಕ್ಕಟ್ಟಿನಲ್ಲಿದ್ದೇನೆ; ಫಿಲಿಷ್ಟಿಯರು ನನಗೆ ವಿರೋಧವಾಗಿ ಯುದ್ಧಕ್ಕೆ ಬಂದಿದ್ದಾರೆ; ದೇವರು ನನ್ನನ್ನು ಬಿಟ್ಟು ದೂರಹೋಗಿದ್ದಾನೆ; ಆತನು ನನಗೆ ಪ್ರವಾದಿಗಳಿಂದಾಗಲಿ ಕನಸುಗಳಿಂದಾಗಲಿ ಉತ್ತರಕೊಡಲೊಲ್ಲನು. ಆದದರಿಂದ ನಾನು ಮಾಡಬೇಕಾದದ್ದನ್ನು ನೀನು ತಿಳಿಸುವಿಯೆಂದು ನಿನ್ನನ್ನು ಇಲ್ಲಿಗೆ ಬರಮಾಡಿದೆನು ಅಂದನು. 16 ಆಗ ಸಮುವೇಲನು - ಯೆಹೋವನು ನಿನ್ನನ್ನು ಬಿಟ್ಟು ನಿನಗೆ ವಿರೋಧಿಯಾದ ಮೇಲೆ ನೀನು ನನ್ನನ್ನು ವಿಚಾರಿಸುವದೇಕೆ? 17 ಆತನು ನನ್ನ ಮುಖಾಂತರ ನಿನಗೆ ಹೇಳಿದ್ದನ್ನು ನೆರವೇರಿಸಿದ್ದಾನೆ; ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ನಿನ್ನ ನೆರೆಯವನಾದ ದಾವೀದನಿಗೆ ಕೊಟ್ಟಿದ್ದಾನೆ. 18 ನೀನು ಯೆಹೋವನ ಮಾತನ್ನು ಕೇಳಲಿಲ್ಲ; ಆತನು ಅಮಾಲೇಕ್ಯರ ಮೇಲೆ ಉಗ್ರಕೋಪಗೊಂಡು ಮಾಡಿದ ಕೋಪಾಜ್ಞೆಯನ್ನು ನೀನು ನೆರವೇರಿಸಲಿಲ್ಲ. ಆದದರಿಂದಲೇ ಯೆಹೋವನು ಈಗ ನಿನಗೆ ಹೀಗೆ ಮಾಡುತ್ತಾನೆ. 19 ಆತನು ನಿನ್ನ ಕೂಡ ಇಸ್ರಾಯೇಲ್ಯರನ್ನೂ ಫಿಲಿಷ್ಟಿಯರ ಕೈಗೆ ಒಪ್ಪಿಸುವನು. ನಾಳೆ ನೀನೂ ನಿನ್ನ ಮಕ್ಕಳೂ ನಾನಿರುವಲ್ಲಿಗೆ ಬರುವಿರಿ; ಆತನು ಇಸ್ರಾಯೇಲ್ ಸೈನ್ಯವನ್ನು ಫಿಲಿಷ್ಟಿಯರ ಕೈಗೆ ಒಪ್ಪಿಸುವನು ಎಂದು ಹೇಳಿದನು. 20 ಸೌಲನು ಸಮುವೇಲನ ಮಾತುಗಳನ್ನು ಕೇಳಿದ ಕೂಡಲೆ ಭಯಭ್ರಾಂತನಾಗಿ ನೆಲದ ಮೇಲೆ ಉದ್ದಕ್ಕೆ ಬಿದ್ದನು. ಅವನು ಇಡೀ ದಿವಸ ಊಟ ಮಾಡಿರಲಿಲ್ಲವಾದದರಿಂದ ಅವನಲ್ಲಿ ಬಲವೇ ಇರಲಿಲ್ಲ. 21 ಆ ಸ್ತ್ರೀಯು ಸೌಲನ ಹತ್ತಿರ ಬಂದು ಅವನು ಬಹು ಭೀತನಾಗಿದ್ದಾನೆಂದು ಕಂಡು ಅವನಿಗೆ - ನಿನ್ನ ದಾಸಿಯಾದ ನಾನು ನಿನ್ನ ಮಾತು ಕೇಳಿದೆನು; ಕೈಯಲ್ಲಿ ಜೀವಹಿಡಿದವಳಾಗಿ ನಿನ್ನ ಅಪ್ಪಣೆಯನ್ನು ನೆರವೇರಿಸಿದೆನು. 22 ಆದದರಿಂದ ಈಗ ನೀನು ದಯವಿಟ್ಟು ನಿನ್ನ ದಾಸಿಯ ಮಾತನ್ನು ಕೇಳಬೇಕು; ಸ್ವಲ್ಪ ಆಹಾರ ತರುತ್ತೇನೆ, ಪ್ರಯಾಣಕ್ಕೆ ಬಲಬರುವ ಹಾಗೆ ಅದನ್ನು ಊಟಮಾಡು ಎಂದು ಹೇಳಿದಳು. 23 ಅವನು - ಒಲ್ಲೆನು; ಊಟಮಾಡುವದಿಲ್ಲ ಅಂದನು. ಆದರೆ ಅವನ ಸೇವಕರೂ ಆ ಸ್ತ್ರೀಯೂ ಬಹಳವಾಗಿ ಬೇಡಿಕೊಂಡದರಿಂದ ಅವನು ಕಡೆಗೆ ಅವರ ಮಾತಿಗೆ ಒಪ್ಪಿ ನೆಲದಿಂದೆದ್ದು ಮಂಚದ ಮೇಲೆ ಕೂತುಕೊಂಡನು. 24 ಆ ಸ್ತ್ರೀಗೆ ಮನೆಯಲ್ಲಿ ಒಂದು ಕೊಬ್ಬಿದ ಕರುವಿತ್ತು. ಆಕೆಯು ಶೀಘ್ರವಾಗಿ ಅದನ್ನು ಕೊಯ್ದು ಪಕ್ವಮಾಡಿ ಹಿಟ್ಟನ್ನು ತೆಗೆದುಕೊಂಡು ನಾದಿ ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟು ಸೌಲನಿಗೂ ಅವನ ಸೇವಕರಿಗೂ ಬಡಿಸಿದಳು. 25 ಅವರು ಊಟಮಾಡಿ ಅದೇ ರಾತ್ರಿ ಹೊರಟುಹೋದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India