Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಸಮುಯೇಲ 27 - ಕನ್ನಡ ಸತ್ಯವೇದವು J.V. (BSI)


ದಾವೀದನು ಗತ್ ಊರಿನ ಅರಸನಾದ ಆಕೀಷನನ್ನು ಆಶ್ರಯಿಸಿದ್ದು

1 ದಾವೀದನು ತನ್ನ ಮನಸ್ಸಿನಲ್ಲಿ - ನಾನು ಇಲ್ಲಿದ್ದರೆ ಹೇಗೂ ಒಂದು ದಿನ ಸೌಲನ ಕೈಯಿಂದ ಮಡಿಯಲೇಬೇಕು. ಆದದರಿಂದ ಫಿಲಿಷ್ಟಿಯರ ದೇಶಕ್ಕೆ ಹೋಗಿ ತಪ್ಪಿಸಿಕೊಳ್ಳುವದೇ ಉತ್ತಮ. ಆಮೇಲೆ ಸೌಲನು ಇಸ್ರಾಯೇಲ್‍ಪ್ರಾಂತಗಳಲ್ಲಿ ನನ್ನನ್ನು ಹುಡುಕದೆ ಬಿಟ್ಟುಬಿಡುವನು, ನಾನು ಅವನ ಕೈಗೆ ತಪ್ಪಿಸಿಕೊಂಡವನಾಗಿರುವೆನು ಅಂದುಕೊಂಡು

2 ತನ್ನ ಆರುನೂರು ಮಂದಿ ಸೈನಿಕರೊಡನೆ ಗತ್ ಊರಿನ ಅರಸನೂ ಮಾವೋಕನ ಮಗನೂ ಆದ ಆಕೀಷನ ಬಳಿಗೆ ಹೋದನು.

3 ಅವನೂ ಅವನ ಜನರೂ ತಮ್ಮತಮ್ಮ ಕುಟುಂಬ ಸಹಿತವಾಗಿ ಆಕೀಷನ ಊರಾದ ಗತ್ ಊರಿನಲ್ಲಿ ವಾಸಿಸಿದರು. ದಾವೀದನ ಹೆಂಡತಿಯರಾಗಿರುವ ಇಜ್ರೇಲ್ಯಳಾದ ಅಹೀನೋವಮಳೂ ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳೂ ಅವನ ಸಂಗಡ ಇದ್ದರು.

4 ದಾವೀದನು ತಪ್ಪಿಸಿಕೊಂಡು ಗತ್ ಊರಿಗೆ ಹೋದನೆಂಬ ವರ್ತಮಾನವನ್ನು ಸೌಲನು ಕೇಳಿ ಆಮೇಲೆ ಅವನನ್ನು ಹುಡುಕಲೇ ಇಲ್ಲ.

5 ಒಂದು ದಿನ ದಾವೀದನು ಆಕೀಷನಿಗೆ - ನಿನ್ನ ಸೇವಕನಾದ ನಾನು ನಿನ್ನ ಸಂಗಡ ರಾಜಧಾನಿಯಲ್ಲೇಕೆ ವಾಸಿಸಬೇಕು? ನಿನ್ನ ದೃಷ್ಟಿಯಲ್ಲಿ ನನಗೆ ದಯೆದೊರಕಿರುವದಾದರೆ ಯಾವದಾದರೊಂದು ಹಳ್ಳಿಯಲ್ಲಿ ನನಗೆ ಸ್ಥಳಕೊಡಿಸು, ನಾನು ಅಲ್ಲಿ ವಾಸಿಸುವೆನು ಅನ್ನಲು

6 ಆಕೀಷನು ಕೂಡಲೆ ಅವನಿಗೆ ಚಿಕ್ಲಗ್ ಊರನ್ನು ಕೊಟ್ಟುಬಿಟ್ಟನು. ಆದದರಿಂದ ಚಿಕ್ಲಗ್ ಎಂಬದು ಇಂದಿನವರೆಗೂ ಯೆಹೂದರಾಜರಿಗೆ ಸೇರಿದೆ.

7 ದಾವೀದನು ಫಿಲಿಷ್ಟಿಯರ ದೇಶದಲ್ಲಿ ಒಂದು ವರುಷವೂ ನಾಲ್ಕು ತಿಂಗಳೂ ವಾಸವಾಗಿದ್ದನು.

8 ಈ ಕಾಲದಲ್ಲಿ ಅವನೂ ಅವನ ಜನರೂ ತೇಲಾವಿುನಿಂದ ಶೂರಿನವರೆಗೂ ಐಗುಪ್ತ ದೇಶದವರೆಗೂ ವಿಸ್ತರಿಸಿಕೊಂಡಿರುವ ಪ್ರಾಂತಗಳಲ್ಲಿ ವಾಸಿಸುತ್ತಿರುವ ಗೆಷೂರ್ಯರು, ಗಿಜ್ರೀಯರು, ಅಮಾಲೇಕ್ಯರು ಇವರ ಮೇಲೆ ಬಿದ್ದು ಸುಲುಕೊಳ್ಳುತ್ತಿದ್ದರು.

9 ದಾವೀದನು ಸ್ತ್ರೀಪುರುಷರಲ್ಲಿ ಒಬ್ಬರನ್ನೂ ಉಳಿಸದೆ ದೇಶದ ಎಲ್ಲಾ ನಿವಾಸಿಗಳನ್ನು ಕೊಂದು ಕುರಿ, ದನ, ಕತ್ತೆ, ಒಂಟೆ, ಉಡುಗೊರೆ ಇವುಗಳನ್ನು ತೆಗೆದುಕೊಂಡು ಆಕೀಷನ ಬಳಿಗೆ ಹೋಗುತ್ತಿದ್ದನು.

10 ಆಕೀಷನು ಅವನನ್ನು - ಈಹೊತ್ತು ಯಾವ ಪ್ರಾಂತದವರನ್ನು ಸೂರೆಮಾಡಿಕೊಂಡು ಬಂದಿರಿ ಎಂದು ಕೇಳುವನು. ದಾವೀದನು ಅವನಿಗೆ - ದಕ್ಷಿಣಪ್ರಾಂತದಲ್ಲಿರುವ ಯೆಹೂದ್ಯರು, ಎರಹ್ಮೇಲ್ಯರು, ಕೇನ್ಯರು ಇವರಲ್ಲಿ ಯಾರ ಹೆಸರನ್ನಾದರೂ ಹೇಳುವನು.

11 ದಾವೀದನು ತನ್ನ ಕೃತ್ಯವನ್ನು ಜನರು ಹೇಳಾರೆಂದು ನೆನಸಿ ಅವನು ಯಾರನ್ನೂ ಗತ್ ಊರಿಗೆ ತಾರದೆ ಎಲ್ಲಾ ಸ್ತ್ರೀಪುರುಷರನ್ನು ಅಲ್ಲೇ ಕೊಂದುಹಾಕುತ್ತಿದ್ದನು. ಅವನು ಫಿಲಿಷ್ಟಿಯರ ದೇಶದಲ್ಲಿ ವಾಸವಾಗಿದ್ದ ಕಾಲದಲ್ಲೆಲ್ಲಾ ಇದೇ ರೀತಿ ಮಾಡುತ್ತಿದ್ದನು.

12 ದಾವೀದನ ಹೆಸರು ಸ್ವಜನರಾದ ಇಸ್ರಾಯೇಲ್ಯರಲ್ಲಿ ಅಸಹ್ಯವಾದದರಿಂದ ಇವನು ತನ್ನ ನಿತ್ಯ ದಾಸನಾಗಿರುವನೆಂದು ಆಕೀಷನು ನಂಬಿಕೊಂಡನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು