Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಸಮುಯೇಲ 19 - ಕನ್ನಡ ಸತ್ಯವೇದವು J.V. (BSI)


ಯೋನಾತಾನನ ಮಧ್ಯಸ್ತಿಕೆ; ಕೊಲ್ಲಬೇಕೆಂದಿದ್ದ ಸೌಲನಿಂದ ದಾವೀದನು ತಪ್ಪಿಸಿಕೊಂಡು ಸಮುವೇಲನ ಬಳಿಗೆ ಹೋದದ್ದು

1 ಸೌಲನು ದಾವೀದನನ್ನು ಕೊಲ್ಲಬೇಕೆಂದು ತನ್ನ ಮಗನಾದ ಯೋನಾತಾನನಿಗೂ ಎಲ್ಲಾ ಪರಿವಾರದವರಿಗೂ ಆಜ್ಞಾಪಿಸಿದನು. ಆದರೆ ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು.

2 ಆದದರಿಂದ ಅವನು ದಾವೀದನಿಗೆ - ನನ್ನ ತಂದೆಯಾದ ಸೌಲನು ನಿನ್ನನ್ನು ಕೊಲ್ಲಬೇಕೆಂದಿರುತ್ತಾನೆ. ನೀನು ಜಾಗರೂಕತೆಯಿಂದಿರು; ನಾಳೆ ಬೆಳಿಗ್ಗೆ ಒಂದು ಗುಪ್ತಸ್ಥಳದಲ್ಲಿ ಅಡಗಿಕೊಂಡಿರು.

3 ನೀನು ಅಡಗಿಕೊಂಡಿರುವ ಹೊಲಕ್ಕೆ ನಾನೂ ಬಂದು ನನ್ನ ತಂದೆಯ ಬಳಿಯಲ್ಲಿ ನಿಂತು ನಿನ್ನ ವಿಷಯ ಅವನೊಡನೆ ಮಾತಾಡಿ ಗೊತ್ತಾಗುವದನ್ನು ನಿನಗೆ ತಿಳಿಸುವೆನು ಎಂದು ಹೇಳಿದನು.

4 ತರುವಾಯ ಅವನು ತನ್ನ ತಂದೆಯ ಮುಂದೆ ದಾವೀದನನ್ನು ಹೊಗಳಿ - ಒಡೆಯನು ತನ್ನ ಸೇವಕನಾದ ದಾವೀದನಿಗೆ ಅನ್ಯಾಯಮಾಡದಿರಲಿ; ಅವನು ನಿನಗೆ ದ್ರೋಹಮಾಡಲಿಲ್ಲ; ಅವನು ಮಾಡಿದ್ದೆಲ್ಲವೂ ನಿನ್ನ ಹಿತಕ್ಕಾಗಿಯೇ.

5 ತನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಿ ಆ ಫಿಲಿಷ್ಟಿಯನನ್ನು ಕೊಂದನು; ಯೆಹೋವನು ಇಸ್ರಾಯೇಲ್ಯರಿಗೆ ಮಹಾಜಯವನ್ನುಂಟುಮಾಡಿದನು. ನೀನು ಅದನ್ನು ನೋಡಿ ಸಂತೋಷಪಟ್ಟಿಯಲ್ಲಾ; ದಾವೀದನನ್ನು ನಿಷ್ಕಾರಣವಾಗಿ ಕೊಂದು ನಿರ್ದೋಷಿಯ ರಕ್ತವನ್ನು ಸುರಿಸಿದ ಅಪರಾಧಕ್ಕೆ ನೀನೇಕೆ ಗುರಿಯಾಗುತ್ತೀ ಅಂದನು.

6 ಸೌಲನು ಯೋನಾತಾನನ ಮಾತುಗಳನ್ನು ಲಾಲಿಸಿ - ಯೆಹೋವನಾಣೆ, ಅವನನ್ನು ಕೊಲ್ಲುವದಿಲ್ಲ ಎಂದು ಪ್ರಮಾಣಮಾಡಿದನು.

7 ಆಗ ಯೋನಾತಾನನು ದಾವೀದನನ್ನು ಕರೆದು ಅವನಿಗೆ ಈ ಮಾತುಗಳನ್ನು ತಿಳಿಸಿ ಸೌಲನ ಬಳಿಗೆ ಕರತಂದನು. ದಾವೀದನು ಮುಂಚಿನಂತೆ ಸೌಲನ ಸನ್ನಿಧಿಯಲ್ಲಿ ಇರುವವನಾದನು.

8 ಫಿಲಿಷ್ಟಿಯರು ತಿರಿಗಿ ಯುದ್ಧಕ್ಕೆ ಬರುವಲ್ಲಿ ದಾವೀದನು ಹೋಗಿ ಅವರೊಡನೆ ಯುದ್ಧಮಾಡಿ ಅವರನ್ನು ಪೂರ್ಣವಾಗಿ ಸೋಲಿಸಿ ಓಡಿಸಿಬಿಟ್ಟನು.

9 ಒಂದು ದಿವಸ ಸೌಲನು ಕೈಯಲ್ಲಿ ಈಟಿಯನ್ನು ಹಿಡಿದುಕೊಂಡು ತನ್ನ ಮನೆಯಲ್ಲಿ ಕೂತುಕೊಂಡಿದ್ದಾಗ ಯೆಹೋವನಿಂದ ಕಳುಹಿಸಲ್ಪಟ್ಟ ದುರಾತ್ಮವು ಅವನ ಮೇಲೆ ಬಂದಿತು.

10 ಅವನು ಒಡನೆ ಕಿನ್ನರಿಯನ್ನು ಬಾರಿಸುತ್ತಿದ್ದ ದಾವೀದನನ್ನು ಗೋಡೆಗೆ ಹತ್ತಿಕೊಳ್ಳುವಂತೆ ತಿವಿಯಬೇಕೆಂದು ತನ್ನ ಈಟಿಯನ್ನು ಎಸೆದನು. ಆದರೆ ದಾವೀದನು ಫಕ್ಕನೆ ಸೌಲನೆದುರಿನಿಂದ ಸರಿದುಕೊಂಡ ಕಾರಣ ಅದು ಗೋಡೆಯೊಳಗೆ ನಾಟಿತು. ದಾವೀದನು ಆ ರಾತ್ರಿಯಲ್ಲೇ ತಪ್ಪಿಸಿಕೊಂಡು ಓಡಿಹೋದನು.

11 ಸೌಲನು ಕೂಡಲೆ ದೂತರನ್ನು ಕರಿಸಿ - ದಾವೀದನ ಮನೆಯ ಸುತ್ತಲೂ ಹೊಂಚುಹಾಕಿ ಅವನನ್ನು ಬೆಳಗಾಗುವಷ್ಟರಲ್ಲಿ ಕೊಂದುಹಾಕಬೇಕೆಂದು ಆಜ್ಞಾಪಿಸಿ ಕಳುಹಿಸಿದನು. ಮೀಕಲಳು ತನ್ನ ಗಂಡನಾದ ದಾವೀದನಿಗೆ - ನೀನು ಈ ರಾತ್ರಿಯೇ ತಪ್ಪಿಸಿಕೊಳ್ಳದಿದ್ದರೆ ನಾಳೆ ಬೆಳಿಗ್ಗೆ ಹತನಾಗುವಿ ಎಂದು ಹೇಳಿ

12 ಅವನನ್ನು ಕಿಟಕಿಯಿಂದ ಕೆಳಕ್ಕಿಳಿಸಲು ಅವನು ಓಡಿಹೋಗಿ ತಪ್ಪಿಸಿಕೊಂಡನು.

13 ಅನಂತರ ಆಕೆಯು ಪೂಜೆಯ ಬೊಂಬೆಯನ್ನು ತಂದು ಹಾಸಿಗೆಯ ಮೇಲೆ ಮಲಗಿಸಿ ಅದರ ಮುಖದ ಮೇಲೆ ಮೇಕೆಕೂದಲಿನಿಂದ ಹೆಣೆದ ಜಾಲರಿಯನ್ನು ಹಾಕಿ ಕಂಬಳಿಯನ್ನು ಹೊದಿಸಿದಳು.

14 ಸೌಲನ ದೂತರು ದಾವೀದನನ್ನು ಹಿಡಿಯುವದಕ್ಕೆ ಬಂದಾಗ ಅವಳು - ಅವನಿಗೆ ಸ್ವಸ್ಥವಿಲ್ಲವೆಂದು ಹೇಳಿ ಕಳುಹಿಸಿದಳು.

15 ಸೌಲನು ತಿರಿಗಿ ತನ್ನ ಆಳುಗಳಿಗೆ - ನೀವು ಹೋಗಿ ನೋಡಿ ದಾವೀದನನ್ನು ಹಾಸಿಗೆಯೊಡನೆ ತನ್ನ ಬಳಿಗೆ ತೆಗೆದುಕೊಂಡು ಬನ್ನಿರಿ, ಕೊಂದು ಹಾಕುತ್ತೇನೆ ಎಂದು ಆಜ್ಞಾಪಿಸಿದನು.

16 ಅವರು ಹೋಗಿ ನೋಡಲು ಮುಖದ ಮೇಲೆ ಮೇಕೆಕೂದಲಿನಿಂದ ಹೆಣೆದ ಜಾಲರಿಯುಳ್ಳದ್ದಾಗಿ ಹಾಸಿಗೆಯ ಮೇಲಿರುವದು ಒಂದು ಬೊಂಬೆಯೆಂದು ತಿಳಿದುಬಂದಾಗ

17 ಸೌಲನು ಮೀಕಲಳಿಗೆ - ನೀನು ನನ್ನನ್ನು ವಂಚಿಸಿದ್ದೇಕೆ? ನನ್ನ ಶತ್ರುವನ್ನು ಕಳುಹಿಸಿ ಅವನು ತಪ್ಪಿಸಿಕೊಳ್ಳುವಂತೆ ಮಾಡಿದಿಯಲ್ಲಾ ಎನ್ನಲು ಆಕೆಯು ಅವನಿಗೆ - ನನ್ನನ್ನು ಕಳುಹಿಸದಿದ್ದರೆ ನಿನ್ನನ್ನು ಕೊಂದುಬಿಡುತ್ತೇನೆಂದು ಅವನು ನನಗೆ ಹೇಳಿದನು ಅಂದಳು.

18 ದಾವೀದನು ತಪ್ಪಿಸಿಕೊಂಡು ರಾಮದಲ್ಲಿದ್ದ ಸಮುವೇಲನ ಬಳಿಗೆ ಬಂದು ಸೌಲನು ತನಗೆ ಮಾಡಿದ್ದೆಲ್ಲವನ್ನೂ ತಿಳಿಸಿದನು. ಅವರಿಬ್ಬರೂ ಹೋಗಿ ಅಲ್ಲಿನ ಮಠದಲ್ಲಿ ವಾಸವಾಗಿದ್ದರು.

19 ದಾವೀದನು ರಾಮದ ಮಠದಲ್ಲಿರುವದು ಸೌಲನಿಗೆ ಗೊತ್ತಾಗಲು

20 ಅವನು ಅವನನ್ನು ಹಿಡಿದು ತರುವದಕ್ಕಾಗಿ ಆಳುಗಳನ್ನು ಕಳುಹಿಸಿದನು. ಅವರು ಹೋಗಿ ಅಲ್ಲಿನ ಪ್ರವಾದಿ ಸಮೂಹವು ಪರವಶವಾಗಿ ಮಾತಾಡುವದನ್ನೂ ಸಮುವೇಲನು ಅವರ ನಾಯಕನಾಗಿ ನಿಂತಿರುವದನ್ನೂ ಕಂಡಾಗ ದೇವರ ಆತ್ಮವು ಅವರ ಮೇಲೆಯೂ ಬಂದಿತು; ಅವರೂ ಪರವಶರಾಗಿ ಮಾತಾಡತೊಡಗಿದರು.

21 ಸೌಲನಿಗೆ ಈ ವರ್ತಮಾನವು ಮುಟ್ಟಿದಾಗ ಅವನು ಬೇರೆ ಆಳುಗಳನ್ನು ಕಳುಹಿಸಿದನು; ಇವರೂ ಪರವಶರಾದರು. ಮೂರನೆಯ ಸಾರಿ ಇನ್ನು ಕೆಲವು ಮಂದಿ ಆಳುಗಳನ್ನು ಕಳುಹಿಸಿದನು. ಇವರೂ ಪರವಶರಾದರು.

22 ಆಗ ಸೌಲನು ತಾನೇ ರಾಮಕ್ಕೆ ಹೋಗಬೇಕೆಂದು ಹೊರಟು ಸೇಕೂವಿನಲ್ಲಿರುವ ದೊಡ್ಡ ಬಾವಿಯ ಬಳಿಗೆ ಬಂದು ಸಮುವೇಲ ದಾವೀದರು ಎಲ್ಲಿರುತ್ತಾರೆಂದು ವಿಚಾರಿಸಲು ಜನರು - ರಾಮದ ಮಠದಲ್ಲಿದ್ದಾರೆಂದು ಉತ್ತರಕೊಟ್ಟರು.

23 ಅವನು ಅಲ್ಲಿಂದ ರಾಮದ ಮಠಕ್ಕೆ ಹೋಗುವಾಗ ದೇವರ ಆತ್ಮವು ಅವನ ಮೇಲೆಯೂ ಬಂದಿತು. ಅವನು ಆ ಊರನ್ನು ಮುಟ್ಟುವವರೆಗೆ ಪರವಶನಾಗಿ ಮಾತಾಡುತ್ತಾ ಹೋದನು.

24 ಅಲ್ಲಿಗೆ ಸೇರಿದ ಮೇಲೆ ಅವನೂ ತನ್ನ ಬಟ್ಟೆಗಳನ್ನು ತೆಗೆದು ಹಾಕಿ ಸಮುವೇಲನ ಮುಂದೆ ಪರವಶನಾಗಿ ಮಾತಾಡುತ್ತಾ ಆ ದಿನ ಹಗಲಿರುಳು ಬೆತ್ತಲೆಯಾಗಿ ಬಿದ್ದುಕೊಂಡಿದ್ದನು. ಆದದರಿಂದ - ಸೌಲನೂ ಪ್ರವಾದಿಗಳಲ್ಲಿದ್ದಾನೋ ಎಂಬ ಗಾದೆಯುಂಟಾಯಿತು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು