Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಸಮುಯೇಲ 17 - ಕನ್ನಡ ಸತ್ಯವೇದವು J.V. (BSI)


ದಾವೀದನು ಗೊಲ್ಯಾತನನ್ನು ಕೊಂದದ್ದು

1 ಫಿಲಿಷ್ಟಿಯರು ಯುದ್ಧಮಾಡುವದಕ್ಕೋಸ್ಕರ ಯೆಹೂದದೇಶದ ಸೋಕೋವಿನಲ್ಲಿ ಸೈನ್ಯವನ್ನು ಕೂಡಿಸಿಕೊಂಡು ಬಂದು ಸೋಕೋವಿಗೂ ಅಜೇಕಕ್ಕೂ ಮಧ್ಯದಲ್ಲಿರುವ ಎಫೆಸ್ದಮ್ಮೀವಿುನಲ್ಲಿ ಪಾಳೆಯ ಮಾಡಿಕೊಂಡರು.

2 ಸೌಲನೂ ಇಸ್ರಾಯೇಲ್ಯರೂ ಫಿಲಿಷ್ಟಿಯರೊಡನೆ ಯುದ್ಧಮಾಡುವದಕ್ಕಾಗಿ ಸೈನ್ಯವನ್ನು ಕೂಡಿಸಿ ಏಲಾ ತಗ್ಗಿನಲ್ಲಿ ಪಾಳೆಯಮಾಡಿಕೊಂಡು ವ್ಯೂಹಕಟ್ಟಿದರು.

3 ಫಿಲಿಷ್ಟಿಯರು ಒಂದು ಗುಡ್ಡದ ಪಕ್ಕದಲ್ಲಿಯೂ ಇಸ್ರಾಯೇಲ್ಯರು ಇನ್ನೊಂದು ಗುಡ್ಡದ ಪಕ್ಕದಲ್ಲಿಯೂ ನಿಂತರು.

4 ಉಭಯರ ಮಧ್ಯದಲ್ಲಿ ಒಂದು ತಗ್ಗು ಇತ್ತು. ಫಿಲಿಷ್ಟಿಯರ ಪಾಳೆಯದಿಂದ ಗತ್ ಊರಿನವನಾದ ಗೊಲ್ಯಾತನೆಂಬ ಒಬ್ಬ ರಣಶೂರನು ಹೊರಟುಬಂದನು. ಅವನು ಆರುವರೆ ಮೊಳ ಎತ್ತರವಾಗಿದ್ದನು.

5 ಅವನ ಶಿರಸ್ತ್ರಾಣವು ತಾಮ್ರದ್ದು; ಅದೇ ಲೋಹದ ಬಿಲ್ಲೆಗಳಿಂದ ಪರೆಪರೆಯಾಗಿ ಜೋಡಿಸಲ್ಪಟ್ಟ ಅವನ ಕವಚವು ಐದು ಸಾವಿರ ರೂಪಾಯಿ ತೂಕವಾಗಿತ್ತು.

6 ಅವನ ಪಾದರಕ್ಷೆಗಳೂ ಹೆಗಲ ಮೇಲಣ ಈಟಿಯೂ ತಾಮ್ರದವು.

7 ಅವನ ಬರ್ಜಿಯ ಹಿಡಿಕೆಯು ನೇಯಿಗಾರರ ಕುಂಟೆಯಷ್ಟು ಗಾತ್ರವಾಗಿತ್ತು. ಅದರ ಅಲಗು ಆರುನೂರು ತೊಲೆ ಕಬ್ಬಿಣದಿಂದ ಮಾಡಿದ್ದು. ಅವನ ಗುರಾಣಿಯನ್ನು ಹೊರುವವನು ಅವನ ಮುಂದೆ ಮುಂದೆ ಹೋಗುತ್ತಿದ್ದನು.

8 ಅವನು ನಿಂತು ಇಸ್ರಾಯೇಲ್‍ಸೈನ್ಯದವರನ್ನು ಕೂಗಿ ಅವರಿಗೆ - ನೀವು ಯುದ್ಧಮಾಡಬಂದದ್ದೇಕೆ? ನಾನು ಫಿಲಿಷ್ಟಿಯನು, ನೀವು ಸೌಲನ ಸೇವಕರು. ನಿಮ್ಮಲ್ಲಿ ಒಬ್ಬನನ್ನು ಆರಿಸಿಕೊಂಡು ನನ್ನ ಬಳಿಗೆ ಕಳುಹಿಸಿರಿ;

9 ಅವನು ನನ್ನೊಡನೆ ಯುದ್ಧಮಾಡಿ ನನ್ನನ್ನು ಸೋಲಿಸಿ ಕೊಂದರೆ ನಮ್ಮವರು ನಿಮ್ಮ ಸೇವಕರಾಗುವರು; ನಾನು ಅವನನ್ನು ಸೋಲಿಸಿ ಕೊಂದರೆ ನೀವು ನಮ್ಮ ದಾಸರಾಗಿ ನಮ್ಮನ್ನು ಸೇವಿಸಬೇಕು ಎಂದು ಹೇಳಿದನು.

10 ಮತ್ತು ಅವನು - ಈ ಹೊತ್ತು ಇಸ್ರಾಯೇಲ್ ಸೈನ್ಯದವರನ್ನು ಹೀಯಾಳಿಸುತ್ತೇನೆ; ನನ್ನೊಡನೆ ಕಾಳಗಕ್ಕೆ ನಿಮ್ಮಲ್ಲಿಂದ ಒಬ್ಬ ಮನುಷ್ಯನನ್ನು ಕಳುಹಿಸಿರಿ ನೋಡೋಣ ಎಂದು ಕೊಚ್ಚಿಕೊಂಡನು.

11 ಸೌಲನೂ ಎಲ್ಲಾ ಇಸ್ರಾಯೇಲ್ಯರೂ ಆ ಫಿಲಿಷ್ಟಿಯನ ಮಾತುಗಳನ್ನು ಕೇಳಿ ಬಹಳವಾಗಿ ಭಯಪಟ್ಟರು; ಅವರ ಎದೆಯೊಡೆದು ಹೋಯಿತು.

12 ಯೆಹೂದದ ಬೇತ್ಲೆಹೇಮ್ ಊರಿನ ಎಫ್ರಾತ್ಯನಾದ ಇಷಯನೆಂಬವನು ಸೌಲನ ಕಾಲದಲ್ಲಿ ಬಹು ವೃದ್ಧನಾಗಿದ್ದನು. ಇವನ ಎಂಟು ಮಂದಿ ಮಕ್ಕಳಲ್ಲಿ ದಾವೀದನೆಂಬವನು ಒಬ್ಬನು.

13 ಇವನ ಮೂರು ಮಂದಿ ಹಿರೀ ಮಕ್ಕಳು ಸೌಲನ ಜೊತೆಯಲ್ಲಿ ಯುದ್ಧಕ್ಕೆ ಹೋಗಿದ್ದರು. ಅವರಲ್ಲಿ ಚೊಚ್ಚಲ ಮಗನ ಹೆಸರು ಎಲೀಯಾಬ್; ಮರಚಲ ಮಗನ ಹೆಸರು ಅಬೀನಾದಾಬ್; ಮೂರನೆಯವನ ಹೆಸರು ಶಮ್ಮ. ದಾವೀದನೇ ಎಲ್ಲರಿಗಿಂತಲೂ ಕಿರಿಯವನು.

14 ಮೂರು ಮಂದಿ ಹಿರೀ ಮಕ್ಕಳು ಸೌಲನ ಜೊತೆಯಲ್ಲಿ ಯುದ್ಧಕ್ಕೆ ಹೋದದರಿಂದ

15 ದಾವೀದನು ಸೌಲನನ್ನು ಬಿಟ್ಟು ತನ್ನ ತಂದೆಯ ಕುರಿಗಳನ್ನು ಮೇಯಿಸುವದಕ್ಕೋಸ್ಕರ ಬೇತ್ಲೆಹೇವಿುಗೆ ಹೋದನು.

16 ಆ ಫಿಲಿಷ್ಟಿಯನು ನಾಲ್ವತ್ತು ದಿವಸ ಹೊತ್ತಾರೆಯಲ್ಲಿಯೂ ಸಾಯಂಕಾಲದಲ್ಲಿಯೂ ಬಂದು ಬಂದು ಅದೇ ಪ್ರಕಾರ ಕೂಗುತ್ತಾ ನಿಲ್ಲುತ್ತಿದ್ದನು.

17 ಒಂದು ದಿವಸ ಇಷಯನು ತನ್ನ ಮಗನಾದ ದಾವೀದನಿಗೆ - ಇಗೋ, ಇಲ್ಲಿ ಮೂವತ್ತು ಸೇರು ಹುರಿಗಾಳೂ ಹತ್ತು ರೊಟ್ಟಿಗಳೂ ಇರುತ್ತವೆ. ಇವುಗಳನ್ನು ತೆಗೆದುಕೊಂಡು ಶೀಘ್ರವಾಗಿ ಪಾಳೆಯಕ್ಕೆ ಹೋಗಿ ನಿನ್ನ ಅಣ್ಣಂದಿರಿಗೆ ಕೊಡು.

18 ಇದಲ್ಲದೆ ಇಲ್ಲಿ ಹತ್ತು ಗಿಣ್ಣಿನ ಗಡ್ಡೆಗಳಿರುತ್ತವೆ; ಇವುಗಳನ್ನು ಅವರ ಸಹಸ್ರಾಧಿಪತಿಗೆ ಕೊಡು. ಬರುವಾಗ ನಿನ್ನ ಅಣ್ಣಂದಿರ ಕ್ಷೇಮಸಮಾಚಾರವನ್ನು ವಿಚಾರಿಸಿಕೊಂಡು ಅವರಿಂದ ಒಂದು ಗುರುತನ್ನು ತೆಗೆದುಕೊಂಡು ಬಾ.

19 ಸೌಲನೂ ಇಸ್ರಾಯೇಲ್ಯರೂ ಏಲಾ ತಗ್ಗಿನಲ್ಲಿ ಫಿಲಿಷ್ಟಿಯರೊಡನೆ ಯುದ್ಧಮಾಡುತ್ತಿದ್ದಾರಲ್ಲಾ ಎಂದು ಹೇಳಿದನು.

20 ದಾವೀದನು ಮರುದಿನ ಬೆಳಿಗ್ಗೆ ಎದ್ದು ಕಾಯುವವನಿಗೆ ಕುರಿಗಳನ್ನು ಒಪ್ಪಿಸಿ ತನ್ನ ತಂದೆಯಾದ ಇಷಯನು ಹೇಳಿದವುಗಳನ್ನು ತೆಗೆದುಕೊಂಡು ಸೈನ್ಯವು ಹೊರಟು ಯುದ್ಧಕ್ಕಾಗಿ ಆರ್ಭಟಿಸುವ ಹೊತ್ತಿನಲ್ಲಿ ಪಾಳೆಯದ ಬಂಡಿಗಳು ನಿಂತಿದ್ದ ಸ್ಥಳಕ್ಕೆ ಬಂದನು.

21 ಇಸ್ರಾಯೇಲ್ಯರೂ ಫಿಲಿಷ್ಟಿಯರೂ ಎದುರೆದುರಾಗಿ ವ್ಯೂಹಕಟ್ಟುವಷ್ಟರಲ್ಲಿ

22 ದಾವೀದನು ತಾನು ತಂದವುಗಳನ್ನು ಸಾಮಾನುಕಾಯುವವನ ಬಳಿಯಲ್ಲಿಟ್ಟು ರಣರಂಗಕ್ಕೆ ಓಡಿಹೋಗಿ ತನ್ನ ಸಹೋದರರ ಕ್ಷೇಮಸಮಾಚಾರವನ್ನು ವಿಚಾರಿಸುತ್ತಾ

23 ಅವರೊಡನೆ ಮಾತಾಡುತ್ತಿರುವಷ್ಟರಲ್ಲಿ ಗತ್ ಊರಿನ ರಣವೀರನಾದ ಗೊಲ್ಯಾತನೆಂಬ ಆ ಫಿಲಿಷ್ಟಿಯನು ತನ್ನ ಸೈನ್ಯದಿಂದ ಹೊರಗೆ ಬಂದು ಮುಂಚಿನಂತೆಯೇ ಕೂಗಿದನು. ದಾವೀದನು ಅವನ ಮಾತುಗಳನ್ನು ಕೇಳಿದನು.

24 ಇಸ್ರಾಯೇಲ್ಯರು ಅವನನ್ನು ನೋಡಿ ಬಹಳವಾಗಿ ಭಯಪಟ್ಟು ಅಲ್ಲಿಂದ ಓಡಿಹೋದರು.

25 ಅವರು - ಇಸ್ರಾಯೇಲ್ಯರಾದ ನಮ್ಮನ್ನು ಹೀಯಾಳಿಸುವದಕ್ಕೋಸ್ಕರ ಬಂದಿರುವ ಈ ಮನುಷ್ಯನನ್ನು ಕಂಡಿರಾ! ಯಾವನು ಇವನನ್ನು ಕೊಲ್ಲುವನೋ ಅಂಥವನಿಗೆ ಅರಸನು ಅಪಾರದ್ರವ್ಯದೊಡನೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವನು; ಇದಲ್ಲದೆ ಅವನ ಕುಟುಂಬಕ್ಕೆ ಸರ್ವಮಾನ್ಯವನ್ನು ಕೊಡುವನು ಎಂದು ಮಾತಾಡಿಕೊಳ್ಳುತ್ತಿದ್ದರು.

26 ದಾವೀದನು - ಜೀವಸ್ವರೂಪನಾದ ದೇವರ ಸೈನ್ಯವನ್ನು ಹೀಯಾಳಿಸುವದಕ್ಕೆ ಸುನ್ನತಿಯಿಲ್ಲದ ಈ ಫಿಲಿಷ್ಟಿಯನು ಎಷ್ಟರವನು? ಇವನನ್ನು ಕೊಂದು ಇಸ್ರಾಯೇಲ್ಯರಿಗೆ ಬಂದಿರುವ ನಿಂದೆಯನ್ನು ತೆಗೆದುಹಾಕುವವನಿಗೆ ಸಿಕ್ಕುವದೇನೆಂದು ಹೇಳಿದಿರಿ ಎಂದು ತನ್ನ ಬಳಿಯಲ್ಲಿ ನಿಂತಿದ್ದ ಮನುಷ್ಯರನ್ನು ಕೇಳಲು

27 ಅವರು ಮುಂಚಿನಂತೆ ಇಂಥಿಂಥದು ದೊರಕುವದೆಂದು ಉತ್ತರಕೊಟ್ಟರು.

28 ದಾವೀದನು ಜನರ ಸಂಗಡ ಹೀಗೆ ಮಾತಾಡುತ್ತಿರುವದನ್ನು ಅವನ ಹಿರೀ ಅಣ್ಣನಾದ ಎಲೀಯಾಬನು ಕೇಳಿ ಕೋಪಗೊಂಡು - ನೀನು ಇಲ್ಲಿಗೆ ಬಂದದ್ದೇಕೆ? ಅಡವಿಯಲ್ಲಿರುವ ನಾಲ್ಕಾರು ಕುರಿಗಳನ್ನು ಯಾರಿಗೊಪ್ಪಿಸಿ ಬಂದಿ? ನಿನ್ನ ಸೊಕ್ಕೂ ತುಂಟತನವೂ ನನಗೆ ಗೊತ್ತದೆ; ನೀನು ಯುದ್ಧವನ್ನು ನೋಡುವದಕ್ಕೆ ಬಂದಿದ್ದೀ ಎಂದು ಅವನನ್ನು ಗದರಿಸಲು

29 ದಾವೀದನು - ನಾನೇನು ತಪ್ಪು ಮಾಡಿದೆನು? ಬರೀ ಮಾತಾಡಿದೆನಷ್ಟೆ ಎಂದು ಹೇಳಿ ಅವನನ್ನು ಬಿಟ್ಟು ಬೇರೆ ಕಡೆಗೆ ಹೋಗಿ

30 ಹಾಗೆಯೇ ವಿಚಾರಮಾಡಲು ಜನರು ಮುಂಚಿನಂತೆಯೇ ಉತ್ತರಕೊಟ್ಟರು.

31 ದಾವೀದನು ಈ ಪ್ರಕಾರ ವಿಚಾರಿಸುತ್ತಿರುವದನ್ನು ಕೇಳಿದವರು ಸೌಲನಿಗೆ ತಿಳಿಸಿದರು; ಅವನು ಅವನನ್ನು ಕರೇ ಕಳುಹಿಸಿದನು.

32 ದಾವೀದನು ಸೌಲನಿಗೆ - ಆ ಫಿಲಿಷ್ಟಿಯನ ನಿವಿುತ್ತವಾಗಿ ಯಾವನೂ ಎದೆಗೆಡಬಾರದು; ನಿನ್ನ ಸೇವಕನಾದ ನಾನು ಹೋಗಿ ಅವನೊಡನೆ ಯುದ್ಧಮಾಡುವೆನು ಅನ್ನಲು ಸೌಲನು ಅವನಿಗೆ -

33 ನೀನು ಅವನೊಡನೆ ಕಾದಾಡಲಾರಿ; ನೀನು ಇನ್ನೂ ಹುಡುಗನು. ಅವನಾದರೋ ಚಿಕ್ಕಂದಿನಿಂದಲೇ ಯುದ್ಧವೀರನು ಎಂದು ಹೇಳಿದನು.

34 ಆಗ ದಾವೀದನು ಅವನಿಗೆ - ನಿನ್ನ ಸೇವಕನಾದ ನಾನು ನನ್ನ ತಂದೆಯ ಕುರಿಗಳನ್ನು ಕಾಯುತ್ತಿದ್ದಾಗ ಸಿಂಹವಾಗಲಿ ಕರಡಿಯಾಗಲಿ ಬಂದು ಹಿಂಡಿನಲ್ಲಿನ ಕುರಿಮರಿಯನ್ನು ಹಿಡಿದುಕೊಂಡು ಹೋಗಲು

35 ನಾನು ಒಡನೆ ಅದನ್ನು ಬೆನ್ನಟ್ಟಿ ಹೊಡೆದು ಕುರಿಮರಿಯನ್ನು ಕಿತ್ತುಕೊಳ್ಳುತ್ತಿದ್ದೆನು. ಅದು ಹಿಂದಿರುಗಿ ನನ್ನ ಮೇಲೆ ಬಿದ್ದರೆ ಅದನ್ನು ಗದ್ದಹಿಡಿದು ಬಡಿದು ಕೊಂದುಹಾಕುತ್ತಿದ್ದೆನು.

36 ನಿನ್ನ ಸೇವಕನಿಂದ ಕೊಲ್ಲಲ್ಪಟ್ಟ ಸಿಂಹಕ್ಕೂ ಕರಡಿಗೂ ಆದ ಗತಿಯೇ ಜೀವಸ್ವರೂಪನಾದ ದೇವರ ಸೈನ್ಯವನ್ನು ನಿಂದಿಸುವಂಥ ಈ ಸುನ್ನತಿಯಿಲ್ಲದ ಫಿಲಿಷ್ಟಿಯನಿಗೂ ಆಗಬೇಕು.

37 ನನ್ನನ್ನು ಅಂಥ ಸಿಂಹದ ಮತ್ತು ಕರಡಿಯ ಉಗುರುಗಳಿಗೆ ತಪ್ಪಿಸಿದ ಯೆಹೋವನು ಈ ಫಿಲಿಷ್ಟಿಯನ ಕೈಗೂ ತಪ್ಪಿಸುವನು ಎನ್ನಲು ಸೌಲನು ದಾವೀದನಿಗೆ - ಹೋಗು; ಯೆಹೋವನು ನಿನ್ನ ಸಂಗಡ ಇರಲಿ ಎಂದು ಹೇಳಿ

38 ಅವನಿಗೆ ತನ್ನ ಯುದ್ಧವಸ್ತ್ರಗಳನ್ನೂ ಕವಚವನ್ನೂ ತೊಡಿಸಿ ತಲೆಗೊಂದು ತಾಮ್ರದ ಶಿರಸ್ತ್ರಾಣವನ್ನಿಟ್ಟನು;

39 ದಾವೀದನು ಯುದ್ಧವಸ್ತ್ರದ ಮೇಲೆ ಕತ್ತಿಯನ್ನು ಬಿಗಿದುಕೊಂಡನಂತರ ನಡೆಯಬಹುದೋ ಎಂದು ಪರೀಕ್ಷಿಸಿದ ಮೇಲೆ ಸೌಲನಿಗೆ - ನನಗೆ ಅಭ್ಯಾಸವಿಲ್ಲದರಿಂದ ಇವುಗಳನ್ನು ಧರಿಸಿಕೊಂಡು ನಡೆಯಲಾರೆ ಎಂದು ಹೇಳಿ ಅವುಗಳನ್ನು ತೆಗೆದಿಟ್ಟು

40 ತನ್ನ ಕೋಲನ್ನು ತೆಗೆದುಕೊಂಡು ಹೊರಟು ಹಳ್ಳದಲ್ಲಿ ಐದು ನುಣುಪುಕಲ್ಲುಗಳನ್ನು ಆರಿಸಿಕೊಂಡು ಅವುಗಳನ್ನು ಕುರುಬರ ಪದ್ಧತಿಯಂತೆ ತನಗಿರುವ ಸೊಂಟಚೀಲದಲ್ಲಿ ಹಾಕಿ ಕೈಯಲ್ಲಿ ಕವಣೆಯನ್ನು ಹಿಡಿದು ಫಿಲಿಷ್ಟಿಯನ ಬಳಿಗೆ ಹೋದನು.

41 ಇತ್ತ ಫಿಲಿಷ್ಟಿಯನೂ ದಾವೀದನ ಸಮೀಪಕ್ಕೆ ಬಂದನು. ಗುರಾಣಿಹೊರುವವನು ಅವನ ಮುಂದೆ ಇದ್ದನು.

42 ಫಿಲಿಷ್ಟಿಯನು ಕೆಂಬಣ್ಣದವನೂ ಸುಂದರನೂ ಯೌವನಸ್ಥನೂ ಆದ ದಾವೀದನನ್ನು ನೋಡಿ ತಿರಸ್ಕಾರದಿಂದ ಅವನಿಗೆ -

43 ನೀನು ಕೋಲುಹಿಡಿದು ನನ್ನ ಬಳಿಗೆ ಬರುವದೇನು? ನಾನು ನಾಯಿಯೋ ಎಂದು ಹೇಳಿ ಅವನನ್ನು ತನ್ನ ದೇವರ ಹೆಸರಿನಲ್ಲಿ ಶಪಿಸಿ -

44 ಇಲ್ಲಿ ಬಾ; ನಿನ್ನ ಮಾಂಸವನ್ನು ಮೃಗಪಕ್ಷಿಗಳಿಗೆ ಹಂಚಿಕೊಡುತ್ತೇನೆ ಅಂದನು.

45 ಆಗ ದಾವೀದನು ಅವನಿಗೆ - ನೀನು ಈಟಿ ಕತ್ತಿ ಬರ್ಜಿಗಳೊಡನೆ ನನ್ನ ಬಳಿಗೆ ಬರುತ್ತೀ; ನಾನಾದರೋ ನೀನು ಹೀಯಾಳಿಸಿದಂಥ ಸೇನಾಧೀಶ್ವರನೂ ಇಸ್ರಾಯೇಲ್ಯರ ಯುದ್ಧಭಟರ ದೇವರೂ ಆಗಿರುವ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬರುತ್ತೇನೆ.

46 ಆತನು ಈ ಹೊತ್ತು ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಡುವನು; ನಾನು ನಿನ್ನನ್ನು ಕೊಂದು ನಿನ್ನ ತಲೆಯನ್ನು ಕಡಿದುಹಾಕಿ ಫಿಲಿಷ್ಟಿಯಸೈನ್ಯದ ಶವಗಳನ್ನು ಮೃಗಪಕ್ಷಿಗಳಿಗೆ ಹಂಚಿಕೊಡುವೆನು. ಇದರಿಂದ ಇಸ್ರಾಯೇಲ್ಯರೊಳಗೆ ದೇವರಿರುತ್ತಾನೆಂಬದು ಭೂಲೋಕದವರಿಗೆಲ್ಲಾ ತಿಳಿದು ಬರುವದು;

47 ಯೆಹೋವನು ಈಟಿ ಕತ್ತಿಗಳಿಲ್ಲದೆ ರಕ್ಷಿಸಬಲ್ಲನೆಂಬದು ಇಲ್ಲಿ ಕೂಡಿರುವವರಿಗೆಲ್ಲಾ ಗೊತ್ತಾಗುವದು; ಯಾಕಂದರೆ ಯುದ್ಧಫಲವು ಯೆಹೋವನ ಕೈಯಲ್ಲಿದೆ; ಆತನು ನಿಮ್ಮನ್ನು ನಮ್ಮ ಕೈಗೆ ಒಪ್ಪಿಸಿಕೊಡುವನು ಅಂದನು.

48 ಕೂಡಲೆ ಆ ಫಿಲಿಷ್ಟಿಯನು ಹೊರಟು ದಾವೀದನೊಡನೆ ಯುದ್ಧಮಾಡುವದಕ್ಕೆ ಸಮೀಪಿಸಿದಾಗ ದಾವೀದನು ಫಿಲಿಷ್ಟಿಯ ಸೈನ್ಯದ ಕಡೆಗೆ ಓಡಿಹೋಗಿ ಆ ಫಿಲಿಷ್ಟಿಯನನ್ನು ಸಂಧಿಸಿ

49 ಕೈಯನ್ನು ಚೀಲದಲ್ಲಿ ಹಾಕಿ ಒಂದು ಕಲ್ಲನ್ನು ತೆಗೆದು ಅವನ ಹಣೆಗೆ ಗುರಿಯಿಟ್ಟು ಕವಣೆಯನ್ನು ಬೀಸಿ ಹೊಡೆಯಲು ಕಲ್ಲು ಅವನ ಹಣೆಯೊಳಗೆ ಹೊಕ್ಕಿತು; ಅವನು ಬೋರಲಬಿದ್ದನು.

50 ಕೂಡಲೆ ಅವನು ಹೋಗಿ ಆ ಫಿಲಿಷ್ಟಿಯನ ಮೇಲೆ ನಿಂತು ಅವನ ಕತ್ತಿಯನ್ನು ಹಿರಿದು ಅದರಿಂದಲೇ ಅವನ ತಲೆಯನ್ನು ಕಡಿದು ಅವನನ್ನು ಸಾಯಿಸಿದನು.

51 ಈ ಪ್ರಕಾರ ದಾವೀದನು ಕತ್ತಿಯಿಂದಲ್ಲ, ಬರೀ ಒಂದು ಕವಣೆಯ ಕಲ್ಲಿನಿಂದ ಫಿಲಿಷ್ಟಿಯನನ್ನು ಸೋಲಿಸಿ ಕೊಂದುಹಾಕಿದನು. ಫಿಲಿಷ್ಟಿಯರು ತಮ್ಮ ರಣವೀರನು ಸತ್ತುಹೋದದ್ದನ್ನು ಕಂಡು ಓಡಿಹೋದರು.

52 ಇಸ್ರಾಯೇಲ್ಯರೂ ಯೆಹೂದ್ಯರೂ ಎದ್ದು ಆರ್ಭಟಿಸಿ ಫಿಲಿಷ್ಟಿಯರನ್ನು ತಗ್ಗಿನ ದಾರಿಯವರೆಗೂ ಎಕ್ರೋನಿನ ಬಾಗಲುಗಳವರೆಗೂ ಹಿಂದಟ್ಟಿದರು. ಫಿಲಿಷ್ಟಿಯರ ಹೆಣಗಳು ಶಾರಯಿವಿುನಿಂದ ಗತ್ ಎಕ್ರೋನ್ ಪಟ್ಟಣಗಳವರೆಗೂ ಬಿದ್ದಿದ್ದವು.

53 ಅನಂತರ ಇಸ್ರಾಯೇಲ್ಯರು ಹಿಂದಿರುಗಿ ಬಂದು ಫಿಲಿಷ್ಟಿಯರ ಪಾಳೆಯವನ್ನು ಸೂರೆಮಾಡಿದರು.

54 ದಾವೀದನು ಆ ಫಿಲಿಷ್ಟಿಯನ ತಲೆಯನ್ನು ಯೆರೂಸಲೇವಿುಗೆ ಒಯ್ದನು; ಅವನ ಆಯುಧಗಳನ್ನು ತನ್ನ ಗುಡಾರದಲ್ಲಿಟ್ಟುಕೊಂಡನು.


ದಾವೀದನು ಸೌಲನ ಒಡ್ಡೋಲಗದಲ್ಲಿ ಸೇರಿದ್ದೂ ಯೋನಾತಾನನ ಸ್ನೇಹಿತನಾದದ್ದೂ

55 ದಾವೀದನು ಫಿಲಿಷ್ಟಿಯನೊಡನೆ ಯುದ್ಧಮಾಡುವದಕ್ಕೆ ಹೊರಟದ್ದನ್ನು ಸೌಲನು ಕಂಡು ತನ್ನ ಸೇನಾಪತಿಯಾದ ಅಬ್ನೇರನನ್ನು - ಅಬ್ನೇರನೇ, ಈ ಹುಡುಗನು ಯಾರ ಮಗನು ಎಂದು ಕೇಳಿದ್ದಕ್ಕೆ ಅವನು ಸೌಲನಿಗೆ - ಅರಸನೇ, ನಿನ್ನ ಜೀವದಾಣೆ ನನಗೆ ಗೊತ್ತಿಲ್ಲ ಎಂದು ಉತ್ತರಕೊಟ್ಟನು.

56 ಆಗ ಅರಸನು ಅವನಿಗೆ - ಆ ಪ್ರಾಯಸ್ಥನು ಯಾರ ಮಗನೆಂದು ವಿಚಾರಿಸು ಎಂದು ಆಜ್ಞಾಪಿಸಿದನು.

57 ದಾವೀದನು ಫಿಲಿಷ್ಟಿಯನನ್ನು ಕೊಂದು ಅವನ ತಲೆಯನ್ನು ಹಿಡಿದುಕೊಂಡು ಹಿಂದಿರುಗಿ ಬರುವಾಗ ಅಬ್ನೇರನು ಅವನನ್ನು ಕರೆದು ಸೌಲನ ಮುಂದೆ ನಿಲ್ಲಿಸಿದನು.

58 ಸೌಲನು ಅವನನ್ನು - ಹುಡುಗನೇ, ನೀನು ಯಾರ ಮಗನೆಂದು ಕೇಳಿದ್ದಕ್ಕೆ ಅವನು - ನಾನು ಬೇತ್ಲೆಹೇವಿುನವನೂ ನಿನ್ನ ಸೇವಕನೂ ಆದ ಇಷಯನ ಮಗನು ಎಂದು ಉತ್ತರಕೊಟ್ಟನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು