Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಸಮುಯೇಲ 10 - ಕನ್ನಡ ಸತ್ಯವೇದವು J.V. (BSI)

1 ಆ ಆಳು ಮುಂದೆ ಹೋದಾಗ ಸಮುವೇಲನು ಎಣ್ಣೇ ಕುಪ್ಪಿಯಿಂದ ಅವನ ತಲೆಯ ಮೇಲೆ ತೈಲವನ್ನು ಹೊಯ್ದು ಅವನನ್ನು ಮುದ್ದಿಟ್ಟು ಅವನಿಗೆ - ಯೆಹೋವನು ತನ್ನ ಸ್ವಾಸ್ತ್ಯದ ಮೇಲೆ ಪ್ರಭುವಾಗಿರುವದಕ್ಕೋಸ್ಕರ ನಿಜವಾಗಿ ನಿನ್ನನ್ನು ಅಭಿಷೇಕಿಸಿದ್ದಾನೆ.

2 ಈ ಹೊತ್ತು ನೀನು ನನ್ನನ್ನು ಬಿಟ್ಟುಹೋದ ನಂತರ ಬೆನ್ಯಾಮೀನ್ಯರ ಮೇರೆಯೊಳಗಿರುವ ರಾಹೇಲಳ ಸಮಾಧಿಯ ಬಳಿಯಲ್ಲಿರುವಂಥ ಚೆಲ್ಚಹಿನಲ್ಲಿ ಇಬ್ಬರು ಮನುಷ್ಯರನ್ನು ಕಾಣುವಿ; ಅವರು ನಿನಗೆ - ನೀನು ಹುಡುಕುತ್ತಿರುವ ಕತ್ತೆಗಳು ಸಿಕ್ಕಿದವು; ನಿನ್ನ ತಂದೆಯು ಕತ್ತೆಗಳ ಚಿಂತೆಬಿಟ್ಟು ನನ್ನ ಮಗನೆಲ್ಲಿ ಹೋದನೋ ಎಂಬದಾಗಿ ನಿನಗೋಸ್ಕರ ಹಂಬಲಿಸುತ್ತಿರುತ್ತಾನೆ ಎಂದು ಹೇಳುವರು.

3 ನೀನು ಅಲ್ಲಿಂದ ಮುಂದೆ ನಡೆದು ತಾಬೋರಿನ ಹತ್ತಿರವಿರುವ ಏಲೋನ್ ವೃಕ್ಷದ ಬಳಿಗೆ ಬಂದಾಗ ದೇವದರ್ಶನಕ್ಕಾಗಿ ಬೇತೇಲಿಗೆ ಹೋಗುವ ಮೂವರು ಜನರು ನಿನಗೆದುರಾಗುವರು. ಅವರಲ್ಲೊಬ್ಬನು ಮೂರು ಹೋತಮರಿಗಳನ್ನೂ ಮತ್ತೊಬ್ಬನು ಮೂರು ರೊಟ್ಟಿಗಳನ್ನೂ ಇನ್ನೊಬ್ಬನು ದ್ರಾಕ್ಷಾರಸದ ಒಂದು ಬುದ್ದಲಿಯನ್ನೂ ಹೊತ್ತುಕೊಂಡಿರುವರು.

4 ಅವರು ನಿನ್ನ ಕ್ಷೇಮಸಮಾಚಾರವನ್ನು ವಿಚಾರಿಸಿ ಎರಡು ರೊಟ್ಟಿಗಳನ್ನು ಕೊಡುವರು; ನೀನು ಅವುಗಳನ್ನು ತೆಗೆದುಕೊಳ್ಳಬೇಕು.

5 ಅಲ್ಲಿಂದ ಫಿಲಿಷ್ಟಿಯರ ಠಾಣವಿರುವ ದೇವಗಿರಿಯನ್ನು ಮುಟ್ಟಿದಾಗ ಮುಂಗಡೆಯಲ್ಲಿ ಸ್ವರಮಂಡಲ, ದಮ್ಮಡಿ, ಕೊಳಲು, ಕಿನ್ನರಿ ಈ ವಾದ್ಯಗಾರರೊಡನೆ ಗುಡ್ಡದಿಂದಿಳಿದು ಬರುತ್ತಿರುವ ಪ್ರವಾದಿಸಮೂಹವನ್ನು ಕಾಣುವಿ. ಅವರು ಪರವಶರಾಗಿ ಪ್ರವಾದಿಸುವರು;

6 ಆಗ ಯೆಹೋವನ ಆತ್ಮವು ನಿನ್ನ ಮೇಲೂ ಬರುವದರಿಂದ ನೀನೂ ಮಾರ್ಪಟ್ಟು ಪ್ರವಾದಿಸುವಿ.

7 ಈ ಗುರುತುಗಳೆಲ್ಲಾ ಸಂಭವಿಸಿದಾಗ ನಿನಗೆ ಅನುಕೂಲವಿದ್ದದ್ದನ್ನು ನಡಿಸು; ದೇವರು ನಿನ್ನ ಸಂಗಡ ಇದ್ದಾನೆ.

8 ನೀನು ಮುಂದಾಗಿ ಗಿಲ್ಗಾಲಿಗೆ ಹೋಗು; ಏಳು ದಿವಸಗಳಾದನಂತರ ನಾನು ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸುವದಕ್ಕೋಸ್ಕರ ಅಲ್ಲಿಗೆ ಬಂದು ನೀನು ಮಾಡಬೇಕಾದದ್ದನ್ನು ನಿನಗೆ ತಿಳಿಸುವೆನು; ಅಲ್ಲಿಯವರೆಗೆ ಕಾದುಕೊಂಡಿರು ಎಂದು ಹೇಳಿದನು.

9 ಸೌಲನು ಸಮುವೇಲನನ್ನು ಬಿಟ್ಟು ಹೊರಟ ಕೂಡಲೆ ದೇವರು ಅವನಿಗೆ ನೂತನ ಹೃದಯವನ್ನು ಕೊಟ್ಟನು. ಅದೇ ದಿನದಲ್ಲಿ ಆ ಎಲ್ಲಾ ಗುರುತುಗಳು ಸಂಭವಿಸಿದವು.

10 ಅವನು ದೇವಗಿರಿಗೆ ಬಂದ ಕೂಡಲೆ ಪರವಶವಾದ ಪ್ರವಾದಿಸಮೂಹವು ತನ್ನೆದುರಿಗೆ ಬರುವದನ್ನು ಕಂಡನು. ದೇವರ ಆತ್ಮವು ಅವನ ಮೇಲೆ ಬಂದದರಿಂದ ಅವನೂ ಪರವಶನಾಗಿ ಅವರೊಳಗೆ ಸೇರಿ ಪ್ರವಾದಿಸಿದನು.

11 ಅವನು ಪರವಶನಾಗಿ ಮಾತಾಡುವದನ್ನು ಗುರುತಿನವರು ಕಂಡು ತಮ್ಮ ತಮ್ಮೊಳಗೆ - ಕೀಷನ ಮಗನಿಗೆ ಏನಾಯಿತು? ಸೌಲನೂ ಪ್ರವಾದಿಗಳಲ್ಲಿದ್ದಾನೋ ಎಂದು ಮಾತಾಡಿಕೊಳ್ಳುತ್ತಿರುವಾಗ

12 ಆ ಸ್ಥಳದವನೊಬ್ಬನು - ಹಾಗಾದರೆ ಇವರ ತಂದೆ ಯಾರು ಎಂದು ಕೇಳಿದನು. ಈ ಸಂಗತಿಯಿಂದ ಸೌಲನು ಪ್ರವಾದಿಗಳಲ್ಲಿದ್ದಾನೋ ಎಂಬ ಗಾದೆ ಹುಟ್ಟಿತು.

13 ಅವನು ಪ್ರವಾದಿಸಿ ಆದ ಮೇಲೆ ಪೂಜಾಸ್ಥಳಕ್ಕೆ ಬಂದನು.

14 ಸೌಲನ ಚಿಕ್ಕಪ್ಪನು ಅವನನ್ನೂ ಅವನ ಸೇವಕನನ್ನೂ - ನೀವು ಎಲ್ಲಿಗೆ ಹೋಗಿದ್ದಿರಿ ಎಂದು ಕೇಳಲು ಅವನು - ಕತ್ತೆಗಳನ್ನು ಹುಡುಕುವದಕ್ಕೆ ಹೋಗಿದ್ದೆವು. ಅವು ಸಿಕ್ಕಲಿಲ್ಲವಾದದರಿಂದ ಸಮುವೇಲನ ಬಳಿಗೆ ಹೋದೆವು ಅಂದನು.

15 ಸಮುವೇಲನು ಏನು ಹೇಳಿದನೆಂದು ಚಿಕ್ಕಪ್ಪನು ಕೇಳಲು ಸೌಲನು -

16 ಕತ್ತೆಗಳು ಸಿಕ್ಕಿದವೆಂದು ತಿಳಿಸಿದನು ಎಂಬದಾಗಿ ಹೇಳಿದನೇ ಹೊರತು ಅವನು ಹೇಳಿದ ರಾಜ್ಯದ ಮಾತನ್ನು ತಿಳಿಸಲಿಲ್ಲ.


ಚೀಟುಹಾಕಿ ಸೌಲನನ್ನು ಅರಸನನ್ನಾಗಿ ಆರಿಸಿಕೊಂಡದ್ದು

17 ಸಮುವೇಲನು ಇಸ್ರಾಯೇಲ್ಯರನ್ನು ವಿುಚ್ಪೆಗೆ ಕರಿಸಿ ಯೆಹೋವನ ಸನ್ನಿಧಿಯಲ್ಲಿ ಕೂಡಿಸಿಕೊಂಡು

18 ಅವರಿಗೆ - ಇಸ್ರಾಯೇಲ್ ದೇವರಾದ ಯೆಹೋವನು ಹೇಳುವದನ್ನು ಕೇಳಿರಿ; ಆತನು ನಿಮಗೆ - ನೀವು ಐಗುಪ್ತ್ಯರ ಕೈಗೆ ತಪ್ಪಿಸಿಕೊಳ್ಳುವಂತೆ ನಿಮ್ಮನ್ನು ಅವರ ದೇಶದಿಂದ ಬಿಡಿಸಿದವನೂ ಬಾಧಿಸುತ್ತಿದ್ದ ಬೇರೆ ಎಲ್ಲಾ ಜನಾಂಗಗಳಿಂದ ನಿಮ್ಮನ್ನು ರಕ್ಷಿಸಿದವನೂ ನಾನೇ.

19 ನೀವಾದರೋ ನಿಮ್ಮನ್ನು ಕಷ್ಟಸಂಕಟಗಳಿಂದ ಬಿಡಿಸಿದ ನಿಮ್ಮ ದೇವರಾದ ನನ್ನನ್ನು ಈಗ ತಿರಸ್ಕರಿಸಿ ನಮಗೊಬ್ಬ ಅರಸನನ್ನು ನೇವಿುಸೆಂದು ಹೇಳುತ್ತೀರಿ ಅನ್ನುತ್ತಾನೆ. ಆದದರಿಂದ ನೀವು ಕುಲಕುಲವಾಗಿಯೂ ಗೋತ್ರಗೋತ್ರವಾಗಿಯೂ ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಿರಿ ಎಂದು ಅಪ್ಪಣೆ ಮಾಡಿದನು.

20 ಸಮುವೇಲನು ಇಸ್ರಾಯೇಲ್ಯರ ಎಲ್ಲಾ ಕುಲಗಳನ್ನು ಸಮೀಪಕ್ಕೆ ಕರೆದಾಗ ಬೆನ್ಯಾಮೀನ್ ಕುಲಕ್ಕೆ ಚೀಟುಬಿದ್ದಿತು.

21 ಆ ಕುಲದ ಗೋತ್ರಗಳನ್ನು ಬರಮಾಡಿದಾಗ ಮಟ್ರಿಯ ಗೋತ್ರದಲ್ಲಿ ಕೀಷನ ಮಗನಾದ ಸೌಲನಿಗೆ ಚೀಟು ಬಿದ್ದಿತು. ಅವನನ್ನು ಹುಡುಕಲು ಅವನು ಸಿಕ್ಕಲಿಲ್ಲ.

22 ಅವರು - ಆ ಮನುಷ್ಯನು ಇಲ್ಲಿಗೆ ಬರುವನೋ ಎಂದು ಯೆಹೋವನನ್ನು ವಿಚಾರಿಸಿದಾಗ ಆತನು - ಬಂದಿದ್ದಾನೆ; ಇಗೋ, ಸಾಮಾನುಗಳಲ್ಲಿ ಅಡಗಿಕೊಂಡಿದ್ದಾನೆ ಎಂದು ಉತ್ತರಕೊಟ್ಟನು.

23 ಅವರು ತಟ್ಟನೆ ಹೋಗಿ ಅವನನ್ನು ಹಿಡಿದುಕೊಂಡು ಬಂದು ಜನರ ಮಧ್ಯದಲ್ಲಿ ನಿಲ್ಲಿಸಿದರು. ಎಲ್ಲಾ ಜನರ ಗುಂಪಿನಲ್ಲಿ ಅವನ ಹೆಗಲೂ ತಲೆಯೂ ಕಾಣುವಷ್ಟು ಉನ್ನತಪುರುಷನಾಗಿದ್ದನು.

24 ಆಗ ಸಮುವೇಲನು ಎಲ್ಲಾ ಜನರಿಗೆ - ನೋಡಿದಿರಾ, ಯೆಹೋವನಿಂದ ಆರಿಸಲ್ಪಟ್ಟವನು ಇವನೇ; ಸರ್ವಜನರಲ್ಲಿ ಇವನಿಗೆ ಸಮಾನರು ಇಲ್ಲವೇ ಇಲ್ಲ ಎನ್ನಲು ಜನರೆಲ್ಲರೂ - ಅರಸನು ಚಿರಂಜೀವಿಯಾಗಿರಲಿ ಎಂದು ಆರ್ಭಟಿಸಿದರು.

25 ತರುವಾಯ ಸಮುವೇಲನು ಜನರಿಗೆ ರಾಜನೀತಿಯನ್ನು ಬೋಧಿಸಿ ಅದನ್ನು ಒಂದು ಪುಸ್ತಕದಲ್ಲಿ ಬರೆದು ಯೆಹೋವನ ಸನ್ನಿಧಿಯಲ್ಲಿಟ್ಟನು; ಆಮೇಲೆ ಜನರನ್ನು ಅವರವರ ಮನೆಗಳಿಗೆ ಕಳುಹಿಸಿಬಿಟ್ಟನು.

26 ಸೌಲನೂ ಗಿಬೆಯದಲ್ಲಿರುವ ತನ್ನ ಮನೆಗೆ ಹೋದನು; ಕೆಲವು ಮಂದಿ ಶೂರರು ದೇವರಿಂದ ಪ್ರೇರಿತರಾಗಿ ಅವನ ಜೊತೆಯಲ್ಲಿ ಹೋದರು.

27 ಕೆಲವು ಮಂದಿ ಕಾಕಪೋಕರು - ಇವನೋ ನಮ್ಮನ್ನು ರಕ್ಷಿಸುವವನು ಎಂದು ತಿರಸ್ಕರಿಸಿ ಕಾಣಿಕೆಗಳನ್ನು ತರಲಿಲ್ಲ. ಆದರೂ ಸೌಲನು ಸುಮ್ಮನಿದ್ದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು