Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಯೋಹಾನನು 5 - ಕನ್ನಡ ಸತ್ಯವೇದವು J.V. (BSI)


ಕ್ರಿಸ್ತನಲ್ಲಿ ನಂಬಿಕೆಯಿಟ್ಟವರು ಲೋಕವನ್ನು ಜಯಿಸುತ್ತಾರೆ

1 ಯೇಸುವು ಕ್ರಿಸ್ತನೆಂದು ನಂಬುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನಾಗಿದ್ದಾನೆ. ಯಾವನು ಹುಟ್ಟಿಸಿದ ತಂದೆಯನ್ನು ಪ್ರೀತಿಸುತ್ತಾನೋ ಅವನು ತಂದೆಯಿಂದ ಹುಟ್ಟಿದವರೆಲ್ಲರನ್ನೂ ಪ್ರೀತಿಸುತ್ತಾನೆ.

2 ನಾವು ದೇವರ ಮಕ್ಕಳನ್ನು ಪ್ರೀತಿಸುತ್ತೇವೆಂಬದನ್ನು ದೇವರನ್ನು ಪ್ರೀತಿಸಿ ಆತನ ಆಜ್ಞೆಗಳನ್ನು ಅನುಸರಿಸುವದರಿಂದಲೇ ತಿಳಿದುಕೊಳ್ಳುತ್ತೇವೆ.

3 ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.

4 ಯಾಕಂದರೆ ದೇವರಿಂದ ಹುಟ್ಟಿರುವಂಥದೆಲ್ಲವು ಲೋಕವನ್ನು ಜಯಿಸುತ್ತದೆ. ಲೋಕವನ್ನು ಜಯಿಸಿದಂಥದು ನಮ್ಮ ನಂಬಿಕೆಯೇ.

5 ಯೇಸುವು ದೇವರ ಮಗನೆಂದು ನಂಬಿದವರೇ ಅಲ್ಲದೆ ಲೋಕವನ್ನು ಜಯಿಸುವವರು ಇನ್ನಾರಿದ್ದಾರೆ?


ಕ್ರಿಸ್ತನ ಮುಖಾಂತರ ನಿತ್ಯಜೀವ ದೊರೆಯುತ್ತದೆಂಬದಕ್ಕೆ ಸಾಕ್ಷಿಗಳು

6 ಈತನು, ಅಂದರೆ ಯೇಸು ಕ್ರಿಸ್ತನು, ನೀರಿನಿಂದಲೂ ರಕ್ತದಿಂದಲೂ ಸಾಕ್ಷಿಹೊಂದಿದವನು. ನೀರಿನಿಂದ ಮಾತ್ರವಲ್ಲ, ನೀರಿನಿಂದಲೂ ರಕ್ತದಿಂದಲೂ ಸಾಕ್ಷಿ ಹೊಂದಿದವನಾಗಿದ್ದಾನೆ.

7 ಇದಲ್ಲದೆ ಆತ್ಮನು ಸಾಕ್ಷಿ ಕೊಡುವವನಾಗಿದ್ದಾನೆ; ಆತ್ಮನು ಸತ್ಯಸ್ವರೂಪನೇ.

8 ಆತ್ಮ ನೀರು ರಕ್ತ ಎಂಬ ಮೂರು ಸಾಕ್ಷಿಗಳುಂಟು; ಈ ಮೂರು ಒಂದೇ ಅಭಿಪ್ರಾಯವಾಗಿ ಸಾಕ್ಷಿಹೇಳುತ್ತವೆ.

9 ನಾವು ಮನುಷ್ಯರ ಸಾಕ್ಷಿಯನ್ನು ತೆಗೆದುಕೊಳ್ಳುತ್ತೇವಲ್ಲಾ; ದೇವರ ಸಾಕ್ಷಿಯು ಅದಕ್ಕಿಂತ ವಿಶೇಷವಾಗಿದೆ. ದೇವರು ಕೊಟ್ಟ ಸಾಕ್ಷಿ ಏನಂದರೆ ಆತನು ತನ್ನ ಮಗನ ವಿಷಯದಲ್ಲಿ ಹೇಳಿದ್ದೇ.

10 ದೇವರ ಮಗನಲ್ಲಿ ನಂಬಿಕೆ ಇಟ್ಟವನು ಆ ಸಾಕ್ಷಿಯನ್ನು ತನ್ನಲ್ಲೇ ಹೊಂದಿದ್ದಾನೆ. ದೇವರನ್ನು ನಂಬದವನು ಆತನನ್ನು ಸುಳ್ಳುಗಾರನನ್ನಾಗಿ ಮಾಡಿದ್ದಾನೆ; ಹೇಗಂದರೆ ದೇವರು ತನ್ನ ಮಗನ ವಿಷಯವಾಗಿ ಹೇಳಿರುವ ಸಾಕ್ಷಿಯಲ್ಲಿ ಅವನು ನಂಬಿಕೆಯಿಡಲಿಲ್ಲ.

11 ಆ ಸಾಕ್ಷಿ ಯಾವದಂದರೆ ದೇವರು ನಮಗೆ ನಿತ್ಯಜೀವವನ್ನು ಅನುಗ್ರಹಿಸಿದನು, ಆ ಜೀವವು ಆತನ ಮಗನಲ್ಲಿ ಅದೆ ಎಂಬದೇ.

12 ಯಾವನು ದೇವರ ಮಗನನ್ನು ಅಂಗೀಕರಿಸಿದ್ದಾನೋ ಅವನಿಗೆ ಆ ಜೀವ ಉಂಟು; ಯಾವನು ದೇವರ ಮಗನನ್ನು ಅಂಗೀಕರಿಸಲಿಲ್ಲವೋ ಅವನಿಗೆ ಆ ಜೀವವಿಲ್ಲ.


ದೇವಕುಮಾರನಲ್ಲಿ ನಂಬಿಕೆಯಿಟ್ಟವರಿಗೆ ದೃಢನಿಶ್ಚಯವಿರುವದು

13 ದೇವರ ಮಗನ ಹೆಸರಿನಲ್ಲಿ ನಂಬಿಕೆಯಿಟ್ಟಿರುವವರಾದ ನಿಮ್ಮಲ್ಲಿ ನಿತ್ಯಜೀವ ಉಂಟೆಂದು ನಿಮಗೆ ಗೊತ್ತಾಗುವಂತೆ ಈ ಮಾತುಗಳನ್ನು ಬರೆದಿದ್ದೇನೆ.

14 ಮತ್ತು ನಾವು ದೇವರ ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬ ಧೈರ್ಯವು ಆತನ ವಿಷಯವಾಗಿ ನಮಗುಂಟು.

15 ನಾವು ಏನು ಬೇಡಿಕೊಂಡರೂ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬದು ನಮಗೆ ಗೊತ್ತಾಗಿದ್ದರೆ ನಾವು ಬೇಡಿದವುಗಳು ಆತನಿಂದ ನಮಗೆ ದೊರೆತವೆಂಬದೂ ನಮಗೆ ಗೊತ್ತಾಗಿದೆ.

16 ಯಾವನಾದರೂ ತನ್ನ ಸಹೋದರನು ಮರಣಕರವಲ್ಲದ ಪಾಪಮಾಡುವದನ್ನು ಕಂಡರೆ ಅವನು ದೇವರನ್ನು ಬೇಡಿಕೊಳ್ಳಲಿ; ಆಗ ದೇವರು ಮರಣಕರವಲ್ಲದ ಪಾಪಮಾಡುವವರಿಗೆ ಜೀವವನ್ನು ದಯಪಾಲಿಸುವನು. ಮರಣಕರವಾದ ಪಾಪವುಂಟು; ಈ ಪಾಪದ ವಿಷಯವಾಗಿ ಬೇಡಿಕೊಳ್ಳಬೇಕೆಂದು ನಾನು ಹೇಳುವದಿಲ್ಲ.

17 ನೀತಿಗೆ ವಿರುದ್ಧವಾದದ್ದೆಲ್ಲಾ ಪಾಪವಾಗಿದೆ; ಆದರೂ ಮರಣಕರವಲ್ಲದ ಪಾಪವುಂಟು.

18 ದೇವರಿಂದ ಹುಟ್ಟಿರುವವನು ಪಾಪಮಾಡುವವನಲ್ಲವೆಂಬದು ನಮಗೆ ಗೊತ್ತದೆ. ದೇವರಿಂದ ಹುಟ್ಟಿದಾತನು ಅವನನ್ನು ಕಾಪಾಡುವನು; ಕೆಡುಕನು ಅವನನ್ನು ಹಿಡಿಯುವದಿಲ್ಲ.

19 ನಾವು ದೇವರಿಂದ ಹುಟ್ಟಿದವರೆಂದೂ ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ ಎಂದೂ ನಮಗೆ ಗೊತ್ತದೆ.

20 ದೇವರ ಮಗನು ಬಂದು ನಾವು ಸತ್ಯವಾಗಿರುವಾತನನ್ನು ಅರಿತುಕೊಳ್ಳುವ ಹಾಗೆ ನಮಗೆ ವಿವೇಕವನ್ನು ಕೊಟ್ಟಿದ್ದಾನೆಂಬದು ನಮಗೆ ಗೊತ್ತದೆ. ಮತ್ತು ನಾವು ದೇವರ ಮಗನಾದ ಯೇಸು ಕ್ರಿಸ್ತನಲ್ಲಿ ಇರುವವರಾಗಿ ಸತ್ಯವಾಗಿರುವಾತನಲ್ಲಿದ್ದೇವೆ. ಆತನು ಸತ್ಯದೇವರೂ ನಿತ್ಯಜೀವವೂ ಆಗಿದ್ದಾನೆ.

21 ಪ್ರಿಯರಾದ ಮಕ್ಕಳೇ, ವಿಗ್ರಹಗಳಿಗೆ ದೂರವಾಗಿರುವಂತೆ ನಿಮ್ಮನ್ನು ಕಾಪಾಡಿಕೊಳ್ಳಿರಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು