1 ಯೋಹಾನನು 4 - ಕನ್ನಡ ಸತ್ಯವೇದವು J.V. (BSI)ಆತ್ಮಪ್ರೇರಿತ ನುಡಿಗಳು ಸತ್ಯವೋ ಅಸತ್ಯವೋ ಎಂದು ತಿಳಿದುಕೊಳ್ಳುವದಕ್ಕಾಗಿ ಅವುಗಳನ್ನು ಪರೀಕ್ಷಿಸಬೇಕು 1 ಪ್ರಿಯರೇ, ಅನೇಕ ಮಂದಿ ಸುಳ್ಳು ಪ್ರವಾದಿಗಳು ಲೋಕದೊಳಗೆ ಬಂದಿರುವದರಿಂದ ನೀವು ಆತ್ಮದ ಎಲ್ಲಾ ನುಡಿಗಳನ್ನು ನಂಬದೆ ಆಯಾ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು. 2 ಪ್ರೇರಿಸುವಂಥವನು ದೇವರ ಆತ್ಮನೇ ಎಂದು ತಿಳಿದುಕೊಳ್ಳುವದಕ್ಕೆ ಲಕ್ಷಣವೇನಂದರೆ - ಮನುಷ್ಯನಾಗಿ ಬಂದ ಯೇಸು ಕ್ರಿಸ್ತನನ್ನು ಒಪ್ಪಿಕೊಳ್ಳುವ ಆತ್ಮವು ದೇವರಿಂದ ಪ್ರೇರಿತವಾದದ್ದು. 3 ಯೇಸುವನ್ನು ಒಪ್ಪದೆ ಇರುವ ಆತ್ಮವು ದೇವರಿಂದ ಪ್ರೇರಿತವಾದದ್ದಲ್ಲ; ಅದು ಕ್ರಿಸ್ತ ವಿರೋಧಿಯ ಆತ್ಮವಾಗಿದೆ. ಅದು ಬರುವದೆಂಬದನ್ನು ನೀವು ಕೇಳಿದ್ದೀರಲ್ಲಾ; ಈಗಲೂ ಲೋಕದಲ್ಲಿ ಅದೆ. 4 ಪ್ರಿಯರಾದ ಮಕ್ಕಳೇ, ನೀವಂತೂ ದೇವರಿಂದ ಹುಟ್ಟಿದವರಾಗಿದ್ದೀರಿ; ಮತ್ತು ಲೋಕದಲ್ಲಿರುವವನಿಗಿಂತ ನಿಮ್ಮಲ್ಲಿರುವಾತನು ಹೆಚ್ಚಿನವನಾಗಿರುವದರಿಂದ ನೀವು ಆ ಸುಳ್ಳು ಪ್ರವಾದಿಗಳನ್ನು ಜಯಿಸಿದ್ದೀರಿ. 5 ಅವರು ಲೋಕದಿಂದ ಹುಟ್ಟಿದವರಾಗಿದ್ದಾರೆ; ಈ ಕಾರಣದಿಂದ ಅವರು ಲೋಕಪ್ರೇರಿತರಾಗಿ ಮಾತಾಡುತ್ತಾರೆ. ಮತ್ತು ಲೋಕದವರು ಅವರ ಮಾತನ್ನು ಕೇಳುತ್ತಾರೆ. 6 ನಾವಂತೂ ದೇವರಿಂದ ಹುಟ್ಟಿದವರಾಗಿದ್ದೇವೆ; ದೇವರನ್ನು ಬಲ್ಲವನು ನಮ್ಮ ಮಾತನ್ನು ಕೇಳುತ್ತಾನೆ; ದೇವರಿಂದ ಹುಟ್ಟದವನು ನಮ್ಮ ಮಾತನ್ನು ಕೇಳುವದಿಲ್ಲ. ಇದು ಸತ್ಯವನ್ನು ಬೋಧಿಸುವ ಆತ್ಮ, ಅದು ಸುಳ್ಳನ್ನು ಬೋಧಿಸುವ ಆತ್ಮ ಎಂದು ಇದರಿಂದಲೇ ತಿಳುಕೊಳ್ಳುತ್ತೇವೆ. ದೇವರಿಂದ ಹುಟ್ಟಿದವರಲ್ಲಿ ಪ್ರೀತಿಸ್ವಭಾವವೇ ವಿಶೇಷ 7 ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿಯು ದೇವರಿಂದಾಗಿದೆ, ಮತ್ತು ಪ್ರೀತಿಮಾಡುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನೂ ದೇವರನ್ನು ಬಲ್ಲವನೂ ಆಗಿದ್ದಾನೆ. 8 ಪ್ರೀತಿಯಿಲ್ಲದವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಸ್ವರೂಪಿಯು. 9 ದೇವರು ತನ್ನ ಒಬ್ಬನೇ ಮಗನನ್ನು ನಾವು ಆತನ ಮೂಲಕ ಜೀವಿಸುವದಕ್ಕಾಗಿ ಲೋಕಕ್ಕೆ ಕಳುಹಿಸಿಕೊಟ್ಟದರಲ್ಲಿಯೇ ದೇವರ ಪ್ರೀತಿಯು ನಮ್ಮಲ್ಲಿ ಪ್ರತ್ಯಕ್ಷವಾಗಿದೆ. 10 ನಾವು ದೇವರನ್ನು ಪ್ರೀತಿಸಿದ್ದರಲ್ಲಿಯಲ್ಲ, ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತನ್ನ ಮಗನನ್ನು ಕಳುಹಿಸಿಕೊಟ್ಟದರಲ್ಲಿಯೇ ಪ್ರೀತಿಯ ನಿಜ ಗುಣವು ತೋರಿ ಬರುತ್ತದೆ. 11 ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವು ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ. 12 ದೇವರನ್ನು ಯಾರೂ ಎಂದೂ ನೋಡಿಲ್ಲ; ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲೆಗೊಂಡಿದ್ದಾನೆ, ಮತ್ತು ಆತನಿಂದಾಗುವ ಪ್ರೀತಿಯು ನಮ್ಮಲ್ಲಿ ಸಿದ್ಧಿಗೆ ಬರುತ್ತದೆ. 13 ದೇವರು ನಮಗೆ ತನ್ನ ಆತ್ಮದಲ್ಲಿ ಪಾಲನ್ನು ಅನುಗ್ರಹಿಸಿದ್ದರಿಂದಲೇ ನಾವು ಆತನಲ್ಲಿ ನೆಲೆಗೊಂಡಿದ್ದೇವೆಂತಲೂ ಆತನು ನಮ್ಮಲ್ಲಿ ನೆಲೆಗೊಂಡಿದ್ದಾನೆಂತಲೂ ತಿಳಿದುಕೊಳ್ಳುತ್ತೇವೆ. 14 ತಂದೆಯು ತನ್ನ ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿಕೊಟ್ಟಿರುವದನ್ನು ನಾವು ನೋಡಿದ್ದೇವೆ, ಅದರ ವಿಷಯದಲ್ಲಿ ಸಾಕ್ಷಿಹೇಳುತ್ತೇವೆ. 15 ಯೇಸು ದೇವರ ಮಗನಾಗಿದ್ದಾನೆಂದು ಯಾವನು ಒಪ್ಪಿಕೊಂಡು ಹೇಳುತ್ತಾನೋ ಅವನಲ್ಲಿ ದೇವರು ನೆಲೆಗೊಂಡಿದ್ದಾನೆ, ಅವನು ದೇವರಲ್ಲಿ ನೆಲೆಗೊಂಡಿದ್ದಾನೆ. 16 ದೇವರು ನಮ್ಮಲ್ಲಿಟ್ಟಿರುವ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ ಅದನ್ನು ನಂಬಿದ್ದೇವೆ. ದೇವರು ಪ್ರೀತಿಸ್ವರೂಪಿ; ಪ್ರೀತಿಯಲ್ಲಿ ನೆಲೆಗೊಂಡಿರುವವನು ದೇವರಲ್ಲಿ ನೆಲೆಗೊಂಡಿದ್ದಾನೆ, ದೇವರು ಅವನಲ್ಲಿ ನೆಲೆಗೊಂಡಿದ್ದಾನೆ. 17 ನ್ಯಾಯತೀರ್ಪಿನ ದಿನದಲ್ಲಿ ನಮಗಿರುವ ಧೈರ್ಯದಲ್ಲಿಯೇ ಆತನ ಪ್ರೀತಿಯು ನಮ್ಮೊಳಗೆ ಸಿದ್ಧಿಗೆ ಬಂತು. ಯಾಕಂದರೆ ಕ್ರಿಸ್ತನು ಎಂಥವನಾಗಿದ್ದಾನೋ ನಾವು ಅಂಥವರಾಗಿಯೇ ಈ ಲೋಕದಲ್ಲಿದ್ದೇವೆ. 18 ಪ್ರೀತಿಯು ಇರುವಲ್ಲಿ ಹೆದರಿಕೆಯಿಲ್ಲ. ಹೆದರಿಕೆಯು ಯಾತನೆಯನ್ನು ಹೊಂದುತ್ತಾ ಇರುವದು; ಪೂರ್ಣಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ. ಹೆದರುವವನು ಪ್ರೀತಿಯಲ್ಲಿ ಸಿದ್ಧಿಗೆ ಬಂದವನಲ್ಲ. 19 ದೇವರು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ. 20 ಒಬ್ಬನು ತಾನು ದೇವರನ್ನು ಪ್ರೀತಿಸುತ್ತೇನೆಂದು ಹೇಳಿ ತನ್ನ ಸಹೋದರನನ್ನು ದ್ವೇಷಿಸಿದರೆ ಅವನು ಸುಳ್ಳುಗಾರನಾಗಿದ್ದಾನೆ. ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಪ್ರೀತಿಸಲಾರನು. 21 ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಆಜ್ಞೆಯನ್ನು ನಾವು ಆತನಿಂದ ಹೊಂದಿದ್ದೇವೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India