Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಯೋಹಾನನು 3 - ಕನ್ನಡ ಸತ್ಯವೇದವು J.V. (BSI)


ದೇವರ ಮಕ್ಕಳನ್ನೂ ಸೈತಾನನ ಮಕ್ಕಳನ್ನೂ ಕುರಿತದ್ದು

1 ದೇವರ ಮಕ್ಕಳೆಂಬ ಹೆಸರನ್ನು ನಮಗೆ ಕೊಡುವದರಲ್ಲಿ ತಂದೆಯು ಎಂಥಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾನೆ ನೋಡಿರಿ; ನಾವು ಆತನ ಮಕ್ಕಳಾಗಿದ್ದೇವೆ. ಈ ಕಾರಣದಿಂದ ಲೋಕವು ನಮ್ಮನ್ನು ತಿಳಿದುಕೊಳ್ಳುವದಿಲ್ಲ, ಅದು ಆತನನ್ನು ತಿಳಿದುಕೊಳ್ಳಲಿಲ್ಲವಲ್ಲಾ.

2 ಪ್ರಿಯರೇ, ಈಗ ದೇವರ ಮಕ್ಕಳಾಗಿದ್ದೇವೆ; ಮುಂದೆ ನಾವು ಏನಾಗುವೆವೋ ಅದು ಇನ್ನು ಪ್ರತ್ಯಕ್ಷವಾಗಲಿಲ್ಲ. ಕ್ರಿಸ್ತನು ಪ್ರತ್ಯಕ್ಷನಾಕುವಾಗ ನಾವು ಆತನ ಹಾಗಿರುವೆವೆಂದು ಬಲ್ಲೆವು;

3 ಯಾಕಂದರೆ ಆತನಿರುವ ಪ್ರಕಾರವೇ ಆತನನ್ನು ನೋಡುವೆವು. ಆತನ ಮೇಲೆ ಈ ನಿರೀಕ್ಷೆಯನ್ನು ಇಟ್ಟಿರುವ ಪ್ರತಿಯೊಬ್ಬನು ಕ್ರಿಸ್ತನು ಶುದ್ಧನಾಗಿರುವಂತೆಯೇ ತನ್ನನ್ನು ಶುದ್ಧಮಾಡಿಕೊಳ್ಳುತ್ತಾನೆ.

4 ಪಾಪಮಾಡುವ ಪ್ರತಿಯೊಬ್ಬನು ಅಧರ್ಮವನ್ನು ಮಾಡುವವನಾಗಿದ್ದಾನೆ; ಪಾಪವು ಅಧರ್ಮವೇ.

5 ಪಾಪಗಳನ್ನು ಹೋಗಲಾಡಿಸುವದಕ್ಕಾಗಿ ಕ್ರಿಸ್ತನು ಪ್ರತ್ಯಕ್ಷನಾದನೆಂಬದು ನಿಮಗೆ ಗೊತ್ತಾಗಿದೆ; ಆತನಲ್ಲಿ ಪಾಪವಿಲ್ಲ.

6 ಆತನಲ್ಲಿ ನೆಲೆಗೊಂಡಿರುವವನು ಪಾಪಮಾಡನು; ಪಾಪಮಾಡುವವನು ಆತನನ್ನು ಕಂಡವನೂ ಅಲ್ಲ, ತಿಳಿದವನೂ ಅಲ್ಲ.

7 ಪ್ರಿಯರಾದ ಮಕ್ಕಳೇ, ನಿಮ್ಮನ್ನು ಸನ್ಮಾರ್ಗದಿಂದ ತಪ್ಪಿಸುವದಕ್ಕೆ ಯಾರಿಗೂ ಅವಕಾಶ ಕೊಡಬೇಡಿರಿ. ಕ್ರಿಸ್ತನು ಹೇಗೆ ನೀತಿವಂತನಾಗಿದ್ದಾನೋ ಹಾಗೆಯೇ ನೀತಿಯನ್ನನುಸರಿಸುವವನು ನೀತಿವಂತನಾಗಿದ್ದಾನೆ.

8 ಪಾಪಮಾಡುವವನು ಸೈತಾನನಿಂದ ಹುಟ್ಟಿದವನಾಗಿದ್ದಾನೆ; ಆದಿಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನಲ್ಲಾ. ಸೈತಾನನ ಕೆಲಸಗಳನ್ನು ಲಯ ಮಾಡುವದಕ್ಕೋಸ್ಕರವೇ ದೇವಕುಮಾರನು ಪ್ರತ್ಯಕ್ಷನಾದನು.

9 ದೇವರಿಂದ ಹುಟ್ಟಿದವನು ಪಾಪಮಾಡನು; ದೇವರ ಜೀವವು ಅವನಲ್ಲಿ ನೆಲೆಗೊಂಡಿದೆ. ಅವನು ದೇವರಿಂದ ಹುಟ್ಟಿದ ಕಾರಣ ಪಾಪಮಾಡುವವನಾಗಿರಲಾರನು.

10 ಇವರು ದೇವರ ಮಕ್ಕಳೆಂಬದೂ ಅವರು ಸೈತಾನನ ಮಕ್ಕಳೆಂಬದೂ ಇದರಿಂದ ವ್ಯಕ್ತವಾಗುತ್ತದೆ. ನೀತಿಯನ್ನು ಅನುಸರಿಸದವನೂ ತನ್ನ ಸಹೋದರನನ್ನು ಪ್ರೀತಿಸದವನೂ ದೇವರಿಂದ ಹುಟ್ಟಿದವರಲ್ಲ.

11 ನಾವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನೀವು ಮೊದಲಿನಿಂದಲೂ ಕೇಳಿದ ವಾಕ್ಯವಾಗಿದೆ.

12 ಕೆಡುಕನಿಂದ ಹುಟ್ಟಿ ತನ್ನ ತಮ್ಮನನ್ನು ಕೊಂದುಹಾಕಿದ ಕಾಯಿನನಂತೆ ನಾವು ಇರಬಾರದು. ಯಾವ ಕಾರಣದಿಂದ ಅವನನ್ನು ಕೊಂದುಹಾಕಿದನು? ತನ್ನ ಕೃತ್ಯಗಳು ಕೆಟ್ಟವುಗಳೂ ತನ್ನ ತಮ್ಮನ ಕೃತ್ಯಗಳು ನೀತಿಗೆ ಸರಿಯಾದವುಗಳೂ ಆಗಿದ್ದದರಿಂದಲೇ.


ನಿತ್ಯಜೀವದಲ್ಲಿ ಸೇರಿರುವವರಿಗೆ ಪರರ ಪ್ರೀತಿಯಿರುವದು

13 ಸಹೋದರರೇ, ಲೋಕವು ನಿಮ್ಮನ್ನು ದ್ವೇಷಿಸಿದರೆ ಆಶ್ಚರ್ಯಪಡಬೇಡಿರಿ.

14 ನಾವಂತೂ ಕ್ರೈಸ್ತಸಹೋದರರನ್ನು ಪ್ರೀತಿಸುವವರಾಗಿರುವದರಿಂದ ಮರಣದಿಂದ ಪಾರಾಗಿ ಜೀವದಲ್ಲಿ ಸೇರಿದ್ದೇವೆಂಬದು ನಮಗೆ ಗೊತ್ತಾಗಿದೆ. ಪ್ರೀತಿಸದೆ ಇರುವವನು ಮರಣದಲ್ಲೇ ಇದ್ದಾನೆ.

15 ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ, ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವದಿಲ್ಲವೆಂಬದು ನಿಮಗೆ ಗೊತ್ತಾಗಿದೆ.

16 ಕ್ರಿಸ್ತನು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟದರಲ್ಲಿಯೇ ಪ್ರೀತಿ ಇಂಥದೆಂದು ನಮಗೆ ತಿಳಿದು ಬಂದದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ.

17 ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿ ಬಿದ್ದಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದುಂಟೇ?

18 ಪ್ರಿಯರಾದ ಮಕ್ಕಳೇ, ನಾವು ಬರೀಮಾತಿನಿಂದಾಗಲಿ ಬಾಯುಪಚಾರದಿಂದಾಗಲಿ ಪ್ರೀತಿಸುವವರಾಗಿರಬಾರದು; ನಿಮ್ಮ ಪ್ರೀತಿಯು ಕೃತ್ಯದಲ್ಲಿಯೂ ಸತ್ಯದಲ್ಲಿಯೂ ತೋರಬೇಕು.


ಯೇಸುವಿನಲ್ಲಿ ನಂಬಿಕೆಯಿಟ್ಟು ಪ್ರೀತಿಯಲ್ಲಿ ನಡೆದರೆ ಮನಸ್ಸಮಾಧಾನವು ಉಂಟಾಗುವದಲ್ಲದೆ ನಾವು ಮಾಡುವ ಪ್ರಾರ್ಥನೆ ಸಫಲವಾಗುವದು

19 ನಾವು ಸತ್ಯಕ್ಕೆ ಸೇರಿದವರೆಂಬದು ಇದರಿಂದಲೇ ನಮಗೆ ತಿಳಿಯುತ್ತದೆ.

20 ಮತ್ತು ನಮ್ಮ ಹೃದಯವು ಯಾವ ವಿಷಯದಲ್ಲಿಯಾದರೂ ನಮ್ಮನ್ನು ದೋಷಿಗಳೆಂದು ನಿರ್ಣಯಿಸಿದರೂ ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆಂದು ನಾವು ತಿಳಿದು ದೇವರ ಸಮಕ್ಷಮದಲ್ಲಿ ನಮ್ಮ ಹೃದಯವನ್ನು ಸಮಾಧಾನಪಡಿಸುವೆವು.

21 ಪ್ರಿಯರೇ, ನಮ್ಮ ಹೃದಯವು ನಮ್ಮನ್ನು ದೋಷಿಗಳೆಂದು ನಿರ್ಣಯಿಸದಿದ್ದರೆ ನಮಗೆ ದೇವರ ವಿಷಯದಲ್ಲಿ ಧೈರ್ಯವುಂಟು.

22 ಮತ್ತು ನಾವು ಆತನ ಆಜ್ಞೆಗಳನ್ನು ಕೈಕೊಂಡು ಆತನ ಎಣಿಕೆಯಲ್ಲಿ ಮೆಚ್ಚಿಕೆಯಾದ ಕಾರ್ಯಗಳನ್ನು ಮಾಡುವವರಾಗಿರುವದರಿಂದ ಏನು ಬೇಡಿಕೊಂಡರೂ ಆತನಿಂದ ಹೊಂದುವೆವು.

23 ದೇವರ ಆಜ್ಞೆ ಯಾವದಂದರೆ ನಾವು ಆತನ ಮಗನಾದ ಯೇಸು ಕ್ರಿಸ್ತನ ಹೆಸರನ್ನು ನಂಬಿ ಕ್ರಿಸ್ತನು ನಮಗೆ ಅಪ್ಪಣೆ ಕೊಟ್ಟ ಪ್ರಕಾರ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ.

24 ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವನು ಆತನಲ್ಲಿ ನೆಲೆಗೊಂಡಿರುತ್ತಾನೆ, ಆತನು ಇವನಲ್ಲಿ ನೆಲೆಗೊಂಡಿರುತ್ತಾನೆ. ನಮ್ಮಲ್ಲಿ ನೆಲೆಗೊಂಡಿದ್ದಾನೆಂದು ಆತನು ನಮಗೆ ಅನುಗ್ರಹಿಸಿದ ಆತ್ಮನಿಂದಲೇ ಬಲ್ಲೆವು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು