1 ಯೋಹಾನನು 2 - ಕನ್ನಡ ಸತ್ಯವೇದವು J.V. (BSI)1 ನನ್ನ ಪ್ರಿಯರಾದ ಮಕ್ಕಳೇ, ನೀವು ಪಾಪಮಾಡದಂತೆ ಈ ಮಾತುಗಳನ್ನು ನಿಮಗೆ ಬರೆಯುತ್ತೇನೆ. ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ. 2 ಆತನು ನಮ್ಮ ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿದ್ದಾನೆ; ನಮ್ಮ ಪಾಪಗಳನ್ನು ಮಾತ್ರವಲ್ಲದೆ ಸಮಸ್ತ ಲೋಕದ ಪಾಪಗಳನ್ನು ಸಹ ನಿವಾರಣಮಾಡುತ್ತಾನೆ. ಕ್ರಿಸ್ತನ ಆಜ್ಞೆಗಳನ್ನು ಕೈಕೊಳ್ಳುವವರೇ ಆತನನ್ನರಿತವರು 3 ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆದರೆ ಅದರಿಂದಲೇ ಆತನನ್ನು ಬಲ್ಲವರಾಗಿದ್ದೇವೆಂದು ತಿಳುಕೊಳ್ಳುತ್ತೇವೆ. 4 ಆತನನ್ನು ಬಲ್ಲೆನೆಂದು ಹೇಳಿ ಆತನ ಆಜ್ಞೆಗಳನ್ನು ಕೈಕೊಳ್ಳದೆ ನಡೆಯುವವನು ಸುಳ್ಳುಗಾರನಾಗಿದ್ದಾನೆ; ಸತ್ಯವೆಂಬದು ಅವನಲ್ಲಿ ಇಲ್ಲ. 5 ಯಾವನಾದರೂ ಆತನ ವಾಕ್ಯವನ್ನು ಕೈಕೊಂಡು ನಡೆದರೆ ಅವನಲ್ಲಿ ನಿಜವಾಗಿ ದೇವರ ಮೇಲಣ ಪ್ರೀತಿಯು ಪರಿಪೂರ್ಣವಾಗಿದೆ. ಇದರಿಂದಲೇ ಆತನಲ್ಲಿದ್ದೇವೆಂಬದನ್ನು ತಿಳುಕೊಳ್ಳುತ್ತೇವೆ. 6 ಆತನಲ್ಲಿ ನೆಲೆಗೊಂಡವನಾಗಿದ್ದೇನೆಂದು ಹೇಳುವವನು ಕ್ರಿಸ್ತನು ನಡೆದಂತೆಯೇ ತಾನೂ ನಡೆಯುವದಕ್ಕೆ ಬದ್ಧನಾಗಿದ್ದಾನೆ. ಕತ್ತಲೆಯನ್ನು ಬಿಟ್ಟು ಬೆಳಕಿಗೆ ಸೇರಿದವರಲ್ಲಿ ಪ್ರೀತಿಸ್ವಭಾವವೇ ಅವಶ್ಯ 7 ಪ್ರಿಯರೇ, ನಾನು ನಿಮಗೆ ಬರೆಯುವದು ಹೊಸ ಅಪ್ಪಣೆಯಲ್ಲ. ಮೊದಲಿಂದಲೂ ನಿಮಗಿದ್ದ ಹಳೆಯ ಅಪ್ಪಣೆಯಾಗಿದೆ; ಈ ಹಳೆಯ ಅಪ್ಪಣೆಯು ನೀವು ಕೇಳಿದ ವಾಕ್ಯವೇ. 8 ಆದರೂ ನಾನು ನಿಮಗೆ ಬರೆಯುವದು ಹೊಸ ಅಪ್ಪಣೆಯೇ; ಇದು ಆತನಲ್ಲಿಯೂ ನಿಮ್ಮಲ್ಲಿಯೂ ಸತ್ಯವಾಗಿದೆ; ಹೇಗಂದರೆ ಕತ್ತಲೆಯು ಕಳೆದುಹೋಗುತ್ತದೆ, ನಿಜವಾದ ಬೆಳಕು ಈಗ ಪ್ರಕಾಶಿಸುತ್ತಲಿದೆ. 9 ಬೆಳಕಿನಲ್ಲಿದ್ದೇನೆಂದು ಹೇಳಿಕೊಂಡು ತನ್ನ ಸಹೋದರನನ್ನು ದ್ವೇಷಿಸುವವನು ಈವರೆಗೂ ಕತ್ತಲೆಯಲ್ಲಿದ್ದಾನೆ. 10 ತನ್ನ ಸಹೋದರನನ್ನು ಪ್ರೀತಿಸುವವನು ಬೆಳಕಿನಲ್ಲಿ ನೆಲೆಗೊಂಡಿದ್ದಾನೆ, ಮತ್ತು ಅವನಲ್ಲಿ ವಿಘ್ನಕರವಾದದ್ದು ಏನೂ ಇಲ್ಲ. 11 ತನ್ನ ಸಹೋದರನನ್ನು ದ್ವೇಷಿಸುವವನು ಕತ್ತಲೆಯಲ್ಲಿದ್ದಾನೆ, ಕತ್ತಲೆಯಲ್ಲಿ ನಡೆದುಕೊಳ್ಳುತ್ತಾನೆ. ಕತ್ತಲೆಯು ಅವನ ಕಣ್ಣುಗಳನ್ನು ಕಾಣದ ಹಾಗೆ ಮಾಡಿದ್ದರಿಂದ ತಾನು ಎಲ್ಲಿಗೆ ಹೋಗುತ್ತಾನೋ ಅವನಿಗೆ ತಿಳಿಯದು. ಈ ಪತ್ರಿಕೆಯನ್ನು ಸಭೆಯವರೆಲ್ಲರಿಗೋಸ್ಕರ ಬರೆದದ್ದಕ್ಕೆ ಕಾರಣ 12 ಪ್ರಿಯರಾದ ಮಕ್ಕಳೇ, ಕ್ರಿಸ್ತನ ಹೆಸರಿನ ನಿವಿುತ್ತ ನಿಮ್ಮ ಪಾಪಗಳು ಕ್ಷವಿುಸಲ್ಪಟ್ಟಿರುವದರಿಂದ ನಿಮಗೆ ಬರೆಯುತ್ತೇನೆ. 13 ತಂದೆಗಳೇ, ಆದಿಯಿಂದಿರುವಾತನನ್ನು ನೀವು ಬಲ್ಲವರಾಗಿರುವದರಿಂದ ನಿಮಗೆ ಬರೆಯುತ್ತೇನೆ. ಯೌವನಸ್ಥರೇ, ನೀವು ಕೆಡುಕನನ್ನು ಜಯಿಸಿರುವದರಿಂದ ನಿಮಗೆ ಬರೆಯುತ್ತೇನೆ. ಮಕ್ಕಳಿರಾ, ನೀವು ತಂದೆಯನ್ನು ಬಲ್ಲವರಾಗಿರುವದರಿಂದ ನಿಮಗೆ ಬರೆದಿದ್ದೇನೆ. 14 ತಂದೆಗಳೇ, ಆದಿಯಿಂದಿರುವಾತನನ್ನು ನೀವು ಬಲ್ಲವರಾಗಿರುವದರಿಂದ ನಿಮಗೆ ಬರೆದಿದ್ದೇನೆ. ಯೌವನಸ್ಥರೇ, ನೀವು ಶಕ್ತರಾಗಿರುವದರಿಂದಲೂ ದೇವರ ವಾಕ್ಯವು ನಿಮ್ಮಲ್ಲಿ ನೆಲೆಗೊಂಡಿರುವದರಿಂದಲೂ ನೀವು ಕೆಡುಕನನ್ನು ಜಯಿಸಿರುವದರಿಂದಲೂ ನಿಮಗೆ ಬರೆದಿದ್ದೇನೆ. ದೇವರನ್ನು ಪ್ರೀತಿಸುವವರು ಲೋಕವನ್ನು ಪ್ರೀತಿಸಬಾರದು 15 ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ. 16 ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ. 17 ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು. ಕ್ರಿಸ್ತವಿರೋಧಿಗಳಾದ ದುರ್ಬೋಧಕರ ವಿಷಯದಲ್ಲಿ ಎಚ್ಚರಿಕೆ 18 ಮಕ್ಕಳಿರಾ, ಇದು ಕಡೇ ಗಳಿಗೆಯಾಗಿದೆ; ಕ್ರಿಸ್ತವಿರೋಧಿ ಬರುತ್ತಾನೆಂದು ನೀವು ಕೇಳಿದ್ದೀರಷ್ಟೆ; ಈಗಲೂ ಕ್ರಿಸ್ತವಿರೋಧಿಗಳು ಬಹುಮಂದಿ ಎದ್ದಿದ್ದಾರೆ; ಇದರಿಂದ ಇದು ಕಡೇ ಗಳಿಗೆಯಾಗಿದೆ ಎಂದು ತಿಳುಕೊಳ್ಳುತ್ತೇವೆ. 19 ಅವರು ನಮ್ಮನ್ನು ಬಿಟ್ಟು ಹೊರಟುಹೋದರು, ಆದರೆ ಅವರು ನಮ್ಮವರಾಗಿರಲಿಲ್ಲ. ಅವರು ನಮ್ಮವರಾಗಿದ್ದರೆ ನಮ್ಮ ಜೊತೆಯಲ್ಲೇ ಇರುತ್ತಿದ್ದರು, ಆದರೆ ಅವರು ನಮ್ಮನ್ನು ಬಿಟ್ಟುಹೋದದರಿಂದ ಕ್ರೈಸ್ತರೆನಿಸಿಕೊಳ್ಳುವವರೆಲ್ಲರೂ ನಮ್ಮವರಲ್ಲವೆಂಬದು ಸ್ಪಷ್ಟವಾಗಿ ತೋರಬಂತು. 20 ನೀವು ಪವಿತ್ರನಾಗಿರುವಾತನಿಂದ ಅಭಿಷೇಕವನ್ನು ಹೊಂದಿದವರಾಗಿದ್ದು ಎಲ್ಲರೂ ತಿಳಿದವರಾಗಿದ್ದೀರಿ. 21 ನೀವು ಸತ್ಯವನ್ನು ತಿಳಿಯದವರೆಂಬ ಭಾವನೆಯಿಂದಲ್ಲ, ನೀವು ಅದನ್ನು ತಿಳಿದಿರುವದರಿಂದಲೂ ಯಾವ ಸುಳ್ಳೂ ಸತ್ಯದಿಂದ ಹುಟ್ಟಿ ಬರುವದಿಲ್ಲವೆಂಬದನ್ನು ನೀವು ತಿಳಿದವರಾಗಿರುವದರಿಂದಲೂ ನಿಮಗೆ ಬರೆದೆನು. 22 ಯೇಸುವು ಕ್ರಿಸ್ತನಲ್ಲ ಎನ್ನುವವನು ಸುಳ್ಳುಗಾರನಲ್ಲವಾದರೆ ಸುಳ್ಳುಗಾರನು ಬೇರೆ ಎಲ್ಲಿದ್ದಾನೆ? ಯಾವನಾದರೂ ತಾನು ತಂದೆಯನ್ನೂ ಮಗನನ್ನೂ ಅರಿಯೆನು ಎಂದು ಹೇಳಿದರೆ ಅವನೇ ಕ್ರಿಸ್ತ ವಿರೋಧಿ. 23 ತಾನು ದೇವರ ಮಗನಿಗೆ ಸೇರಿದವನಲ್ಲವೆನ್ನುವವನು ತಂದೆಗೆ ಸೇರಿದವನಲ್ಲ; ತಾನು ಮಗನಿಗೆ ಸೇರಿದವನೆಂದು ಒಪ್ಪಿಕೊಳ್ಳುವವನು ತಂದೆಗೂ ಸೇರಿದವನಾಗಿದ್ದಾನೆ. 24 ನೀವಂತೂ ಯಾವ ಬೋಧನೆಯನ್ನು ಮೊದಲಿನಿಂದ ಕೇಳಿದ್ದೀರೋ ಅದು ನಿಮ್ಮಲ್ಲಿ ನೆಲೆಗೊಂಡಿರಲಿ. ಮೊದಲಿನಿಂದ ನೀವು ಕೇಳಿದ ಬೋಧನೆಯು ನಿಮ್ಮಲ್ಲಿ ನೆಲೆಗೊಂಡಿದ್ದರೆ ನೀವು ಸಹ ಮಗನಲ್ಲಿಯೂ ತಂದೆಯಲ್ಲಿಯೂ ನೆಲೆಗೊಂಡಿರುತ್ತೀರಿ. 25 ಕ್ರಿಸ್ತನು ತಾನು ಕೊಡುತ್ತೇನೆಂದು ನಮಗೆ ವಾಗ್ದಾನ ಮಾಡಿದ್ದು ನಿತ್ಯಜೀವವು. 26 ನಿಮ್ಮನ್ನು ಸನ್ಮಾರ್ಗದಿಂದ ತಪ್ಪಿಸಬೇಕೆಂದಿರುವವರ ವಿಷಯವಾಗಿ ಈ ಸಂಗತಿಗಳನ್ನು ನಿಮಗೆ ಬರೆದಿದ್ದೇನೆ. 27 ಆದರೆ ಆತನಿಂದ ನೀವು ಹೊಂದಿದ ಅಭಿಷೇಕವು ನಿಮ್ಮಲ್ಲಿ ನೆಲೆಗೊಂಡಿರುವದರಿಂದ ಯಾವನಾದರೂ ನಿಮಗೆ ಉಪದೇಶ ಮಾಡುವದು ಅವಶ್ಯವಿಲ್ಲ. ಆತನು ಮಾಡಿದ ಅಭಿಷೇಕವು ಎಲ್ಲಾ ವಿಷಯಗಳಲ್ಲಿ ನಿಮಗೆ ಉಪದೇಶ ಮಾಡುವಂಥದಾಗಿದ್ದು ಸತ್ಯವಾಗಿದೆ, ಸುಳ್ಳಲ್ಲ. ಅದು ನಿಮಗೆ ಉಪದೇಶ ಮಾಡಿದ ಪ್ರಕಾರ ಆತನಲ್ಲಿ ನೆಲೆಗೊಂಡಿರ್ರಿ. 28 ಪ್ರಿಯರಾದ ಮಕ್ಕಳೇ, ಆತನು ಪ್ರತ್ಯಕ್ಷನಾಗುವಾಗ ನಾವು ಆತನ ಆಗಮನದಲ್ಲಿ ಆತನ ಮುಂದೆ ನಿಲ್ಲಲು ನಾಚಿಕೆಪಡದೆ ಧೈರ್ಯದಿಂದಿರುವಂತೆ ಆತನಲ್ಲಿ ನೆಲೆಗೊಂಡಿರೋಣ. 29 ಆತನು ನೀತಿವಂತನಾಗಿದ್ದಾನೆಂಬದು ನಿಮಗೆ ಗೊತ್ತಾಗಿದ್ದರೆ ನೀತಿಯನ್ನು ಅನುಸರಿಸುವ ಪ್ರತಿಯೊಬ್ಬನು ಆತನಿಂದ ಹುಟ್ಟಿದವನಾಗಿದ್ದಾನೆಂದು ನೀವು ತಿಳಿದಿದ್ದೀರಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India