1 ಪೇತ್ರನು 3 - ಕನ್ನಡ ಸತ್ಯವೇದವು J.V. (BSI)1 ಅದೇ ರೀತಿಯಾಗಿ ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. 2 ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ 3 ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು. 4 ಜಡೆಹೆಣೆದುಕೊಳ್ಳುವದು ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವದು ವಸ್ತ್ರಗಳನ್ನು ಧರಿಸಿಕೊಳ್ಳುವದು ಈ ಮೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು. 5 ಸಾತ್ವಿಕವಾದ ಶಾಂತಮನಸ್ಸು ಎಂಬ ಒಳಗಣ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. ಇದು ಶಾಶ್ವತವಾದದ್ದೂ ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದೂ ಆಗಿದೆ. ಪೂರ್ವಕಾಲದಲ್ಲಿ ದೇವರ ಮೇಲೆ ನಿರೀಕ್ಷೆಯಿಟ್ಟ ಭಕ್ತೆಯರಾದ ಸ್ತ್ರೀಯರು ಸಹ ಹೀಗೆಯೇ ತಮ್ಮನ್ನು ಅಲಂಕರಿಸಿಕೊಂಡರು. ಅವರು ತಮ್ಮ ತಮ್ಮ ಗಂಡಂದಿರಿಗೆ ಅಧೀನರಾಗಿದ್ದು ಯಾವ ಭೀತಿಗೂ ಗಾಬರಿಪಡದೆ ಒಳ್ಳೇದನ್ನೇ ಮಾಡುವವರಾಗಿದ್ದರು. 6 ಸಾರಳು ಹಾಗೆಯೇ ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು ಯಜಮಾನ ಎಂದು ಕರೆದಳು ಎಂದು ಬರೆದದೆ. ನೀವು ಸಾರಳ ಕುಮಾರ್ತೆಗಳಾಗಿದ್ದೀರಲ್ಲಾ. 7 ಅದೇ ರೀತಿಯಾಗಿ ಪುರುಷರೇ, ಸ್ತ್ರೀಯು ಪುರುಷನಿಗಿಂತ ಬಲಹೀನಳೆಂಬದನ್ನು ಜ್ಞಾಪಕಮಾಡಿಕೊಂಡು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಒಗತನ ಮಾಡಿರಿ. ಅವರು ಜೀವವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವದಿಲ್ಲ. ಕ್ರೈಸ್ತರೊಳಗೆ ಪರಸ್ಪರ ಪ್ರೀತಿಯೂ ಹಿಂಸೆಯ ಕಾಲದಲ್ಲಿ ಶಾಂತಮನಸ್ಸೂ ಇರಬೇಕಾದದ್ದು 8 ಕಡೆಗೆ ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ; ಪರರ ಸುಖದುಃಖಗಳಲ್ಲಿ ಸೇರುವವರಾಗಿರಿ; ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ; ಕರುಣೆಯೂ ದೀನಭಾವವೂ ಉಳ್ಳವರಾಗಿರಿ. 9 ಅಪಕಾರಕ್ಕೆ ಅಪಕಾರವನ್ನು ನಿಂದೆಗೆ ನಿಂದೆಯನ್ನು ಮಾಡದೆ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದನಲ್ಲಾ; ಹೀಗೆ ಮಾಡುವದಾದರೆ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರಿ. 10 ಜೀವದಲ್ಲಿ ಸಂತೋಷಪಟ್ಟು ಸುದಿನಗಳನ್ನು ನೋಡುವದಕ್ಕೆ ಇಷ್ಟವುಳ್ಳವನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಿಗೆಯನ್ನೂ ವಂಚನೆಯ ಮಾತುಗಳನ್ನಾಡದಂತೆ ತುಟಿಗಳನ್ನೂ ಬಿಗಿಹಿಡಿಯಲಿ. 11 ಅವನು ಕೆಟ್ಟದ್ದನ್ನು ಬಿಟ್ಟು ಒಳ್ಳೇದನ್ನು ಮಾಡಲಿ; ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನಪಡಲಿ. 12 ಯಾಕಂದರೆ ಕರ್ತನು ನೀತಿವಂತರನ್ನು ಕಟಾಕ್ಷಿಸುತ್ತಾನೆ, ಆತನು ಅವರ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ. ಕೆಡುಕರಿಗೋ ಕರ್ತನು ಕೋಪದ ಮುಖವುಳ್ಳವನಾಗಿರುತ್ತಾನೆ ಎಂದು ಬರೆದದೆ. 13 ನೀವು ಒಳ್ಳೇದನ್ನೇ ಮಾಡುವದರಲ್ಲಿ ಆಸಕ್ತರಾಗಿದ್ದರೆ ನಿಮಗೆ ಕೇಡು ಮಾಡುವವರು ಯಾರಿದ್ದಾರೆ? 14 ಒಂದು ವೇಳೆ ನೀತಿಯ ನಿವಿುತ್ತವೇ ಬಾಧೆಪಟ್ಟರೆ ನೀವು ಧನ್ಯರೇ. 15 ಅವರ ಬೆದರಿಸುವಿಕೆಗೆ ಹೆದರದೆ ಕಳವಳಪಡದೆ ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠೆಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿರಿ; ಆದರೆ ಅದನ್ನು ಸಾತ್ವಿಕತ್ವದಿಂದಲೂ ಮನೋಭೀತಿಯಿಂದಲೂ ಹೇಳಿರಿ. 16 ಒಳ್ಳೇ ಮನಸ್ಸಾಕ್ಷಿಯುಳ್ಳವರಾಗಿರಿ; ಆಗ ಕ್ರಿಸ್ತನಲ್ಲಿರುವ ನಿಮ್ಮ ಒಳ್ಳೇ ನಡವಳಿಕೆಯನ್ನು ಕುರಿತು ಬೈಯುವವರು ನಿಮ್ಮನ್ನು ನಿಂದಿಸುವದಕ್ಕೆ ನಾಚಿಕೆಪಡುವರು. 17 ಕೆಟ್ಟ ನಡತೆಯುಳ್ಳವರಾಗಿ ಬಾಧೆಪಡುವದಕ್ಕಿಂತ ಒಳ್ಳೇ ನಡತೆಯುಳ್ಳವರಾಗಿಯೇ ದೇವರ ಚಿತ್ತವಿದ್ದರೆ ಬಾಧೆಪಡುವದು ಲೇಸು. 18 ಕ್ರಿಸ್ತನು ಸಹ ನೀತಿವಂತನಾಗಿದ್ದು ಅನೀತಿವಂತರಿಗೋಸ್ಕರ ಪ್ರಾಣಕೊಟ್ಟು ನಮ್ಮನ್ನು ದೇವರ ಬಳಿಗೆ ಸೇರಿಸುವದಕ್ಕಾಗಿ ಒಂದೇ ಸಾರಿ ಪಾಪನಿವಾರಣಕ್ಕೋಸ್ಕರ ಬಾಧೆಪಟ್ಟು ಸತ್ತನು. ಆತನು ಶರೀರಸಂಬಂಧದಲ್ಲಿ ಕೊಲ್ಲಲ್ಪಟ್ಟನು, ಆತ್ಮಸಂಬಂಧದಲ್ಲಿ ತಿರಿಗಿ ಬದುಕುವವನಾದನು. 19 ಇದಲ್ಲದೆ ಆತನು ಆತ್ಮರೂಪನಾಗಿ ಸೆರೆಯಲ್ಲಿದ್ದ ಆತ್ಮಗಳ ಬಳಿಗೆ, 20 ಅಂದರೆ ಪೂರ್ವಕಾಲದಲ್ಲಿ ನೋಹನು ನಾವೆಯನ್ನು ಕಟ್ಟಿಸುತ್ತಿರಲು ದೇವರು ದೀರ್ಘಶಾಂತಿಯಿಂದ ಕಾದಿದ್ದಾಗ ಆತನಿಗೆ ಅವಿಧೇಯರಾಗಿದ್ದವರ ಬಳಿಗೆ ಹೋಗಿ ಸುವಾರ್ತೆಯನ್ನು ಸಾರಿದನು. ಆ ನಾವೆಯೊಳಗೆ ಕೆಲವರು ಅಂದರೆ ಎಂಟೇ ಜನರು ಸೇರಿ ನೀರಿನ ಮೂಲಕ ರಕ್ಷಣೆಹೊಂದಿದರು. 21 ಆ ನೀರಿಗೆ ಅನುರೂಪವಾದ ದೀಕ್ಷಾಸ್ನಾನವು ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ; ಅದು ಮೈಕೊಳೆಯನ್ನು ಹೋಗಲಾಡಿಸುವಂಥದಲ್ಲ, ಒಳ್ಳೇ ಮನಸ್ಸಾಕ್ಷಿ ಬೇಕೆಂದು ದೇವರಿಗೆ ವಿಜ್ಞಾಪಿಸಿಕೊಳ್ಳುವಂಥದೇ. 22 ಆತನು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾನೆ; ದೇವದೂತರೂ ಅಧಿಕಾರಿಗಳೂ ಮಹತ್ವಗಳೂ ಆತನ ಸ್ವಾಧೀನವಾಗಿವೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India