1 ಪೇತ್ರನು 2 - ಕನ್ನಡ ಸತ್ಯವೇದವು J.V. (BSI)1 ಆದಕಾರಣ ಎಲ್ಲಾ ಕೆಟ್ಟತನವನ್ನೂ ಎಲ್ಲಾ ವಂಚನೆಯನ್ನೂ ಕಪಟವನ್ನೂ ಹೊಟ್ಟೆಕಿಚ್ಚನ್ನೂ 2 ಎಲ್ಲಾ ತರದ ನಿಂದೆಯನ್ನೂ ವಿಸರ್ಜಿಸಿ ಹಸುಮಕ್ಕಳಂತೆ ಪಾರಮಾರ್ಥಿಕವಾದ ಶುದ್ಧ ಹಾಲನ್ನು ಬಯಸಿರಿ; ಅದರಿಂದ ಬೆಳೆಯುತ್ತಾ ರಕ್ಷಣೆಯನ್ನು ಹೊಂದುವಿರಿ; ಕರ್ತನು ದಯಾಳುವೆಂದು ನೀವು ಅನುಭವದಿಂದ ತಿಳಿದುಕೊಂಡಿದ್ದೀರಲ್ಲವೋ? 3 ನೀವು ಜೀವವುಳ್ಳ ಕಲ್ಲಾಗಿರುವ ಆತನನ್ನು ಸೇರಿಕೊಂಡಿದ್ದೀರಿ. 4 ಆ ಕಲ್ಲನ್ನು ಮನುಷ್ಯರು ನಿರಾಕರಿಸಿದರೂ ದೇವರು ಅದನ್ನು ಆಯಲ್ಪಟ್ಟದ್ದೂ ಮಾನ್ಯವಾದದ್ದೂ ಎಂದು ಎಣಿಸಿದನು. 5 ನೀವು ಸಹ ಜೀವವುಳ್ಳ ಕಲ್ಲುಗಳಾಗಿದ್ದು ಆತ್ಮ ಸಂಬಂಧವಾದ ಮಂದಿರವಾಗಲಿಕ್ಕೆ ಕಟ್ಟಲ್ಪಡುತ್ತಾ ಇದ್ದೀರಿ, ಮತ್ತು ಯೇಸು ಕ್ರಿಸ್ತನ ಮೂಲಕ ದೇವರಿಗೆ ಸಮರ್ಪಕವಾದ ಆತ್ಮೀಯಯಜ್ಞಗಳನ್ನು ಸಮರ್ಪಿಸುವದಕ್ಕೆ ಪವಿತ್ರ ಯಾಜಕವರ್ಗದವರಾಗಿದ್ದೀರಿ. 6 ಇಗೋ, ಚೀಯೋನಿನಲ್ಲಿ ಮೂಲೆಗಲ್ಲನ್ನು ಇಡುತ್ತೇನೆ. ಅದು ಆಯಲ್ಪಟ್ಟದ್ದು, ಮಾನ್ಯವಾದದ್ದು; ಅದರ ಮೇಲೆ ನಂಬಿಕೆಯಿಡುವವನು ಆಶಾಭಂಗಪಡುವದೇ ಇಲ್ಲ ಎಂದು ಶಾಸ್ತ್ರದಲ್ಲಿ ಬರೆದದೆ. 7 ಆದದರಿಂದ ನಂಬುವವರಾದ ನಿಮಗೇ ಈ ಮಾನವುಂಟು. ನಂಬದೆಯಿರುವವರಿಗೋ - ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು ಎಂತಲೂ 8 ಅದು ಎಡವುವ ಕಲ್ಲು ಮುಗ್ಗರಿಸುವ ಬಂಡೆ ಎಂತಲೂ ಬರೆದಿರುವ ಮಾತು ಸರಿಬೀಳುತ್ತದೆ. ಅವರು ದೇವರ ವಾಕ್ಯವನ್ನು ನಂಬಲೊಲ್ಲದೆ ಇರುವದರಿಂದ ಆ ಕಲ್ಲನ್ನು ಎಡವಿ ಬೀಳುತ್ತಾರೆ; ಅದಕ್ಕಾಗಿಯೇ ಅವರು ನೇಮಕವಾದರು. 9 ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ. 10 ಮೊದಲು ನೀವು ಪ್ರಜೆಯಾಗಿರಲಿಲ್ಲ, ಈಗ ದೇವರ ಪ್ರಜೆಯಾಗಿದ್ದೀರಿ; ಮೊದಲು ವಾತ್ಸಲ್ಯ ಹೊಂದಿರಲಿಲ್ಲ, ಈಗ ವಾತ್ಸಲ್ಯ ಹೊಂದಿದವರಾಗಿದ್ದೀರಿ. ಪ್ರಜೆಗಳೂ ಸೇವಕರೂ ಗಂಡಹೆಂಡರೂ ನಡೆಯಬೇಕಾದ ರೀತಿ 11 ಪ್ರಿಯರೇ, ಪ್ರವಾಸಿಗಳೂ ಪರದೇಶಸ್ಥರೂ ಆಗಿರುವ ನೀವು ನಿಮ್ಮ ಆತ್ಮದ ಮೇಲೆ ಯುದ್ಧಮಾಡುವ ಶಾರೀರಿಕ ಅಭಿಲಾಷೆಗಳಿಗೆ ದೂರವಾಗಿರಬೇಕೆಂದು ನಿಮ್ಮನ್ನು ಎಚ್ಚರಿಸುತ್ತೇನೆ. 12 ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಅಕ್ರಮಗಾರರೆಂದು ನಿಂದಿಸುತ್ತಾರೋ ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು. 13 ಮನುಷ್ಯರು ನೇವಿುಸಿರುವ ಯಾವ ಅಧಿಕಾರಕ್ಕಾದರೂ ಕರ್ತನ ನಿವಿುತ್ತ ಅಧೀನರಾಗಿರಿ. 14 ಅರಸನು ಸರ್ವಾಧಿಕಾರಿ ಎಂತಲೂ ಬೇರೆ ಅಧಿಪತಿಗಳು ಕೆಟ್ಟನಡತೆಯುಳ್ಳವರನ್ನು ದಂಡಿಸುವದಕ್ಕೂ ಒಳ್ಳೇ ನಡತೆಯುಳ್ಳವರನ್ನು ಪ್ರೋತ್ಸಾಹಪಡಿಸುವದಕ್ಕೂ ಅರಸನಿಂದ ಕಳುಹಿಸಲ್ಪಟ್ಟವರೆಂತಲೂ ತಿಳಿದು ಅವರಿಗೆ ಅಧೀನರಾಗಿರಿ. 15 ತಿಳಿಯದೆ ಮಾತಾಡುವ ಮೂಢಜನರ ಬಾಯನ್ನು ನೀವು ಒಳ್ಳೇ ನಡತೆಯಿಂದ ಕಟ್ಟಬೇಕೆಂಬದೇ ದೇವರ ಚಿತ್ತ. 16 ಸ್ವತಂತ್ರರಂತೆ ನಡೆದುಕೊಳ್ಳಿರಿ; ಆದರೆ ಕೆಟ್ಟತನವನ್ನು ಮರೆಮಾಜುವದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿರಿ; 17 ನೀವು ದೇವರ ದಾಸರಾಗಿದ್ದೀರಲ್ಲಾ. ಎಲ್ಲರನ್ನೂ ಸನ್ಮಾನಿಸಿರಿ. ಸಹೋದರರನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ. ಅರಸನನ್ನು ಸನ್ಮಾನಿಸಿರಿ. 18 ಸೇವಕರೇ, ನಿಮ್ಮ ಯಜಮಾನರಿಗೆ ಪೂರ್ಣಭಯದಿಂದ ಅಧೀನರಾಗಿರಿ. ಒಳ್ಳೆಯವರೂ ಸಾತ್ವಿಕರೂ ಆಗಿರುವವರಿಗೆ ಮಾತ್ರವಲ್ಲದೆ ವಕ್ರಬುದ್ಧಿಯುಳ್ಳವರಿಗೂ ವಿಧೇಯರಾಗಿರಿ. 19 ಒಬ್ಬನು ಅನ್ಯಾಯವಾಗಿ ಬಾಧೆಪಡುವವನಾಗಿದ್ದು ದೇವರು ನೋಡುತ್ತಾನೆಂದು ಅರಿತು ಆ ಕಷ್ಟವನ್ನು ಸಹಿಸಿಕೊಂಡರೆ ಅದು ಶ್ಲಾಘ್ಯವಾಗಿದೆ. 20 ತಪ್ಪುಮಾಡಿ ಗುದ್ದು ತಿನ್ನುವದರಲ್ಲಿ ನೀವು ತಾಳ್ಮೆಯಿಂದಿದ್ದರೆ ಅದರಿಂದೇನು ಕೀರ್ತಿ? ಆದರೆ ಒಳ್ಳೇದನ್ನು ಮಾಡಿ ಬಾಧೆಪಡುವದರಲ್ಲಿ ನೀವು ತಾಳ್ಮೆಯಿಂದಿದ್ದರೆ ಅದು ದೇವರ ಮುಂದೆ ಶ್ಲಾಘ್ಯವಾಗಿದೆ. 21 ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿಹೋದನು. 22 ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ; ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; 23 ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು. 24 ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಮರಣದ ಕಂಬವನ್ನು ಏರಿದನು; ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು. 25 ನೀವು ಕುರಿಗಳಂತೆ ದಾರಿತಪ್ಪಿ ತೊಳಲುವವರಾಗಿದ್ದಿರಿ, ಆದರೆ ಈಗ ನೀವು ತಿರುಗಿಕೊಂಡು ನಿಮ್ಮ ಆತ್ಮಗಳನ್ನು ಕಾಯುವ ಕುರುಬನೂ ಅಧ್ಯಕ್ಷನೂ ಆಗಿರುವಾತನ ಬಳಿಗೆ ಬಂದಿದ್ದೀರಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India