1 ಪೂರ್ವಕಾಲ ವೃತ್ತಾಂತ 5 - ಕನ್ನಡ ಸತ್ಯವೇದವು J.V. (BSI)ರೂಬೇನನ ವಂಶಾವಳಿ 1 ಇಸ್ರಾಯೇಲನ ಚೊಚ್ಚಲಮಗನಾದ ರೂಬೇನನ ವಂಶಾವಳಿ. ರೂಬೇನನು ಚೊಚ್ಚಲನಾಗಿದ್ದರೂ ಅವನು ತನ್ನ ತಂದೆಯ ಹಾಸಿಗೆಯನ್ನು ಹೊಲೆಮಾಡಿದ್ದರಿಂದ ಅವನ ಹಕ್ಕು ಇಸ್ರಾಯೇಲನ ಮಗನಾದ ಯೋಸೇಫನ ಕುಲಕ್ಕೆ ಕೊಡಲ್ಪಟ್ಟಿತು. 2 ಆದರೆ ಯೆಹೂದನು ಎಲ್ಲಾ ಸಹೋದರರಲ್ಲಿ ಪ್ರಬಲನಾದದರಿಂದಲೂ ರಾಜ್ಯಾಧಿಕಾರವು ಇವನ ಕುಲಕ್ಕೆ ಬಂದದರಿಂದಲೂ ಯೋಸೇಫನು ವಂಶಾವಳಿಯ ಪಟ್ಟಿಗಳಲ್ಲಿ ಚೊಚ್ಚಲನೆಂದು ಲಿಖಿತನಾಗಲಿಲ್ಲ; ಆದರೂ ಚೊಚ್ಚಲನಿಗೆ ಸಿಕ್ಕತಕ್ಕ ಪಾಲು ಅವನಿಗೆ ಸಿಕ್ಕಿತು. 3 ಇಸ್ರಾಯೇಲನ ಚೊಚ್ಚಲನಾದ ರೂಬೇನನ ಮಕ್ಕಳು - ಹನೋಕ್, ಫಲ್ಲೂ, ಹೆಚ್ರೋನ್, ಕರ್ಮೀ. 4 ಯೋವೇಲನ ವಂಶಾವಳಿ - ಇವನ ಮಗನು ಶೆಮಾಯ, ಇವನ ಮಗನು ಗೋಗ್; 5 ಇವನ ಮಗನು ಶಿಮ್ಮೀ; ಇವನ ಮಗನು ಮೀಕ; ಇವನ ಮಗನು ರೆವಾಯ; ಇವನ ಮಗನು ಬಾಳ್; ಇವನ ಮಗನು ಬೇರ. 6 ರೂಬೇನ್ಯರ ಪ್ರಭುಗಳಲ್ಲೊಬ್ಬನಾಗಿದ್ದ ಇವನನ್ನು ಅಶ್ಶೂರದ ಅರಸನಾದ ತಿಗ್ಲತ್ಪಿಲೆಸರನು ಸೆರೆಯೊಯ್ದನು. 7 ವಂಶಾವಳಿಯ ಪಟ್ಟಿಯಲ್ಲಿ ಇವನ ಗೋತ್ರಸಂಬಂಧಿಗಳಾಗಿ ಲಿಖಿತರಾದವರು - ನಾಯಕನಾದ ಯೆಗೀಯೇಲ್, ಜೆಕರ್ಯ, ಬೆಳ ಇವರೇ. 8 ಬೆಳನು ಆಜಾಜನ ಮಗನು; ಇವನು ಶೆಮಯನ ಮಗನು; ಇವನು ಯೋವೇಲನ ಮಗನು. ಯೋವೇಲ್ಯರು ಅರೋಯೇರಿನಿಂದ ನೆಬೋ, ಬಾಳ್ಮೆಯೋನ್ ಎಂಬ ಸ್ಥಳಗಳವರೆಗೂ ವಾಸಿಸುತ್ತಿದ್ದರು. 9 ಮೂಡಣದಿಕ್ಕಿನಲ್ಲಿ ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಅರಣ್ಯವು ಇವರ ಮೇರೆ. 10 ಇವರಿಗೆ ಗಿಲ್ಯಾದ್ ದೇಶದಲ್ಲಿ ಅನೇಕ ಕುರಿ ಹಿಂಡುಗಳಿದ್ದವಷ್ಟೆ. ಇವರು ಸೌಲನ ಕಾಲದಲ್ಲಿ ಹಗ್ರೀಯರೊಡನೆ ಯುದ್ಧಮಾಡಿ ಅವರನ್ನು ಸಂಹರಿಸಿ ಗಿಲ್ಯಾದಿನ ಪೂರ್ವದಿಕ್ಕಿನ ಪ್ರಾಂತಗಳಲ್ಲಿದ್ದ ಅವರ ಡೇರೆಗಳಲ್ಲಿ ವಾಸಿಸುವವರಾದರು. ಗಾದನ ವಂಶಾವಳಿ 11 ರೂಬೇನ್ಯರ ಎದುರಿನಲ್ಲಿ ಬಾಷಾನ್ ಸೀಮೆಯ ಸಲ್ಕದವರೆಗೂ ವಾಸಿಸುತ್ತಿದ್ದ ಗಾದ್ ಕುಲದವರು - ಪ್ರಧಾನನಾದ ಯೋವೇಲ, 12 ಎರಡನೆಯವನಾದ ಶಾಫಾಮ್, ಯನ್ನೈ, ಬಾಷಾನಿನಲ್ಲಿರುವ ಶಾಫಾಟ್ 13 ಇವರೂ ಇವರ ಕುಲಸಂಬಂಧಿಗಳಾದ ಮೀಕಾಯೇಲ್, ಮೆಷುಲ್ಲಾಮ್, ಶೆಬ, ಯೋರೈ, ಯಕ್ಕಾನ್, ಜೀಯ, ಏಬೆರ್ ಎಂಬ ಏಳು ಕುಟುಂಬಗಳೂ. 14 ಇವರು ಅಬೀಹೈಲನ ಮಕ್ಕಳು. ಅಬೀಹೈಲನು ಹೂರೀಯ ಮಗನು; ಇವನು ಯಾರೋಹನ ಮಗನು; ಇವನು ಗಿಲ್ಯಾದನ ಮಗನು; ಇವನು ಮೀಕಾಯೇಲನ ಮಗನು; ಇವನು ಯೆಷೀಷೈಯ ಮಗನು; ಇವನು ಯಹ್ದೋವಿನ ಮಗನು; 15 ಇವನು ಅಹೀಬೂಜನ ಮಗನು; ಇವನು ಅಬ್ದೀಯೇಲನ ಮಗನು; ಇವನು ಗೂನೀಯ ಮಗನು. ಇವನು ಇವರ ಗೋತ್ರದ ಮೂಲಪುರುಷನು. 16 ಗಾದ್ಯರು ಗಿಲ್ಯಾದಿನಲ್ಲಿಯೂ ಬಾಷಾನಿನಲ್ಲಿಯೂ ಅದರ ಗ್ರಾಮಗಳಲ್ಲಿಯೂ ಶಾರೋನಿನ ಎಲ್ಲಾ ಹುಲ್ಲುಗಾವಲುಗಳಲ್ಲಿಯೂ ಅವುಗಳ ಮೇರೆಗಳಲ್ಲಿಯೂ ವಾಸಿಸುತ್ತಿದ್ದರು. 17 ಅವರೆಲ್ಲರೂ ಯೆಹೂದ್ಯರ ಅರಸನಾದ ಯೋತಾಮನ ಕಾಲದಲ್ಲಿಯೂ ಇಸ್ರಾಯೇಲ್ಯರ ಅರಸನಾದ ಯಾರೊಬ್ಬಾಮನ ಕಾಲದಲ್ಲಿಯೂ ವಂಶಾವಳಿಯ ಪಟ್ಟಿಯಲ್ಲಿ ಲಿಖಿತರಾದರು. 18 ರೂಬೇನ್ಯರು, ಗಾದ್ಯರು, ಮನಸ್ಸೆಕುಲದ ಅರ್ಧ ಜನರು ಇವರಲ್ಲಿ ರಣವೀರರೂ ಗುರಾಣಿ ಖಡ್ಗಗಳನ್ನು ಹಿಡಿಯುವವರೂ ಬಿಲ್ಲನ್ನು ಬೊಗ್ಗಿಸುವವರೂ ಯುದ್ಧನಿಪುಣರೂ ಆಗಿರುವ ನಾಲ್ವತ್ತನಾಲ್ಕು ಸಾವಿರದ ಏಳುನೂರ ಅರುವತ್ತು ಮಂದಿ ಸೈನಿಕರು ಹೋಗಿ 19 ಹಗ್ರೀಯರೊಡನೆಯೂ ಯೆಟೂರ್, ನಾಫೀಷ್, ನೋದಾಬ್ ಇವರೊಡನೆಯೂ ಯುದ್ಧಮಾಡಿದರು. 20 ಅವರು ದೇವರ ಮೇಲೆ ಭರವಸವಿಟ್ಟದರಿಂದ ಆತನು ತನಗೆ ಮೊರೆಯಿಟ್ಟ ಅವರಿಗೆ ಕಿವಿಗೊಟ್ಟು ಯುದ್ಧದಲ್ಲಿ ಜಯವನ್ನು ಅನುಗ್ರಹಿಸಿದನು. ಹಗ್ರೀಯರೂ ಇವರ ಜೊತೆಯಲ್ಲಿದ್ದವರೂ ಅವರ ಕೈಯಲ್ಲಿ ಕೊಡಲ್ಪಟ್ಟರು. 21 ದೇವರಿಂದ ನಿಯವಿುತವಾದ ಈ ಯುದ್ಧದಲ್ಲಿ ಅವರು ವೈರಿಗಳಲ್ಲಿ ಅನೇಕರನ್ನು ತಿವಿದು ಕೊಂದದ್ದಲ್ಲದೆ 22 ಅವರ ಹಿಂಡುಗಳನ್ನು ಅಂದರೆ ಐವತ್ತು ಸಾವಿರ ಒಂಟೆಗಳು, ಎರಡು ಲಕ್ಷ ಐವತ್ತು ಸಾವಿರ ಕುರಿಗಳು, ಎರಡು ಸಾವಿರ ಕತ್ತೆಗಳು ಇವುಗಳನ್ನೂ ಲಕ್ಷ ಜನವನ್ನೂ ಕೊಳ್ಳೆಹಿಡಿದು ತಾವು ಸೆರೆಯಾಗಿ ಹೋಗುವವರೆಗೂ ಅವರ ಊರುಗಳಲ್ಲಿ ವಾಸಿಸಿದರು. ಯೊರ್ದನಿನ ಪೂರ್ವದಿಕ್ಕಿನಲ್ಲಿದ್ದ ಮನಸ್ಸೆಯರು 23 ಮನಸ್ಸೆಕುಲದ ಅರ್ಧಜನರು ಬಾಷಾನಿನಿಂದ ಬಾಳ್ ಹೆರ್ಮೋನ್, ಸೆನೀರ್, ಹೆರ್ಮೋನ್‍ಗಿರಿ ಇವುಗಳವರೆಗೂ ವಿಸ್ತರಿಸಿಕೊಂಡಿರುವ ಪ್ರಾಂತಗಳಲ್ಲಿ ವಾಸಿಸಿದರು; ಅವರು ಅನೇಕಜನರು. 24 ಅವರ ಗೋತ್ರಗಳ ಪ್ರಧಾನ ಪುರುಷರು - ಏಫೆರ್, ಇಷ್ಷೀ, ಎಲೀಯೇಲ್, ಅಜ್ರೀಯೇಲ್, ಯೆರೆಮೀಯ. ಹೋದವ್ಯ, ಯೆಹ್ತೀಯೇಲ್. ಇವರು ರಣವೀರರೂ ಹೆಸರುಗೊಂಡವರೂ ಗೋತ್ರ ಪ್ರಧಾನರೂ ಆಗಿರುವವರು. 25 ಅವರು ತಮ್ಮ ಪಿತೃಗಳ ದೇವರಿಗೆ ದ್ರೋಹಿಗಳಾಗಿ ಆತನು ತಮ್ಮ ಮುಂದೆಯೇ ಸಂಹರಿಸಿದ ಆ ದೇಶ ನಿವಾಸಿಗಳ ದೇವರುಗಳನ್ನು ಹಿಂಬಾಲಿಸಿದರು. 26 ಆದದರಿಂದ ಅಶ್ಶೂರದ ಅರಸನಾದ ಪೂಲ್, ತಿಗ್ಲತ್ಪಿಲೆಸರ್ ಎಂಬವರು ಇಸ್ರಾಯೇಲ್ ದೇವರ ಪ್ರೇರಣೆಯಿಂದ ಬಂದು ರೂಬೇನ್ಯರು, ಗಾದ್ಯರು, ಮನಸ್ಸೆಕುಲದ ಅರ್ಧ ಜನರು ಇವರನ್ನು ಹಲಹ, ಹಾಬೋರ್ ಹಾರ ಎಂಬ ಪ್ರಾಂತಗಳಿಗೂ ಗೋಜಾನ್ ನದಿಯ ಪ್ರದೇಶಗಳಿಗೂ ಸೆರೆಯೊಯ್ದರು. ಅವರು ಇಂದಿನವರೆಗೂ ಅಲ್ಲೇ ಇರುತ್ತಾರೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India