Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೂರ್ವಕಾಲ ವೃತ್ತಾಂತ 27 - ಕನ್ನಡ ಸತ್ಯವೇದವು J.V. (BSI)


ಸೈನಿಕವರ್ಗಗಳೂ ಅರಸನ ಆಯಾ ಉದ್ಯೋಗಸ್ಥರೂ

1 ಇಸ್ರಾಯೇಲ್ಯರ ಕುಲಪ್ರಧಾನರು, ಸಹಸ್ರಾಧಿಪತಿಗಳು, ಶತಾಧಿಪತಿಗಳು, ಅರಸನ ವಿಧವಿಧವಾದ ಸೇವೆಯನ್ನು ಮಾಡಬೇಕಾದ ವರ್ಗಗಳ ಅಧಿಪತಿಗಳು ಇವರ ಲೆಕ್ಕ. ವರುಷದ ಎಲ್ಲಾ ತಿಂಗಳುಗಳಲ್ಲಿ ತಿಂಗಳಿಗೆ ಒಂದು ವರ್ಗದಂತೆ ಸರತಿಯ ಮೇಲೆ ಕೆಲಸಕ್ಕೋಸ್ಕರ ಬರುವ ಪ್ರತಿಯೊಂದು ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಇದ್ದರು.

2 ಪೆರೆಚನ ಸಂತಾನದವನೂ ಜಬ್ದೀಯೇಲನ ಮಗನೂ ಆದ ಯಾಷೊಬ್ಬಾಮನು ಮೊದಲನೆಯ ವರ್ಗದ ನಾಯಕನು.

3 ಇವನು ಮೊದಲನೆಯ ತಿಂಗಳಿನ ಸೇನಾಪತಿಗಳ ಮುಖ್ಯಸ್ಥನು. ಮೊದಲನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತನಾಲ್ಕು ಸಾವಿರ.

4 ಅಹೋಹಿಯನಾದ ದೋದೈಯು ಎರಡನೆಯ ತಿಂಗಳಿನ ವರ್ಗದ ನಾಯಕನು; ಆ ವರ್ಗದಲ್ಲಿ ವಿುಕ್ಲೋತನೆಂಬವನೂ ನಾಯಕನು. ಅವನ ವರ್ಗದವರ ಸಂಖ್ಯೆಯು ಇಪ್ಪತ್ತನಾಲ್ಕು ಸಾವಿರ.

5 ಯಾಜಕನಾದ ಯೆಹೋಯಾದನ ಮಗನೂ ಪ್ರಧಾನನೂ ಆದ ಬೆನಾಯನು ಮೂರನೆಯ ವರ್ಗದ ನಾಯಕನು; ಮೂರನೆಯ ತಿಂಗಳಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತನಾಲ್ಕು ಸಾವಿರ.

6 ಈ ಬೆನಾಯನು ಮೂವತ್ತು ಮಂದಿಯಲ್ಲಿ ಪ್ರಸಿದ್ಧ ರಣವೀರನೂ ಅವರ ಮುಖ್ಯಸ್ಥನೂ ಆಗಿದ್ದನು. ಅವನ ವರ್ಗದಲ್ಲಿ ಅವನ ಮಗನಾದ ಅಮ್ಮೀಜಾಬಾದನೂ ಇದ್ದನು.

7 ಯೋವಾಬನ ತಮ್ಮನಾದ ಅಸಾಹೇಲನೂ ಅವನು ಸತ್ತನಂತರ ಅವನ ಮಗನಾದ ಜೆಬದ್ಯನೂ ನಾಲ್ಕನೆಯ ವರ್ಗದ ನಾಯಕರು; ನಾಲ್ಕನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವರ ವರ್ಗದವರ ಸಂಖ್ಯೆಯು ಇಪ್ಪತ್ತನಾಲ್ಕು ಸಾವಿರ.

8 ಇಜ್ರಾಹ್ಯನಾದ ಶಮ್ಹೂತನು ಐದನೆಯ ವರ್ಗದ ನಾಯಕನು; ಐದನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತನಾಲ್ಕು ಸಾವಿರ.

9 ತೆಕೋವಿನ ಇಕ್ಕೇಷನ ಮಗನಾದ ಈರ ಎಂಬವನು ಆರನೆಯ ವರ್ಗದ ನಾಯಕನು; ಆರನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತನಾಲ್ಕು ಸಾವಿರ.

10 ಎಫ್ರಾಯೀಮ್ ಕುಲದ ಪೆಲೋನ್ಯನಾದ ಹೆಲೆಚನು ಏಳನೆಯ ವರ್ಗದ ನಾಯಕನು; ಏಳನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತನಾಲ್ಕು ಸಾವಿರ.

11 ಹುಷ ಊರಿನ ಜೆರಹೀಯನಾದ ಸಿಬ್ಬೆಕೈಯು ಎಂಟನೆಯ ವರ್ಗದ ನಾಯಕನು; ಎಂಟನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತನಾಲ್ಕು ಸಾವಿರ.

12 ಬೆನ್ಯಾಮೀನ್ ಕುಲದ ಅನತೋತ್ ಊರಿನವನಾದ ಅಬೀಯೆಜೆರನು ಒಂಭತ್ತನೆಯ ವರ್ಗದ ನಾಯಕನು; ಒಂಭತ್ತನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತ ನಾಲ್ಕು ಸಾವಿರ.

13 ನೆಟೋಫ ಊರಿನ ಜೆರಹೀಯನಾದ ಮಹರೈಯು ಹತ್ತನೆಯ ವರ್ಗದ ನಾಯಕನು; ಹತ್ತನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತನಾಲ್ಕು ಸಾವಿರ.

14 ಎಫ್ರಾಯೀಮ್ ಕುಲದ ಪಿರ್ರಾತೋನ್ಯನಾದ ಬೆನಾಯನು ಹನ್ನೊಂದನೆಯ ವರ್ಗದ ನಾಯಕನು; ಹನ್ನೊಂದನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತನಾಲ್ಕು ಸಾವಿರ.

15 ನೆಟೋಫ ಊರಿನವನೂ ಒತ್ನೀಯೇಲನ ಸಂತಾನದವನೂ ಆದ ಹೆಲ್ದೈಯು ಹನ್ನೆರಡನೆಯ ವರ್ಗದ ನಾಯಕನು; ಹನ್ನೆರಡನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆಯು ಇಪ್ಪತ್ತನಾಲ್ಕು ಸಾವಿರ.

16 ಇಸ್ರಾಯೇಲ್ ಕುಲಪ್ರಭುಗಳು - ರೂಬೇನ್ಯರಲ್ಲಿ ಜಿಕ್ರೀಯ ಮಗನಾದ ಎಲೀಯೆಜೆರ್; ಸಿಮೆಯೋನ್ಯರಲ್ಲಿ ಮಾಕನ ಮಗನಾದ ಶೆಪಟ್ಯ;

17 ಲೇವಿಯರಲ್ಲಿ ಕೆಮುವೇಲನ ಮಗನಾದ ಹಷಬ್ಯ; ಆರೋನ್ಯರಲ್ಲಿ ಚಾದೋಕ್;

18 ಯೆಹೂದ್ಯರಲ್ಲಿ ದಾವೀದನ ಅಣ್ಣನಾದ ಎಲೀಹು; ಇಸ್ಸಾಕಾರ್ಯರಲ್ಲಿ ಮೀಕಾಯೇಲನ ಮಗನಾದ ಒವ್ರಿು;

19 ಜೆಬುಲೂನ್ಯರಲ್ಲಿ ಓಬದ್ಯನ ಮಗನಾದ ಇಷ್ಮಾಯ; ನಫ್ತಾಲ್ಯರಲ್ಲಿ ಅಜ್ರೀಯೇಲನ ಮಗನಾದ ಯೆರೀಮೋತ್;

20 ಎಫ್ರಾಯೀಮ್ಯರಲ್ಲಿ ಅಜಜ್ಯನ ಮಗನಾದ ಹೊಷೇಯ; ಮನಸ್ಸೆಯ ಅರ್ಧಕುಲದವರಲ್ಲಿ ಪೆದಾಯನ ಮಗನಾದ ಯೋವೇಲ್;

21 ಗಿಲ್ಯಾದಿನಲ್ಲಿರುವ ಮನಸ್ಸೆಯ ಅರ್ಧಕುಲದವರಲ್ಲಿ ಜೆಕರ್ಯನ ಮಗನಾದ ಇದ್ದೋ; ಬೆನ್ಯಾಮೀನ್ಯರಲ್ಲಿ ಅಬ್ನೇರನ ಮಗನಾದ ಯಗಸೀಯೇಲ್;

22 ದಾನ್ಯರಲ್ಲಿ ಯೆರೋಹಾಮನ ಮಗನಾದ ಅಜರೇಲ್. ಇಸ್ರಾಯೇಲ್ ಕುಲಾಧಿಪತಿಗಳು ಇವರೇ.

23 ಇಸ್ರಾಯೇಲ್ಯರನ್ನು ಆಕಾಶದ ನಕ್ಷತ್ರಗಳಂತೆ ಅಸಂಖ್ಯವಾಗಿ ಮಾಡುವೆನೆಂಬದಾಗಿ ಯೆಹೋವನು ಕೊಟ್ಟ ಮಾತನ್ನು ದಾವೀದನು ನಂಬಿ ಇಪ್ಪತ್ತು ವರುಷಕ್ಕಿಂತ ಕಡಿಮೆಯಾದ ವಯಸ್ಸುಳ್ಳವರನ್ನು ಲೆಕ್ಕಿಸಲಿಲ್ಲ.

24 ಚೆರೂಯಳ ಮಗನಾದ ಯೋವಾಬನು ಅವರನ್ನು ಲೆಕ್ಕಿಸಲಾರಂಭಿಸಿದರೂ ಇದರ ನಿವಿುತ್ತ ಇಸ್ರಾಯೇಲ್ಯರ ಮೇಲೆ ದೇವರ ಕೋಪವುಂಟಾದದರಿಂದ ಅದನ್ನು ಪೂರ್ತಿಗೊಳಿಸಲಿಲ್ಲ. ಈ ಖಾನೇಷುಮಾರಿಯು ದಾವೀದನ ರಾಜ್ಯ ವೃತ್ತಾಂತಗ್ರಂಥದಲ್ಲಿ ಲಿಖಿತವಾಗಲಿಲ್ಲ.

25 ಅರಸನಾದ ದಾವೀದನ ಸೊತ್ತಿನ ಮೇಲೆ ಮೇಲ್ವಿಚಾರಕರಾಗಿ ನೇವಿುಸಲ್ಪಟ್ಟವರು ಯಾರಂದರೆ - ಅರಸನ ಭಂಡಾರಗಳ ಮೇಲೆ ಅದೀಯೇಲನ ಮಗನಾದ ಅಜ್ಮಾವೆತ್, ಹೊಲದಲ್ಲಿಯೂ ಪಟ್ಟಣಗಳಲ್ಲಿಯೂ ಹಳ್ಳಿಗಳಲ್ಲಿಯೂ ಬುರುಜುಗಳ ಮೇಲೆಯೂ ಇದ್ದ ಉಗ್ರಾಣಗಳ ಮೇಲೆ ಉಜ್ಜೀಯನ ಮಗನಾದ ಯೋನಾತಾನ್,

26 ಹೊಲಗಳನ್ನು ವ್ಯವಸಾಯಮಾಡುವ ಆಳುಗಳ ಮೇಲೆ ಕೆಲೂಬನ ಮಗನಾದ ಎಜ್ರೀ,

27 ದ್ರಾಕ್ಷೇತೋಟಗಳ ಮೇಲೆ ರಾಮಾ ಊರಿನ ಶಿಮ್ಮೀ, ದ್ರಾಕ್ಷೇ ತೋಟಗಳಲ್ಲಿರುವ ದ್ರಾಕ್ಷಾರಸದ ಉಗ್ರಾಣಗಳ ಮೇಲೆ ಶಿಪ್ಮೀಯನಾದ ಜಬ್ದೀ,

28 ಎಣ್ಣೇಮರದ ತೋಪುಗಳ ಮೇಲೆಯೂ ಇಳುಕಲಿನ ಪ್ರದೇಶದಲ್ಲಿರುವ ಅತ್ತಿಮರಗಳ ತೋಪುಗಳ ಮೇಲೆಯೂ ಗೆದೆರೂರಿನವನಾದ ಬಾಳ್ಹಾನಾನ್, ಎಣ್ಣೆಯ ಉಗ್ರಾಣಗಳ ಮೇಲೆ ಯೋವಾಷ್,

29 ಶಾರೋನಿನಲ್ಲಿ ಮೇಯುವ ದನಗಳ ಮೇಲೆ ಶಾರೋನ್ಯನಾದ ಶಿಟ್ರೈ, ತಗ್ಗುಗಳಲ್ಲಿ ಮೇಯುವ ದನಗಳ ಮೇಲೆ ಅದ್ಲೈಯ ಮಗನಾದ ಶಾಫಾಟ್,

30 ಒಂಟೆಗಳ ಮೇಲೆ ಇಷ್ಮಾಯೇಲ್ಯನಾದ ಓಬೀಲ್, ಹೆಣ್ಣುಕತ್ತೆಗಳ ಮೇಲೆ ಮೇರೊನೋತ್ಯನಾದ ಯೆಹ್ದೆಯ,

31 ಆಡುಕುರಿಗಳ ಮೇಲೆ ಹಗ್ರೀಯನಾದ ಯಾಜೀಜ್ ಇವರೇ.

32 ವಿವೇಕಿಯೂ ಶಾಸ್ತ್ರಜ್ಞನೂ ಆದ ಯೋನಾತಾನನೆಂಬ ದಾವೀದನ ಚಿಕ್ಕಪ್ಪನು ಮಂತ್ರಿಯೂ ಹಕ್ಮೋನಿಯ ಮಗನಾದ ಯೆಹೀಯೇಲನು ರಾಜಪುತ್ರಪಾಲಕನೂ ಆಗಿದ್ದರು.

33 ಅಹೀತೋಫೆಲನು ಅರಸನ ಮಂತ್ರಿಯು; ಅರ್ಕೀಯನಾದ ಹೂಷೈಯು ಅವನ ವಿುತ್ರನು;

34 ಬೆನಾಯನ ಮಗನಾದ ಯೆಹೋಯಾದಾವನೂ ಎಬ್ಯಾತಾರನೂ ಅಹೀತೋಫೆಲನ ಉತ್ತರಾಧಿಕಾರಿಗಳು; ಯೋವಾಬನು ಅರಸನ ಸೈನ್ಯಾಧಿಪತಿಯು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು