Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೂರ್ವಕಾಲ ವೃತ್ತಾಂತ 23 - ಕನ್ನಡ ಸತ್ಯವೇದವು J.V. (BSI)


ಲೇವಿಯರ ವರ್ಗಗಳೂ ಅವರ ಕೆಲಸವೂ

1 ದಾವೀದನು ಮುಪ್ಪಿನ ಮುದುಕನಾದಾಗ ತನ್ನ ಮಗನಾದ ಸೊಲೊಮೋನನನ್ನು ಇಸ್ರಾಯೇಲ್ಯರ ಅರಸನನ್ನಾಗಿ ಮಾಡಿ

2 ಇಸ್ರಾಯೇಲ್ಯರ ಎಲ್ಲಾ ಅಧಿಪತಿಗಳನ್ನೂ ಯಾಜಕರನ್ನೂ ಲೇವಿಯರನ್ನೂ ತನ್ನ ಬಳಿಯಲ್ಲಿ ಕೂಡಿಸಿದನು.

3 ಮೂವತ್ತು ವರುಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳ ಲೇವಿಯರನ್ನು ಲೆಕ್ಕಿಸಿದಾಗ ಗಂಡಸರ ಸಂಖ್ಯೆಯು ಮೂವತ್ತೆಂಟು ಸಾವಿರವಿತ್ತು.

4 ದಾವೀದನು ಇವರಲ್ಲಿ ಯೆಹೋವನ ಆಲಯವನ್ನು ಕಟ್ಟುವವರ ಮೇಲ್ವಿಚಾರಣೆಗಾಗಿ ಇಪ್ಪತ್ತನಾಲ್ಕು ಸಾವಿರ ಮಂದಿಯನ್ನೂ ನ್ಯಾಯಾಧಿಪತಿಗಳನ್ನಾಗಿ ಮತ್ತು

5 ಅಧಿಕಾರಿಗಳನ್ನಾಗಿ ಆರು ಸಾವಿರ ಮಂದಿಯನ್ನೂ ದ್ವಾರಪಾಲಕರನ್ನಾಗಿ ನಾಲ್ಕು ಸಾವಿರ ಮಂದಿಯನ್ನೂ ತಾನು ಸಿದ್ಧಮಾಡಿಸಿದ ವಾದ್ಯಗಳಿಂದ ಯೆಹೋವನನ್ನು ಭಜಿಸುವದಕ್ಕಾಗಿ ನಾಲ್ಕು ಸಾವಿರ ಮಂದಿಯನ್ನೂ ನೇವಿುಸಿದನು.

6 ಇದಲ್ಲದೆ ಅವನು ಲೇವಿಯ ಸಂತಾನದವರಾದ ಗೇರ್ಷೋನ್ಯರು, ಕೆಹಾತ್ಯರು, ಮೆರಾರೀಯರು ಇವರನ್ನು ವರ್ಗವರ್ಗಗಳಾಗಿ ವಿಭಾಗಿಸಿದನು.

7 ಗೇರ್ಷೋನ್ಯರ ಮೂಲಪುರುಷರು - ಲದ್ದಾನ್, ಶಿಮ್ಮೀ ಎಂಬವರು.

8 ಲದ್ದಾನನಿಗೆ ಪ್ರಧಾನನಾದ ಯೆಹೀಯೇಲ್, ಜೇತಾಮ್, ಯೋವೇಲ್ ಎಂಬ ಮೂರು ಮಂದಿ ಮಕ್ಕಳಿದ್ದರು.

9 ಶಿಮ್ಮೀಯ ಮಕ್ಕಳು - ಶೆಲೋಮೋತ್, ಹಜೀಯೇಲ್, ಹಾರಾನ್ ಎಂಬ ಮೂರು ಮಂದಿ. ಇವರು ಲದ್ದಾನ್ಯರ ಗೋತ್ರ ಪ್ರಧಾನರು.

10 ಶಿಮ್ಮೀಗೆ ಯಹತ್, ಜೀನ, ಯೆಯೂಷ್, ಬೆರೀಯ ಎಂಬ ನಾಲ್ಕು ಮಂದಿ ಮಕ್ಕಳಿದ್ದರು.

11 ಯಹತನು ಪ್ರಧಾನನು. ಜೀಜನು ಎರಡನೆಯವನು. ಯೆಯೂಷ್, ಬೆರೀಯರಿಗೆ ಬಹಳ ಮಂದಿ ಮಕ್ಕಳಿರಲಿಲ್ಲವಾದದರಿಂದ ಅವರಿಬ್ಬರೂ ಒಂದೇ ಕುಟುಂಬವಾಗಿಯೂ ವರ್ಗವಾಗಿಯೂ ಎಣಿಸಲ್ಪಟ್ಟರು.

12 ಕೆಹಾತನಿಗೆ ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್ ಎಂಬ ನಾಲ್ಕು ಮಂದಿ ಮಕ್ಕಳಿದ್ದರು.

13 ಅಮ್ರಾಮನ ಮಕ್ಕಳು - ಆರೋನ್, ಮೋಶೆ ಎಂಬವರು. ಆರೋನನೂ ಅವನ ಸಂತಾನದವರೂ ಮಹಾ ಪರಿಶುದ್ಧವಾದ ವಸ್ತುಗಳನ್ನು ಪ್ರತಿಷ್ಠಿಸುವದಕ್ಕೆ ಪ್ರತ್ಯೇಕಿಸಲ್ಪಟ್ಟರು. ಇವರು ಯೆಹೋವನ ಸನ್ನಿಧಿಯಲ್ಲಿ ಸದಾಕಾಲ ಧೂಪಹಾಕುವವರೂ ಸೇವಿಸುವವರೂ ಆತನ ಹೆಸರಿನಿಂದ ಜನರನ್ನು ಆಶೀರ್ವದಿಸುವವರೂ ಆಗಿರತಕ್ಕದ್ದು.

14 ದೇವರ ಮನುಷ್ಯನಾದ ಮೋಶೆಯ ಸಂತಾನದವರು ಸಾಧಾರಣ ಲೇವಿಯರೊಳಗೆ ಎಣಿಸಲ್ಪಟ್ಟರು.

15 ಮೋಶೆಯ ಮಕ್ಕಳು - ಗೇರ್ಷೋಮ್, ಎಲೀಯೆಜೆರ್ ಎಂಬವರು.

16 ಪ್ರಧಾನನಾದ ಶೆಬೂವೇಲನು ಗೇರ್ಷೋಮನ ಮಗನು.

17 ಪ್ರಧಾನನಾದ ರೆಹಬ್ಯ ಎಲೀಯೆಜೆರನ ಮಗನು. ಎಲೀಯೆಜೆರನಿಗೆ ಬೇರೆ ಮಕ್ಕಳಿರಲಿಲ್ಲ; ಆದರೆ ರೆಹಬ್ಯನಿಗೆ ಅನೇಕ ಮಂದಿ ಮಕ್ಕಳಿದ್ದರು.

18 ಪ್ರಧಾನನಾದ ಶೆಲೋಮೋತನು ಇಚ್ಹಾರನ ಮಗನು.

19 ಹೆಬ್ರೋನನ ಮಕ್ಕಳಲ್ಲಿ ಯೆರೀಯ ಪ್ರಧಾನನು, ಅಮರ್ಯ ಎರಡನೆಯವನು, ಯಹಜೀಯೇಲ್ ಮೂರನೆಯವನು, ಯೆಕಮ್ಮಾಮ್ ನಾಲ್ಕನೆಯವನು.

20 ಉಜ್ಜೀಯೇಲನ ಮಕ್ಕಳಲ್ಲಿ ಮೀಕನು ಪ್ರಧಾನನು, ಇಷ್ಷೀಯನು ಎರಡನೆಯವನು.

21 ಮೆರಾರೀಯ ಮಕ್ಕಳು - ಮಹ್ಲೀ, ಮೂಷೀ ಎಂಬವರು. ಮಹ್ಲೀಯ ಮಕ್ಕಳು - ಎಲ್ಲಾಜಾರ್, ಕೀಷ್ ಇವರು.

22 ಎಲ್ಲಾಜಾರನು ಗಂಡುಮಕ್ಕಳಿಲ್ಲದೆ ಸತ್ತನು. ಅವನಿಗೆ ಹೆಣ್ಣುಮಕ್ಕಳು ಮಾತ್ರ ಇದ್ದರು; ಇವರು ತಮ್ಮ ಬಂಧುಗಳಾದ ಕೀಷನ ಮಕ್ಕಳಿಗೆ ಮದುವೆಯಾದರು.

23 ಮೂಷಿಗೆ ಮಹ್ಲೀ, ಏದೆರ್, ಯೆರೇಮೋತ್ ಎಂಬ ಮೂರು ಮಂದಿ ಮಕ್ಕಳಿದ್ದರು.

24 ಲೇವಿಯರ ಪಟ್ಟಿಯಲ್ಲಿ ಬರೆಯಲ್ಪಟ್ಟ ಹೆಸರುಗಳ ಪ್ರಕಾರ ಇವರೇ ಆಯಾ ಲೇವಿ ವರ್ಗಗಳ ಕುಟುಂಬ ಪ್ರಧಾನರು. ಇವರಲ್ಲಿ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರು ಯೆಹೋವನ ಆಲಯದಲ್ಲಿ ಸೇವೆಮಾಡತಕ್ಕವರು.

25 ಇಸ್ರಾಯೇಲ್ ದೇವರಾದ ಯೆಹೋವನು ತನ್ನ ಪ್ರಜೆಗೆ ವಿಶ್ರಾಂತಿಯನ್ನು ಅನುಗ್ರಹಿಸಿ ಸದಾಕಾಲವೂ ಯೆರೂಸಲೇವಿುನಲ್ಲಿ ವಾಸಿಸುವವನಾದದರಿಂದ

26 ಲೇವಿಯರು ಇನ್ನು ಮುಂದೆ ಆತನ ಗುಡಾರವನ್ನೂ ಆರಾಧನಾ ಸಾಮಾಗ್ರಿಗಳನ್ನೂ ಹೊರುವದು ಅವಶ್ಯವಿಲ್ಲವೆಂದುಕೊಂಡು ದಾವೀದನು ಈ ಪ್ರಕಾರ ವಿಧಿಸಿದನು.

27 ದಾವೀದನ ಈ ಕಡೇ ಆಜ್ಞೆಯ ಮೇರೆಗೆ ಲೇವಿಯರಲ್ಲಿ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರೆಲ್ಲರೂ ಲೆಕ್ಕಿಸಲ್ಪಟ್ಟರು.

28 ಅವರು ಆರೋನ್ಯರ ಕೈಕೆಳಗಿದ್ದುಕೊಂಡು ಯೆಹೋವನ ಆಲಯದ ಪರಿಚರ್ಯೆಯನ್ನು ನಡಿಸುತ್ತಿದ್ದರು. ಅವರ ಕೆಲಸಗಳು ಯಾವವಂದರೆ - ಅಂಗಳ ಕೋಣೆಗಳನ್ನು ನೋಡಿಕೊಳ್ಳುವದೂ ದೇವಾಲಯಕ್ಕೆ ಸಂಬಂಧಪಟ್ಟವುಗಳನ್ನೆಲ್ಲಾ ಶುದ್ಧ ಮಾಡುವದೂ ದೇವಾಲಯದಲ್ಲಿ ಸೇವೆಮಾಡುವದೂ

29 ನೈವೇದ್ಯದ ಮೀಸಲ ರೊಟ್ಟಿ, ನೈವೇದ್ಯಕ್ಕೆ ಬೇಕಾದ ಗೋದಿಹಿಟ್ಟು, ಹುಳಿಯಿಲ್ಲದ ರೊಟ್ಟಿ, ಕಬ್ಬಿಣದ ಹಂಚಿನಲ್ಲಿ ಸುಟ್ಟ ರೊಟ್ಟಿ, ಎಣ್ಣೆಯಿಂದ ನೆನೆದ ಭಕ್ಷ್ಯ ಇವುಗಳನ್ನು ಒದಗಿಸುವದೂ ಸೇರು ಮೊಳಗೋಲು ಇವುಗಳನ್ನು ಪರೀಕ್ಷಿಸುವದೂ

30 ಪ್ರತಿದಿನ ಪ್ರಾತಃಕಾಲ ಸಾಯಂಕಾಲಗಳಲ್ಲಿ ಮತ್ತು

31 ನಿಯವಿುತ ಸಂಖ್ಯೆಗೆ ಸರಿಯಾಗಿ ಸಬ್ಬತ್‍ದಿನ ಅಮಾವಾಸ್ಯೆ ಜಾತ್ರೆ ಇವುಗಳಲ್ಲಿ ಯೆಹೋವನ ಮುಂದೆ ತಪ್ಪದೆ ನಡೆಯುವ ಸರ್ವಾಂಗಹೋಮ ಸಮರ್ಪಣೆಯ ಹೊತ್ತಿನಲ್ಲಿ ಯೆಹೋವನಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸುವದೂ ಇವೇ.

32 ಹೀಗೆ ಅವರು ತಮ್ಮ ಸಹೋದರರಾದ ಆರೋನ್ಯರ ಸಹಾಯಕರಾಗಿದ್ದು ದೇವದರ್ಶನದ ಗುಡಾರವನ್ನೂ ಪರಿಶುದ್ಧವಾದ ಎಲ್ಲಾ ಸಾಮಾನುಗಳನ್ನೂ ನೋಡಿಕೊಳ್ಳುವದೇ ಯೆಹೋವನ ಆಲಯದಲ್ಲಿ ಮಾಡತಕ್ಕ ಪರಿಚರ್ಯ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು