1 ಪೂರ್ವಕಾಲ ವೃತ್ತಾಂತ 20 - ಕನ್ನಡ ಸತ್ಯವೇದವು J.V. (BSI)1 ಮರುವರುಷ ಅರಸರು ಯುದ್ಧಕ್ಕೆ ಹೊರಡುವ ಸಮಯದಲ್ಲಿ ಯೋವಾಬನು ಬಲವಾದ ಸೈನ್ಯವನ್ನು ಯುದ್ಧಕ್ಕೆ ನಡಿಸಿ ಅಮ್ಮೋನಿಯರ ಪ್ರಾಂತಗಳನ್ನು ಹಾಳುಮಾಡಿ ರಬ್ಬಕ್ಕೆ ಹೋಗಿ ಅದಕ್ಕೆ ಮುತ್ತಿಗೆ ಹಾಕಿದನು. ದಾವೀದನು ಯೆರೂಸಲೇವಿುನಲ್ಲಿಯೇ ಇದ್ದನು. ಯೋವಾಬನು ರಬ್ಬ ಪಟ್ಟಣವನ್ನು ಸ್ವಾಧೀನ ಮಾಡಿಕೊಂಡು ಹಾಳುಮಾಡಿಬಿಟ್ಟನು. 2 ದಾವೀದನು ಮಲ್ಕಾಮ್‍ಮೂರ್ತಿಯ ತಲೆಯ ಮೇಲಿದ್ದ ಬಂಗಾರದ ಕಿರೀಟವನ್ನು ತೆಗೆದುಕೊಂಡನು; ಅದು ನಾಲ್ಕು ಸಾವಿರ ತೊಲೆ ತೂಕದ್ದು; ಅದರಲ್ಲಿದ್ದ ಮಣಿಯನ್ನು ದಾವೀದನು ತನ್ನ ಶಿರಸ್ಸಿನಲ್ಲಿ ಧರಿಸಿಕೊಂಡನು. ಅವನು ಆ ಪಟ್ಟಣದಿಂದ ದೊಡ್ಡ ಕೊಳ್ಳೆಯನ್ನು ಒಯ್ದನು. 3 ಊರಿನ ನಿವಾಸಿಗಳನ್ನು ಹಿಡಿದು ಗರಗಸ ಗುದ್ದಲಿ ಕೊಡಲಿಗಳಿಂದ ಕೆಲಸಮಾಡುವದಕ್ಕೆ ಹಚ್ಚಿದನು. ಅಮ್ಮೋನಿಯರ ಎಲ್ಲಾ ಪಟ್ಟಣದವರಿಗೂ ಇದೇ ಗತಿಯಾಯಿತು. ಅನಂತರ ದಾವೀದನು ಸರ್ವಸೈನಿಕರೊಡನೆ ಯೆರೂಸಲೇವಿುಗೆ ಬಂದನು. 4 ಅನಂತರ ಫಿಲಿಷ್ಟಿಯರ ಸಂಗಡ ಗೆಜೆರಿನಲ್ಲಿ ಯುದ್ಧನಡೆಯಿತು. ಆಗ ಹುಷ ಊರಿನವನಾದ ಸಿಬ್ಬೆಕೈ ಎಂಬವನು ರೆಫಾಯನಾದ ಸಿಪ್ಪೈ ಎಂಬವನನ್ನು ಕೊಲ್ಲಲು ಫಿಲಿಷ್ಟಿಯರು ಕುಗ್ಗಿಹೋದರು. 5 ಫಿಲಿಷ್ಟಿಯರೊಡನೆ ಇನ್ನೊಮ್ಮೆ ಯುದ್ಧ ನಡೆದಾಗ ಯಾಯೀರನ ಮಗನಾದ ಎಲ್ಹಾನಾನನು ಗಿತ್ತೀಯನಾದ ಗೊಲ್ಯಾತನ ತಮ್ಮನಾದ ಲಹ್ಮೀಯನ್ನು ಕೊಂದನು. ಲಹ್ಮೀಯ ಬರ್ಜಿಯ ಹಿಡಿಕೆಯು ನೇಯಿಗಾರರ ಕುಂಟೆಯಷ್ಟು ಗಾತ್ರವಿತ್ತು. 6 ಮತ್ತೊಂದು ಸಾರಿ ಗತ್ ಊರಿನಲ್ಲಿ ಯುದ್ಧ ನಡೆಯಿತು. ಅಲ್ಲಿ ಒಬ್ಬ ಎತ್ತರವಾದ ಪುರುಷನಿದ್ದನು; ಅವನ ಕೈಕಾಲುಗಳಿಗೆ ಆರಾರು ಬೆರಳುಗಳಂತೆ ಒಟ್ಟಿಗೆ ಇಪ್ಪತ್ತ ನಾಲ್ಕು ಬೆರಳುಗಳಿದ್ದವು; ಅವನೂ ರೆಫಾಯನು. 7 ಅವನು ಇಸ್ರಾಯೇಲ್ಯರನ್ನು ನಿಂದಿಸಿದಾಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾತಾನನು ಅವನನ್ನು ಕೊಂದುಹಾಕಿದನು. 8 ಗತ್ ಊರಿನವರಾದ ಈ ರೆಫಾಯರು ದಾವೀದನಿಂದಲೂ ಅವನ ಸೇವಕರಿಂದಲೂ ಹತರಾದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India