Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೂರ್ವಕಾಲ ವೃತ್ತಾಂತ 19 - ಕನ್ನಡ ಸತ್ಯವೇದವು J.V. (BSI)


ದಾವೀದನು ಅಮ್ಮೋನಿಯರನ್ನು ಸೋಲಿಸಿದ್ದೂ ಅವನ ಭಟರ ಕೆಲವು ಶೂರಕೃತ್ಯಗಳೂ

1 ಇದಾದನಂತರ ಅಮ್ಮೋನಿಯರ ಅರಸನಾದ ನಾಹಾಷನು ಸತ್ತನು. ಅವನಿಗೆ ಬದಲಾಗಿ ಅವನ ಮಗನು ಅರಸನಾದನು.

2 ದಾವೀದನು - ನಾಹಾಷನು ನನಗೆ ದಯೆತೋರಿಸಿದ್ದರಿಂದ ನಾನೂ ಅವನ ಮಗನಾದ ಹಾನೂನನಿಗೆ ದಯೆ ತೋರಿಸುವೆನು ಅಂದುಕೊಂಡು ಪಿತೃಶೋಕದಲ್ಲಿದ್ದ ಹಾನೂನನನ್ನು ಸಂತೈಸುವದಕ್ಕೋಸ್ಕರ ದೂತರನ್ನು ಕಳುಹಿಸಿದನು. ದಾವೀದನ ಸೇವಕರು ಹಾನೂನನನ್ನು ಸಂತೈಸುವದಕ್ಕೋಸ್ಕರ ಅಮ್ಮೋನಿಯರ ದೇಶಕ್ಕೆ ಬಂದಾಗ

3 ಅಲ್ಲಿನ ಪ್ರಭುಗಳು ಹಾನೂನನಿಗೆ - ದಾವೀದನು ನಿನ್ನ ಬಳಿಗೆ ಸಂತೈಸುವವರನ್ನು ಕಳುಹಿಸಿದ್ದರಿಂದ ಅವನು ನಿನ್ನ ತಂದೆಯನ್ನು ಸನ್ಮಾನಿಸುವವನಾಗಿದ್ದಾನೆಂದು ನೆನಸುತ್ತೀಯೋ? ಅವನ ಆಳುಗಳು ದೇಶವನ್ನು ಸಂಚರಿಸಿ ನೋಡಿ ಅದನ್ನು ಸ್ವಾಧೀನಮಾಡಿಕೊಳ್ಳಬೇಕೆಂದು ಬಂದಿದ್ದಾರೆ ಎಂದು ಹೇಳಿದರು.

4 ಆದದರಿಂದ ಹಾನೂನನು ದಾವೀದನ ಸೇವಕರನ್ನು ಹಿಡಿಸಿ [ಗಡ್ಡದ ಅರ್ಧಭಾಗವನ್ನು] ಬೋಳಿಸಿ ಅವರ ಸೊಂಟದ ಕೆಳಭಾಗದ ನಿಲುವಂಗಿಗಳನ್ನು ಕತ್ತರಿಸಿ ಕಳುಹಿಸಿಬಿಟ್ಟನು.

5 ಅವರು ಹೋಗಿ ಈ ವರ್ತಮಾನವನ್ನು ದಾವೀದನಿಗೆ ಹೇಳಿಕಳುಹಿಸಿದಾಗ ಅವನು ಬಹಳ ಅಪಮಾನ ಹೊಂದಿದ ಅವರಿಗೆ ಆಳುಗಳ ಮುಖಾಂತರವಾಗಿ - ನಿಮ್ಮ ಗಡ್ಡ ಬೆಳೆಯುವವರೆಗೆ ನೀವು ಯೆರಿಕೋವಿನಲ್ಲಿದ್ದು ಅನಂತರ ಬನ್ನಿರಿ ಎಂದು ಹೇಳಿಸಿದನು.

6 ತಾವು ದಾವೀದನಿಗೆ ಅಸಹ್ಯರಾದೆವೆಂದು ಹಾನೂನನೂ ಅಮ್ಮೋನಿಯರೂ ತಿಳಿದು ಎರಡು ನದಿಗಳ ಮಧ್ಯದಲ್ಲಿರುವ ಅರಾಮ್ ಸೀಮೆಯಿಂದಲೂ ಅರಾಮ್ ಮಾಕದಿಂದಲೂ ಚೋಬಾರಾಜ್ಯದಿಂದಲೂ ರಥಗಳನ್ನೂ ರಾಹುತರನ್ನೂ ತರಿಸುವದಕ್ಕೋಸ್ಕರ ಸಾವಿರ ತಲಾಂತು ಬೆಳ್ಳಿಯನ್ನು ಕಳುಹಿಸಿದರು.

7 ಆಗ ಮೂವತ್ತೆರಡು ಸಾವಿರ ಮಂದಿ ರಥಬಲದವರೂ ಮಾಕದ ಅರಸನೂ ಅವನ ದಂಡಾಳುಗಳೂ ಬಂದು ಅವರ ಸಹಾಯಕ್ಕೋಸ್ಕರ ಮೇದೆಬ ಊರಿನ ಮುಂದೆ ಪಾಳೆಯಮಾಡಿಕೊಂಡರು. ಅಮ್ಮೋನಿಯರೂ ತಮ್ಮ ಪಟ್ಟಣಗಳಿಂದ ಯುದ್ಧಕ್ಕೆ ಕೂಡಿಬಂದರು.

8 ಈ ಸುದ್ದಿಯು ದಾವೀದನಿಗೆ ಮುಟ್ಟಿದಾಗ ಅವನು ಯೋವಾಬನನ್ನೂ ಎಲ್ಲಾ ಶೂರಸೈನಿಕರನ್ನೂ ಕಳುಹಿಸಿದನು.

9 ಕೂಡಲೆ ಅಮ್ಮೋನಿಯರು ಹೊರಗೆ ಬಂದು ಊರುಬಾಗಲಿನ ಬಳಿಯಲ್ಲಿ ವ್ಯೂಹಕಟ್ಟಿದರು. ಅವರ ಸಹಾಯಕ್ಕಾಗಿ ಬಂದ ಅರಸರು ಪ್ರತ್ಯೇಕವಾಗಿ ಮೈದಾನದಲ್ಲಿ ನಿಂತರು.

10 ಯೋವಾಬನು ತನ್ನ ಮುಂದೆಯೂ ಹಿಂದೆಯೂ ಯುದ್ಧಪ್ರಾರಂಭವಾದದ್ದನ್ನು ಕಂಡು ಇಸ್ರಾಯೇಲ್ಯರಲ್ಲಿ ಶ್ರೇಷ್ಠರಾದ ಎಲ್ಲಾ ಸೈನಿಕರನ್ನು ಆರಿಸಿಕೊಂಡು ಅವರನ್ನು ಅರಾಮ್ಯರಿಗೆ ವಿರೋಧವಾಗಿ ನಿಲ್ಲಿಸಿದನು.

11 ಉಳಿದ ಜನರನ್ನು ತನ್ನ ತಮ್ಮನಾದ ಅಬ್ಷೈಯ ವಶಕ್ಕೆ ಕೊಟ್ಟು ಅವನಿಗೆ -

12 ಅರಾಮ್ಯರು ನನ್ನನ್ನು ಸೋಲಿಸುವಂತೆ ಕಂಡರೆ ನೀನು ನನ್ನ ಸಹಾಯಕ್ಕೆ ಬಾ; ಅಮ್ಮೋನಿಯರು ನಿನ್ನನ್ನು ಸೋಲಿಸುವಂತೆ ಕಂಡರೆ ನಾನು ನಿನ್ನ ಸಹಾಯಕ್ಕೆ ಬರುವೆನು.

13 ಧೈರ್ಯದಿಂದಿರು; ನಮ್ಮ ಜನರಿಗೋಸ್ಕರವೂ ನಮ್ಮ ದೇವರ ಪಟ್ಟಣಗಳಿಗೋಸ್ಕರವೂ ನಮ್ಮ ಪೌರುಷವನ್ನು ತೋರಿಸೋಣ. ಯೆಹೋವನು ತನಗೆ ಸರಿಕಾಣುವಂಥದನ್ನು ಮಾಡಲಿ ಎಂದು ಹೇಳಿ ಅವನನ್ನು ಅಮ್ಮೋನಿಯರಿಗೆ ವಿರೋಧವಾಗಿ ಕಳುಹಿಸಿದನು.

14 ಯೋವಾಬನೂ ಅವನ ಜನರೂ ಅರಾಮ್ಯರಿಗೆ ವಿರೋಧವಾಗಿ ಯುದ್ಧಪ್ರಾರಂಭಿಸಿದಾಗ ಅರಾಮ್ಯರು ಓಡಿಹೋದರು.

15 ಇವರು ಓಡಿ ಹೋಗುವದನ್ನು ಅಮ್ಮೋನಿಯರು ಕಂಡು ಅವರೂ ಅವನ ತಮ್ಮನಾದ ಅಬ್ಷೈಯ ಎದುರಿನಿಂದ ಓಡಿಹೋಗಿ ಪಟ್ಟಣವನ್ನು ಹೊಕ್ಕರು. ಯೋವಾಬನು ಯೆರೂಸಲೇವಿುಗೆ ಹೋದನು.

16 ಅರಾಮ್ಯರಿಗೆ ತಾವು ಇಸ್ರಾಯೇಲ್ಯರಿಂದ ಅಪಜಯ ಹೊಂದಿದೆವೆಂದು ಗೊತ್ತಾದಾಗ ಅವರು ಯೂಫ್ರೇಟೀಸ್ ನದಿಯ ಆಚೆಯಲ್ಲಿದ್ದ ಅರಾಮ್ಯರನ್ನು ಕರೇ ಕಳುಹಿಸಿದರು. ಹದರೆಜರನ ಸೇನಾಪತಿಯಾದ ಶೋಫಕನು ಅವರ ನಾಯಕನಾದನು.

17 ಈ ಸುದ್ದಿಯು ದಾವೀದನಿಗೆ ಮುಟ್ಟಿದಾಗ ಅವನು ಇಸ್ರಾಯೇಲ್ಯರೆಲ್ಲರನ್ನೂ ಕೂಡಿಸಿಕೊಂಡು ಯೊರ್ದನ್‍ಹೊಳೆ ದಾಟಿ ಅರಾಮ್ಯರ ಸಮೀಪಕ್ಕೆ ಬಂದು ಅವರೊಡನೆ ಕಾದುವದಕ್ಕೋಸ್ಕರ ವ್ಯೂಹಕಟ್ಟಿದನು.

18 ಅರಾಮ್ಯರು ಯುದ್ಧಕ್ಕೆ ನಿಂತಾಗ ಇಸ್ರಾಯೇಲ್ಯರ ಮುಂದೆ ಸೋತು ಓಡಿಹೋದರು. ದಾವೀದನು ಅರಾಮ್ಯರ ಏಳು ಸಾವಿರ ರಥಗಳನ್ನು ಹಾಳು ಮಾಡಿ ನಾಲ್ವತ್ತು ಸಾವಿರ ಮಂದಿ ಕಾಲಾಳುಗಳನ್ನು ಕೊಂದುಬಿಟ್ಟನು.

19 ಸೇನಾಪತಿಯಾದ ಶೋಫಕನನ್ನು ಕೊಂದನು. ಹದರೆಜರನ ದಾಸರು ಇಸ್ರಾಯೇಲ್ಯರ ಮುಂದೆ ತಮ್ಮ ಕೈ ಸಾಗದೆಂದು ತಿಳಿದು ದಾವೀದನೊಡನೆ ಒಪ್ಪಂದಮಾಡಿಕೊಂಡು ಅವನ ದಾಸರಾದರು. ಅಂದಿನಿಂದ ಅರಾಮ್ಯರು ಅಮ್ಮೋನಿಯರಿಗೆ ಸಹಾಯಮಾಡುವದಕ್ಕೆ ಮನಸಿಲ್ಲದವರಾದರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು