Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೂರ್ವಕಾಲ ವೃತ್ತಾಂತ 15 - ಕನ್ನಡ ಸತ್ಯವೇದವು J.V. (BSI)


ದಾವೀದನು ಯೆಹೋವನ ಮಂಜೂಷವನ್ನು ಚೀಯೋನಿಗೆ ತಂದದ್ದು

1 ದಾವೀದನು ತನ್ನ ನಗರದಲ್ಲಿ ತನಗೋಸ್ಕರ ಮನೆಗಳನ್ನು ಕಟ್ಟಿಸಿದ್ದಲ್ಲದೆ ದೇವಮಂಜೂಷಕ್ಕೋಸ್ಕರವೂ ಸ್ಥಳವನ್ನು ಸಿದ್ಧಮಾಡಿ ಗುಡಾರವನ್ನು ಹಾಕಿಸಿದನು.

2 ಆ ಕಾಲದಲ್ಲಿ ದಾವೀದನು - ಲೇವಿಯರು ಹೊರತಾಗಿ ಯಾರೂ ದೇವಮಂಜೂಷವನ್ನು ಹೊರಬಾರದು; ಅದನ್ನು ಹೊರುವದಕ್ಕೂ ಸದಾಕಾಲ ತನ್ನ ಸೇವೆಮಾಡುವದಕ್ಕೂ ಯೆಹೋವನು ಅವರನ್ನೇ ಆರಿಸಿಕೊಂಡಿದ್ದಾನೆಂದು ಹೇಳಿ

3 ಯೆಹೋವನ ಮಂಜೂಷವನ್ನು ತಾನು ಸಿದ್ಧಮಾಡಿದ ಸ್ಥಳಕ್ಕೆ ತರುವದಕ್ಕೋಸ್ಕರ ಎಲ್ಲಾ ಇಸ್ರಾಯೇಲ್ಯರನ್ನು ಯೆರೂಸಲೇವಿುಗೆ ಕರಸಿದನು.

4 ಅವನು ಕರಸಿದ ಆರೋನನ ವಂಶದವರೂ ಲೇವಿಯರೂ -

5 ಕೆಹಾತ್ಯರಲ್ಲಿ ಊರೀಯೇಲನೆಂಬ ಪ್ರಧಾನನೂ ಅವನ ಕುಟುಂಬದವರಾದ ನೂರಿಪ್ಪತ್ತು ಮಂದಿಯೂ;

6 ಮೆರಾರೀಯರಲ್ಲಿ ಅಸಾಯನೆಂಬ ಪ್ರಧಾನನೂ ಅವನ ಕುಟುಂಬದವರಾದ ಇನ್ನೂರಿಪ್ಪತ್ತು ಮಂದಿಯೂ;

7 ಗೇರ್ಷೋಮ್ಯರಲ್ಲಿ ಯೋವೇಲನೆಂಬ ಪ್ರಧಾನನೂ ಅವನ ಕುಟುಂಬದವರಾದ ನೂರ ಮೂವತ್ತು ಮಂದಿಯೂ;

8 ಎಲೀಚಾಫಾನ್ಯರಲ್ಲಿ ಶೆಮಾಯನೆಂಬ ಪ್ರಧಾನನೂ ಅವನ ಕುಟುಂಬದವರಾದ ಇನ್ನೂರು ಮಂದಿಯೂ;

9 ಹೆಬ್ರೋನ್ಯರಲ್ಲಿ ಎಲೀಯೇಲನೆಂಬ ಪ್ರಧಾನನೂ ಅವನ ಕುಟುಂಬದವರಾದ ಎಂಭತ್ತು ಮಂದಿಯೂ;

10 ಉಜ್ಜೀಯೇಲ್ಯರಲ್ಲಿ ಅಮ್ಮೀನಾದಾಬನೆಂಬ ಪ್ರಧಾನನೂ ಅವನ ಕುಟಂಬದವರಾದ ನೂರ ಹನ್ನೆರಡು ಮಂದಿಯೂ.

11 ಆಮೇಲೆ ದಾವೀದನು ಚಾದೋಕ್ ಎಬ್ಯಾತಾರರೆಂಬ ಯಾಜಕರನ್ನೂ ಊರೀಯೇಲ್, ಅಸಾಯ, ಯೋವೇಲ್, ಶೆಮಾಯ, ಎಲೀಯೇಲ್, ಅಮ್ಮೀನಾದಾಬ್ ಎಂಬ ಲೇವಿಯರನ್ನೂ ಕರೆದು ಅವರಿಗೆ -

12 ಲೇವಿಯರಲ್ಲಿ ಗೋತ್ರಪ್ರಧಾನರಾದ ನೀವೂ ನಿಮ್ಮ ಸಹೋದರರೂ ನಿಮ್ಮನ್ನು ಶುದ್ಧಿಪಡಿಸಿಕೊಂಡು ಇಸ್ರಾಯೇಲ್ ದೇವರಾದ ಯೆಹೋವನ ಮಂಜೂಷವನ್ನು ನಾನು ಸಿದ್ಧಮಾಡಿರುವ ಸ್ಥಳಕ್ಕೆ ತೆಗೆದುಕೊಂಡು ಬನ್ನಿರಿ.

13 ನೀವು ಮೊದಲನೆಯ ಸಾರಿ ಇರಲಿಲ್ಲವಾದದರಿಂದ ನಮ್ಮ ದೇವರಾದ ಯೆಹೋವನು ತನ್ನ ಸನ್ನಿಧಿಗೆ ಧರ್ಮವಿಧಿ ವಿರೋಧವಾಗಿ ಬಂದ ನಮ್ಮಲ್ಲಿ ಒಬ್ಬನನ್ನು ಸಂಹರಿಸಿದನಷ್ಟೆ ಎಂದು ಹೇಳಲು

14 ಯಾಜಕರೂ ಲೇವಿಯರೂ ಇಸ್ರಾಯೇಲ್ ದೇವರಾದ ಯೆಹೋವನ ಮಂಜೂಷವನ್ನು ತರುವದಕ್ಕೋಸ್ಕರ ತಮ್ಮನ್ನು ಶುದ್ಧಿಪಡಿಸಿಕೊಂಡರು.

15 ಮೋಶೆಯ ಮುಖಾಂತರವಾಗಿ ಕೊಡಲ್ಪಟ್ಟ ಯೆಹೋವನ ಆಜ್ಞಾನುಸಾರವಾಗಿ ಲೇವಿಯರು ದೇವಮಂಜೂಷಕ್ಕೆ ಕೋಲುಗಳನ್ನು ಸಿಕ್ಕಿಸಿ ಅದನ್ನು ಹೆಗಲಿನ ಮೇಲೆ ಹೊತ್ತುಕೊಂಡರು.

16 ಆಗ ದಾವೀದನು ಲೇವಿಯರ ಪ್ರಧಾನರಿಗೆ - ಗಾಯಕರಾದ ನಿಮ್ಮ ಸಹೋದರರನ್ನು ಸ್ವರಮಂಡಲ ಕಿನ್ನರಿ ತಾಳ ಮೊದಲಾದ ವಾದ್ಯಗಳಿಂದ ಉತ್ಸಾಹ ಧ್ವನಿಮಾಡುವದಕ್ಕಾಗಿ ನೇವಿುಸಿರಿ ಎಂದು ಆಜ್ಞಾಪಿಸಲು

17 ಅವರು ಯೋವೇಲನ ಮಗನಾದ ಹೇಮಾನ್, ಅವನ ಗೋತ್ರ ಬಂಧುವೂ ಬೆರೆಕ್ಯನ ಮಗನೂ ಆದ ಆಸಾಫ್, ತಮ್ಮ ಸಹೋದರರಾದ ಮೆರಾರೀಯರ ಕುಟುಂಬಕ್ಕೆ ಸೇರಿದ ಕೂಷಾಯನ ಮಗನಾದ ಏತಾನ್ ಎಂಬವರನ್ನಲ್ಲದೆ

18 ತಮ್ಮ ಸಹೋದರರೊಳಗೆ ಎರಡನೆಯ ತರಗತಿಯವರಾದ ಜೆಕರ್ಯ, ಬೇನ್, ಯಾಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಬೆನಾಯ, ಮಾಸೇಯ, ಮತ್ತಿತ್ಯ, ಎಲೀಫೆಲೇಹು, ವಿುಕ್ನೇಯ, ದ್ವಾರಪಾಲಕರಾದ ಓಬೇದೆದೋಮ್ ಯೆಗೀಯೇಲರು ಇವರನ್ನು ನೇವಿುಸಿದರು.

19 ಗಾಯಕರಾದ ಹೇಮಾನ್ ಆಸಾಫ್ ಏತಾನರು ಗಟ್ಟಿಯಾಗಿ ಕಂಚಿನ ತಾಳಗಳನ್ನು ಹೊಡೆಯುವವರು.

20 ಜೆಕರ್ಯ, ಅಜೀಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಮಾಸೇಯ, ಬೆನಾಯ ಎಂಬವರು ತಾರಕ ಸ್ಥಾಯಿಯ ಸ್ವರಮಂಡಲಗಳನ್ನು ಬಾರಿಸುವವರು.

21 ಮತ್ತಿತ್ಯ, ಎಲೀಫೆಲೇಹು, ವಿುಕ್ನೇಯ, ಓಬೇದೆದೋಮ್, ಯೆಗೀಯೇಲ್, ಅಜಜ್ಯ ಎಂಬವರು ಗಾಯನ ನಾಯಕರಾಗಿದ್ದು ಮಂದರಸ್ಥಾಯಿಯ ಕಿನ್ನರಿಗಳನ್ನು ಬಾರಿಸುವವರು.

22 ಬುದ್ಧಿವಂತನೂ ಹೊರೆಹೊರುವವರ ನಾಯಕನೂ ಆದ ಕೆನನ್ಯನು ಮಂಜೂಷ ಹೊತ್ತವರನ್ನು ನಡಿಸುವವನು.

23 ಬೆರೆಕ್ಯ, ಎಲ್ಕಾನ ಇವರು ಮಂಜೂಷಾಲಯದ ದ್ವಾರಪಾಲಕರು.

24 ಶೆಬನ್ಯ, ಯೋಷಾಫಾಟ್, ನೆತನೇಲ್, ಅಮಾಸೈ, ಜೆಕರ್ಯ, ಬೆನಾಯ, ಎಲೀಯೆಜೆರ್ ಎಂಬ ಯಾಜಕರು ತುತೂರಿಗಳನ್ನು ಊದುತ್ತಾ ದೇವಮಂಜೂಷದ ಮುಂದೆ ಹೋಗುವವರು. ಓಬೇದೆದೋಮ್, ಯೆಹೀಯ ಎಂಬವರು ಮಂಜೂಷಾಲಯದ ದ್ವಾರಪಾಲಕರು.

25 ದಾವೀದನೂ ಇಸ್ರಾಯೇಲ್ಯರ ಹಿರಿಯರೂ ಸಹಸ್ರಾಧಿಪತಿಗಳೂ ಓಬೇದೆದೋಮನ ಮನೆಯಲ್ಲಿದ್ದ ಯೆಹೋವನ ನಿಬಂಧನ ಮಂಜೂಷವನ್ನು

26 ಉತ್ಸವದಿಂದ ತರುತ್ತಿರುವಾಗ ಅದನ್ನು ಹೊತ್ತ ಲೇವಿಯರಿಗೆ ದೇವರ ಸಹಾಯ ದೊರೆತದರಿಂದ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಯಜ್ಞಮಾಡಿದರು.

27 ದಾವೀದನೂ ಮಂಜೂಷವನ್ನು ಹೊತ್ತ ಮತ್ತು ವಾದ್ಯಮಾಡುವ ಎಲ್ಲಾ ಲೇವಿಯರೂ ಹೊರುವವರ ಮುಖ್ಯಸ್ಥನಾದ ಕೆನನ್ಯನೂ ನೂಲಿನ ನಿಲುವಂಗಿಗಳನ್ನು ಧರಿಸಿಕೊಂಡಿದ್ದರು. ದಾವೀದನು ಇದರ ಹೊರತಾಗಿ ನಾರಿನ ಏಫೋದನ್ನೂ ಧರಿಸಿಕೊಂಡಿದ್ದನು.

28 ಹೀಗೆ ಎಲ್ಲಾ ಇಸ್ರಾಯೇಲ್ಯರು ಆರ್ಭಟಿಸುತ್ತಾ ಕೊಂಬು ತುತೂರಿಗಳನ್ನು ಗಟ್ಟಿಯಾಗಿ ಊದುತ್ತಾ ತಾಳಹೊಡೆಯುತ್ತಾ ಕಿನ್ನರಿ ಸ್ವರಮಂಡಲಗಳನ್ನು ಬಾರಿಸುತ್ತಾ ಯೆಹೋವನ ನಿಬಂಧನಮಂಜೂಷವನ್ನು ತಂದರು.

29 ಯೆಹೋವನ ನಿಬಂಧನ ಮಂಜೂಷವು ದಾವೀದನಗರಕ್ಕೆ ಬರುತ್ತಿರುವಾಗ ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ಹಣಕಿನೋಡಿ ದಾವೀದನು ಕುಣಿಯುತ್ತಾ ಹಾರುತ್ತಾ ಇರುವದನ್ನು ಕಂಡು ಮನಸ್ಸಿನಲ್ಲಿ ಅವನನ್ನು ತಿರಸ್ಕರಿಸಿದಳು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು