Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಪೂರ್ವಕಾಲ ವೃತ್ತಾಂತ 14 - ಕನ್ನಡ ಸತ್ಯವೇದವು J.V. (BSI)


ದಾವೀದನು ಅರಮನೆಯನ್ನು ಕಟ್ಟಿಸಿಕೊಂಡದ್ದು; ಅವನ ಮಕ್ಕಳು; ಫಿಲಿಷ್ಟಿಯರು ಎರಡಾವರ್ತಿ ಅವನಿಂದ ಸೋತುಹೋದದ್ದು.

1 ತೂರಿನ ಅರಸನಾದ ಹೀರಾಮನು ದಾವೀದನಿಗೆ ಅರಮನೆಯನ್ನು ಕಟ್ಟುವದಕ್ಕೋಸ್ಕರ ದೂತರನ್ನೂ ದೇವದಾರು ಮರಗಳನ್ನೂ ಶಿಲ್ಪಿಗಳನ್ನೂ ಬಡಗಿಯವರನ್ನೂ ಅವನ ಬಳಿಗೆ ಕಳುಹಿಸಿದನು.

2 ಇದರಿಂದ ದಾವೀದನು ದೇವಪ್ರಜೆಗಳಾದ ಇಸ್ರಾಯೇಲ್ಯರ ನಿವಿುತ್ತವಾಗಿ ತನ್ನ ರಾಜ್ಯವು ಉನ್ನತಸ್ಥಾನಕ್ಕೆ ಮುಟ್ಟಿದ್ದನ್ನು ನೋಡಿ ಯೆಹೋವನು ತನ್ನನ್ನು ಇಸ್ರಾಯೇಲ್ ರಾಜನನ್ನಾಗಿ ಸ್ಥಿರಪಡಿಸಿದನೆಂದು ತಿಳಿದುಕೊಂಡನು.

3 ದಾವೀದನು ಯೆರೂಸಲೇವಿುನಲ್ಲಿ ಸಹ ಕೆಲವು ಮಂದಿ ಸ್ತ್ರೀಯರನ್ನು ಮದುವೆಮಾಡಿಕೊಂಡು ಇನ್ನೂ ಕೆಲವು ಮಂದಿ ಗಂಡು ಹೆಣ್ಣು ಮಕ್ಕಳನ್ನು ಪಡೆದನು.

4 ಅಲ್ಲಿ ಅವನಿಗೆ ಹುಟ್ಟಿದ ಗಂಡುಮಕ್ಕಳ ಹೆಸರುಗಳು - ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್,

5-6 ಇಬ್ಹಾರ್, ಎಲೀಷೂವ, ಎಲ್ಪೆಲೆಟ್, ನೋಗಹ, ನೆಫೆಗ್,

7 ಯಾಫೀಯ, ಎಲೀಷಾಮ, ಬೇಲ್ಯಾದ, ಎಲೀಫೆಲೆಟ್.

8 ಇಸ್ರಾಯೇಲ್ಯರೆಲ್ಲರೂ ದಾವೀದನನ್ನು ಅಭಿಷೇಕಿಸಿ ತಮ್ಮ ಅರಸನನ್ನಾಗಿ ಮಾಡಿಕೊಂಡರೆಂಬ ವರ್ತಮಾನವು ಫಿಲಿಷ್ಟಿಯರಿಗೆ ಮುಟ್ಟಿದಾಗ ಅವರು ಅವನನ್ನು ಹಿಡಿಯುವದಕ್ಕೆ ಹೊರಟರು; ದಾವೀದನು ಇದನ್ನು ಕೇಳಿ ತಾನೂ ಅವರೆದುರಿಗೆ ಹೋದನು.

9 ಫಿಲಿಷ್ಟಿಯರು ದೇಶದೊಳಗೆ ನುಗ್ಗಿ ರೆಫಾಯೀಮ್ ತಗ್ಗಿನಲ್ಲಿ ಸುಲಿಗೆ ಮಾಡುತ್ತಿದ್ದದರಿಂದ ದಾವೀದನು ದೇವರಾದ ಯೆಹೋವನನ್ನು -

10 ನಾನು ಫಿಲಿಷ್ಟಿಯರಿಗೆ ವಿರೋಧವಾಗಿ ಹೋಗಬಹುದೋ? ಅವರನ್ನು ನನ್ನ ಕೈಗೆ ಒಪ್ಪಿಸಿಕೊಡುವಿಯೋ ಎಂದು ಕೇಳಲು ಆತನು - ಹೋಗು, ನಾನು ಅವರನ್ನು ನಿನ್ನ ಕೈಗೆ ಒಪ್ಪಿಸುವೆನು ಎಂದು ಉತ್ತರಕೊಟ್ಟನು.

11 ಅಷ್ಟರಲ್ಲಿ ಬಾಳ್‍ಪೆರಾಚೀವಿುಗೆ ಬಂದ ಅವರನ್ನು ದಾವೀದನು ಸೋಲಿಸಿ - ಯೆಹೋವನು ಕಟ್ಟೆಯೊಡೆದ ಪ್ರವಾಹದಂತೆ ನನ್ನ ಶತ್ರುಗಳ ಮೇಲೆ ಬಿದ್ದು ಅವರನ್ನು ನನ್ನ ಮುಖಾಂತರವಾಗಿ ನಾಶಮಾಡಿದ್ದಾನೆಂದು ಹೇಳಿದ್ದರಿಂದ ಆ ಯುದ್ಧಸ್ಥಳಕ್ಕೆ ಬಾಳ್‍ಪೆರಾಚೀಮೆಂದು ಹೆಸರಾಯಿತು.

12 ಫಿಲಿಷ್ಟಿಯರು ಅಲ್ಲಿ ಬಿಟ್ಟು ಹೋಗಿದ್ದ ದೇವರುಗಳನ್ನು ದಾವೀದನು ಸುಡಿಸಿಬಿಟ್ಟನು.

13 ಫಿಲಿಷ್ಟಿಯರು ಇನ್ನೊಮ್ಮೆ ಬಂದು ಅದೇ ತಗ್ಗಿನಲ್ಲಿ ಸುಲಿಗೆಮಾಡುತ್ತಿದ್ದರು.

14 ದಾವೀದನು ತಿರಿಗಿ ದೇವರ ಸನ್ನಿಧಿಯಲ್ಲಿ ವಿಚಾರಿಸಿದಾಗ ಆತನು ಅವನಿಗೆ - ನೀನು ಅವರನ್ನು ಬೆನ್ನಟ್ಟಬೇಡ; ಅವರ ಎದುರಿನಿಂದ ತಿರುಗಿಕೊಂಡು ಹೋಗಿ ಬಾಕಾಮರಗಳಿರುವ ಕಡೆಯಿಂದ ಅವರ ಮೇಲೆ ಬೀಳು.

15 ಆ ಮರಗಳ ತುದಿಯಲ್ಲಿ ಹೆಜ್ಜೆಗಳ ಸಪ್ಪಳವು ಕೇಳಿಸುವಾಗಲೇ ದೇವರು ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವದಕ್ಕೋಸ್ಕರ ನಿನ್ನ ಮುಂದಾಗಿ ಹೊರಟನೆಂದು ತಿಳಿದುಕೊಂಡು ಯುದ್ಧಕ್ಕೆ ಹೊರಡು ಅಂದನು.

16 ದಾವೀದನು ದೇವರ ಆಜ್ಞಾನುಸಾರವಾಗಿ ಮಾಡಿದನು; ಇಸ್ರಾಯೇಲ್ಯರು ಫಿಲಿಷ್ಟಿಯ ಸೈನ್ಯವನ್ನು ಗಿಬ್ಯೋನಿನಿಂದ ಗೆಜೆರಿನವರೆಗೂ ಸಂಹರಿಸುತ್ತಾ ಹೋದರು.

17 ದಾವೀದನ ಕೀರ್ತಿಯು ಎಲ್ಲಾ ದೇಶಗಳಲ್ಲಿ ಹಬ್ಬಿತು. ಯೆಹೋವನು ಅವನಿಗೆ ಎಲ್ಲಾ ಜನಾಂಗಗಳೂ ಹೆದರುವಂತೆ ಮಾಡಿದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು