1 ಪೂರ್ವಕಾಲ ವೃತ್ತಾಂತ 13 - ಕನ್ನಡ ಸತ್ಯವೇದವು J.V. (BSI)ಯೆಹೋವನ ಮಂಜೂಷವನ್ನು ಕಿರ್ಯತ್ಯಾರೀವಿುನಿಂದ ತೆಗೆದುಕೊಂಡು ಬರುವಾಗ ದಾರಿಯಲ್ಲಿ ಆಪತ್ತು ಸಂಭವಿಸಿದ್ದು 1 ದಾವೀದನು ಸಹಸ್ರಾಧಿಪತಿ ಶತಾಧಿಪತಿ ಮೊದಲಾದ ಸರ್ವಪ್ರಭುಗಳೊಡನೆ ಮಾತಾಡಿದನಂತರ 2 ಇಸ್ರಾಯೇಲ್ ಸಮಸ್ತಸಮೂಹದವರಿಗೆ - ನಿಮ್ಮ ಸಮ್ಮತಿಯೂ ನಮ್ಮ ದೇವರಾದ ಯೆಹೋವನ ಚಿತ್ತವೂ ಇರುವದಾದರೆ ನಾವು ಎಲ್ಲಾ ಇಸ್ರಾಯೇಲ್‍ಪ್ರಾಂತಗಳಲ್ಲಿರುವ ನಮ್ಮ ಸಹೋದರರನ್ನೂ ಗೋಮಾಳಸಹಿತವಾದ ತಮ್ಮ ಪಟ್ಟಣಗಳಲ್ಲಿರುವ ಯಾಜಕ ಲೇವಿಯರನ್ನೂ ಶೀಘ್ರವಾಗಿ ಕರೇಕಳುಹಿಸೋಣ. 3 ಅವರು ನಮ್ಮ ಬಳಿಗೆ ಕೂಡಿಬಂದ ಮೇಲೆ ನಾವು ಸೌಲನ ಕಾಲದಲ್ಲಿ ಅಲಕ್ಷ್ಯಮಾಡಿದ ನಮ್ಮ ದೇವಮಂಜೂಷವನ್ನು ತೆಗೆದುಕೊಂಡು ಬರೋಣ ಅನ್ನಲು 4 ಅವರೆಲ್ಲರೂ ಆ ಮಾತಿಗೆ ಮೆಚ್ಚಿ ಅದರಂತೆ ಮಾಡಬೇಕೆಂದು ಹೇಳಿದರು. 5 ಆಗ ದಾವೀದನು ದೇವಮಂಜೂಷವನ್ನು ಕಿರ್ಯತ್ಯಾರೀವಿುನಿಂದ ತರುವದಕ್ಕೋಸ್ಕರ ಐಗುಪ್ತದ ಶೀಹೋರ್ ಹಳ್ಳದಿಂದ ಹಮಾತಿನ ದಾರಿಯವರೆಗೂ ವಾಸಿಸುತ್ತಿದ್ದ ಎಲ್ಲಾ ಇಸ್ರಾಯೇಲ್ಯರನ್ನೂ ಕೂಡಿಸಿ 6 ಅವರೆಲ್ಲರೊಡನೆ ಯೆಹೂದ ದೇಶದ ಬಾಳಾ ಎನಿಸಿಕೊಳ್ಳುತ್ತಿದ್ದ ಕಿರ್ಯತ್ಯಾರೀವಿುಗೆ ಹೋದನು; ಆ ಮಂಜೂಷವು ಕೆರೂಬಿಯರ ನಡುವೆ ಆಸೀನನಾಗಿರುವ ಯೆಹೋವದೇವರ ನಾಮದಿಂದ ಪ್ರಸಿದ್ಧವಾದದ್ದು. 7 ಅವರು ದೇವಮಂಜೂಷವನ್ನು ಅಬೀನಾದಾಬನ ಮನೆಯಿಂದ ಹೊರಗೆ ತಂದು ಒಂದು ಹೊಸ ಬಂಡಿಯ ಮೇಲೆ ಏರಿಸಿದರು. ಉಜ್ಜನೂ ಅಹಿಯೋವನೂ ಬಂಡಿಯನ್ನು ಹೊಡೆದರು. 8 ದಾವೀದನೂ ಎಲ್ಲಾ ಇಸ್ರಾಯೇಲ್ಯರೂ ಕಿನ್ನರಿ, ಸ್ವರಮಂಡಲ, ದಮ್ಮಡಿ, ತಾಳ, ತುತೂರಿ ಇವುಗಳ ಧ್ವನಿಯೊಡನೆ ಪೂರ್ಣಾಸಕ್ತಿಯಿಂದ ಗೀತಗಳನ್ನು ಹಾಡುತ್ತಾ ದೇವರ ಮುಂದೆ ನರ್ತನ ಮಾಡುತ್ತಾ ಹೋದರು. 9 ಅವರು ಕೀದೋನನ ಕಣಕ್ಕೆ ಬಂದಾಗ ಎತ್ತುಗಳು ಎಡವಿದ್ದರಿಂದ ಉಜ್ಜನು ಕೈಚಾಚಿ ದೇವಮಂಜೂಷವನ್ನು ಹಿಡಿದನು. 10 ಉಜ್ಜನು ಮಂಜೂಷದ ಮೇಲೆ ಕೈ ಹಾಕಿದ್ದರಿಂದ ಯೆಹೋವನು ಅವನ ಮೇಲೆ ಕೋಪಗೊಂಡು ಅವನನ್ನು ಹತಮಾಡಿದನು; ಅವನು ಅಲ್ಲೇ ದೇವರ ಮುಂದೆ ಸತ್ತನು. 11 ಯೆಹೋವನು ಉಜ್ಜನನ್ನು ಮುರಿದುಬಿಟ್ಟದ್ದರಿಂದ ದಾವೀದನು ಉರಿಗೊಂಡು ಆ ಸ್ಥಳಕ್ಕೆ ಪೆರೆಚ್ಉಜ್ಜ ಎಂಬ ಹೆಸರಿಟ್ಟನು. ಅದಕ್ಕೆ ಇಂದಿನವರೆಗೂ ಇದೇ ಹೆಸರಿರುತ್ತದೆ. 12 ಆ ದಿವಸ ದಾವೀದನು ದೇವರಿಗೆ ಭಯಪಟ್ಟು - ದೇವರ ಮಂಜೂಷವನ್ನು ನಾನಿರುವಲ್ಲಿಗೆ ತೆಗೆದುಕೊಂಡು ಹೋಗುವದು ಹೇಗೆ ಎಂದುಕೊಂಡು 13 ಅದನ್ನು ದಾವೀದನಗರಕ್ಕೆ ತಾರದೆ ಗತ್ ಊರಿನ ಓಬೇದೆದೋಮನ ಮನೆಗೆ ಕಳುಹಿಸಿದನು. 14 ದೇವರ ಮಂಜೂಷವು ಓಬೇದೆದೋಮನ ಮನೆಯ ಬಳಿಯಲ್ಲಿ ಸ್ವಂತ ಆಲಯದೊಳಗೆ ಮೂರು ತಿಂಗಳು ಇತ್ತು. ಆ ಕಾಲದಲ್ಲಿ ಯೆಹೋವನು ಓಬೇದೆದೋಮನ ಮನೆಯನ್ನೂ ಅವನಿಗಿದ್ದದ್ದೆಲ್ಲವನ್ನೂ ಆಶೀರ್ವದಿಸಿದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India