1 ಪೂರ್ವಕಾಲ ವೃತ್ತಾಂತ 12 - ಕನ್ನಡ ಸತ್ಯವೇದವು J.V. (BSI)ದಾವೀದನು ಸೌಲನಿಂದ ಓಡಿಹೋದ ಸಮಯದಲ್ಲಿ ಅವನನ್ನು ಕೂಡಿಕೊಂಡ ಯುದ್ಧಸ್ಥರು 1 ದಾವೀದನು ಕೀಷನ ಮಗನಾದ ಸೌಲನಿಗೆ ಹೆದರಿ ಚಿಕ್ಲಗಿನಲ್ಲಿ ಅಡಗಿಕೊಂಡಿದ್ದಾಗ 2 ಬಿಲ್ಲುಗಾರರೂ ಎಡಬಲ ಕೈಗಳಿಂದ ಕಲ್ಲುಗಳನ್ನೂ ಬಾಣಗಳನ್ನೂ ಎಸೆಯಬಲ್ಲವರೂ ಆಗಿದ್ದು ಯುದ್ಧದಲ್ಲಿ ಸಹಾಯಮಾಡುವದಕ್ಕಾಗಿ ಅವನ ಬಳಿಗೆ ಬಂದ ರಣವೀರರ ಪಟ್ಟಿ. 3 ಸೌಲನ ಕುಲಬಂಧುಗಳಾದ ಬೆನ್ಯಾಮೀನ್ಯರಲ್ಲಿ - ಮುಖ್ಯಸ್ಥನಾದ ಅಹೀಯೆಜೆರ್ ಮತ್ತು ಯೋವಾಷ ಎಂಬ ಹೆಸರುಗಳುಳ್ಳ ಗಿಬೆಯ ಊರಿನ ಹಷ್ಷೆಮಾಹನ ಮಕ್ಕಳು, ಅಜ್ಮಾವೆತನ ಮಕ್ಕಳಾದ ಯೆಜೀಯೇಲ್ ಪೆಲೆಟರು, ಅನತೋತ ಊರಿನವರಾದ ಯೇಹು ಬೆರಾಕಾರು, 4 ಮೂವತ್ತು ಮಂದಿ ಭಟರಲ್ಲಿ ಶೂರನೂ ಮುಖ್ಯಸ್ಥನೂ ಆದ ಗಿಬ್ಯೋನಿನ ಇಷ್ಮಾಯ, ಗೆದೇರಾ ಊರಿನವರಾದ ಯೆರೆಮೀಯ ಯಹಜೀಯೇಲ್ ಯೋಹಾನಾನ್ ಯೋಜಾಬಾದರು, 5 ಹರೀಫ್ಯರಾದ ಎಲ್ಲೂಜೈ ಯೆರೀಮೋತ್ ಬೆಯಲ್ಯ ಶೆಮರ್ಯ ಶೆಫಟ್ಯರು, 6 ಕೋರಹಿಯರಾದ ಎಲ್ಕಾನ ಇಷ್ಷೀಯ ಅಜರೇಲ್ 7 ಯೋವೆಜೆರ್ ಯಾಷೊಬ್ಬಾಮರು, ಗೆದೋರಿನ ಯೆರೋಹಾಮನ ಮಕ್ಕಳಾದ ಯೋವೇಲ ಜೆಬದ್ಯರು ಇವರೇ. 8 ರಣವೀರರೂ ಯುದ್ಧನಿಪುಣರೂ ಗುರಾಣಿಬರ್ಜಿಗಳಲ್ಲಿ ಪ್ರವೀಣರೂ ಸಿಂಹಮುಖರೂ ಬೆಟ್ಟದ ಜಿಂಕೆಯಂತೆ ಪಾದತ್ವರಿತರೂ ಆಗಿದ್ದು ದಾವೀದನು ಅರಣ್ಯ ದುರ್ಗದಲ್ಲಿದ್ದಾಗ ಅವನನ್ನು ಕೂಡಿಕೊಂಡ ಗಾದ್ಯರು - 9 ಮುಖ್ಯಸ್ಥನು ಏಜೆರ್, ಎರಡನೆಯವನು ಓಬದ್ಯ, 10 ಮೂರನೆಯವನು ಎಲೀಯಾಬ್, ನಾಲ್ಕನೆಯವನು ಮಷ್ಮನ್ನ, 11 ಐದನೆಯವನು ಯೆರೆಮೀಯ, ಆರನೆಯವನು ಅತ್ತೈ, 12 ಏಳನೆಯವನು ಎಲೀಯೇಲ್, ಎಂಟನೆಯವನು ಯೋಹಾನಾನ್, ಒಂಭತ್ತನೆಯವನು ಎಲ್ಜಾಬಾದ್, 13 ಹತ್ತನೆಯವನು ಯೆರೆಮೀಯ, ಹನ್ನೊಂದನೆಯವನು ಮಕ್ಬನ್ನೈ ಇವರೇ. 14 ಗಾದ್ಯರಾದ ಇವರು ಸೈನ್ಯಾಧಿಪತಿಗಳಾಗಿದ್ದರು; ಇವರಲ್ಲಿ ಕನಿಷ್ಠನಾದವನು ನೂರು ಮಂದಿಗೆ ಸಮನು; ಶ್ರೇಷ್ಠ ನಾದವನು ಸಾವಿರ ಮಂದಿಗೆ ಸಮಬಲನು. 15 ಯೊರ್ದನ್ ನದಿಯು ಪ್ರಥಮ ಮಾಸದಲ್ಲಿ ದಡತುಂಬಿ ಹರಿಯುತ್ತಿರುವಾಗ ಅದನ್ನು ದಾಟಿ ನದಿಯ ತಗ್ಗಿನ ಪೂರ್ವ ಪಶ್ಚಿಮ ಪ್ರದೇಶಗಳವರೆಲ್ಲರನ್ನೂ ಓಡಿಸಿಬಿಟ್ಟವರು ಇವರೇ. 16 [ಒಂದಾನೊಂದು ದಿವಸ] ಬೆನ್ಯಾಮೀನ್ ಯೂದ ಕುಲದವರಲ್ಲಿ ಕೆಲವರು ದಾವೀದನಿದ್ದ ದುರ್ಗದ ಬಳಿಗೆ ಬರಲು ದಾವೀದನು ಹೊರಗೆ ಹೋಗಿ ಅವರೆದುರಿಗೆ ನಿಂತು ಅವರಿಗೆ - 17 ನೀವು ಸ್ನೇಹಭಾವದಿಂದ ಸಹಾಯಮಾಡುವದಕ್ಕಾಗಿ ನನ್ನ ಬಳಿಗೆ ಬಂದಿರುವದಾದರೆ ನಿಮ್ಮೊಡನೆ ನನಗೆ ಐಕ್ಯಭಾವವಿರುವದು; ನಿರಪರಾಧಿಯಾದ ನನ್ನನ್ನು ನನ್ನ ವಿರೋಧಿಗಳಿಗೆ ಒಪ್ಪಿಸುವ ಕುಯುಕ್ತಿಯಿಂದ ಬಂದಿರುವದಾದರೆ ನಮ್ಮ ಪಿತೃಗಳ ದೇವರು ನಿಮ್ಮನ್ನು ನೋಡಿ ದಂಡಿಸಲಿ ಅಂದನು. 18 ಆಗ ಮೂವತ್ತು ಮಂದಿಯಲ್ಲಿ ಮುಖ್ಯಸ್ಥನಾದ ಅಮಾಸೈಯು ಆತ್ಮಾವೇಶವುಳ್ಳವನಾಗಿ - ದಾವೀದನೇ, ನಾವು ನಿನ್ನವರು; ಶುಭವಾಗಲಿ! ಇಷಯನ ಮಗನೇ, ನಾವು ನಿನ್ನ ಪಕ್ಷದವರು; ಶುಭವಾಗಲಿ! ನಿನಗೂ ನಿನ್ನ ಸಹಾಯಕರಿಗೂ ಶುಭವಾಗಲಿ! ನಿನ್ನ ದೇವರು ನಿನಗೆ ಜಯಪ್ರಧನಾಗಿದ್ದಾನೆ ಎಂದು ನುಡಿದನು. ಆಗ ದಾವೀದನು ಅವರನ್ನು ತನ್ನ ಜೊತೆಯಲ್ಲಿ ಸೇರಿಸಿಕೊಂಡು ಸೈನ್ಯಾಧಿಪತಿಗಳನ್ನಾಗಿ ನೇವಿುಸಿದನು. 19 ಸೌಲನಿಗೆ ವಿರುದ್ಧವಾಗಿ ಯುದ್ಧಕ್ಕೆ ಹೋಗುವ ಫಿಲಿಷ್ಟಿಯರ ಜೊತೆಯಲ್ಲಿ ದಾವೀದನೂ ಹೋಗುತ್ತಿರುವಾಗ ಕೆಲವು ಮಂದಿ ಮನಸ್ಸೆಯವರು ಬಂದು ಅವನನ್ನು ಕೂಡಿಕೊಂಡರು. ದಾವೀದನು ನಿಜವಾಗಿ ಫಿಲಿಷ್ಟಿಯರಿಗೆ ಸಹಾಯಕನಾಗಲಿಲ್ಲ; ಅವರ ಪ್ರಭುಗಳು - ಇವನು ನಮ್ಮ ತಲೆಗಳನ್ನು ಕಡಿದು ತಿರಿಗಿ ತನ್ನ ಯಜಮಾನನಾದ ಸೌಲನೊಂದಿಗೆ ಸೇರಿಕೊಂಡಾನು ಎಂಬದಾಗಿ ಆಲೋಚಿಸಿ ಅವನನ್ನು ಹಿಂದಕ್ಕೆ ಕಳುಹಿಸಿದರು. 20 ಅವನು ಹಿಂದಿರುಗಿ ಚಿಕ್ಲಗಿಗೆ ಹೋಗುವಾಗ ಮನಸ್ಸೆಕುಲದ ಸಹಸ್ರಾಧಿಪತಿಗಳಾದ ಅದ್ನ, ಯೋಜಾಬಾದ್, ಎದೀಗಯೇಲ್, ಮೀಕಾಯೇಲ್, ಯೋಜಾಬಾದ್, ಎಲೀಹೂ, ಚಿಲ್ಲೆತೈ ಎಂಬವರು ಬಂದು ಸೇರಿಕೊಂಡರು. 21 ರಣವೀರರೂ ಸೇನಾಧಿಪತಿಗಳೂ ಆದ ಇವರೆಲ್ಲರೂ ಸುಲಿಗೆಗುಂಪುಗಳಿಗೆ ವಿರೋಧವಾಗಿ ದಾವೀದನಿಗೆ ಸಹಾಯಮಾಡುವವರಾದರು. 22 ದಾವೀದನ ಸಹಾಯಕ್ಕೆ ಪ್ರತಿದಿನವೂ ಹೊಸ ಗುಂಪುಗಳು ಬರುತ್ತಿದ್ದವು; ಅವನ ಸೈನ್ಯವು ದೇವಸೈನ್ಯದಷ್ಟು ದೊಡ್ಡದಾಯಿತು. ದಾವೀದನ ಪಟ್ಟಾಭಿಷೇಕಕ್ಕೋಸ್ಕರ ಹೆಬ್ರೋನಿಗೆ ಬಂದ ಭಟರು 23 ಯೆಹೋವನ ಆಜ್ಞೆಯಂತೆ ಸೌಲನ ರಾಜ್ಯವನ್ನು ದಾವೀದನಿಗೆ ಒಪ್ಪಿಸುವದಕ್ಕೋಸ್ಕರ ಹೆಬ್ರೋನಿನಲ್ಲಿದ್ದ ಅವನ ಬಳಿಗೆ ಗುಂಪು ಗುಂಪುಗಳಾಗಿ ಬಂದ ಯುದ್ಧಸನ್ನದ್ಧರ ಲೆಕ್ಕ - 24 ಯೆಹೂದ್ಯರಿಂದ ಬರ್ಜಿಗುರಾಣಿಗಳನ್ನು ಹಿಡಿದ ಸೈನಿಕರು ಆರು ಸಾವಿರದ ಎಂಟು ನೂರು ಮಂದಿ; 25 ಸಿಮೆಯೋನ್ಯರಿಂದ ಏಳು ಸಾವಿರದ ನೂರು ಮಂದಿ ರಣವೀರರು; 26 ಲೇವಿಯರಿಂದ ನಾಲ್ಕು ಸಾವಿರದ ಆರುನೂರು ಮಂದಿಯಲ್ಲದೆ 27 ಆರೋನ್ಯರ ಮುಖ್ಯಸ್ಥನಾದ ಯೆಹೋಯಾದಾವನೂ ಅವನ ಮೂರು ಸಾವಿರದ ಏಳು ನೂರು ಮಂದಿ ಸೈನಿಕರೂ; 28 ಪರಾಕ್ರಮಶಾಲಿಯಾದ ಚಾದೋಕನೆಂಬ ಯೌವನಸ್ಥನೂ ಅವನ ಕುಟುಂಬದವರಾದ ಇಪ್ಪತ್ತೆರಡು ಮಂದಿ ಅಧಿಪತಿಗಳೂ; 29 ಸೌಲನ ಸಂಬಂಧಿಕರಾದ ಬೆನ್ಯಾಮೀನ್ಯರಲ್ಲಿ ಮೂರು ಸಾವಿರ ಮಂದಿ; ಆವರೆಗೆ ಬೆನ್ಯಾಮೀನ್ಯರಲ್ಲಿ ಹೆಚ್ಚಿನ ಭಾಗದವರು ಸೌಲನ ಮನೆಯವರೊಂದಿಗೆ ಹೊಂದಿಕೊಂಡಿದ್ದರು. 30 ಎಫ್ರಾಯೀವಿುನ ಆಯಾ ಗೋತ್ರಗಳಲ್ಲಿ ಪ್ರಸಿದ್ಧರಾದ ಇಪ್ಪತ್ತು ಸಾವಿರದ ಎಂಟು ನೂರು ಮಂದಿ ಮಹಾರಣವೀರರು; 31 ಮನಸ್ಸೆಯ ಅರ್ಧಕುಲದಿಂದ ದಾವೀದನ ಪಟ್ಟಾಭಿಷೇಕಕ್ಕೆ ಹೋಗಬೇಕೆಂದು ಹೆಸರುಹೆಸರಾಗಿ ನೇವಿುಸಲ್ಪಟ್ಟ ಹದಿನೆಂಟು ಸಾವಿರ ಮಂದಿ; 32 ಇಸ್ಸಾಕಾರ್ಯರಿಂದ ಇನ್ನೂರು ಮಂದಿ ಮುಖ್ಯಸ್ಥರು; ಇವರು ಸಮಯೋಚಿತ ಜ್ಞಾನವುಳ್ಳವರಾಗಿ ಇಸ್ರಾಯೇಲ್ಯರು ಮಾಡತಕ್ಕದ್ದನ್ನು ಅರಿತವರು; ಇವರ ಸಹೋದರರೆಲ್ಲರೂ ಇವರ ಆಜ್ಞೆಗೆ ಒಳಗಾಗಿದ್ದರು; 33 ಜೆಬುಲೂನ್ಯರಿಂದ ಯುದ್ಧಪ್ರವೀಣರೂ ಸರ್ವಾಯುಧಗಳನ್ನು ಧರಿಸಿ ವ್ಯೂಹಕಟ್ಟ ಬಲ್ಲವರೂ ದೃಢಚಿತ್ತರೂ ಆದ ಐವತ್ತು ಸಾವಿರ ಮಂದಿ; 34 ನಫ್ತಾಲಿಯರಿಂದ ಸಾವಿರ ಮಂದಿ ನಾಯಕರೂ ಗುರಾಣಿಬರ್ಜಿಗಳನ್ನು ಹಿಡಿದಿರುವ ಮೂವತ್ತೇಳು ಸಾವಿರ ಮಂದಿ ಸೈನಿಕರೂ; 35 ದಾನ್ಯರಿಂದ ಇಪ್ಪತ್ತೆಂಟು ಸಾವಿರದ ಆರು ನೂರು ಮಂದಿ ಯುದ್ಧನಿಪುಣರು; 36 ಆಶೇರ್ಯರಿಂದ ಕಾಳಗಕ್ಕೆ ಸಿದ್ಧರಾದ ನಾಲ್ವತ್ತು ಸಾವಿರ ಮಂದಿ ಯುದ್ಧನಿಪುಣರು; 37 ಯೊರ್ದನಿನ ಆಚೆಯಲ್ಲಿದ್ದ ರೂಬೇನ್ ಗಾದ್ ಅರ್ಧಮನಸ್ಸೆ ಕುಲಗಳಿಂದ ಸರ್ವಾಯುಧಧಾರಿಗಳಾದ ಒಂದು ಲಕ್ಷದ ಇಪ್ಪತ್ತು ಸಾವಿರ ಮಂದಿ. 38 ದಾವೀದನನ್ನು ಇಸ್ರಾಯೇಲ್ಯರೆಲ್ಲರ ಅರಸನನ್ನಾಗಿ ಮಾಡುವದಕ್ಕೋಸ್ಕರ ಯುದ್ಧನಿಪುಣರಾದ ಈ ಎಲ್ಲಾ ಸೈನಿಕರು ಪೂರ್ಣಮನಸ್ಸಿನಿಂದ ಹೆಬ್ರೋನಿಗೆ ಬಂದರು. ಉಳಿದ ಎಲ್ಲಾ ಇಸ್ರಾಯೇಲ್ಯರು ದಾವೀದನಿಗೆ ರಾಜ್ಯಾಭಿಷೇಕ ಮಾಡುವದರಲ್ಲಿ ಏಕಮನಸ್ಸುಳ್ಳವರಾಗಿದ್ದರು. 39 ಅವರು ಅಲ್ಲಿ ಮೂರು ದಿವಸ ದಾವೀದನ ಸಂಗಡ ಇದ್ದು ಅನ್ನಪಾನಗಳನ್ನು ತೆಗೆದುಕೊಂಡರು; ಅವರ ಸಹೋದರರು ಅವರಿಗೋಸ್ಕರ ಎಲ್ಲವನ್ನೂ ಸಿದ್ಧಪಡಿಸಿದರು. 40 ಇದಲ್ಲದೆ ಇಸ್ಸಾಕಾರ್ ಜೆಬುಲೂನ್ ನಫ್ತಾಲಿ ಮೊದಲುಗೊಂಡು ಎಲ್ಲಾ ಸಮೀಪ ಪ್ರಾಂತಗಳವರು ಎತ್ತು, ಕತ್ತೆ, ಹೇಸರಕತ್ತೆ, ಒಂಟೆ ಇವುಗಳ ಮೇಲೆ ಆಹಾರಪದಾರ್ಥಗಳನ್ನು ಹೇರಿಕೊಂಡು ಬಂದರು. ಅವರು ತಂದವುಗಳಾವವಂದರೆ - ತರತರದ ರೊಟ್ಟಿ, ಅಂಜೂರ ಹಣ್ಣಿನ ಉಂಡೆ, ಒಣಗಿದ ದ್ರಾಕ್ಷೇಗೊಂಚಲು, ದ್ರಾಕ್ಷಾರಸ, ಎಣ್ಣೆ, ಅನೇಕ ದನಕುರಿಗಳು ಇವೇ. ಇಸ್ರಾಯೇಲ್ಯರೊಳಗೆ ಮಹಾ ಸಂತೋಷವಿತ್ತಷ್ಟೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India