1 ಪೂರ್ವಕಾಲ ವೃತ್ತಾಂತ 11 - ಕನ್ನಡ ಸತ್ಯವೇದವು J.V. (BSI)ದಾವೀದನು ಹೆಬ್ರೋನಿನಲ್ಲಿ ರಾಜ್ಯಾಭಿಷೇಕ ಹೊಂದಿದ್ದೂ ಯೆರೂಸಲೇಮ್ ಪಟ್ಟಣವನ್ನು ಸ್ವಾಧೀನಮಾಡಿಕೊಂಡದ್ದೂ 1 ಅನಂತರ ಇಸ್ರಾಯೇಲ್ಯರೆಲ್ಲರೂ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು ಕೂಡಿ ಅವನಿಗೆ - 2 ನಾವು ನಿನ್ನ ರಕ್ತಸಂಬಂಧಿಗಳಾಗಿದ್ದೇವೆ; ಹಿಂದಿನ ದಿವಸಗಳಲ್ಲಿ ಅಂದರೆ ಸೌಲನ ಆಳಿಕೆಯಲ್ಲಿ ಇಸ್ರಾಯೇಲ್ಯರ ದಳಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವನು ನೀನೇ. ನಿನ್ನನ್ನು ಕುರಿತು ನಿನ್ನ ದೇವರಾದ ಯೆಹೋವನು - ನೀನು ನನ್ನ ಪ್ರಜೆಗಳಾದ ಇಸ್ರಾಯೇಲ್ಯರ ನಾಯಕನೂ ಪಾಲಕನೂ ಆಗಿರುವಿ ಎಂದು ಹೇಳಿದ್ದಾನಷ್ಟೆ ಅಂದರು. 3 ಆಗ ಅರಸನಾದ ದಾವೀದನು ತನ್ನ ಹತ್ತಿರ ಹೆಬ್ರೋನಿಗೆ ಬಂದಿದ್ದ ಇಸ್ರಾಯೇಲ್ಯರ ಹಿರಿಯರೆಲ್ಲರೊಡನೆ ಅಲ್ಲೇ ಯೆಹೋವನ ಸನ್ನಿಧಿಯಲ್ಲಿ ಒಡಂಬಡಿಕೆಮಾಡಿಕೊಂಡನು. ಅವರು ಸಮುವೇಲನಿಗೆ ಯೆಹೋವನಿಂದಾದ ಆಜ್ಞೆಗನುಸಾರವಾಗಿ ದಾವೀದನನ್ನು ಅಭಿಷೇಕಿಸಿ ಇಸ್ರಾಯೇಲ್ಯರ ಅರಸನನ್ನಾಗಿ ಮಾಡಿದರು. 4 ದಾವೀದನು ಇಸ್ರಾಯೇಲ್ಯರೆಲ್ಲರನ್ನೂ ಕರಕೊಂಡು ಯೆಬೂಸೆನಿಸಿಕೊಂಡಿದ್ದ ಯೆರೂಸಲೇವಿುಗೆ ವಿರೋಧವಾಗಿ ಹೊರಟನು. ಆ ಪ್ರಾಂತದ ಮೂಲನಿವಾಸಿಗಳು ಯೆಬೂಸಿಯರು. 5 ಅವರು ದಾವೀದನಿಗೆ - ನೀನು ಒಳಗೆ ಬರಲಾರಿ ಎಂದು ಹೇಳಿದರು. ಆದರೂ ಅವನು ದಾವೀದ ನಗರವೆನಿಸಿಕೊಳ್ಳುವ ಚೀಯೋನ್ ಕೋಟೆಯನ್ನು ಸ್ವಾಧೀನಮಾಡಿಕೊಂಡನು. 6 ಆ ದಿವಸ ದಾವೀದನು - ಯೆಬೂಸಿಯರನ್ನು ಯಾವನು ಮೊದಲು ಸೋಲಿಸುವನೋ ಅವನು ಪ್ರಮುಖನೂ ದಳಪತಿಯೂ ಆಗುವನು ಎಂದು ಹೇಳಲು ಚೆರೂಯಳ ಮಗನಾದ ಯೋವಾಬನು ಮೊದಲು ಹತ್ತಿದ್ದರಿಂದ ಅವನೇ ಪ್ರಮುಖನಾದನು. 7 ದಾವೀದನು ಆ ಕೋಟೆಯನ್ನು ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡದ್ದರಿಂದ ಅದಕ್ಕೆ ದಾವೀದನಗರವೆಂದು ಹೆಸರಾಯಿತು. 8 ಅವನು ವಿುಲ್ಲೋವಿನಿಂದ ಪ್ರಾರಂಭಿಸಿ ಸುತ್ತಲೂ ಪಟ್ಟಣವನ್ನು ಭದ್ರಪಡಿಸಿದನು. ಯೋವಾಬನು ಪಟ್ಟಣದ ಉಳಿದ ಭಾಗವನ್ನು ಜೀರ್ಣೋದ್ಧಾರಮಾಡಿದನು. 9 ಸೈನ್ಯಾಧೀಶ್ವರನಾದ ಯೆಹೋವನು ದಾವೀದನ ಸಂಗಡ ಇದ್ದದರಿಂದ ಅವನು ಅಭಿವೃದ್ಧಿಯಾಗುತ್ತಾ ಹೋದನು. ದಾವೀದನ ರಣವೀರರು 10 ರಾಜ್ಯಸಂಬಂಧವಾಗಿ ದಾವೀದನಿಗೆ ವಿಶೇಷ ಸಹಾಯಕರಾಗಿದ್ದು ಯೆಹೋವನ ಆಜ್ಞಾನುಸಾರವಾಗಿ ಇಸ್ರಾಯೇಲ್ಯರೆಲ್ಲರೊಡನೆ ಅವನನ್ನು ಅರಸನನ್ನಾಗಿ ಮಾಡಿದ ಮುಖ್ಯಸ್ಥರನ್ನು ಕುರಿತದ್ದು. 11 ದಾವೀದನ ರಣವೀರರ ಪಟ್ಟಿ - ಹಕ್ಮೋನಿಯನಾದ ಯಾಷೊಬ್ಬಾಮನು ಮೂವತ್ತು ಮಂದಿ ಶೂರರಲ್ಲಿ ಮುಖ್ಯಸ್ಥನು. ಇವನು ತನ್ನ ಬರ್ಜಿಯನ್ನು ಬೀಸುತ್ತಾ ಹೋಗಿ ಒಂದೇ ಸಾರಿ ಮುನ್ನೂರು ಮಂದಿಯನ್ನು ಕೊಂದನು. 12 ಎರಡನೆಯವನು ಅಹೋಹ್ಯನಾದ ದೋದೋ ಎಂಬವನ ಮಗನಾಗಿರುವ ಎಲ್ಲಾಜಾರನು; ಇವನೂ ಆ ಮೂರು ಮಂದಿ ಶೂರರಲ್ಲಿ ಒಬ್ಬನು. 13 ಫಿಲಿಷ್ಟಿಯರು ಪಸ್ದಮ್ಮೀವಿುನಲ್ಲಿ ಯುದ್ಧಕ್ಕೆ ಕೂಡಿಕೊಂಡಾಗ ಇವನು ದಾವೀದನ ಜೊತೆಯಲ್ಲಿದ್ದನು. ಅಲ್ಲಿ ಒಂದು ಜವೆಗೋದಿಯ ಹೊಲವಿತ್ತು; ಇಸ್ರಾಯೇಲ್ಯರು ಫಿಲಿಷ್ಟಿಯರ ಎದುರಿನಿಂದ ಓಡಿಹೋಗಲು 14 ಆ ವೀರರು ಹೊಲದ ಮಧ್ಯದಲ್ಲೇ ನಿಂತುಕೊಂಡು ಫಿಲಿಷ್ಟಿಯರನ್ನು ಕೊಂದು ಹೊಲವನ್ನು ಕಾಪಾಡಿದರು. ಹೀಗೆ ಯೆಹೋವನು ಅವರಿಗೆ ಮಹಾ ಜಯವನ್ನುಂಟುಮಾಡಿದನು. 15 ದಾವೀದನು ಅದುಲ್ಲಾಮ್‍ಗಿರಿಯ ಗವಿಯಲ್ಲಿದ್ದಾಗ ಅವನ ಮೂವತ್ತು ಮಂದಿ ಪ್ರಸಿದ್ಧ ಶೂರರಲ್ಲಿ ಮೂವರು ಅವನ ಬಳಿಗೆ ಬಂದರು. ಫಿಲಿಷ್ಟಿಯರು ದಂಡೆತ್ತಿ ಬಂದು ರೆಫಾಯಿಮ್ ತಗ್ಗಿನಲ್ಲಿ ಪಾಳೆಯ ಮಾಡಿಕೊಂಡಿದ್ದು 16 ಬೇತ್ಲೆಹೇವಿುನಲ್ಲಿ ಒಂದು ಕಾವಲುದಂಡನ್ನು ಇಟ್ಟಿದ್ದರು. 17 ಆಗ ದುರ್ಗದಲ್ಲಿದ್ದ ದಾವೀದನು ಲವಲವಿಕೆಯಿಂದ - ಬೇತ್ಲೆಹೇಮ್ ಊರಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ಯಾರಾದರೂ ನನಗೆ ತಂದುಕೊಡುವದಾದರೆ ಎಷ್ಟೋ ಒಳ್ಳೇದು ಎಂದು ಹೇಳಿದನು. 18 ಕೂಡಲೆ ಆ ಮೂರು ಮಂದಿ ವೀರರು ಫಿಲಿಷ್ಟಿಯರ ದಂಡಿನೊಳಗೆ ನುಗ್ಗಿ ಹೋಗಿ ಬೇತ್ಲೆಹೇವಿುನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ ದಾವೀದನಿಗೆ ತಂದುಕೊಟ್ಟರು. 19 ಆದರೆ ಅವನು ಅದನ್ನು ಕುಡಿಯಲೊಲ್ಲದೆ - ತಮ್ಮ ಜೀವವನ್ನು ಸಮರ್ಪಿಸಿದ ಈ ಪುರುಷರ ರಕ್ತವನ್ನು ನಾನು ಕುಡಿಯಲೋ! ನನ್ನ ದೇವರು ಈ ಕಾರ್ಯವನ್ನು ನನಗೆ ದೂರಮಾಡಲಿ. ಅವರು ತಮ್ಮ ಜೀವವನ್ನೇ ಸಮರ್ಪಿಸಿ ಇದನ್ನು ತಂದುಕೊಟ್ಟರು. ನಾನು ಇದನ್ನು ಕುಡಿಯುವದೇ ಇಲ್ಲ ಎಂದು ಹೇಳಿ ಅದನ್ನು ಯೆಹೋವನ ಮುಂದೆ ಹೊಯ್ದನು. ಆ ಮೂರು ಮಂದಿಯ ಪರಾಕ್ರಮವು ಇದೇ. 20 ಯೋವಾಬನ ತಮ್ಮನಾದ ಅಬ್ಷೈಯು [ಬೇರೆ] ಮೂರು ಮಂದಿಯಲ್ಲಿ ಮುಖ್ಯಸ್ಥನು. ಇವನು ತನ್ನ ಬರ್ಜಿಯನ್ನು ಬೀಸುತ್ತಾ ಹೋಗಿ ಮುನ್ನೂರು ಮಂದಿಯನ್ನು ಕೊಂದದರಿಂದ ಈ ಮೂವರಲ್ಲಿ ಕೀರ್ತಿಗೊಂಡನು. 21 ಉಳಿದ ಇಬ್ಬರಿಗಿಂತ ಇವನೇ ಘನವಾದವನಾದದರಿಂದ ಅವರ ನಾಯಕನಾದನು. ಆದರೂ ಇವನು ಮೊದಲಿನ ಮೂರು ಮಂದಿಗೆ ಸಮಾನನಾಗಿರಲಿಲ್ಲ. 22 ಅನೇಕ ಶೂರಕೃತ್ಯಗಳನ್ನು ನಡಿಸಿದ ಕಬ್ಜಯೇಲಿನವನಾದ ಪರಾಕ್ರಮಶಾಲಿಯ ಮೊಮ್ಮಗನೂ ಯೆಹೋಯಾದನ ಮಗನೂ ಆದ ಬೆನಾಯನು ಇನ್ನೊಬ್ಬನು. ಇವನು ಒಂದು ಸಾರಿ ಮೋವಾಬ್ಯನಾದ ಅರೀಯೇಲನ ಇಬ್ಬರು ಮಕ್ಕಳನ್ನು ಕೊಂದನು. ಇನ್ನೊಮ್ಮೆ ಹಿಮಕಾಲದಲ್ಲಿ ಒಂದು ಸಿಂಹವು ಗುಂಡಿಯಲ್ಲಿ ಬಿದ್ದಿರಲು ಇವನು ಆ ಗುಂಡಿಗೆ ಇಳಿದು ಹೋಗಿ ಅದನ್ನು ಕೊಂದನು. 23 ಮತ್ತೊಮ್ಮೆ ಐದು ಮೊಳ ಎತ್ತರವಾದ ಒಬ್ಬ ಐಗುಪ್ತ್ಯನನ್ನು ಕೊಂದನು. ಆ ಐಗುಪ್ತ್ಯನ ಕೈಯಲ್ಲಿ ನೇಯ್ಗೆಗಾರರ ಕುಂಟೆಯಂತಿರುವ ಒಂದು ಬರ್ಜಿಯಿತ್ತು. ಇವನು ಕೈಯಲ್ಲಿ ಒಂದು ಕೋಲನ್ನು ಮಾತ್ರ ಹಿಡಿದುಕೊಂಡು ಹೋಗಿ ಅವನ ಕೈಯಲ್ಲಿದ್ದ ಬರ್ಜಿಯನ್ನು ಕಿತ್ತುಕೊಂಡು ಅದರಿಂದ ಅವನನ್ನು ಕೊಂದನು. 24 ಈ ಪರಾಕ್ರಮಕೃತ್ಯದಿಂದ ಯೆಹೋಯಾದನ ಮಗನಾದ ಬೆನಾಯನು ಈ ಮೂವರಲ್ಲಿ ಹೆಸರುಗೊಂಡನು. 25 ಮೂವತ್ತು ಮಂದಿಯಲ್ಲಿ ಇವನು ವಿಶೇಷಕೀರ್ತಿಯನ್ನು ಹೊಂದಿದರೂ ಮೊದಲಿನ ಮೂವರಿಗೆ ಸಮಾನನಾಗಿರಲಿಲ್ಲ. ದಾವೀದನು ಇವನನ್ನು ತನ್ನ ಕಾವಲುದಂಡಿನ ಮುಖ್ಯಸ್ಥನನ್ನಾಗಿ ಮಾಡಿದನು. 26 ರಣವಿರರ ಇನ್ನೊಂದು ಪಟ್ಟಿ - ಯೋವಾಬನ ತಮ್ಮನಾದ ಅಸಾಹೇಲನು, ಬೇತ್ಲೆಹೇವಿುನ ದೋದೋವಿನ ಮಗನಾದ ಎಲ್ಖಾನಾನ್, 27 ಹರೋರಿನವನಾದ ಶಮ್ಮೋತ್, ಪೆಲೋನ್ಯನಾದ ಹೆಲೆಚ್, 28 ತೆಕೋವದ ಇಕ್ಕೇಷನ ಮಗನಾದ ಈರ, ಅನತೋತಿನವನಾದ ಅಬೀಯೆಜೆರ್, 29 ಹುಷ ಊರಿನವನಾದ ಸಿಬ್ಕೈ, ಅಹೋಹಿನವನಾದ 30 ಈಲೈ, ನೆಟೋಫದವನಾದ ಮಹರೈ, 31 ನೆಟೋಫದವನಾದ ಬಾಣನ ಮಗ ಹೇಲೆದ್, ಬೆನ್ಯಾಮೀನ್ ದೇಶದ ಗಿಬೆಯ ಊರಿನ ರೀಬೈ ಎಂಬವನ ಮಗನಾದ ಈತೈ, 32 ಪಿರಾತೋನ್ಯನಾದ ಬೆನಾಯ, ನಹಲೇಗಾಷಿನವನಾದ ಹೂರೈ, ಅರಾಬಾ ತಗ್ಗಿನವನಾದ ಅಬೀಯೇಲ್, 33 ಬಹರೂಮ್ಯನಾದ ಅಜ್ಮಾವೆತ್, 34 ಶಾಲ್ಬೋನ್ಯನಾದ ಎಲೆಯಖ್ಬ, ಗೀಜೋನ್ಯನಾದ ಹಾಷೇಮನ ಮಕ್ಕಳು, ಹರಾರ್ಯನಾದ ಶಾಗೇಯನ ಮಗ ಯೋನಾತಾನನು, 35 ಹರಾರ್ಯನಾದ ಶಾಕಾರನ ಮಗ ಅಹೀಯಾಮ್, 36 ಊರನ ಮಗನಾದ ಎಲೀಫಲ್, ಮೆಕೆರಾತ್ಯನಾದ ಹೇಫೆರ್, ಪೆಲೋನ್ಯನಾದ ಅಹೀಯ, 37 ಕರ್ಮೆಲ್ಯನಾದ ಹೆಚ್ರೋ, ಎಜ್ಬೈಯ ಮಗನಾದ ನಾರೈ, 38 ನಾತಾನನ ತಮ್ಮನಾದ ಯೋವೇಲ್, ಹಗ್ರೀಯನ ಮಗನಾದ ವಿುಬ್ಹಾರ್, 39 ಅಮ್ಮೋನಿಯನಾದ ಚೆಲೆಕ್, ಬೇರೋತ್ಯನೂ ಚೆರೂಯಳ ಮಗನಾದ ಯೋವಾಬನ ಆಯುಧವಾಹಕನೂ ಆಗಿದ್ದ ನಹರೈ, 40 ಇತ್ರೀಯರಾದ ಈರ ಗಾರೇಬರು, 41 ಹಿತ್ತೀಯನಾದ ಊರೀಯ, ಅಹ್ಲೈಯ ಮಗನಾದ ಜಾಬಾದ್, ರೂಬೇನ್ಯನೂ 42 ತನ್ನ ಜೊತೆಯಲ್ಲಿ ಬಂದ ಮೂವತ್ತು ಮಂದಿ ರೂಬೇನ್ಯರ ಮುಖ್ಯಸ್ಥನೂ ಶೀಜನ ಮಗನೂ ಆದ ಅದೀನ, 43 ಮಾಕನ ಮಗನಾದ ಹಾನಾನ್, ಮೆತೆನ ಊರಿನವನಾದ ಯೋಷಾಫಾಟ್, 44 ಅಷ್ಟೆರಾತ್ಯನಾದ ಉಜ್ಜೀಯ, ಅರೋಯೇರಿನ ಹೋತಾಮನ ಮಕ್ಕಳಾದ ಶಾಮಾಯೆಗೀಯೇಲರು, 45 ಶಿಮ್ರಿಯ ಮಗನಾದ ಎದೀಗಯೇಲ್, ಎದೀಗಯೇಲನ ತಮ್ಮನೂ ತೀಚೀಯನೂ ಆದ ಯೋಹ, 46 ಮಹವೀಯನಾದ ಎಲೀಯೇಲ್, ಎಲ್ನಾಮನ ಮಕ್ಕಳಾದ ಯೆರೀಬೈ ಯೋಷವ್ಯರು, ಮೋವಾಬ್ಯನಾದ ಇತ್ಮ, 47 ಎಲೀಯೇಲ್ ಓಬೇದರು, ಮೆಚೋಬಾಯದವನಾದ ಯಾಸೀಯೇಲನು ಇವರೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India