1 ಥೆಸಲೋನಿಕದವರಿಗೆ 4 - ಕನ್ನಡ ಸತ್ಯವೇದವು J.V. (BSI)ಕ್ರೈಸ್ತರಿಗೆ ಇರತಕ್ಕ ನಡಾವಳಿಯನ್ನು ಕುರಿತದ್ದು 1 ಕಡೇ ಮಾತೇನಂದರೆ, ಸಹೋದರರೇ, ನಾವು ಕರ್ತನಾದ ಯೇಸುವಿನ ಅಧಿಕಾರದಿಂದ ನಿಮಗೆ ಕೊಟ್ಟ ಆಜ್ಞೆಗಳನ್ನು ತಿಳಿದಿದ್ದೀರಷ್ಟೆ. 2 ನೀವು ಹೇಗೆ ನಡೆದು ದೇವರನ್ನು ಮೆಚ್ಚಿಸಬೇಕೋ ಅದನ್ನು ನಮ್ಮಿಂದ ಕಲಿತುಕೊಂಡು ಅದರಂತೆ ನಡೆಯುತ್ತಲೇ ಇದ್ದೀರಿ. ನೀವು ಹಾಗೆಯೇ ಇನ್ನೂ ಹೆಚ್ಚಾಗಿ ನಡೆಯಬೇಕೆಂದು ನಿಮ್ಮನ್ನು ಬೇಡಿಕೊಂಡು ಯೇಸು ಕರ್ತನಲ್ಲಿ ಪ್ರಬೋಧಿಸುತ್ತೇವೆ. 3 ದೇವರ ಚಿತ್ತವೇನಂದರೆ ನೀವು ಶುದ್ಧರಾಗಿ ಇರಬೇಕೆಂಬದೇ. ಆದದರಿಂದ ಹಾದರಕ್ಕೆ ದೂರವಾಗಿರಬೇಕು. 4-5 ದೇವರನ್ನರಿಯದ ಅನ್ಯಜನಗಳಂತೆ ಕಾಮಾಭಿಲಾಷೆಗೆ ಒಳಪಡದೆ ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರವಾದ ಮನಸ್ಸಿನಿಂದಲೂ ಘನತೆಯಿಂದಲೂ 6 ಧರ್ಮಪತ್ನಿಯನ್ನು ಸಂಪಾದಿಸಿಕೊಳ್ಳಲು ತಿಳಿಯಬೇಕು. ಈ ವಿಷಯದಲ್ಲಿ ಯಾರೂ ತನ್ನ ಸಹೋದರನನ್ನು ವಂಚಿಸಿ ಕೇಡುಮಾಡಬಾರದು. ನಾವು ಮುಂಚೆ ತಿಳಿಸಿ ನಿಮಗೆ ಖಂಡಿತವಾಗಿ ಹೇಳಿದ ಪ್ರಕಾರ ಇವೆಲ್ಲವುಗಳ ವಿಷಯದಲ್ಲಿ ಕರ್ತನು ಮುಯ್ಯಿಗೆ ಮುಯ್ಯಿ ತೀರಿಸುವವನಾಗಿದ್ದಾನೆ. 7 ದೇವರು ನಮ್ಮನ್ನು ಬಂಡತನಕ್ಕೆ ಕರೆಯದೆ ಶುದ್ಧರಾಗಿರುವದಕ್ಕೆ ಕರೆದನು. 8 ಹೀಗಿರಲು ಈ ಮಾತನ್ನು ತಾತ್ಸಾರ ಮಾಡುವವನು ಮನುಷ್ಯನನ್ನು ತಿರಸ್ಕರಿಸುವದು ಮಾತ್ರವಲ್ಲದೆ ಪವಿತ್ರಾತ್ಮವರವನ್ನು ನಿಮಗೆ ದಯಪಾಲಿಸುವ ದೇವರನ್ನೂ ತಿರಸ್ಕರಿಸುತ್ತಾನೆ. 9 ಸಹೋದರಸ್ನೇಹ ವಿಷಯದಲ್ಲಿ ನಿಮಗೆ ಬರೆಯುವದು ಅವಶ್ಯವಿಲ್ಲ; ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಉಪದೇಶವನ್ನು ನೀವೇ ದೇವರಿಂದ ಹೊಂದಿದವರಾಗಿದ್ದು ಸಮಸ್ತ ಮಕೆದೋನ್ಯದಲ್ಲಿರುವ ಸಹೋದರರನ್ನೆಲ್ಲಾ ಪ್ರೀತಿಸುವವರಾಗಿಯೇ ಇದ್ದೀರಿ. 10 ಆದರೂ ಸಹೋದರರೇ, ನೀವು ಪ್ರೀತಿಯಲ್ಲಿ ಇನ್ನೂ ಹೆಚ್ಚುತ್ತಾ ಬರಬೇಕೆಂದು ನಿಮ್ಮನ್ನು ಪ್ರಬೋಧಿಸುತ್ತೇವೆ. 11 ಇದಲ್ಲದೆ ನಾನು ನಿಮಗೆ ಆಜ್ಞೆಕೊಟ್ಟ ಪ್ರಕಾರ ನೀವು ಮತ್ತೊಬ್ಬರ ಕಾರ್ಯದಲ್ಲಿ ತಲೆಹಾಕದೆ ಸುಮ್ಮಗಿದ್ದು ಸ್ವಂತ ಕಾರ್ಯವನ್ನೇ ನಡಿಸಿಕೊಂಡು ಕೈಯಾರೆ ಕೆಲಸಮಾಡುವದೇ ಮಾನವೆಂದೆಣಿಸಿರಿ. 12 ಹೀಗಿದ್ದರೆ ನೀವು ಹೊರಗಿನವರ ಎದುರಿನಲ್ಲಿ ಸಜ್ಜನರಾಗಿ ನಡೆದುಕೊಳ್ಳುವಿರಿ ಮತ್ತು ನಿಮಗೆ ಯಾವದಕ್ಕೂ ಕೊರತೆಯಿರುವದಿಲ್ಲ. ಯೇಸು ಕರ್ತನು ಪ್ರತ್ಯಕ್ಷನಾಗುವದಕ್ಕೆ ಮುಂಚಿತವಾಗಿ ಸಾಯುವ ಭಕ್ತರನ್ನು ಕುರಿತದ್ದು 13 ಸಹೋದರರೇ, ನಿದ್ರೆಹೋಗುವವರ ಗತಿ ಏನೆಂದು ನೀವು ತಿಳಿಯದೆ ಇದ್ದು ನಿರೀಕ್ಷೆಯಿಲ್ಲದವರಾದ ಇತರರಂತೆ ದುಃಖಿಸುವದು ನಮ್ಮ ಮನಸ್ಸಿಗೆ ಒಪ್ಪುವದಿಲ್ಲ. 14 ಯೇಸು ಸತ್ತು ಜೀವಿತನಾಗಿ ಎದ್ದನೆಂದು ನಾವು ನಂಬಿದ ಮೇಲೆ ಅದರಂತೆ ಯೇಸುವಿನಲ್ಲಿದ್ದುಕೊಂಡು ನಿದ್ರೆಹೋಗುವವರನ್ನು ಸಹ ದೇವರು ಆತನೊಡನೆ ಕರೆದುಕೊಂಡು ಬರುವನೆಂದು ನಂಬಬೇಕಲ್ಲವೇ. 15 ನಾವು ಕರ್ತನ ಮಾತಿನ ಆಧಾರದಿಂದ ನಿಮಗೆ ಹೇಳುವದೇನಂದರೆ ಕರ್ತನು ಪ್ರತ್ಯಕ್ಷನಾಗುವವರೆಗೂ ಜೀವದಿಂದುಳಿದಿರುವ ನಾವು ನಿದ್ರೆಹೋದವರಿಗಿಂತ ಮುಂದಾಗುವದೇ ಇಲ್ಲ. ಕರ್ತನು ತಾನೇ ಆಜ್ಞಾಘೋಷದೊಡನೆಯೂ 16 ಪ್ರಧಾನದೂತನ ಶಬ್ದದೊಡನೆಯೂ ದೇವರ ತುತೂರಿಧ್ವನಿಯೊಡನೆಯೂ ಆಕಾಶದಿಂದ ಇಳಿದು ಬರುವನು; ಆಗ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದು ಬರುವರು. 17 ಆಮೇಲೆ ಜೀವದಿಂದುಳಿದಿರುವ ನಾವು ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಳುವದಕ್ಕಾಗಿ ಅವರ ಸಂಗಡಲೇ ಮೇಘವಾಹನರಾಗಿ ಫಕ್ಕನೆ ಒಯ್ಯಲ್ಪಡುವೆವು; ಹೀಗಾಗಿ ನಾವು ಸದಾಕಾಲವೂ ಕರ್ತನ ಜೊತೆಯಲ್ಲಿರುವೆವು. 18 ಆದಕಾರಣ ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿರಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India