Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಥೆಸಲೋನಿಕದವರಿಗೆ 3 - ಕನ್ನಡ ಸತ್ಯವೇದವು J.V. (BSI)

1 ಆದದರಿಂದ ಇನ್ನು ತಡೆಯಲಾರದೆ ನಾವು ಅಥೇನೆಯಲ್ಲಿ ಒಬ್ಬೊಂಟಿಗರಾಗಿಯೇ ಇರುವದು ಒಳ್ಳೇದೆಂದು ಯೋಚಿಸಿ

2 ನಿಮ್ಮ ಮೇಲೆ ಬಂದಿರುವ ಸಂಕಟಗಳಲ್ಲಿ ಒಬ್ಬರೂ ಚಂಚಲರಾಗದಂತೆ ನಿಮ್ಮನ್ನು ದೃಢಪಡಿಸುವದಕ್ಕೂ ನಿಮ್ಮ ನಂಬಿಕೆಯ ವೃದ್ಧಿಗಾಗಿ ಪ್ರಬೋಧಿಸುವದಕ್ಕೂ ನಮ್ಮ ಸಹೋದರನೂ ಕ್ರಿಸ್ತನ ಸುವಾರ್ತೆಯ ಉದ್ಯೋಗದಲ್ಲಿ ದೇವರ ಸೇವಕನೂ ಆಗಿರುವ ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿದೆವು.

3 ಸಂಕಟಗಳನ್ನು ಅನುಭವಿಸುವದಕ್ಕಾಗಿ ನಾವು ನೇವಿುಸಲ್ಪಟ್ಟವರೆಂದು ನೀವೇ ಬಲ್ಲಿರಷ್ಟೆ.

4 ನಾವು ನಿಮ್ಮ ಬಳಿಯಲ್ಲಿದ್ದಾಗ ಸಂಕಟವನ್ನು ಅನುಭವಿಸಲೇಬೇಕೆಂದು ಮುಂದಾಗಿ ಹೇಳಿದೆವಲ್ಲಾ; ಅದರಂತೆ ಆಯಿತು, ನಿಮ್ಮ ಅನುಭವಕ್ಕೂ ಬಂತು.

5 ಆದದರಿಂದ ನಾನು ಇನ್ನು ತಡೆಯಲಾರದೆ ಒಂದು ವೇಳೆ ಶೋಧಕನು ನಿಮ್ಮನ್ನು ಶೋಧಿಸಿದ್ದರಿಂದ ನಮ್ಮ ಪ್ರಯಾಸವು ವ್ಯರ್ಥವಾಯಿತೋ ಏನೋ ಎಂದು ನಿಮ್ಮ ನಂಬಿಕೆಯ ವಿಷಯದಲ್ಲಿ ತಿಳಿದುಕೊಳ್ಳುವದಕ್ಕೆ ಅವನನ್ನು ಕಳುಹಿಸಿದೆನು.

6 ಆದರೆ ತಿಮೊಥೆಯನು ಈಗಲೇ ನಮ್ಮ ಬಳಿಗೆ ಬಂದು ನಿಮ್ಮ ವಿಶ್ವಾಸ ಪ್ರೀತಿಗಳ ವಿಷಯವಾಗಿ ಶುಭವರ್ತಮಾನವನ್ನು ಹೇಳಿ ನೀವು ನಮ್ಮನ್ನು ಯಾವಾಗಲೂ ಚೆನ್ನಾಗಿ ಜ್ಞಾಪಕಮಾಡಿಕೊಂಡು ನಾವು ನಿಮ್ಮನ್ನು ಹೇಗೋ ಹಾಗೆಯೇ ನೀವೂ ನಮ್ಮನ್ನು ನೋಡುವದಕ್ಕೆ ಅಪೇಕ್ಷಿಸುತ್ತೀರೆಂಬದನ್ನು ತಿಳಿಸಿದ್ದಾನೆ.

7 ಸಹೋದರರೇ, ಇದನ್ನು ಕೇಳಿ ನಮ್ಮ ಎಲ್ಲಾ ಕೊರತೆಯಲ್ಲಿಯೂ ಸಂಕಟದಲ್ಲಿಯೂ ನಿಮ್ಮ ನಂಬಿಕೆಯ ಮೂಲಕ ನಮಗೆ ಆದರಣೆಯಾಯಿತು.

8 ನೀವು ಕರ್ತನಲ್ಲಿ ದೃಢವಾಗಿ ನಿಂತಿದ್ದರೆ ನಮಗೆ ಜೀವಕಳೆ.

9 ನಿಮ್ಮ ನಿವಿುತ್ತ ನಮ್ಮ ದೇವರ ಮುಂದೆ ನಮಗಿರುವ ಎಲ್ಲಾ ಸಂತೋಷಕ್ಕಾಗಿ ದೇವರಿಗೆ ತಕ್ಕಷ್ಟು ಸ್ತೋತ್ರಮಾಡುವದು ನಮ್ಮಿಂದ ಹೇಗಾದೀತು?

10 ನಿಮ್ಮ ಮುಖವನ್ನು ನೋಡುವದಕ್ಕೂ ನಿಮ್ಮ ನಂಬಿಕೆಯ ಕೊರತೆಗಳನ್ನು ನೀಗುವದಕ್ಕೂ ನಮಗೆ ಅನುಕೂಲವಾಗಬೇಕೆಂದು ನಾವು ಹಗಲಿರುಳು ದೇವರನ್ನು ಅತ್ಯಂತವಾಗಿ ಬೇಡುವವರಾಗಿದ್ದೇವೆ.

11 ನಮ್ಮ ತಂದೆಯಾದ ದೇವರೂ ನಮ್ಮ ಕರ್ತನಾದ ಯೇಸುವೂ ನಮಗೆ ನಿಮ್ಮ ಬಳಿಗೆ ಬರುವದಕ್ಕೆ ಮಾರ್ಗವನ್ನು ಸರಾಗಮಾಡಲಿ.

12 ನಿಮ್ಮಲ್ಲಿ ನಮ್ಮ ಪ್ರೀತಿಯು ಹೇಗೋ ಹಾಗೆಯೇ ನಿಮ್ಮ ಪ್ರೀತಿಯೂ ಒಬ್ಬರೊಬ್ಬರ ಮೇಲೆಯೂ ಎಲ್ಲಾ ಮನುಷ್ಯರ ಮೇಲೆಯೂ ಅಭಿವೃದ್ಧಿಹೊಂದಿ ಅತ್ಯಧಿಕವಾಗುವಂತೆ ಕರ್ತನು ಅನುಗ್ರಹಿಸಲಿ.

13 ನಮ್ಮ ಕರ್ತನಾದ ಯೇಸು ನಿಮ್ಮ ಹೃದಯಗಳನ್ನು ದೃಢಪಡಿಸಿ ತನ್ನ ಎಲ್ಲಾ ಪರಿಶುದ್ಧ ಪರಿವಾರ ಸಮೇತ ಪ್ರತ್ಯಕ್ಷನಾದಾಗ ತಂದೆಯಾದ ದೇವರ ಸಮಕ್ಷಮದಲ್ಲಿ ನೀವು ಪರಿಶುದ್ಧರೂ ನಿರ್ದೋಷಿಗಳೂ ಆಗಿರುವಂತೆ ಮಾಡಲಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು