Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಥೆಸಲೋನಿಕದವರಿಗೆ 2 - ಕನ್ನಡ ಸತ್ಯವೇದವು J.V. (BSI)


ಪೌಲನು ಥೆಸಲೋನಿಕದವರಲ್ಲಿ ನಡಕೊಂಡ ರೀತಿಯ ವಿವರಣೆ

1 ಸಹೋದರರೇ, ನಾವು ಸುಮ್ಮಸುಮ್ಮಗೆ ನಿಮ್ಮಲ್ಲಿಗೆ ಬರಲಿಲ್ಲವೆಂಬದನ್ನೂ ನಿಮಗೆ ತಿಳಿದಿರುವ ಪ್ರಕಾರ

2 ನಮಗೆ ಫಿಲಿಪ್ಪಿ ಪಟ್ಟಣದಲ್ಲಿ ಹಿಂಸೆಯೂ ಅವಮಾನವೂ ಮೊದಲು ಸಂಭವಿಸಿದರೂ ನಾವು ನಮ್ಮ ದೇವರ ಮೂಲಕ ಧೈರ್ಯಗೊಂಡು ಬಹು ವಿರೋಧವನ್ನು ಅನುಭವಿಸುವವರಾಗಿ ನಿಮಗೆ ದೇವರ ಸುವಾರ್ತೆಯನ್ನು ತಿಳಿಸಿದೆವೆಂಬದನ್ನೂ ನೀವೇ ಬಲ್ಲಿರಿ.

3 ಯಾಕಂದರೆ ನಮ್ಮ ಬೋಧನೆಯು ಅಬದ್ಧವಲ್ಲ, ಅಶುದ್ಧವಲ್ಲ, ಮೋಸವಲ್ಲ; ದೇವರು ನಮ್ಮನ್ನು ಯೋಗ್ಯರೆಂದೆಣಿಸಿ

4 ಸುವಾರ್ತೆಯನ್ನು ನಮ್ಮ ವಶಕ್ಕೆ ಒಪ್ಪಿಸಿದನಲ್ಲಾ ಎಂದು ಯೋಚಿಸುವವರಾಗಿ ಮನುಷ್ಯರನ್ನು ಮೆಚ್ಚಿಸಬೇಕೆನ್ನದೆ ಹೃದಯವನ್ನು ಪರಿಶೋಧಿಸುವ ದೇವರನ್ನೇ ಮೆಚ್ಚಿಸಬೇಕೆಂದು ಮಾತಾಡುತ್ತೇವೆ.

5 ನಿಮಗೆ ತಿಳಿದಿರುವ ಪ್ರಕಾರ ನಾವು ಎಂದಿಗೂ ಮುಖಸ್ತುತಿಯನ್ನು ಮಾಡುವವರಾಗಿ ಕಾಣಬಂದಿಲ್ಲ, ಮತ್ತು ದ್ರವ್ಯಾಶೆಯನ್ನು ಮರೆಮಾಡುವದಕ್ಕಾಗಿ ವೇಷವನ್ನು ಹಾಕಿಕೊಂಡವರಾಗಿಲ್ಲ; ಇದಕ್ಕೆ ದೇವರೇ ಸಾಕ್ಷಿ.

6 ಇದಲ್ಲದೆ ನಾವು ಕ್ರಿಸ್ತನ ಅಪೊಸ್ತಲರಾಗಿರುವದರಿಂದ ನಮಗೆ ಗೌರವವನ್ನು ಕೊಡಬೇಕೆಂದು ಹೇಳಬಹುದಾಗಿದ್ದರೂ ಮನುಷ್ಯರಿಂದ ಬರುವ ಮಾನವನ್ನು ನಿಮ್ಮಿಂದಾಗಲಿ ಇತರರಿಂದಾಗಲಿ ಹೊಂದಲಪೇಕ್ಷಿಸುವವರಾಗಿಲ್ಲ.

7 ತಾಯಿಯು ತನ್ನ ಮಕ್ಕಳನ್ನು ಪೋಷಿಸುತ್ತಾಳೋ ಎಂಬಂತೆ ನಾವು ನಿಮ್ಮ ಮಧ್ಯದಲ್ಲಿ ವಾತ್ಸಲ್ಯದಿಂದ ನಡೆದುಕೊಂಡಿದ್ದೆವು.

8 ನೀವು ನಮಗೆ ಅತಿ ಪ್ರಿಯರಾದ ಕಾರಣ ನಾವು ನಿಮ್ಮಲ್ಲಿ ಮಮತೆಯುಳ್ಳವರಾಗಿ ದೇವರ ಸುವಾರ್ತೆಯನ್ನು ಹೇಳುವದಕ್ಕೆ ಮಾತ್ರವಲ್ಲದೆ ನಿಮಗೋಸ್ಕರ ಪ್ರಾಣವನ್ನೇ ಕೊಡುವದಕ್ಕೆ ಸಂತೋಷಿಸುವವರಾದೆವು.

9 ಸಹೋದರರೇ, ನಾವು ನಿಮ್ಮಲ್ಲಿ ಯಾರ ಮೇಲೆಯೂ ಭಾರಹಾಕಬಾರದೆಂದು ಹಗಲಿರುಳು ದುಡಿದು ಜೀವನ ಮಾಡಿಕೊಳ್ಳುತ್ತಾ ದೇವರ ಸುವಾರ್ತೆಯನ್ನು ನಿಮಗೆ ಸಾರಿದೆವು; ಆ ನಮ್ಮ ಕಷ್ಟವೂ ಪ್ರಯಾಸವೂ ನಿಮ್ಮ ನೆನಪಿನಲ್ಲಿರುವದಷ್ಟೆ.

10 ನಂಬುವವರಾದ ನಿಮ್ಮ ವಿಷಯದಲ್ಲಿ ನಾವು ಎಷ್ಟೋ ಶುದ್ಧರಾಗಿಯೂ ನೀತಿವಂತರಾಗಿಯೂ ನಿರ್ದೋಷಿಗಳಾಗಿಯೂ ನಡೆದುಕೊಂಡೆವೆಂಬದಕ್ಕೆ ನೀವು ಸಾಕ್ಷಿಗಳು, ದೇವರೂ ಸಾಕ್ಷಿ.

11 ತಂದೆಯು ತನ್ನ ಮಕ್ಕಳಿಗೆ ಹೇಗೋ ಹಾಗೆಯೇ ನಾವು ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಬುದ್ಧಿಹೇಳುತ್ತಾ ಧೈರ್ಯಪಡಿಸುತ್ತಾ

12 ತನ್ನ ರಾಜ್ಯಪ್ರಭಾವಗಳಲ್ಲಿ ಪಾಲುಗಾರರಾಗುವದಕ್ಕೆ ಕರೆಯುವ ದೇವರಿಗೆ ಯೋಗ್ಯರಾಗಿ ನೀವು ನಡೆಯಬೇಕೆಂದು ಖಂಡಿತವಾಗಿ ಹೇಳುತ್ತಾ ಇದ್ದೆವೆಂಬದು ನಿಮಗೇ ತಿಳಿದದೆ.


ಕ್ರೈಸ್ತಸಭೆಯವರಿಗೆ ಉಂಟಾದ ಹಿಂಸೆಯನ್ನೂ ಯೆಹೂದ್ಯರ ವಿರೋಧವನ್ನೂ ಕುರಿತದ್ದು

13 ಹೀಗಿರಲಾಗಿ ನೀವು ದೇವರ ವಾಕ್ಯವನ್ನು ನವ್ಮಿುಂದ ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದ್ದಕ್ಕಾಗಿ ನಾವಂತೂ ಎಡೆಬಿಡದೆ ದೇವರಿಗೆ ಕೃತಜ್ಞತಾಸ್ತುತಿ ಮಾಡುತ್ತೇವೆ. ಅದು ನಿಜವಾಗಿ ದೇವರ ವಾಕ್ಯವೇ; ಅದು ನಂಬುವವರಾದ ನಿಮ್ಮೊಳಗೆ ಬಲವಾಗಿ ಕೆಲಸ ನಡಿಸುತ್ತದೆ.

14 ಹೌದು, ಸಹೋದರರೇ, ನೀವು ಯೂದಾಯದಲ್ಲಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಸಭೆಗಳನ್ನು ಅನುಸರಿಸುವವರಾದಿರಿ. ಅವರು ಯೆಹೂದ್ಯರಿಂದ ಅನುಭವಿಸಿದಂಥ ಕಷ್ಟಗಳನ್ನು ನೀವೂ ನಿಮ್ಮ ಸ್ವದೇಶದವರಿಂದ ಅನುಭವಿಸಿದಿರಿ.

15 ಆ ಯೆಹೂದ್ಯರು ಕರ್ತನಾದ ಯೇಸುವನ್ನೂ ಪ್ರವಾದಿಗಳನ್ನೂ ಕೊಂದರು, ನಮ್ಮನ್ನೂ ಅಟ್ಟಿಬಿಟ್ಟರು; ಅವರು ದೇವರನ್ನು ಮೆಚ್ಚಿಸುವವರಲ್ಲ, ಎಲ್ಲಾ ಮನುಷ್ಯರಿಗೂ ವಿರೋಧಿಗಳಾಗಿದ್ದಾರೆ;

16 ಅನ್ಯಜನರಿಗೆ ರಕ್ಷಣೆಯಾಗುವಂತೆ ಸುವಾರ್ತೆಯನ್ನು ಹೇಳುವ ನಮಗೆ ಅಡ್ಡಿಮಾಡುತ್ತಾರೆ; ಹೀಗೆ ತಮ್ಮ ಪಾಪಕೃತ್ಯಗಳನ್ನು ಎಲ್ಲಾ ಕಾಲಗಳಲ್ಲಿಯೂ ಪರಿಪೂರ್ಣಮಾಡುವದಕ್ಕೆ ಹೋಗುತ್ತಾರೆ. ಆದರೆ ದೇವರ ಕೋಪವು ಅವರ ಮೇಲೆ ಸಂಪೂರ್ಣವಾಗುತ್ತಾ ಬಂತು.


ಪೌಲನು ಥೆಸಲೋನಿಕದವರನ್ನು ನೋಡುವದಕ್ಕೆ ಆಶೆಪಟ್ಟು ತಿಮೊಥೆಯನನ್ನು ಅವರ ಬಳಿಗೆ ಕಳುಹಿಸಿದ್ದು

17 ಸಹೋದರರೇ, ನಾವಂತೂ ದೇಹದಲ್ಲಿ ಮಾತ್ರ ನಿಮ್ಮನ್ನು ಸ್ವಲ್ಪಕಾಲ ಅಗಲಿದರೂ ಹೃದಯದಲ್ಲಿ ಅಗಲದೆ ನಿಮ್ಮ ಮುಖವನ್ನು ನೋಡುವದಕ್ಕೆ ಅತ್ಯಾಶೆಯಿಂದ ಬಹಳ ಪ್ರಯತ್ನಮಾಡಿದೆವು.

18 ಯಾಕಂದರೆ ನಿಮ್ಮ ಬಳಿಗೆ ಬರುವದಕ್ಕೆ ನಮಗೆ ಮನಸ್ಸಿತ್ತು; ಹೇಗೂ ಪೌಲನೆಂಬ ನಾನು ಒಂದೆರಡು ಸಾರಿ ಬರುವದಕ್ಕಿದ್ದೆನು; ಆದರೆ ಸೈತಾನನು ನಮಗೆ ಅಭ್ಯಂತರ ಮಾಡಿದನು.

19 ನಮ್ಮ ಕರ್ತನಾದ ಯೇಸು ಪ್ರತ್ಯಕ್ಷನಾಗುವಾಗ ಆತನ ಮುಂದೆ ನಮ್ಮ ಭರವಸವೂ ನಮ್ಮ ಸಂತೋಷವೂ ನಾವು ಹೊಗಳಿಕೊಳ್ಳುವ ಜಯಮಾಲೆಯೂ ಯಾರು? ನೀವೇ ಅಲ್ಲವೇ.

20 ನಿಜವಾಗಿ ನೀವೇ ನಮ್ಮ ಗೌರವವೂ ಸಂತೋಷವೂ ಆಗಿದ್ದೀರಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು