1 ತಿಮೊಥೆಯನಿಗೆ 5 - ಕನ್ನಡ ಸತ್ಯವೇದವು J.V. (BSI)ತಿಮೊಥೆಯನು ಸಭೆಯವರೊಳಗೆ ಆಯಾ ತರದವರ ವಿಷಯದಲ್ಲಿ ನಡೆಯಬೇಕಾದ ರೀತಿ; ವಿಧವೆಯರ ಸಂಬಂಧವಾದ ಕ್ರಮಗಳು 1 ವೃದ್ಧನನ್ನು ಗದರಿಸದೆ ತಂದೆಯೆಂದು ಭಾವಿಸಿ ಬುದ್ಧಿಹೇಳು. ಯೌವನಸ್ಥರನ್ನು ಅಣ್ಣತಮ್ಮಂದಿರೆಂದೂ 2 ವೃದ್ಧಸ್ತ್ರೀಯರನ್ನು ತಾಯಿಗಳೆಂದೂ ಯೌವನಸ್ತ್ರೀಯರನ್ನು ಪೂರ್ಣಶುದ್ಧಭಾವದಿಂದ ಅಕ್ಕತಂಗಿಯರೆಂದೂ ಎಣಿಸಿ ಅವರವರಿಗೆ ಬುದ್ಧಿ ಹೇಳು. 3-4 ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸು. ಆದರೆ ಒಬ್ಬ ವಿಧವೆಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯವರಿಗೆ ಭಕ್ತಿ ತೋರಿಸುವದಕ್ಕೂ ತಂದೆತಾಯಿಗಳಿಗೆ ಪ್ರತ್ಯುಪಕಾರ ಮಾಡುವದಕ್ಕೂ ಕಲಿತುಕೊಳ್ಳಲಿ; ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದು. 5 ದಿಕ್ಕಿಲ್ಲದೆ ಒಬ್ಬೊಂಟಿಗಳಾಗಿರುವ ವಿಧವೆಯು ದೇವರ ಮೇಲೆ ನಿರೀಕ್ಷೆಯನ್ನಿಟ್ಟು ಹಗಲಿರುಳು ವಿಜ್ಞಾಪನೆಗಳಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನೆಲೆಗೊಂಡಿರುವಳು. 6 ಆದರೆ ಭೋಗಿಯಾಗಿರುವ ವಿಧವೆಯು ಬದುಕಿರುವಾಗಲೂ ಸತ್ತವಳೇ. 7 ವಿಧವೆಯರು ನಿಂದೆಗೆ ಗುರಿಯಾಗದಂತೆ ಈ ಆಜ್ಞೆಗಳನ್ನು ಮಾಡು. 8 ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ ಅವನು ಕ್ರಿಸ್ತ ನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ. 9 ವಯಸ್ಸಿನಲ್ಲಿ ಅರುವತ್ತಕ್ಕೆ ಕಡಿಮೆಯಿಲ್ಲದ ವಿಧವೆಯನ್ನು ವಿಧವೆಯರ ಪಟ್ಟಿಯಲ್ಲಿ ಸೇರಿಸಬಹುದು; ಅಂಥವಳಾದರೂ ಒಬ್ಬ ಗಂಡನಿಗೆ ಮಾತ್ರ ಹೆಂಡತಿಯಾಗಿದ್ದವಳೂ 10 ಸತ್ಕ್ರಿಯೆಗಳನ್ನು ಮಾಡುವವಳೆಂದು ಹೆಸರುಗೊಂಡವಳೂ ಆಗಿರಬೇಕು; ಅಂದರೆ ಮಕ್ಕಳನ್ನು ಸಾಕಿದವಳಾಗಲಿ ಅತಿಥಿಸತ್ಕಾರವನ್ನು ಮಾಡಿದವಳಾಗಲಿ ದೇವಜನರಿಗೆ ಉಪಚಾರಮಾಡಿದವಳಾಗಲಿ ಸಂಕಟದಲ್ಲಿ ಬಿದ್ದವರಿಗೆ ಸಹಾಯಮಾಡಿದವಳಾಗಲಿ ಎಲ್ಲಾ ಸತ್ಕಾರ್ಯಗಳಲ್ಲಿ ಆಸಕ್ತಿಯುಳ್ಳವಳಾಗಲಿ ಆಗಿರಬೇಕು. 11 ಪ್ರಾಯದ ವಿಧವೆಯರನ್ನು ಪಟ್ಟಿಯಲ್ಲಿ ಸೇರಿಸಬೇಡ; ಅವರು ಮದಿಸಿ ಕ್ರಿಸ್ತನಿಗೆ ಒಳಗಾಗಲೊಲ್ಲದೆ ಮದುವೆಮಾಡಿಕೊಳ್ಳಬೇಕೆಂದು ಇಷ್ಟಪಟ್ಟಾರು. 12 ಅಂಥವರು ತಾವು ಮೊದಲು ಕೊಟ್ಟ ಭರವಸಕ್ಕೆ ತಪ್ಪಿದರೆಂಬ ಅವಮಾನಕ್ಕೊಳಗಾಗಿದ್ದಾರೆ. 13 ಇದಲ್ಲದೆ ಅವರು ಮನೆಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಾರೆ; ಮೈಗಳ್ಳರಾಗುವದಲ್ಲದೆ ಹರಟೆಮಾತಾಡುವವರೂ ಇತರರ ಕೆಲಸದಲ್ಲಿ ಕೈಹಾಕುವವರೂ ಆಗಿ ಆಡಬಾರದ ಮಾತುಗಳನ್ನಾಡುತ್ತಾರೆ. 14 ಆದದರಿಂದ ಪ್ರಾಯದ ವಿಧವೆಯರು ಮದುವೆಮಾಡಿಕೊಂಡು ಮಕ್ಕಳನ್ನು ಹೆತ್ತು ಮನೆಯ ಯಜಮಾನಿಯರಾಗಿರುವದು ನನಗೆ ಒಳ್ಳೇದಾಗಿ ತೋಚುತ್ತದೆ; ಹಾಗೆ ಮಾಡುವದರಿಂದ ವಿರೋಧಿಗಳ ನಿಂದೆಗೆ ಆಸ್ಪದಕೊಡದೆ ಇರುವರು. 15 ಇಷ್ಟರೊಳಗೆ ಕೆಲವರು ದಾರಿಬಿಟ್ಟು ಸೈತಾನನನ್ನು ಹಿಂಬಾಲಿಸಿದ್ದಾರೆ. 16 ನಂಬುವವಳಾದ ಸ್ತ್ರೀಯ ಅಧೀನದಲ್ಲಿ ವಿಧವೆಯರಿದ್ದರೆ ಆಕೆಯೇ ಅವರನ್ನು ಸಂರಕ್ಷಿಸಲಿ. ಸಭೆಯು ದಿಕ್ಕಿಲ್ಲದ ವಿಧವೆಯರಿಗೆ ಸಹಾಯ ಮಾಡಬೇಕಾಗಿರುವದರಿಂದ ಆಕೆಯು ಆ ಭಾರವನ್ನು ಸಭೆಯ ಮೇಲೆ ಹಾಕಬಾರದು. ಹಿರಿಯರ ವಿಷಯದಲ್ಲಿ ನಡೆಯಬೇಕಾದ ರೀತಿ 17 ಚೆನ್ನಾಗಿ ಅಧಿಕಾರ ನಡಿಸುವ ಸಭೆಯ ಹಿರಿಯರನ್ನು, ಅವರೊಳಗೆ ವಿಶೇಷವಾಗಿ ಪ್ರಸಂಗದಲ್ಲಿಯೂ ಉಪದೇಶದಲ್ಲಿಯೂ ಕಷ್ಟಪಡುವವರನ್ನು ಇಮ್ಮಡಿಯಾದ ಮಾನಕ್ಕೆ ಯೋಗ್ಯರೆಂದು ಎಣಿಸಬೇಕು. 18 ಕಣತುಳಿಯುವ ಎತ್ತಿನ ಬಾಯಿ ಕಟ್ಟಬಾರದೆಂತಲೂ ಆಳು ತನ್ನ ಕೂಲಿಗೆ ಯೋಗ್ಯನಾಗಿದ್ದಾನೆಂತಲೂ ಶಾಸ್ತ್ರದಲ್ಲಿ ಹೇಳಿದೆಯಲ್ಲಾ. 19 ಸಭೆಯ ಹಿರಿಯನ ಮೇಲೆ ಯಾರಾದರೂ ದೂರು ಹೇಳಿದರೆ ಇಬ್ಬರು ಮೂವರು ಸಾಕ್ಷಿಗಳಿದ್ದ ಹೊರತಾಗಿ ಅದನ್ನು ಮನಸ್ಸಿಗೆ ತೆಗೆದುಕೊಳ್ಳಬೇಡ. 20 ಪಾಪದಲ್ಲಿ ನಡೆಯುವವರನ್ನು ಎಲ್ಲರ ಮುಂದೆಯೇ ಗದರಿಸು; ಇವರಿಂದ ವಿುಕ್ಕಾದವರಿಗೂ ಭಯವುಂಟಾಗುವದು. 21 ನೀನು ವಿಚಾರಿಸುವದಕ್ಕೆ ಮೊದಲೇ ತಪ್ಪು ಹೊರಿಸದೆಯೂ ಪಕ್ಷಪಾತದಿಂದ ಏನೂ ಮಾಡದೆಯೂ ನಾನು ಹೇಳಿರುವ ಮಾತುಗಳ ಪ್ರಕಾರವೇ ನಡೆಯಬೇಕೆಂದು ದೇವರ ಮುಂದೆಯೂ ಕ್ರಿಸ್ತ ಯೇಸುವಿನ ಮುಂದೆಯೂ ಆಯಲ್ಪಟ್ಟಿರುವ ದೇವದೂತರ ಮುಂದೆಯೂ ಖಂಡಿತವಾಗಿ ಹೇಳುತ್ತೇನೆ. 22 ಅವಸರದಿಂದ ಯಾರ ತಲೆಯ ಮೇಲೆಯಾದರೂ ಹಸ್ತವನ್ನಿಟ್ಟು ಸಭೆಯ ಉದ್ಯೋಗಕ್ಕೆ ನೇವಿುಸಬೇಡ. ಹಾಗೆ ನೇವಿುಸಿದರೆ ಮತ್ತೊಬ್ಬರು ಮಾಡಿದ ಪಾಪದಲ್ಲಿ ನೀನು ಪಾಲುಗಾರನೆಂದು ತೋರಿ ಬಂದೀತು; ನೀನು ಶುದ್ಧನಾಗಿರುವ ಹಾಗೆ ನೋಡಿಕೋ. 23 ಇನ್ನು ಮೇಲೆ ನೀರನ್ನು ಮಾತ್ರ ಕುಡಿಯುವವನಾಗಿರದೆ ನಿನ್ನ ಅಜೀರ್ಣದ ಮತ್ತು ನಿನಗೆ ಆಗಾಗ್ಗೆ ಉಂಟಾಗುವ ಅಸ್ವಸ್ಥತೆಯ ಪರಿಹಾರಕ್ಕಾಗಿ ದ್ರಾಕ್ಷಾರಸವನ್ನು ಸ್ವಲ್ಪವಾಗಿ ತೆಗೆದುಕೋ. 24 ಕೆಲವರ ಪಾಪಕೃತ್ಯಗಳು ಪ್ರಸಿದ್ಧವಾಗಿದ್ದು ಅವರು ಇಂಥವರೆಂದು ಮೊದಲೇ ತಿಳಿಯಪಡಿಸುತ್ತವೆ; ಬೇರೆ ಕೆಲವರ ಪಾಪಕೃತ್ಯಗಳು ಮರೆಯಾಗಿದ್ದು ತರುವಾಯ ತಿಳಿದುಬರುತ್ತವೆ. 25 ಹಾಗೆಯೇ ಕೆಲವರ ಸತ್ಕ್ರಿಯೆಗಳು ಪ್ರಸಿದ್ಧವಾಗಿವೆ, ಬೇರೆ ಕೆಲವರ ಸತ್ಕ್ರಿಯೆಗಳು ಅಪ್ರಸಿದ್ಧವಾಗಿದ್ದರೂ ಮರೆಯಾಗಿರಲಾರವು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India