Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ತಿಮೊಥೆಯನಿಗೆ 4 - ಕನ್ನಡ ಸತ್ಯವೇದವು J.V. (BSI)

1 ಆದರೂ ಮುಂದಣ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತ ನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿ ಹೇಳುತ್ತಾನೆ.

2 ಸುಳ್ಳುಬೋಧಕರು ಬಂದು ಸ್ವಂತ ಮನಸ್ಸಿನಲ್ಲಿ ಅಪರಾಧಿಗಳೆಂಬ ಬರೆಯುಳ್ಳವರಾದರೂ ತಾವು ನೀತಿವಂತರೆಂದು ತೋರ್ಪಡಿಸಿಕೊಂಡು

3 ಅವರನ್ನು ಮರುಳುಗೊಳಿಸಿ ಮದುವೆಯಾಗಬಾರದೆಂತಲೂ ಇಂಥಿಂಥ ಆಹಾರವನ್ನು ತಿನ್ನಬಾರದೆಂತಲೂ ಹೇಳುವರು. ಆದರೆ ಯಾರು ನಂಬುವವರಾಗಿದ್ದು ಸತ್ಯವನ್ನು ಗ್ರಹಿಸಿದ್ದಾರೋ ಅವರು ಕೃತಜ್ಞತಾಸ್ತುತಿ ಮಾಡಿ ತಿನ್ನುವದಕ್ಕೋಸ್ಕರ ದೇವರು ಸಕಲ ವಿಧವಾದ ಆಹಾರವನ್ನೂ ಉಂಟುಮಾಡಿದನು.

4 ಆತನು ಉಂಟುಮಾಡಿದ್ದೆಲ್ಲವೂ ಒಳ್ಳೇದೇ; ದೇವರ ಸ್ತೋತ್ರಮಾಡಿ ತೆಗೆದುಕೊಳ್ಳುವ ಪಕ್ಷಕ್ಕೆ ಯಾವದನ್ನೂ ನಿಷಿದ್ಧವೆಂದು ಹೇಳತಕ್ಕದ್ದಲ್ಲ;

5 ದೇವರ ವಾಕ್ಯವನ್ನು ಹೇಳಿ ಪ್ರಾರ್ಥಿಸುವದರಿಂದ ಅದು ಪವಿತ್ರವಾಗುತ್ತದಲ್ಲಾ.

6 ಈ ಸಂಗತಿಗಳನ್ನು ಸಹೋದರರಿಗೆ ತಿಳಿಸಿದರೆ ನೀನು ಅನುಸರಿಸಿರುವ ಕ್ರಿಸ್ತ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ ಅಭ್ಯಾಸಹೊಂದುವವನಾಗಿ ಕ್ರಿಸ್ತ ಯೇಸುವಿನ ಒಳ್ಳೇ ಸೇವಕನಾಗಿರುವಿ.

7 ಅಜ್ಜೀಕಥೆಗಳಂತಿರುವ ಕೇವಲ ಪ್ರಾಪಂಚಿಕವಾದ ಕಥೆಗಳನ್ನು ತಳ್ಳಿಬಿಟ್ಟು ನೀನು ದೇವಭಕ್ತಿಯ ವಿಷಯದಲ್ಲಿ ಸಾಧನೆಮಾಡಿಕೋ.

8 ದೇಹಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾಗಿದೆ, ಭಕ್ತಿಯಾದರೋ ಎಲ್ಲಾ ವಿಧದಲ್ಲಿ ಪ್ರಯೋಜನವಾದದ್ದು; ಅದಕ್ಕೆ ಇಹಪರಗಳಲ್ಲಿಯೂ ಜೀವವಾಗ್ದಾನ ಉಂಟು.

9 ಈ ವಾಕ್ಯವು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಅದೆ.

10 ಇದಕ್ಕಾಗಿ ನಾವು ಕಷ್ಟಪಡುತ್ತೇವೆ, ಹೋರಾಡುತ್ತೇವೆ, ಯಾಕಂದರೆ ಎಲ್ಲಾ ಮನುಷ್ಯರಿಗೂ, ವಿಶೇಷವಾಗಿ ನಂಬುವವರಿಗೆ, ರಕ್ಷಕನಾಗಿರುವ ಜೀವವುಳ್ಳ ದೇವರ ಮೇಲೆ ನಾವು ನಿರೀಕ್ಷೆಯನ್ನಿಟ್ಟುಕೊಂಡಿದ್ದೇವೆ.

11 ಈ ಸಂಗತಿಗಳನ್ನು ಆಜ್ಞಾಪಿಸಬೇಕು ಮತ್ತು ಬೋಧಿಸಬೇಕು.

12 ಯೌವನಸ್ಥನೆಂದು ನಿನ್ನನ್ನು ಅಸಡ್ಡೆಮಾಡುವದಕ್ಕೆ ಯಾರಿಗೂ ಅವಕಾಶಕೊಡದೆ ನಂಬುವವರಿಗೆ ನಡೆ ನುಡಿ ಪ್ರೀತಿ ನಂಬಿಕೆ ಶುದ್ಧತ್ವ ಇವುಗಳ ವಿಷಯದಲ್ಲಿ ನೀನೇ ಮಾದರಿಯಾಗಿರು.

13 ನಾನು ಬರುವ ತನಕ ವೇದಪಾರಾಯಣವನ್ನೂ ಪ್ರಸಂಗವನ್ನೂ ಉಪದೇಶವನ್ನೂ ಮಾಡುವದರಲ್ಲಿ ಆಸಕ್ತನಾಗಿರು.

14 ನಿನ್ನಲ್ಲಿರುವ ವರವನ್ನು ಅಲಕ್ಷ್ಯಮಾಡಬೇಡ; ಸಭೆಯ ಹಿರಿಯರು ಪ್ರವಾದನೆಯ ಸಹಿತವಾಗಿ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ ಅದು ನಿನಗೆ ಕೊಡಲ್ಪಟ್ಟಿತಲ್ಲಾ.

15 ಈ ಕಾರ್ಯಗಳನ್ನು ಸಾಧಿಸಿಕೊಳ್ಳುವದರಲ್ಲಿ ಆಸಕ್ತನಾಗಿರು. ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವದು.

16 ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಈ ಕಾರ್ಯಗಳಲ್ಲಿ ನಿರತನಾಗಿರು; ಹೀಗಿರುವದರಿಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು