1 ತಿಮೊಥೆಯನಿಗೆ 3 - ಕನ್ನಡ ಸತ್ಯವೇದವು J.V. (BSI)ಸಭಾಧ್ಯಕ್ಷರೂ ಸಭಾಸೇವಕರೂ ಯೋಗ್ಯರಾಗಿರಬೇಕು 1 ಸಭಾಧ್ಯಕ್ಷನ ಉದ್ಯೋಗವನ್ನು ಪಡಕೊಳ್ಳಬೇಕೆಂದಿರುವವನು ಒಳ್ಳೇ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆಂಬ ಮಾತು ನಂಬತಕ್ಕದ್ದಾಗಿದೆ. 2 ಸಭಾಧ್ಯಕ್ಷನು ದೋಷಾರೋಪಣೆಯಿಲ್ಲದವನೂ ಏಕಪತ್ನಿಯುಳ್ಳವನೂ ಮದ್ಯಾಸಕ್ತಿಯಿಲ್ಲದವನೂ ಜಿತೇಂದ್ರಿಯನೂ ಮಾನಸ್ಥನೂ ಅತಿಥಿಸತ್ಕಾರಮಾಡುವವನೂ ಬೋಧಿಸುವದರಲ್ಲಿ ಪ್ರವೀಣನೂ ಆಗಿರಬೇಕು. 3 ಅವನು ಕುಡಿದು ಜಗಳವಾಡುವವನೂ ಹೊಡೆದಾಡುವವನೂ ಆಗಿರಬಾರದು; ಸಾತ್ವಿಕನೂ ಕುತರ್ಕ ಮಾಡದವನೂ ದ್ರವ್ಯಾಶೆಯಿಲ್ಲದವನೂ ಆಗಿರಬೇಕು. 4 ಪೂರ್ಣಗೌರವದಿಂದ ತನ್ನ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡು ಸ್ವಂತ ಮನೆಯವರನ್ನು ಚೆನ್ನಾಗಿ ಆಳುವವನಾಗಿರಬೇಕು. 5 ಸ್ವಂತ ಮನೆಯವರನ್ನು ಆಳುವದಕ್ಕೆ ತಿಳಿಯದವನು ದೇವರ ಸಭೆಯನ್ನು ಹೇಗೆ ಪರಾಂಬರಿಸುವನು? 6 ಅವನು ಹೊಸದಾಗಿ ಸಭೆಯಲ್ಲಿ ಸೇರಿದವನಾಗಿರಬಾರದು; ಅಂಥವನಾದರೆ ಉಬ್ಬಿಕೊಂಡು ಸೈತಾನನಿಗೆ ಪ್ರಾಪ್ತವಾದ ಶಿಕ್ಷಾವಿಧಿಗೆ ಒಳಗಾದಾನು. 7 ಇದಲ್ಲದೆ ಅವನು ಹೊರಗಣವರಿಂದ ಒಳ್ಳೆಯವನೆನಿಸಿಕೊಂಡಿರಬೇಕು; ಇಲ್ಲದಿದ್ದರೆ ನಿಂದೆಗೆ ಗುರಿಯಾಗುವನು ಮತ್ತು ಸೈತಾನನ ಉರ್ಲಿನೊಳಗೆ ಸಿಕ್ಕಿಬಿದ್ದಾನು. 8 ಅದೇ ರೀತಿಯಾಗಿ ಸಭಾಸೇವಕರು ಗೌರವವುಳ್ಳವರಾಗಿರಬೇಕು. ಅವರು ಎರಡು ಮಾತಿನವರೂ 9 ಮದ್ಯನಿರತರೂ ನೀಚಲಾಭವನ್ನು ಅಪೇಕ್ಷಿಸುವವರೂ ಆಗಿರದೆ ನಂಬಿದವರಿಗೆ ಪ್ರಕಟವಾಗಿರುವ ಸತ್ಯಾರ್ಥವನ್ನು ಶುದ್ಧಮನಸ್ಸಾಕ್ಷಿಯಿಂದ ಕೈಕೊಳ್ಳುವವರಾಗಿರಬೇಕು. 10 ಇದಲ್ಲದೆ ಅವರು ಮೊದಲು ಪರೀಕ್ಷಿಸಲ್ಪಡಬೇಕು; ತರುವಾಯ ಅವರ ಮೇಲೆ ಯಾರೂ ತಪ್ಪುಹೊರಿಸದಿದ್ದರೆ ಸಭಾಸೇವಕರ ಉದ್ಯೋಗವನ್ನು ನಡಿಸಲಿ. 11 ಹಾಗೆಯೇ ಸಭಾಸೇವಕಿಯರಾದ ಸ್ತ್ರೀಯರೂ ಗೌರವವುಳ್ಳವರಾಗಿರಬೇಕು; ಚಾಡಿ ಹೇಳುವವರಾಗಿರದೆ ಮದ್ಯಾಸಕ್ತಿಯಿಲ್ಲದವರಾಗಿಯೂ ಎಲ್ಲಾ ವಿಷಯಗಳಲ್ಲಿ ನಂಬಿಗಸ್ತರಾಗಿಯೂ ಇರಬೇಕು. 12 ಸಭಾಸೇವಕರು ಏಕಪತ್ನಿಯುಳ್ಳವರೂ ತಮ್ಮ ಮಕ್ಕಳನ್ನೂ ಮನೆಯವರನ್ನೂ ಚೆನ್ನಾಗಿ ಆಳುವವರೂ ಆಗಿರಬೇಕು. 13 ಸಭಾಸೇವಕರಾಗಿ ಚೆನ್ನಾಗಿ ಕೆಲಸ ಮಾಡಿದವರು ತಮಗೆ ಒಳ್ಳೇ ಪದವಿಯನ್ನೂ ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಸಂಬಂಧವಾಗಿ ಬಹು ಧೈರ್ಯವನ್ನೂ ಸಂಪಾದಿಸಿಕೊಳ್ಳುತ್ತಾರೆ. 14 ಬೇಗನೆ ನಿನ್ನ ಬಳಿಗೆ ಬರುವೆನೆಂದು ನನಗೆ ನಿರೀಕ್ಷೆಯುಂಟು; 15 ಆದರೆ ಒಂದು ವೇಳೆ ನಾನು ತಡಮಾಡಿದರೂ ದೇವರ ಮನೆಯಲ್ಲಿ ಅಂದರೆ ಜೀವಸ್ವರೂಪನಾದ ದೇವರ ಸಭೆಯಲ್ಲಿ ನಡೆದುಕೊಳ್ಳಬೇಕಾದ ರೀತಿಯು ನಿನಗೆ ಗೊತ್ತಾಗಬೇಕೆಂದು ಈ ಸಂಗತಿಗಳನ್ನು ಬರೆದಿದ್ದೇನೆ. ಆ ಸಭೆಯು ಸತ್ಯಕ್ಕೆ ಸ್ತಂಭವೂ ಆಧಾರವೂ ಆಗಿದೆ. ಸದ್ಧರ್ಮವನ್ನು ಕೆಡಿಸುವವರು ಬರುತ್ತಾರಾದದರಿಂದ ತಿಮೊಥೆಯನು ಎಚ್ಚರಿಕೆಯಾಗಿದ್ದು ಸದ್ಭಕ್ತನಾಗುವದಕ್ಕಾಗಿ ಬಹು ಪ್ರಯಾಸಪಡಬೇಕೆಂದು ಬೋಧೆ 16 ದೇವಭಕ್ತಿಗೆ ಆಧಾರವಾಗಿರುವ ಸತ್ಯಾರ್ಥವು ಗಂಭೀರವಾದದ್ದೆಂಬದಕ್ಕೆ ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ; ಅದೇನಂದರೆ - ಆತನು ಶರೀರಧಾರಿಯಾಗಿ ಪ್ರತ್ಯಕ್ಷನಾದನು; ಆತ್ಮ ಸಂಬಂಧವಾಗಿ ಆತನೇ ಎಂದು ಸ್ಥಾಪಿಸಲ್ಪಟ್ಟನು; ದೇವದೂತರಿಗೆ ಕಾಣಿಸಿಕೊಂಡನು; ಅನ್ಯಜನರಲ್ಲಿ ಪ್ರಸಿದ್ಧಿ ಮಾಡಲ್ಪಟ್ಟನು; ಲೋಕದಲ್ಲಿ ನಂಬಲ್ಪಟ್ಟನು; ಪ್ರಭಾವಸ್ಥಾನದಲ್ಲಿ ಸೇರಿಸಲ್ಪಟ್ಟನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India