Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ತಿಮೊಥೆಯನಿಗೆ 2 - ಕನ್ನಡ ಸತ್ಯವೇದವು J.V. (BSI)


ಸಭೆಯವರು ಕೂಡುವಾಗ ಸರ್ವಜನಗಳಿಗಾಗಿ ಪ್ರಾರ್ಥಿಸಿ ಸ್ತ್ರೀಪುರುಷರು ಭಕ್ತಿಪೂರ್ವಕವಾಗಿ ದೇವಾರಾಧನೆಯನ್ನು ನಡಿಸಬೇಕು

1 ಎಲ್ಲಾದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಮನವಿಗಳನ್ನೂ ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಬೋಧಿಸುತ್ತೇನೆ.

2 ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪ ಮಾಡುವಂತೆ ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು.

3 ಹಾಗೆ ಮಾಡುವದು ನಮ್ಮ ರಕ್ಷಕನಾದ ದೇವರ ಸನ್ನಿಧಿಯಲ್ಲಿ ಮೆಚ್ಚಿಕೆಯಾಗಿಯೂ ಯೋಗ್ಯವಾಗಿಯೂ ಅದೆ.

4 ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ.

5 ಏಕಂದರೆ ದೇವರು ಒಬ್ಬನೇ; ದೇವರಿಗೂ ಮನುಷ್ಯರಿಗೂ ಮಧ್ಯಸ್ಥನು ಒಬ್ಬನೇ; ಆತನು ಮನುಷ್ಯನಾಗಿರುವ ಕ್ರಿಸ್ತ ಯೇಸುವೇ;

6 ಆತನು ಎಲ್ಲರ ವಿಮೋಚನಾರ್ಥವಾಗಿ ತನ್ನನ್ನು ಒಪ್ಪಿಸಿಬಿಟ್ಟನು. ಇದೇ ತಕ್ಕ ಸಮಯಗಳಲ್ಲಿ ಹೇಳಬೇಕಾದ ಸಾಕ್ಷಿಯು.

7 ಆ ಸಾಕ್ಷಿಯನ್ನು ಪ್ರಸಿದ್ಧಿಪಡಿಸುವದಕ್ಕಾಗಿಯೇ ನಾನು ಸಾರುವವನಾಗಿಯೂ ಅಪೊಸ್ತಲನಾಗಿಯೂ ನಂಬಿಕೆಯಿಂದಲೂ ಸತ್ಯದಿಂದಲೂ ಅನ್ಯಜನರಿಗೆ ಬೋಧಿಸುವವನಾಗಿಯೂ ನೇವಿುಸಲ್ಪಟ್ಟೆನು. ನಾನು ಇಂಥವನೆಂಬದು ಸುಳ್ಳಲ್ಲ, ಸತ್ಯವೇ.

8 ಹೀಗಿರಲಾಗಿ ಪುರುಷರು ಎಲ್ಲಾ ಸ್ಥಳಗಳಲ್ಲಿ ಕೋಪವೂ ವಾಗ್ವಾದವೂ ಇಲ್ಲದವರಾಗಿ ಭಕ್ತಿಪೂರ್ವಕವಾಗಿಯೇ ಕೈಗಳನ್ನೆತ್ತಿ ಪ್ರಾರ್ಥಿಸಬೇಕೆಂದು ಅಪೇಕ್ಷಿಸುತ್ತೇನೆ.

9 ಹಾಗೆಯೇ ಸ್ತ್ರೀಯರು ಮಾನಸ್ಥೆಯರಾಗಿಯೂ ಡಂಭವಿಲ್ಲದವರಾಗಿಯೂ ಇದ್ದು ಮರ್ಯಾದೆಗೆ ತಕ್ಕ ಉಡುಪನ್ನುಟ್ಟುಕೊಳ್ಳಬೇಕೆಂದು ಅಪೇಕ್ಷಿಸುತ್ತೇನೆ.

10 ಅವರು ಜಡೆ ಚಿನ್ನ ಮುತ್ತು ಬೆಲೆಯುಳ್ಳ ವಸ್ತ್ರ ಮುಂತಾದವುಗಳಿಂದ ತಮ್ಮನ್ನು ಅಲಂಕರಿಸಿಕೊಳ್ಳದೆ ದೇವಭಕ್ತೆಯರೆನಿಸಿಕೊಳ್ಳುವ ಸ್ತ್ರೀಯರಿಗೆ ಯುಕ್ತವಾಗಿರುವ ಪ್ರಕಾರ ಸತ್ಕ್ರಿಯೆಗಳಿಂದಲೇ ಅಲಂಕರಿಸಿಕೊಳ್ಳಬೇಕು.

11 ಸ್ತ್ರೀಯರು ಮೌನವಾಗಿದ್ದು ಪೂರ್ಣವಿಧೇಯರಾಗಿ ಉಪದೇಶವನ್ನು ಕೇಳಬೇಕು.

12 ಉಪದೇಶಮಾಡುವದಕ್ಕಾಗಲಿ ಪುರುಷರ ಮೇಲೆ ಅಧಿಕಾರ ನಡಿಸುವದಕ್ಕಾಗಲಿ ಸ್ತ್ರೀಯರಿಗೆ ನಾನು ಅಪ್ಪಣೆ ಕೊಡುವದಿಲ್ಲ; ಅವರು ಮೌನವಾಗಿರಬೇಕು.

13 ಮೊದಲು ನಿರ್ಮಿತನಾದವನು ಆದಾಮನಲ್ಲವೇ, ಆಮೇಲೆ ಹವ್ವಳು;

14 ಇದಲ್ಲದೆ ಆದಾಮನು ವಂಚನೆಗೆ ಒಳಬೀಳಲಿಲ್ಲ, ಸ್ತ್ರೀಯು ವಂಚನೆಗೆ ಒಳಬಿದ್ದು ಅಪರಾಧಿಯಾದಳು.

15 ಆದರೂ ಸ್ತ್ರೀಯರು ಮಾನಸ್ಥೆಯರಾಗಿ ನಂಬಿಕೆಯಲ್ಲಿಯೂ ಪ್ರೀತಿಯಲ್ಲಿಯೂ ಪರಿಶುದ್ಧತೆಯಲ್ಲಿಯೂ ನೆಲೆಗೊಂಡಿದ್ದರೆ ಮಕ್ಕಳನ್ನು ಹೆರುವದರಲ್ಲಿ ರಕ್ಷಣೆಹೊಂದುವರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು