1 ಕೊರಿಂಥದವರಿಗೆ 9 - ಕನ್ನಡ ಸತ್ಯವೇದವು J.V. (BSI)ಸಭೆಯಿಂದ ಪೋಷಣೆಹೊಂದುವದಕ್ಕೆ ಬೋಧಕರಿಗೆ ಹಕ್ಕಿದ್ದರೂ ಪೌಲನು ಇತರರ ಹಿತಕ್ಕೋಸ್ಕರ ಆ ಹಕ್ಕನ್ನು ಬಳಸದೆ ಹೋದದರಲ್ಲಿ ಅವನ ನಡತೆಯೇ ಹಿಂದಿನ ಬೋಧೆಗೆ ದೃಷ್ಟಾಂತ 1 ನಾನು ಸ್ವತಂತ್ರನಲ್ಲವೇ. ಅಪೊಸ್ತಲನಲ್ಲವೇ ನಮ್ಮ ಕರ್ತನಾದ ಯೇಸುವನ್ನು ಕಂಡವನಲ್ಲವೇ. ನಾನು ಕರ್ತನ ಸೇವೆಯಲ್ಲಿ ಮಾಡಿದ ಕೆಲಸದ ಫಲವು ನೀವೇ ಅಲ್ಲವೇ. 2 ಇತರರಿಗೆ ನಾನು ಅಪೊಸ್ತಲನಲ್ಲದಿದ್ದರೂ ನಿಮಗಾದರೂ ಅಪೊಸ್ತಲನಾಗಿದ್ದೇನೆ. ನಾನು ಅಪೊಸ್ತಲನಾಗಿದ್ದೇನೆಂಬದಕ್ಕೆ ಕರ್ತನಿಗೆ ಸೇರಿದವರಾದ ನೀವೇ ಪ್ರಮಾಣವಾಗಿದ್ದೀರಷ್ಟೆ. 3 ನನ್ನನ್ನು ವಿಚಾರಿಸುವವರಿಗೆ ಇದೇ ನನ್ನ ಉತ್ತರ. 4 ಅನ್ನಪಾನಗಳಿಗೆ ನಮಗೆ ಹಕ್ಕಿಲ್ಲವೇ. 5 ಕ್ರೈಸ್ತ ಸಹೋದರಿಯಾಗಿರುವ ಹೆಂಡತಿಯನ್ನು ಕರಕೊಂಡು ಸಂಚರಿಸುವದಕ್ಕೆ ವಿುಕ್ಕಾದ ಅಪೊಸ್ತಲರಂತೆಯೂ ಕರ್ತನ ತಮ್ಮಂದಿರಂತೆಯೂ ಕೇಫನಂತೆಯೂ ನಮಗೆ ಹಕ್ಕಿಲ್ಲವೇ. 6 ಅಥವಾ, ಕೈಕೆಲಸವನ್ನು ಮಾಡದೆ ಜೀವಿಸುವದಕ್ಕೆ ನನಗೂ ಬಾರ್ನಬನಿಗೂ ಮಾತ್ರ ಹಕ್ಕಿಲ್ಲವೇನು? 7 ಯಾವ ಸಿಪಾಯಿಯಾದರೂ ಸ್ವಂತ ಖರ್ಚಿನಿಂದ ಯುದ್ಧಕ್ಕೆ ಹೋಗುವದುಂಟೇ? ದ್ರಾಕ್ಷೇತೋಟವನ್ನು ಮಾಡಿದವನು ಅದರ ಫಲವನ್ನು ತಿನ್ನದೆ ಇರುವದುಂಟೋ? ಪಶುಗಳನ್ನು ಸಾಕಿದವನು ಅವುಗಳ ಹೈನಿನಿಂದ ಜೀವಿಸದೆ ಇರುವದುಂಟೋ? 8 ನಾನು ಹೇಳಿದ್ದು ಬರೀ ಲೋಕವಾಡಿಕೆಯ ಮಾತೋ? ಧರ್ಮಶಾಸ್ತ್ರವೂ ಇದನ್ನು ಹೇಳುವದಿಲ್ಲವೋ? 9 ಕಣತುಳಿಯುವ ಎತ್ತಿನ ಬಾಯಿ ಕಟ್ಟಬಾರದೆಂದು ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದದೆ. 10 ದೇವರು ಚಿಂತಿಸುವದು ಎತ್ತುಗಳಿಗಾಗಿಯೋ? ಅಥವಾ ನಮಗೋಸ್ಕರವಾಗಿಯೇ ಹೇಳುತ್ತಾನೋ? ಹೌದು, ನಮಗೋಸ್ಕರ ಬರೆದದೆ. ಉಳುವವನು ಬೆಳೆಯಲ್ಲಿ ತನಗೆ ಪಾಲು ದೊರಕುತ್ತದೆಂದು ಉಳುವದೂ, ಒಕ್ಕುವವನು ತನಗೆ ಪಾಲು ದೊರಕುತ್ತದೆಂದು ಒಕ್ಕುವದೂ ನ್ಯಾಯ. 11 ನಾವು ನಿಮಗೋಸ್ಕರ ಆತ್ಮಸಂಬಂಧವಾದ ಬೀಜವನ್ನು ಬಿತ್ತಿದ ಮೇಲೆ ನಿವ್ಮಿುಂದ ಶರೀರಸಂಬಂಧವಾದ ಪೈರನ್ನು ಕೊಯ್ಯುವದು ದೊಡ್ಡದೋ? 12 ಈ ಹಕ್ಕು ಇತರರಿಗೆ ನಿಮ್ಮ ಮೇಲೆ ಇದ್ದರೆ ನಮಗೆ ಎಷ್ಟೋ ಹೆಚ್ಚಾಗಿ ಇರಬೇಕಲ್ಲಾ. ಆದರೂ ನಾವು ಈ ಹಕ್ಕನ್ನು ನಡಿಸದೆ ಕ್ರಿಸ್ತನ ಸುವಾರ್ತೆಗೆ ಅಡ್ಡಿಮಾಡಬಾರದೆಂದು ಎಲ್ಲವನ್ನೂ ಸಹಿಸಿಕೊಂಡೆವು. 13 ದೇವಾಲಯದ ಊಳಿಗವನ್ನು ನಡಿಸುವವರು ದೇವಾಲಯದ ಆದಾಯದಿಂದ ಊಟಮಾಡುತ್ತಾರೆಂಬದೂ ಯಜ್ಞವೇದಿಯ ಬಳಿಯಲ್ಲಿ ಸೇವೆಮಾಡುವವರು ಆ ವೇದಿಗೆ ಬರುವ ಪದಾರ್ಥಗಳಲ್ಲಿ ಪಾಲುಹೊಂದುತ್ತಾರೆಂಬದೂ ನಿಮಗೆ ತಿಳಿಯದೋ? 14 ಅದೇ ರೀತಿಯಾಗಿ ಕರ್ತನು ಸಹ ಸುವಾರ್ತೆಯನ್ನು ಸಾರುವವರು ಸುವಾರ್ತೆಯಿಂದಲೇ ಜೀವನ ಮಾಡಬೇಕೆಂದು ನೇವಿುಸಿದನು. 15 ನಾನಂತೂ ಈ ಹಕ್ಕುಗಳಲ್ಲಿ ಒಂದನ್ನೂ ನಡಿಸಲಿಲ್ಲ; ನನ್ನ ವಿಷಯದಲ್ಲಿಯೂ ಹೀಗಾಗಬೇಕೆಂದು ಈ ಸಂಗತಿಗಳನ್ನು ನಾನು ಬರೆಯಲಿಲ್ಲ. ಅದಕ್ಕಿಂತ ಸಾಯುವದೇ ನನಗೆ ಲೇಸು. ಹೊಗಳಿಕೊಳ್ಳುವದಕ್ಕೆ ನನಗಿರುವ ಈ ಆಸ್ಪದವನ್ನು ಯಾರೂ ತೆಗೆದುಬಿಡಬಾರದು. 16 ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವದಕ್ಕೆ ನನಗೇನೂ ಆಸ್ಪದವಿಲ್ಲ; ಸಾರಲೇಬೇಕೆಂಬ ನಿರ್ಬಂಧ ನನಗುಂಟು. ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ. 17 ನಾನು ಸ್ವಂತ ಇಷ್ಟದಿಂದ ಈ ಕೆಲಸವನ್ನು ಮಾಡಿದರೆ ನನಗೆ ಬಹುಮಾನ ದೊರೆಯುವದು; ಮತ್ತೊಬ್ಬನ ಇಷ್ಟದಿಂದ ಮಾಡಿದರೆ ಮನೆವಾರ್ತೆಯು ನನ್ನ ವಶಕ್ಕೆ ಕೊಡಲ್ಪಟ್ಟಿದೆ. 18 ಹಾಗಾದರೆ ನನಗಾಗುವ ಬಹುಮಾನವೇನು? ಸುವಾರ್ತೆಯನ್ನು ಸಾರುವಾಗ ಅದರಿಂದ ಜೀವನ ಮಾಡುವ ಹಕ್ಕನ್ನು ನಡಿಸದೆ ಅದನ್ನು ಉಚಿತಾರ್ಥವಾಗಿ ದಾನಮಾಡುವದೇ ನನಗೆ ಬಹುಮಾನ. 19 ನಾನು ಎಲ್ಲಾ ವಿಷಯದಲ್ಲಿ ಸ್ವತಂತ್ರನಾಗಿದ್ದರೂ ಹೆಚ್ಚು ಜನರನ್ನು ಸಂಪಾದಿಸಿಕೊಳ್ಳಬೇಕೆಂದು ನನ್ನನ್ನು ಎಲ್ಲರಿಗೂ ಅಧೀನಮಾಡಿದೆನು. 20 ಯೆಹೂದ್ಯರನ್ನು ಸಂಪಾದಿಸಿಕೊಳ್ಳುವದಕ್ಕೆ ಯೆಹೂದ್ಯರಿಗೆ ಯೆಹೂದ್ಯನಂತಾದೆನು. ನಾನು ನಿಯಮಗಳಿಗೆ ಅಧೀನನಲ್ಲದವನಾದರೂ ನಿಯಮಗಳಿಗೆ ಅಧೀನರಾದವರನ್ನು ಸಂಪಾದಿಸಿಕೊಳ್ಳುವದಕ್ಕಾಗಿ ಅವರಿಗೆ ನಿಯಮಗಳಿಗೆ ಅಧೀನನಂತಾದೆನು. 21 ನಾನು ದೇವರ ನೇಮವಿಲ್ಲದವನಲ್ಲ, ಕ್ರಿಸ್ತ ನಿಯಮಕ್ಕೊಳಗಾದವನೇ; ಆದರೂ ನಿಯಮವಿಲ್ಲದವರನ್ನು ಸಂಪಾದಿಸಿಕೊಳ್ಳುವದಕ್ಕಾಗಿ ಅವರಿಗೆ ನಿಯಮವಿಲ್ಲದವನಂತಾದೆನು. 22 ಬಲವಿಲ್ಲದವರನ್ನು ಸಂಪಾದಿಸುವದಕ್ಕೆ ಅವರಿಗೆ ಬಲವಿಲ್ಲದವನಾದೆನು. ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಯಾರಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾಗಿದ್ದೇನೆ. 23 ನಾನು ಇತರರ ಸಂಗಡ ಸುವಾರ್ತೆಯ ಫಲದಲ್ಲಿ ಪಾಲುಗಾರನಾಗಬೇಕೆಂದು ಇದೆಲ್ಲವನ್ನು ಸುವಾರ್ತೆಗೋಸ್ಕರವೇ ಮಾಡುತ್ತೇನೆ. 24 ರಂಗಸ್ಥಾನದಲ್ಲಿ ಓಡುವದಕ್ಕೆ ಗೊತ್ತಾದವರೆಲ್ಲರೂ ಓಡುತ್ತಾರಾದರೂ ಒಬ್ಬನು ಮಾತ್ರ ಬಿರುದನ್ನು ಹೊಂದುತ್ತಾನೆ ಎಂಬದು ನಿಮಗೆ ತಿಳಿಯದೋ? ಅವರಂತೆ ನೀವೂ ಬಿರುದನ್ನು ಪಡಕೊಳ್ಳಬೇಕೆಂತಲೇ ಓಡಿರಿ. 25 ಅದರಲ್ಲಿ ಹೋರಾಡುವವರೆಲ್ಲರು ಎಲ್ಲಾ ವಿಷಯಗಳಲ್ಲಿ ವಿುತವಾಗಿರುತ್ತಾರೆ. ಅವರು ಬಾಡಿಹೋಗುವ ಜಯಮಾಲಿಕೆಯನ್ನು ಹೊಂದುವದಕ್ಕೆ ಸಾಧನೆಮಾಡುತ್ತಾರೆ; ನಾವಾದರೋ ಬಾಡಿಹೋಗದ ಜಯಮಾಲಿಕೆಯನ್ನು ಹೊಂದುವದಕ್ಕೆ ಸಾಧನೆ ಮಾಡುವವರಾಗಿದ್ದೇವೆ. 26 ಹೀಗಿರಲಾಗಿ ನಾನು ಸಹ ಗುರಿಗೊತ್ತಿಲ್ಲದವನಾಗಿ ಓಡದೆ ಗೆಲ್ಲಬೇಕೆಂದಿರುವ ಅವರಂತೆಯೇ ಓಡುತ್ತೇನೆ; ನಾನು ಗಾಳಿಯನ್ನು ಗುದ್ದುವವನಾಗಿರದೆ ಗೆಲ್ಲಬೇಕೆಂದವನಾಗಿ ಗುದ್ದಾಡುತ್ತೇನೆ. 27 ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನ ಪಡಿಸಿಕೊಳ್ಳುತ್ತೇನೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India