Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಕೊರಿಂಥದವರಿಗೆ 8 - ಕನ್ನಡ ಸತ್ಯವೇದವು J.V. (BSI)


ವಿಗ್ರಹಾರಾಧನೆಯ ಗೊಡವೆಗೆ ಹೋಗುವದನ್ನು ಕುರಿತದ್ದು ವಿಗ್ರಹಕ್ಕೆ ಅರ್ಪಿತವಾದದ್ದನ್ನು ಉಣ್ಣುವದು ದೋಷವಲ್ಲದಿದ್ದರೂ ಕೆಲವು ಸಂದರ್ಭಗಳಲ್ಲಿ ಇತರರಿಗೋಸ್ಕರ ಉಣ್ಣದೆ ಇರುವದು ಉತ್ತಮವೆಂಬ ಬೋಧನೆ
( 8.1—11.1 )

1 ವಿಗ್ರಹಕ್ಕೆ ನೈವೇದ್ಯ ಮಾಡಿದ ಪದಾರ್ಥಗಳ ವಿಷಯದಲ್ಲಿ ಈಗ ನೋಡೋಣ. ನಮ್ಮೆಲ್ಲರಿಗೆ ಜ್ಞಾನವುಂಟೆಂದು ಬಲ್ಲೆವು. ಜ್ಞಾನವು ಉಬ್ಬಿಸುತ್ತದೆ, ಪ್ರೀತಿಯು ಭಕ್ತಿವೃದ್ಧಿಯನ್ನುಂಟುಮಾಡುತ್ತದೆ.

2 ಇಂಥಿಂಥದನ್ನು ತಿಳುಕೊಂಡಿದ್ದೇನೆಂದು ನೆನಸಿದವನು ತಾನು ತಿಳಿಯಬೇಕಾದ ರೀತಿಯಿಂದ ಇನ್ನೂ ತಿಳುಕೊಳ್ಳಲಿಲ್ಲ.

3 ಆದರೆ ಯಾವನು ದೇವರನ್ನು ಪ್ರೀತಿಸುತ್ತಾನೋ ಅವನನ್ನೇ ದೇವರು ತಿಳುಕೊಳ್ಳುತ್ತಾನೆ.

4 ವಿಗ್ರಹಗಳಿಗೆ ನೈವೇದ್ಯ ಮಾಡಿದ ಪದಾರ್ಥಗಳನ್ನು ತಿನ್ನುವದರ ವಿಷಯದಲ್ಲಿ ನಾನು ಹೇಳುವದೇನಂದರೆ - ಜಗತ್ತಿನಲ್ಲಿ ವಿಗ್ರಹವು ಏನೂ ಅಲ್ಲವೆಂದೂ ಒಬ್ಬ ದೇವರಿದ್ದಾನೆ ಹೊರತು ಬೇರೆ ದೇವರಿಲ್ಲವೆಂದೂ ಬಲ್ಲೆವು.

5 ಅನೇಕರನ್ನು ದೇವರುಗಳೆಂದೂ ಕರ್ತರೆಂದೂ ಪೂಜಿಸುವದುಂಟು ನಿಜವೇ; ಆಕಾಶದಲ್ಲಿಯಾಗಲಿ ಭೂವಿುಯ ಮೇಲೆಯಾಗಲಿ ದೇವರುಗಳೆನಿಸಿಕೊಳ್ಳುವವರಿದ್ದಾರೆ,

6 ನಮಗಾದರೋ ಒಬ್ಬನೇ ದೇವರಿದ್ದಾನೆ; ಆತನು ತಂದೆಯೆಂಬಾತನೇ; ಆತನು ಸಮಸ್ತಕ್ಕೂ ಮೂಲಕಾರಣನು; ನಾವು ಆತನಿಗಾಗಿ ಉಂಟಾದೆವು. ಮತ್ತು ನಮಗೆ ಒಬ್ಬನೇ ಕರ್ತ; ಆತನು ಯೇಸು ಕ್ರಿಸ್ತನೇ; ಆತನ ಮುಖಾಂತರ ಸಮಸ್ತವೂ ಉಂಟಾಯಿತು, ನಾವೂ ಆತನ ಮುಖಾಂತರ ಉಂಟಾದೆವು.

7 ಆದರೆ ಈ ಜ್ಞಾನವು ಎಲ್ಲರಲ್ಲಿಯೂ ಇಲ್ಲ. ಕೆಲವರು ಈ ವರೆಗೂ ವಿಗ್ರಹದ ಬಳಿಗೆ ಹೋಗುವ ರೂಢಿಯಲ್ಲಿದ್ದದರಿಂದ ತಾವು ತಿನ್ನುವ ಪದಾರ್ಥಗಳನ್ನು ವಿಗ್ರಹಕ್ಕೆ ನೈವೇದ್ಯ ಮಾಡಿದ್ದೆಂದು ತಿನ್ನುತ್ತಾರೆ; ಹೀಗೆ ಅವರ ಮನಸ್ಸು ಬಲಹೀನವಾಗಿದ್ದು ಕಲೆಯನ್ನು ಹೊಂದುತ್ತದೆ.

8 ಆದರೆ ಆಹಾರವು ನಮ್ಮನ್ನು ದೇವರ ಸನ್ನಿಧಿಗೆ ಸೇರಿಸಲಾಗದು. ತಿನ್ನದಿದ್ದರೆ ನಮಗೆ ಕಡಿಮೆಯಿಲ್ಲ, ತಿಂದರೆ ನಮಗೆ ಹೆಚ್ಚಿಲ್ಲ.

9 ಆದರೂ ಈ ನಿಮ್ಮ ಸ್ವಾತಂತ್ರ್ಯವು ನಂಬಿಕೆಯಲ್ಲಿ ಬಲವಿಲ್ಲದವರಿಗೆ ಒಂದು ವೇಳೆ ವಿಘ್ನವಾದೀತು, ಎಚ್ಚರಿಕೆಯಾಗಿರಿ.

10 ಜ್ಞಾನಿಯಾದ ನೀನು ವಿಗ್ರಹಾಲಯದಲ್ಲಿ ಊಟಕ್ಕೆ ಕೂತಿರುವಾಗ ನಿರ್ಬಲವಾದ ಮನಸ್ಸುಳ್ಳ ಸಹೋದರನು ಕಂಡರೆ ಅವನೂ ವಿಗ್ರಹಕ್ಕೆ ನೈವೇದ್ಯ ಮಾಡಿದ ಪದಾರ್ಥಗಳನ್ನು ತಿನ್ನುವದಕ್ಕೆ ಧೈರ್ಯತಂದುಕೊಂಡಾನಲ್ಲವೇ.

11 ಹೀಗೆ ಆ ಬಲಹೀನನು ನಿನ್ನ ಜ್ಞಾನದಿಂದ ನಾಶವಾಗುತ್ತಾನೆ. ಅವನು ಸಹೋದರನಲ್ಲವೇ. ಅವನಿಗಾಗಿಯೂ ಕ್ರಿಸ್ತನು ತನ್ನ ಪ್ರಾಣಕೊಟ್ಟನಲ್ಲವೇ.

12 ಹೀಗಿರಲಾಗಿ ಸಹೋದರರಿಗೆ ಪಾಪಮಾಡಿ ಅವರ ನಿರ್ಬಲವಾದ ಮನಸ್ಸನ್ನು ನೋಯಿಸಿ ಕ್ರಿಸ್ತನಿಗೆ ಪಾಪಮಾಡುವವರಾಗುತ್ತೀರಿ.

13 ಆದದರಿಂದ ಭೋಜನಪದಾರ್ಥದಿಂದ ನನ್ನ ಸಹೋದರನಿಗೆ ವಿಘ್ನವಾಗುವದಾದರೆ ನಾನು ಎಂದಿಗೂ ಮಾಂಸವನ್ನು ತಿನ್ನುವದಿಲ್ಲ; ನಾನು ನನ್ನ ಸಹೋದರನಿಗೆ ವಿಘ್ನವನ್ನುಂಟುಮಾಡಬಾರದಲ್ಲಾ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು