Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಕೊರಿಂಥದವರಿಗೆ 7 - ಕನ್ನಡ ಸತ್ಯವೇದವು J.V. (BSI)


ಕೊರಿಂಥದವರು ಹಾಕಿದ್ದ ಪ್ರಶ್ನೆಗಳಿಗೆ ಪೌಲನ ಉತ್ತರ (7.1-14.40); ಮದುವೆಯನ್ನು ಕುರಿತದ್ದು

1 ನೀವು ಬರೆದ ಸಂಗತಿಗಳನ್ನು ಕುರಿತು ನಾನು ಹೇಳುವ ಅಭಿಪ್ರಾಯವೇನಂದರೆ - ಸ್ತ್ರೀಸಂಪರ್ಕವಿಲ್ಲದೆ ಇರುವದು ಮನುಷ್ಯನಿಗೆ ಒಳ್ಳೇದು;

2 ಆದರೆ ಜಾರತ್ವವು ಪ್ರಬಲವಾಗಿರುವದರಿಂದ ಪ್ರತಿಯೊಬ್ಬನಿಗೆ ಸ್ವಂತ ಹೆಂಡತಿಯು ಇರಲಿ, ಪ್ರತಿಯೊಬ್ಬಳಿಗೆ ಸ್ವಂತ ಗಂಡನು ಇರಲಿ.

3 ಗಂಡನು ಹೆಂಡತಿಗೆ ಸಲ್ಲತಕ್ಕದ್ದನ್ನು ಸಲ್ಲಿಸಲಿ, ಹಾಗೆಯೇ ಹೆಂಡತಿಯು ಗಂಡನಿಗೆ ಸಲ್ಲಿಸಲಿ.

4 ಹೆಂಡತಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ; ಅದು ಗಂಡನಿಗುಂಟು. ಹಾಗೆಯೇ ಪುರುಷನಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ; ಅದು ಹೆಂಡತಿಗುಂಟು.

5 ಪ್ರಾರ್ಥನೆಗೆ ಮನಸ್ಸು ಕೊಡುವದಕ್ಕಾಗಿ ನೀವು ಪರಸ್ಪರ ಸಮ್ಮತಿಯಿಂದ ಸ್ವಲ್ಪಕಾಲ ದಂಪತಿ ಧರ್ಮವನ್ನು ಬಿಟ್ಟು ಅಗಲಿರಬಹುದೇ ಹೊರತು ಅನ್ಯಥಾ ಹಾಗೆ ಮಾಡಬಾರದು; ಆಮೇಲೆ ಸೈತಾನನು ನಿಮಗೆ ದಮೆಯಿಲ್ಲದಿರುವದನ್ನು ನೋಡಿ ನಿಮಗೆ ದುಷ್ಪ್ರೇರಣೆಮಾಡದಂತೆ ತಿರಿಗಿ ಕೂಡಿಕೊಳ್ಳಿರಿ.

6 ಹೀಗೆ ಮಾಡಬಹುದೆಂದು ಹೇಳುವದು ಹಿತೋಪದೇಶವೇ ಹೊರತು ಆಜ್ಞೆಯಲ್ಲ.

7 ನಾನಿರುವಂತೆಯೇ ಎಲ್ಲಾ ಮನುಷ್ಯರು ಇರಬೇಕೆಂದು ನನ್ನ ಇಷ್ಟ; ಆದರೆ ಒಬ್ಬನು ಒಂದು ವಿಧವಾಗಿ ಮತ್ತೊಬ್ಬನು ಇನ್ನೊಂದು ವಿಧವಾಗಿ ದೇವರಿಂದ ವರವನ್ನು ಹೊಂದಿಕೊಂಡಿದ್ದಾರೆ.

8 ಮದುವೆಯಿಲ್ಲದವರನ್ನೂ ವಿಧವೆಯರನ್ನೂ ಕುರಿತು ನಾನು ಹೇಳುವದೇನಂದರೆ - ನಾನಿರುವಂತೆಯೇ ಇರುವದು ಅವರಿಗೆ ಒಳ್ಳೇದು;

9 ಅವರು ದಮೆಯಿಲ್ಲದವರಾದರೆ ಮದುವೆಮಾಡಿಕೊಳ್ಳಲಿ; ಕಾಮತಾಪ ಪಡುವದಕ್ಕಿಂತ ಮದುವೆಮಾಡಿಕೊಳ್ಳುವದು ಉತ್ತಮವಷ್ಟೆ.

10 ಮದುವೆಮಾಡಿಕೊಂಡಿರುವವರಿಗೆ ನನ್ನ ಅಪ್ಪಣೆ ಮಾತ್ರವಲ್ಲದೆ ಕರ್ತನ ಅಪ್ಪಣೆಯು ಏನಂದರೆ - ಹೆಂಡತಿಯು ಗಂಡನನ್ನು ಬಿಟ್ಟು ಅಗಲಬಾರದು;

11 ಒಂದು ವೇಳೆ ಅಗಲಿದರೂ ಪುರುಷಸಹವಾಸವಿಲ್ಲದೆ ಇರಬೇಕು, ಇಲ್ಲವೆ ಗಂಡನ ಸಂಗಡ ಸಮಾಧಾನವಾಗಬೇಕು; ಮತ್ತು ಗಂಡನು ಹೆಂಡತಿಯನ್ನು ಬಿಡಬಾರದು.

12 ವಿುಕ್ಕಾದವರ ವಿಷಯದಲ್ಲಿ ಕರ್ತನ ಮಾತು ಇಲ್ಲವಾದರೂ ನನ್ನ ಅಭಿಪ್ರಾಯವೇನಂದರೆ - ಒಬ್ಬ ಸಹೋದರನಿಗೆ ಕ್ರಿಸ್ತ ನಂಬಿಕೆಯಿಲ್ಲದ ಹೆಂಡತಿಯಿರಲಾಗಿ ಆಕೆ ಅವನೊಂದಿಗೆ ಒಗತನಮಾಡುವದಕ್ಕೆ ಸಮ್ಮತಿಸಿದರೆ ಅವನು ಆಕೆಯನ್ನು ಬಿಡಬಾರದು.

13 ಒಬ್ಬ ಸ್ತ್ರೀಗೆ ಕ್ರಿಸ್ತ ನಂಬಿಕೆಯಿಲ್ಲದ ಗಂಡನಿರಲಾಗಿ ಅವನು ಆಕೆಯೊಂದಿಗೆ ಒಗತನ ಮಾಡುವದಕ್ಕೆ ಸಮ್ಮತಿಸಿದರೆ ಆಕೆಯು ಅವನನ್ನು ಬಿಡಬಾರದು.

14 ಯಾಕಂದರೆ ಕ್ರಿಸ್ತನಂಬಿಕೆಯಿಲ್ಲದ ಗಂಡನು ತನ್ನ ಹೆಂಡತಿಯಲ್ಲಿ ದೇವಜನಕ್ಕೆ ಸಂಬಂಧಪಟ್ಟವನಾದನು; ಮತ್ತು ಕ್ರಿಸ್ತನಂಬಿಕೆಯಿಲ್ಲದ ಹೆಂಡತಿಯು ನಮ್ಮ ಸಹೋದರನಾದ ತನ್ನ ಗಂಡನಲ್ಲಿ ದೇವಜನಕ್ಕೆ ಸಂಬಂಧಪಟ್ಟವಳಾದಳು. ಹಾಗಲ್ಲದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು; ಈಗಲಾದರೋ ಅವರು ದೇವಜನರಲ್ಲಿ ಸೇರಿದವರೇ ಆಗಿದ್ದಾರೆ.

15 ಆದರೆ ಕ್ರಿಸ್ತನಂಬಿಕೆಯಿಲ್ಲದವನು ಅಗಲಬೇಕೆಂದಿದ್ದರೆ ಅಗಲಿಹೋಗಲಿ; ಇಂಥ ಸಂದರ್ಭಗಳಲ್ಲಿ ಕ್ರೈಸ್ತ ಸಹೋದರನಾಗಲಿ ಸಹೋದರಿಯಾಗಲಿ ಬದ್ಧರಲ್ಲ. ಸಮಾಧಾನದಲ್ಲಿರಬೇಕೆಂದು ದೇವರು ನಮ್ಮನ್ನು ಕರೆದಿದ್ದಾನೆ.

16 ಎಲೌ ಸ್ತ್ರೀಯೇ, ನಿನ್ನ ಗಂಡನನ್ನು ರಕ್ಷಿಸುವಿಯೋ ಏನೋ ನಿನಗೇನು ಗೊತ್ತು? ಎಲೈ ಪುರುಷನೇ, ನಿನ್ನ ಹೆಂಡತಿಯನ್ನು ರಕ್ಷಿಸುವಿಯೋ ಏನೋ ನಿನಗೇನು ಗೊತ್ತು?

17 ಆದರೂ ಕರ್ತನು ಪ್ರತಿಯೊಬ್ಬನಿಗೆ ಯಾವ ಯಾವ ಸ್ಥಿತಿಯನ್ನು ನೇವಿುಸಿದ್ದಾನೋ, ಅಂದರೆ ದೇವರು ಕರೆಯುವಾಗ ಪ್ರತಿಯೊಬ್ಬನು ಯಾವ ಯಾವ ಸ್ಥಿತಿಯಲ್ಲಿ ಇದ್ದಾನೋ ಆಯಾ ಸ್ಥಿತಿಗೆ ಸರಿಯಾಗಿ ನಡೆದುಕೊಳ್ಳಲಿ. ಹೀಗೆ ಎಲ್ಲಾ ಸಭೆಗಳಲ್ಲಿಯೂ ಆಜ್ಞಾಪಿಸುತ್ತೇನೆ.

18 ದೇವರು ಕರೆದ ಕಾಲದಲ್ಲಿ ಯಾವನಾದರೂ ಸುನ್ನತಿಯುಳ್ಳವನಾಗಿದ್ದನೋ ಅವನು ಸುನ್ನತಿಯಿಲ್ಲದವನಂತಾಗಬಾರದು. ದೇವರು ಕರೆದಾಗ ಯಾವನಾದರೂ ಸುನ್ನತಿಯಿಲ್ಲದವನಾಗಿದ್ದನೋ ಅವನು ಸುನ್ನತಿ ಮಾಡಿಸಿಕೊಳ್ಳಬಾರದು.

19 ಸುನ್ನತಿಯಿದ್ದರೂ ಪ್ರಯೋಜನವಿಲ್ಲ, ಸುನ್ನತಿಯಿಲ್ಲದಿದ್ದರೂ ಪ್ರಯೋಜನವಿಲ್ಲ; ದೇವರ ಕಟ್ಟಳೆಗಳನ್ನು ಅನುಸರಿಸಿ ನಡೆಯುವದೇ ಪ್ರಯೋಜನವಾಗಿದೆ.

20 ದೇವರು ಕರೆದಾಗ ಪ್ರತಿಯೊಬ್ಬನು ಯಾವ ಸ್ಥಿತಿಯಲ್ಲಿದ್ದನೋ ಆ ಸ್ಥಿತಿಯಲ್ಲಿಯೇ ಇರಬೇಕು.

21 ದೇವರು ಕರೆದಾಗ ನೀನು ಮತ್ತೊಬ್ಬನ ದಾಸನಾಗಿದ್ದಿಯೋ? ಅದಕ್ಕೆ ಚಿಂತೆಮಾಡಬೇಡ. ಆದರೆ ಬಿಡುಗಡೆ ಹೊಂದುವದಕ್ಕೆ ನಿನ್ನ ಕೈಯಿಂದಾದರೆ ಸ್ವತಂತ್ರನಾಗುವದೇ ಉತ್ತಮ.

22 ಯಾವನು ಮತ್ತೊಬ್ಬನ ದಾಸನಾಗಿದ್ದು ಕರ್ತನ ಸೇವೆಗೆ ಕರೆಯಲ್ಪಟ್ಟಿರುವನೋ ಅವನು ಕರ್ತನ ಮೂಲಕ ಬಿಡುಗಡೆ ಹೊಂದಿರುವ ಸ್ವತಂತ್ರನು. ಅದೇ ಪ್ರಕಾರ ಯಾವನು ಸ್ವತಂತ್ರನಾಗಿದ್ದು ಕರೆಯಲ್ಪಟ್ಟಿರುವನೋ ಅವನು ಕ್ರಿಸ್ತನಿಗೆ ದಾಸನು.

23 ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು, ಮನುಷ್ಯರಿಗೆ ದಾಸರಾಗಬೇಡಿರಿ.

24 ಸಹೋದರರೇ, ಪ್ರತಿಯೊಬ್ಬನು ಕರೆಯಲ್ಪಟ್ಟಾಗ ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ದೇವರ ಮುಂದೆ ಇದ್ದುಕೊಂಡಿರಲಿ.

25 ಕನ್ನಿಕೆಯರನ್ನು ಕುರಿತು ಕರ್ತನಿಂದ ಬಂದ ಆಜ್ಞೆ ನನಗೆ ಯಾವದೂ ಇಲ್ಲ; ಆದರೆ ನಂಬಿಗಸ್ತನಾಗಿರುವದಕ್ಕೆ ಕರ್ತನಿಂದ ಕರುಣೆಯನ್ನು ಹೊಂದಿದವನಾಗಿ ನನ್ನ ಅಭಿಪ್ರಾಯವನ್ನು ಹೇಳುತ್ತೇನೆ.

26 ಈಗಿನ ಕಷ್ಟಕಾಲದ ನಿವಿುತ್ತ ಜನರು ಇದ್ದ ಹಾಗೇ ಇರುವದು ಒಳ್ಳೇದೆಂದು ಭಾವಿಸುತ್ತೇನೆ.

27 ಹೆಂಡತಿಯನ್ನು ಕಟ್ಟಿಕೊಂಡಿದ್ದೀಯೋ? ಬಿಡುಗಡೆಯಾಗುವದಕ್ಕೆ ಪ್ರಯತ್ನಿಸಬೇಡ. ಹೆಂಡತಿಯ ಕಟ್ಟಿಲ್ಲದವನಾಗಿದ್ದೀಯೋ? ಹೆಂಡತಿಯನ್ನು ದೊರಕಿಸಿಕೊಳ್ಳುವದಕ್ಕೆ ಪ್ರಯತ್ನಿಸಬೇಡ.

28 ಒಂದು ವೇಳೆ ನೀನು ಮದುವೆಮಾಡಿಕೊಂಡರೂ ಪಾಪವಿಲ್ಲ. ಕನ್ನಿಕೆಯು ಮದುವೆಮಾಡಿಕೊಂಡರೂ ಪಾಪವಿಲ್ಲ. ಆದರೆ ಮದುವೆಮಾಡಿಕೊಂಡವರಿಗೆ ಶರೀರಸಂಬಂಧವಾಗಿ ಕಷ್ಟಸಂಭವಿಸುವದು; ಇದು ನಿಮಗೆ ಉಂಟಾಗಬಾರದೆಂದು ನನ್ನ ಅಪೇಕ್ಷೆ.

29 ಸಹೋದರರೇ, ನಾನು ಹೇಳುವದೇನಂದರೆ - ಸಮಯವು ಸಂಕೋಚವಾದದ್ದರಿಂದ ಇನ್ನು ಮೇಲೆ ಹೆಂಡತಿಯುಳ್ಳವರು ಹೆಂಡತಿಯಿಲ್ಲದವರಂತೆಯೂ, ಅಳುವವರು ಅಳದವರಂತೆಯೂ,

30 ಸಂತೋಷಪಡುವವರು ಸಂತೋಷಪಡದವರಂತೆಯೂ, ಕೊಂಡುಕೊಳ್ಳುವವರು ಕೊಂಡದ್ದು ತಮ್ಮದೇ ಎಂದು ಹೇಳದವರಂತೆಯೂ,

31 ಲೋಕವನ್ನು ಅನುಭೋಗಿಸುವವರು ಅದನ್ನು ಪರಿಪೂರ್ಣವಾಗಿ ಅನುಭೋಗಿಸದವರಂತೆಯೂ ಇರಬೇಕು; ಯಾಕಂದರೆ ಈ ಪ್ರಪಂಚದ ತೋರಿಕೆಯು ಗತಿಸಿ ಹೋಗುತ್ತಾ ಅದೆ.

32 ಆದರೆ ನೀವು ಚಿಂತೆಯಿಲ್ಲದವರಾಗಿರಬೇಕೆಂಬದು ನನ್ನ ಇಷ್ಟ. ಮದುವೆಯಿಲ್ಲದವನು ತಾನು ಕರ್ತನನ್ನು ಹೇಗೆ ಮೆಚ್ಚಿಸಬೇಕೆಂದು ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ.

33 ಮದುವೆಯಾದವನು ತನ್ನ ಹೆಂಡತಿಯನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ.

34 ಅದರಂತೆ ಮುತ್ತೈದೆಗೂ ಕನ್ನಿಕೆಗೂ ವ್ಯತ್ಯಾಸವುಂಟು. ಮದುವೆಯಿಲ್ಲದವಳು ತಾನು ದೇಹಾತ್ಮಗಳಲ್ಲಿ ಪವಿತ್ರಳಾಗಿರಬೇಕೆಂದು ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ;

35 ಆದರೆ ಮದುವೆಯಾದವಳು ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ. ನಾನು ನಿಮಗೆ ಉರ್ಲು ಹಾಕಬೇಕೆಂದು ಇದನ್ನು ಹೇಳುವದಿಲ್ಲ, ನೀವು ಸಜ್ಜನರಿಗೆ ತಕ್ಕ ಹಾಗೆ ನಡೆದು ಭಿನ್ನಭಾವವಿಲ್ಲದೆ ಕರ್ತನಿಗೆ ಪಾದಸೇವೆಯನ್ನು ಮಾಡುವವರಾಗಬೇಕೆಂದು ನಿಮ್ಮ ಹಿತಕ್ಕೋಸ್ಕರವೇ ಹೇಳುತ್ತೇನೆ.

36 ಒಬ್ಬನು ತನ್ನ ಮಗಳಿಗೆ ಮದುವೆಯಿಲ್ಲದಿರುವದು ಮರ್ಯಾದೆಯಲ್ಲವೆಂದು ಭಾವಿಸಿದರೆ ಮತ್ತು ಆಕೆಗೆ ಪ್ರಾಯ ಕಳೆದು ಹೋಗುತ್ತದಲ್ಲಾ, ಮದುವೆಯಾಗುವದು ಅವಶ್ಯವೆಂದು ಅವನಿಗೆ ಕಂಡರೆ ತನ್ನಿಷ್ಟದಂತೆ ಮಾಡಲಿ. ಅವನು ಪಾಪಮಾಡುವದಿಲ್ಲ, ಮದುವೆ ಮಾಡಿಕೊಡಲಿ.

37 ಆದರೆ ಒಬ್ಬನು ದೃಢಚಿತ್ತನಾಗಿದ್ದು ಬಲವಂತವೇನೂ ಇಲ್ಲದೆ ತನ್ನಿಷ್ಟವನ್ನು ನಡಿಸುವದಕ್ಕೆ ಹಕ್ಕುಳ್ಳವನಾಗಿ ತನ್ನ ಮಗಳನ್ನು ಮದುವೆ ಮಾಡಿಕೊಡುವದಿಲ್ಲವೆಂದು ತನ್ನೊಳಗೆ ನಿರ್ಣಯಿಸಿಕೊಂಡರೆ ಅವನು ಹಾಗೆ ಮಾಡುವದು ಒಳ್ಳೇದು.

38 ಹಾಗಾದರೆ ತನ್ನ ಮಗಳನ್ನು ಮದುವೆಮಾಡಿಕೊಡುವವನು ಒಳ್ಳೇದನ್ನು ಮಾಡುತ್ತಾನೆ. ಮದುವೆ ಮಾಡಿಕೊಡದೆ ಇರುವವನು ಇನ್ನೂ ಒಳ್ಳೇದನ್ನು ಮಾಡುತ್ತಾನೆ.

39 ಮುತ್ತೈದೆಯು ತನ್ನ ಗಂಡನು ಜೀವದಿಂದಿರುವ ತನಕ ಅವನಿಗೆ ಬದ್ಧಳಾಗಿದ್ದಾಳೆ; ಗಂಡನು ಸತ್ತಿದ್ದರೆ ಆಕೆಯು ಬೇಕಾದವನನ್ನು ಮದುವೆ ಮಾಡಿಕೊಳ್ಳುವದಕ್ಕೆ ಸ್ವತಂತ್ರಳಾಗಿದ್ದಾಳೆ.

40 ಆದರೆ ಈ ಕಾರ್ಯವು ಕರ್ತನ ಶಿಷ್ಯರಿಗೆ ತಕ್ಕಂತೆ ನಡೆಯಲಿ. ಆದರೂ ಮದುವೆ ಮಾಡಿಕೊಳ್ಳುವದಕ್ಕಿಂತಲೂ ಇದ್ದ ಹಾಗೆಯೇ ಇರುವದು ಆಕೆಗೆ ಸುಖವೆಂದು ನನ್ನ ಅಭಿಪ್ರಾಯ; ನನಗೂ ದೇವರ ಆತ್ಮವುಂಟೆಂದು ನೆನಸುತ್ತೇನೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು