Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಕೊರಿಂಥದವರಿಗೆ 6 - ಕನ್ನಡ ಸತ್ಯವೇದವು J.V. (BSI)


ಕ್ರೈಸ್ತರು ಕ್ರೈಸ್ತರಲ್ಲದವರ ಮುಂದೆ ವ್ಯಾಜ್ಯವಾಡಿದ್ದನ್ನು ಕುರಿತದ್ದು

1 ನಿಮ್ಮಲ್ಲಿ ಒಬ್ಬನಿಗೆ ಮತ್ತೊಬ್ಬನ ಮೇಲೆ ವ್ಯಾಜ್ಯವಿದ್ದರೆ ನ್ಯಾಯವಿಚಾರಣೆಗೆ ದೇವಜನರ ಮುಂದೆ ಹೋಗದೆ ಅನ್ಯಜನರ ಮುಂದೆ ಹೋಗುವದಕ್ಕೆ ಅವನಿಗೆ ಧೈರ್ಯವುಂಟೋ?

2 ದೇವಜನರು ಲೋಕಕ್ಕೆ ತೀರ್ಪುಮಾಡುವರೆಂಬದು ನಿಮಗೆ ತಿಳಿಯದೋ? ಲೋಕವು ನಿವ್ಮಿುಂದ ತೀರ್ಪನ್ನು ಹೊಂದಬೇಕಾಗಿರುವಲ್ಲಿ ಅತ್ಯಲ್ಪ ಸಂಗತಿಗಳನ್ನು ಕುರಿತು ತೀರ್ಪುಮಾಡುವದಕ್ಕೆ ಅಯೋಗ್ಯರಾಗಿದ್ದೀರೋ?

3 ನಾವು ದೇವದೂತರಿಗೂ ತೀರ್ಪುಮಾಡುವೆವೆಂಬದು ನಿಮಗೆ ತಿಳಿಯದೋ? ಐಹಿಕ ಜೀವದ ಕಾರ್ಯಗಳನ್ನು ಕುರಿತು ನಾವು ತೀರ್ಪುಮಾಡುವದು ದೊಡ್ಡದೋ?

4 ಐಹಿಕ ಜೀವಸಂಬಂಧದಲ್ಲಿ ನಿರ್ಣಯಿಸತಕ್ಕ ಕಾರ್ಯಗಳು ನಿಮ್ಮಲ್ಲಿದ್ದರೆ ತೀರ್ಪುಮಾಡುವದಕ್ಕೆ ಸಭೆಯಲ್ಲಿ ಗಣನೆಗೆ ಬಾರದವರನ್ನು ಕುಳ್ಳಿರಿಸಿಕೊಳ್ಳುತ್ತೀರೋ?

5 ನಿಮ್ಮಲ್ಲಿ ನಾಚಿಕೆ ಹುಟ್ಟಿಸುವದಕ್ಕೆ ಇದನ್ನು ಹೇಳುತ್ತೇನೆ. ಏನು, ತನ್ನ ಸಹೋದರರ ಮಧ್ಯದಲ್ಲಿ ನ್ಯಾಯವನ್ನು ಬಗೆಹರಿಸಬಲ್ಲವನಾದ ಜಾಣನು ನಿಮ್ಮಲ್ಲಿ ಒಬ್ಬನಾದರೂ ಇಲ್ಲವೋ?

6 ಸಹೋದರನು ಸಹೋದರನ ಮೇಲೆ ವ್ಯಾಜ್ಯವಾಡುವದು ಅಲ್ಲದೆ ಅದನ್ನು ಕ್ರಿಸ್ತಭಕ್ತರಲ್ಲದವರ ಮುಂದೆ ತೆಗೆದುಕೊಂಡು ಹೋಗುವದು ಸರಿಯೋ? ನಿಮ್ಮ ನಿಮ್ಮಲ್ಲಿ ವ್ಯಾಜ್ಯವಾಡುವದೇ ನೀವು ಸೋತವರೆಂಬದಕ್ಕೆ ಗುರುತು.

7 ಅದಕ್ಕಿಂತ ಅನ್ಯಾಯವನ್ನು ಯಾಕೆ ಸಹಿಸಬಾರದು? ಆಸ್ತಿಯ ನಷ್ಟವನ್ನು ಯಾಕೆ ತಾಳಬಾರದು?

8 ಆದರೆ ನೀವು ಅನ್ಯಾಯಮಾಡುತ್ತೀರಿ; ಆಸ್ತಿಯನ್ನು ಅಪಹರಿಸುತ್ತೀರಿ; ಸಹೋದರರಲ್ಲಿಯೇ ಹೀಗೆ ಮಾಡುತ್ತೀರಿ.

9 ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ, ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾವಿುಗಳು

10 ಕಳ್ಳರು ಲೋಭಿಗಳು ಕುಡಿಕರು ಬೈಯುವವರು ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.

11 ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ; ಆದರೂ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮದಲ್ಲಿಯೂ ತೊಳೆದುಕೊಂಡಿರಿ, ದೇವಜನರಾದಿರಿ, ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.


ಜಾರತ್ವವು ಅತಿಭಯಂಕರವಾದ ಪಾಪಕೃತ್ಯ; ದೇಹವು ಪವಿತ್ರಾತ್ಮನಿಗೆ ಅನುಕೂಲವಾದ ಗರ್ಭಗುಡಿಯಾಗಿರಬೇಕು ಎಂಬುವ ಬೋಧೆ

12 ಎಲ್ಲಾ ಕಾರ್ಯಗಳನ್ನು ಮಾಡುವದಕ್ಕೆ ನನಗೆ ಸ್ವಾತಂತ್ರ್ಯವೇನೋ ಉಂಟು, ಆದರೆ ಎಲ್ಲವೂ ವಿಹಿತವಾಗಿರುವದಿಲ್ಲ. ಎಲ್ಲಾ ಕಾರ್ಯಗಳನ್ನು ಮಾಡುವದಕ್ಕೆ ನನಗೆ ಸ್ವಾತಂತ್ರ್ಯವುಂಟು, ಆದರೆ ನಾನು ಯಾವದಕ್ಕೂ ಒಳಗಾಗುವದಿಲ್ಲ.

13 ಭೋಜನಪದಾರ್ಥಗಳು ಹೊಟ್ಟೆಗಾಗಿಯೂ ಹೊಟ್ಟೆಯು ಭೋಜನಪದಾರ್ಥಗಳಿಗಾಗಿಯೂ ಅವೆ; ದೇವರು ಇದನ್ನೂ ಅವುಗಳನ್ನೂ ಕೂಡ ತೆಗೆದುಹಾಕುವನು. ಆದರೂ ದೇಹವು ಹಾದರಕ್ಕೋಸ್ಕರ ಇರುವಂಥದಲ್ಲ, ಕರ್ತನಿಗೋಸ್ಕರವಾಗಿದೆ; ಕರ್ತನು ದೇಹಕ್ಕೋಸ್ಕರ ಇದ್ದಾನೆ.

14 ದೇವರು ಕರ್ತನನ್ನು ಎಬ್ಬಿಸಿದ್ದಲ್ಲದೆ ನಮ್ಮನ್ನೂ ತನ್ನ ಪರಾಕ್ರಮದಿಂದ ಎಬ್ಬಿಸುವನು.

15 ನಿಮ್ಮ ದೇಹಗಳು ಕ್ರಿಸ್ತನ ಅಂಗಗಳಾಗಿವೆ ಎಂಬದು ನಿಮಗೆ ತಿಳಿಯದೋ? ಹೀಗಿರಲಾಗಿ ಕ್ರಿಸ್ತನ ಅಂಗಗಳಾಗಿರುವಂಥವುಗಳನ್ನು ತೆಗೆದುಬಿಟ್ಟು ಸೂಳೆಯ ಅಂಗಗಳಾಗ ಮಾಡಬಹುದೋ? ಎಂದಿಗೂ ಮಾಡಬಾರದು.

16 ಸೂಳೆಯ ಸಂಸರ್ಗ ಮಾಡುವವನು ಅವಳೊಂದಿಗೆ ಒಂದೇ ದೇಹವಾಗಿದ್ದಾನೆಂಬದು ನಿಮಗೆ ತಿಳಿಯದೋ? ಗಂಡಹೆಂಡರಿಬ್ಬರು ಒಂದೇ ಶರೀರವಾಗಿರುವರೆಂದು ದೇವರು ಹೇಳುತ್ತಾನಲ್ಲಾ.

17 ಕರ್ತನ ಸಂಸರ್ಗದಲ್ಲಿರುವವನಾದರೋ ಆತನೊಂದಿಗೆ ಒಂದೇ ಆತ್ಮವಾಗಿದ್ದಾನೆ.

18 ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ, ಮನುಷ್ಯರು ಮಾಡುವ ಇತರ ಪಾಪಕೃತ್ಯಗಳು ದೇಹಕ್ಕೆ ಹೊರಗಾಗಿವೆ, ಆದರೆ ಜಾರತ್ವ ಮಾಡುವವನು ತನ್ನ ದೇಹಕ್ಕೆ ಹಾನಿಕರವಾದ ಪಾಪವನ್ನು ಮಾಡುತ್ತಾನೆ.

19 ದೇವರಿಂದ ದೊರಕಿ ನಿಮ್ಮೊಳಗೆ ನೆಲೆಗೊಂಡಿರುವ ಪವಿತ್ರಾತ್ಮನಿಗೆ ನಿಮ್ಮ ದೇಹವು ಗರ್ಭಗುಡಿಯಾಗಿದೆಂಬದು ನಿಮಗೆ ತಿಳಿಯದೋ?

20 ನೀವು ನಿಮ್ಮ ಸ್ವಂತ ಸೊತ್ತಲ್ಲ; ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು; ಆದಕಾರಣ ನಿಮ್ಮ ದೇಹದಲ್ಲಿ ದೇವರ ಪ್ರಭಾವವನ್ನು ಪ್ರಕಾಶಪಡಿಸಿರಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು