Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಕೊರಿಂಥದವರಿಗೆ 5 - ಕನ್ನಡ ಸತ್ಯವೇದವು J.V. (BSI)


ಸಭೆಯಲ್ಲಿ ನಡೆದಿದ್ದ ವಿಪರೀತ ಜಾರತ್ವವನ್ನು ಕುರಿತದ್ದು

1 ನಿಮ್ಮಲ್ಲಿ ಜಾರತ್ವವುಂಟೆಂದು ಜನರು ಸಾಧಾರಣವಾಗಿ ಹೇಳುತ್ತಾರೆ. ಒಬ್ಬನು ತನ್ನ ಅಪ್ಪನ ಹೆಂಡತಿಯನ್ನು ಇಟ್ಟುಕೊಂಡಿದ್ದಾನಂತೆ; ಅಂಥ ಜಾರತ್ವವು ಅನ್ಯಜನರಲ್ಲಿಯೂ ಇಲ್ಲ.

2 ಹೀಗಿದ್ದರೂ ನೀವು ದುಃಖವನ್ನು ತೋರಿಸದೆ ಈ ಕಾರ್ಯಮಾಡಿದವನನ್ನು ನಿಮ್ಮೊಳಗಿಂದ ಬಹಿಷ್ಕರಿಸದೆ ಉಬ್ಬಿಕೊಂಡೇ ಇದ್ದೀರಲ್ಲಾ.

3 ನಾನಂತೂ ದೇಹದಿಂದ ದೂರವಾಗಿದ್ದರೂ ಆತ್ಮದಿಂದ ಹತ್ತರದಲ್ಲಿದ್ದು ಈ ಕಾರ್ಯಮಾಡಿದವನನ್ನು ಕುರಿತು ಆಗಲೇ ಹತ್ತರವಿದ್ದವನಂತೆ ತೀರ್ಪು ಮಾಡಿದ್ದೇನಂದರೆ -

4 ನೀವೂ ನನ್ನಾತ್ಮನೂ ಕರ್ತನಾದ ಯೇಸುವಿನ ಸಾಮರ್ಥ್ಯ ಸಹಿತ ಒಟ್ಟುಗೂಡಿ ಬಂದಿರಲಾಗಿ

5 ಕರ್ತನಾದ ಯೇಸುವಿನ ಪ್ರತ್ಯಕ್ಷತೆಯ ದಿನದಲ್ಲಿ ಅಂಥವನ ಆತ್ಮವು ರಕ್ಷಣೆ ಹೊಂದುವದಕ್ಕಾಗಿ ಅವನ ಶರೀರಭಾವವು ನಾಶವಾಗಬೇಕೆಂದು ನಮ್ಮ ಕರ್ತನಾದ ಯೇಸುವಿನ ಹೆಸರಿನಲ್ಲಿ ಅವನನ್ನು ಸೈತಾನನಿಗೆ ಒಪ್ಪಿಸಿಕೊಡಬೇಕೆಂಬದೇ.

6 ನೀವು ಹಿಗ್ಗುವದು ಒಳ್ಳೇದಲ್ಲ. ಸ್ವಲ್ಪ ಹುಳಿ ಕಲಸಿದರೆ ಕಣಿಕವೆಲ್ಲಾ ಹುಳಿಯಾಗುತ್ತದೆಂಬದು ನಿಮಗೆ ತಿಳಿಯದೋ?

7 ನೀವು ಹುಳಿಯಿಲ್ಲದವರೆನಿಸಿಕೊಂಡದ್ದರಿಂದ ಹಳೆ ಹುಳಿಯನ್ನು ತೆಗೆದುಹಾಕಿ ಹೊಸ ಕಣಿಕದಂತಾಗಿರ್ರಿ. ಯಾಕಂದರೆ ನಮ್ಮ ಪಸ್ಕದ ಯಜ್ಞದ ಕುರಿಯು ಕೊಯಿದದೆ; ಅದಾವದಂದರೆ ಕ್ರಿಸ್ತನೇ.

8 ಆದಕಾರಣ ನಾವು ಹಳೇ ಹುಳಿಯನ್ನು ಅಂದರೆ ದುರ್ಮಾರ್ಗತ್ವ ದುಷ್ಟತ್ವ ಎಂಬ ಹುಳಿಯನ್ನು ಇಟ್ಟುಕೊಳ್ಳದೆ ಸರಳತೆ ಸತ್ಯತೆ ಎಂಬ ಹುಳಿಯಿಲ್ಲದ ರೊಟ್ಟಿಯನ್ನೇ ತೆಗೆದುಕೊಂಡು ಹಬ್ಬವನ್ನು ಆಚರಿಸೋಣ.

9 ಜಾರರ ಸಹವಾಸ ಮಾಡಬಾರದೆಂದು ನನ್ನ ಪತ್ರಿಕೆಯಲ್ಲಿ ಬರೆದಿದ್ದೆನಷ್ಟೆ.

10 ಈ ಲೋಕದಲ್ಲಿರುವ ಜಾರರು, ಲೋಭಿಗಳು, ಸುಲುಕೊಳ್ಳುವವರು, ವಿಗ್ರಹಾರಾಧಕರು ಇವರ ಸಹವಾಸವನ್ನು ಬಿಟ್ಟುಬಿಡಬೇಕೆಂದು ನನ್ನ ತಾತ್ಪರ್ಯವಲ್ಲ; ಹಾಗೆ ಬಿಡಬೇಕಾದರೆ ನೀವು ಈ ಲೋಕವನ್ನೇ ಬಿಟ್ಟುಹೋಗಬೇಕಾಗುವದು.

11 ಆದರೆ ಕ್ರೈಸ್ತ ಸಹೋದರನೆನಿಸಿಕೊಂಡವನು ಜಾರನಾದರೂ ಲೋಭಿಯಾದರೂ ವಿಗ್ರಹಾರಾಧಕನಾದರೂ ಬೈಯುವವನಾದರೂ ಕುಡಿಕನಾದರೂ ಸುಲುಕೊಳ್ಳುವವನಾದರೂ ಆಗಿದ್ದ ಪಕ್ಷದಲ್ಲಿ ಅವನ ಸಹವಾಸ ಮಾಡಬಾರದು, ಅಂಥವನ ಸಂಗಡ ಊಟಮಾಡಲೂಬಾರದು ಎಂದು ಬರೆದಿದ್ದೆನು.

12 ಹೊರಗಿನವರನ್ನು ಕುರಿತು ತೀರ್ಪುಮಾಡುವದಕ್ಕೆ ನನಗೇನಧಿಕಾರ? ಒಳಗಿನವರನ್ನು ಕುರಿತು ತೀರ್ಪುಮಾಡುವವರು ನೀವು ಅಲ್ಲವೇ?

13 ಹೊರಗಿನವರನ್ನು ಕುರಿತು ತೀರ್ಪುಮಾಡುವವನು ದೇವರು. ಆ ದುಷ್ಟನನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು