Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಕೊರಿಂಥದವರಿಗೆ 4 - ಕನ್ನಡ ಸತ್ಯವೇದವು J.V. (BSI)


ಸುವಾರ್ತಾಬೋಧಕರ ವಿಷಯದಲ್ಲಿ ಮನುಷ್ಯರ ಎಣಿಕೆ ವಿಶೇಷವಲ್ಲ, ದೇವರ ಎಣಿಕೆಯೇ ಮುಖ್ಯ

1 ಜನರು ನಮ್ಮನ್ನು ಕ್ರಿಸ್ತನ ಕೈಕೆಳಗಿನವರೆಂತಲೂ ದೇವರು ತಿಳಿಸಿರುವ ಸತ್ಯಾರ್ಥಗಳ ವಿಷಯದಲ್ಲಿ ಮನೆವಾರ್ತೆಯವರೆಂತಲೂ ಎಣಿಸಬೇಕು.

2 ಹೀಗಿರಲು ಮನೆವಾರ್ತೆಯವನು ನಂಬಿಗಸ್ತನಾಗಿ ಕಂಡುಬರುವದು ಅವಶ್ಯವಲ್ಲವೇ.

3 ನನಗಾದರೋ ನಿವ್ಮಿುಂದಾಗಲಿ ಮನುಷ್ಯರು ನೇವಿುಸುವ ದಿನದಲ್ಲಾಗುವ ನ್ಯಾಯ ಸಭೆಯಿಂದಾಗಲಿ ವಿಚಾರಣೆಯಾಗುವದು ಅತ್ಯಲ್ಪ ಕಾರ್ಯವಾಗಿದೆ; ನಾನೂ ನನ್ನನ್ನು ವಿಚಾರಿಸಿಕೊಳ್ಳುವದಿಲ್ಲ.

4 ನನ್ನಲ್ಲಿ ದೋಷವಿದೆಯೆಂದು ನನ್ನ ಬುದ್ಧಿಗೆ ತೋರುವದಿಲ್ಲವಾದರೂ ದೋಷವಿಲ್ಲದವನೆಂಬ ನಿರ್ಣಯವು ಇದರಿಂದಾಗುವದಿಲ್ಲ; ನನ್ನನ್ನು ವಿಚಾರಣೆಮಾಡುವವನು ಕರ್ತನೇ.

5 ಆದದರಿಂದ ಕಾಲಕ್ಕೆ ಮೊದಲು ಯಾವದನ್ನು ಕುರಿತೂ ತೀರ್ಪುಮಾಡಬೇಡಿರಿ; ಕರ್ತನು ಬರುವ ತನಕ ತಡೆಯಿರಿ. ಆತನು ಕತ್ತಲೆಯಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು, ಹೃದಯದ ಯೋಚನೆಗಳನ್ನು ಪ್ರತ್ಯಕ್ಷಪಡಿಸುವನು; ಆ ಕಾಲದಲ್ಲಿ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ಬರುವದು.


ಪೌಲನು ಕೊರಿಂಥ ಸಭೆಯವರನ್ನು ತಂದೆಯೋಪಾದಿಯಲ್ಲಿ ಗದರಿಸಿದ್ದು

6 ಸಹೋದರರೇ, ನಾನು ನಿಮಗೋಸ್ಕರವೇ ಹಿಂದಣ ಮಾತುಗಳನ್ನು ಸಾಮ್ಯರೂಪವಾಗಿ ನನ್ನ ವಿಷಯದಲ್ಲಿಯೂ ಅಪೊಲ್ಲೋಸನ ವಿಷಯದಲ್ಲಿಯೂ ಹೇಳಿದ್ದೇನೆ. ನೀವು ನಮ್ಮನ್ನು ದೃಷ್ಟಾಂತವಾಗಿ ಇಟ್ಟುಕೊಂಡು ಶಾಸ್ತ್ರದಲ್ಲಿ ಬರೆದಿರುವದನ್ನು ಮೀರಿ ಹೋಗಬಾರದೆಂಬದನ್ನೂ ನಿಮ್ಮಲ್ಲಿ ಯಾರೂ ಒಬ್ಬ ಬೋಧಕನನ್ನು ವಿರೋಧಿಸಿ ಮತ್ತೊಬ್ಬನ ಪಕ್ಷವನ್ನು ಹಿಡಿದು ಉಬ್ಬಿಕೊಳ್ಳಬಾರದೆಂಬದನ್ನೂ ಕಲಿತುಕೊಳ್ಳಬೇಕು.

7 ನಿನಗೂ ಇತರರಿಗೂ ತಾರತಮ್ಯ ಮಾಡಿದವರು ಯಾರು? ದೇವರಿಂದ ಹೊಂದದಿರುವಂಥದು ನಿನ್ನಲ್ಲಿ ಒಂದಾದರೂ ಉಂಟೋ? ಹೊಂದಿದ ಮೇಲೆ ಹೊಂದದವನಂತೆ ನೀನು ಯಾಕೆ ಹಿಗ್ಗಿಕೊಳ್ಳುತ್ತೀ?

8 ಈಗಾಗಲೇ ನೀವು ತೃಪ್ತರಾದಿರಿ, ಈಗಾಗಲೇ ಐಶ್ವರ್ಯವಂತರಾದಿರಿ, ನಮ್ಮ ಸಹಾಯವಿಲ್ಲದೆ ಅರಸರಾದಿರಿ. ನೀವು ನಿಜವಾಗಿ ಅರಸರಾಗಿದ್ದರೆ ನನಗೆ ಎಷ್ಟೋ ಆನಂದವಾಗುತ್ತಿತ್ತು; ಆಗ ನಾವು ಸಹ ನಿಮ್ಮೊಂದಿಗೆ ಅರಸರಾಗಿರುತ್ತಿದ್ದೆವು.

9 ಹಾಗಾಗದೆ ದೇವರು ಅಪೊಸ್ತಲರಾದ ನಮ್ಮನ್ನು ಮರಣವಿಧಿ ಹೊಂದಿದವರನ್ನೋ ಎಂಬಂತೆ ಕಡೆಯವರಾಗಿ ತೋರಿಸಿದ್ದಾನೆಂದು ನನಗೆ ತೋಚುತ್ತದೆ; ನಾವು ದೇವದೂತರಿಗೂ ಮನುಷ್ಯರಿಗೂ ಅಂತೂ ಜಗತ್ತಿಗೆಲ್ಲಾ ನೋಟವಾದೆವು.

10 ನಾವಂತು ಕ್ರಿಸ್ತನ ನಿವಿುತ್ತ ಹುಚ್ಚರಾಗಿದ್ದೇವೆ, ನೀವೋ ಕ್ರಿಸ್ತನಲ್ಲಿ ಬುದ್ಧಿವಂತರಾಗಿದ್ದೀರಿ; ನಾವು ಬಲಹೀನರು, ನೀವು ಬಲಿಷ್ಠರು; ನೀವು ಮಾನಶಾಲಿಗಳು, ನಾವು ಮಾನಹೀನರು.

11 ಈ ಗಳಿಗೆಯವರೆಗೂ ನಾವು ಹಸಿದವರೂ ಬಾಯಾರಿಕೆಯುಳ್ಳವರೂ ಮೈಗೆ ವಸ್ತ್ರವಿಲ್ಲದವರೂ ಗುದ್ದು ತಿನ್ನುವವರೂ

12 ಮನೆಯಿಲ್ಲದವರೂ ಸ್ವಂತ ಕೈಗಳಿಂದ ಕೆಲಸಮಾಡಿ ದುಡಿಯುವವರೂ ಆಗಿದ್ದೇವೆ. ಬೈಸಿಕೊಂಡು ಹರಸುತ್ತೇವೆ; ಹಿಂಸೆಪಟ್ಟು ಸಹಿಸಿಕೊಳ್ಳುತ್ತೇವೆ; ಅಪಕೀರ್ತಿಹೊಂದಿ ಆದರಿಸುತ್ತೇವೆ.

13 ನಾವು ಈಗಿನವರೆಗೂ ಲೋಕದ ಕಸವೋ ಎಲ್ಲಾದರ ಹೊಲಸೋ ಎಂಬಂತೆ ಆಗಿದ್ದೇವೆ.

14 ನಿಮ್ಮನ್ನು ನಾಚಿಕೆಪಡಿಸುವದಕ್ಕಾಗಿ ಬರೆಯದೆ ನನ್ನ ಪ್ರಿಯ ಮಕ್ಕಳೆಂದು ಭಾವಿಸಿ ನಿಮಗೆ ಬುದ್ಧಿ ಹೇಳುವದಕ್ಕಾಗಿಯೇ ಈ ಮಾತುಗಳನ್ನು ಬರೆದಿದ್ದೇನೆ.

15 ನಿಮಗೆ ಕ್ರಿಸ್ತನಲ್ಲಿ ಉಪಾಧ್ಯಾಯರು ಸಾವಿರಾರು ಮಂದಿ ಇದ್ದರೂ ತಂದೆಗಳು ಬಹುಮಂದಿ ಇಲ್ಲ; ನಾನೇ ನಿಮ್ಮನ್ನು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ಪಡೆದೆನು.

16 ಆದದರಿಂದ ನನ್ನನ್ನು ಅನುಸರಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

17 ಈ ನಿವಿುತ್ತದಿಂದ ಕರ್ತನಲ್ಲಿ ನನ್ನ ಮಗನಾದ ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿಕೊಟ್ಟಿದ್ದೇನೆ. ಅವನು ನನಗೆ ಪ್ರಿಯನೂ ನಂಬಿಗಸ್ತನೂ ಆಗಿದ್ದಾನೆ. ಅವನು ಕ್ರಿಸ್ತನ ಸೇವೆಯಲ್ಲಿರುವ ನನ್ನ ನಡಾವಳಿಯನ್ನು ಅಂದರೆ ನಾನು ಎಲ್ಲೆಲ್ಲಿಯೂ ಪ್ರತಿಯೊಂದು ಸಭೆಯಲ್ಲಿಯೂ ಬೋಧಿಸುವ ಕ್ರಮವನ್ನು ನಿಮ್ಮ ನೆನಪಿಗೆ ತರುವನು.

18 ನಿಮ್ಮಲ್ಲಿ ಕೆಲವರು - ಪೌಲನು ನಮ್ಮ ಬಳಿಗೆ ಬರುವದಿಲ್ಲವೆಂದು ಉಬ್ಬಿಕೊಂಡಿದ್ದಾರೆ.

19 ಆದರೆ ಕರ್ತನ ಚಿತ್ತವಿದ್ದರೆ ನಾನು ಬೇಗ ನಿಮ್ಮ ಬಳಿಗೆ ಬಂದು ಉಬ್ಬಿಕೊಂಡಿರುವವರ ಮಾತನ್ನಲ್ಲ ಅವರ ಶಕ್ತಿಯನ್ನೇ ಗೊತ್ತುಮಾಡಿಕೊಳ್ಳುವೆನು.

20 ದೇವರ ರಾಜ್ಯವು ಮಾತಿನಲ್ಲಿ ಇಲ್ಲ, ಶಕ್ತಿಯಲ್ಲಿಯೇ ಆಧಾರಗೊಂಡಿದೆ.

21 ನಿಮ್ಮ ಇಷ್ಟವೇನು? ಬೆತ್ತ ತೆಗೆದುಕೊಂಡು ನಿಮ್ಮ ಬಳಿಗೆ ಬರಲೋ? ಪ್ರೀತಿಯಿಂದಲೂ ಸೌಮ್ಯಭಾವದಿಂದಲೂ ಕೂಡಿದವನಾಗಿ ಬರಲೋ?

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು