1 ಕೊರಿಂಥದವರಿಗೆ 3 - ಕನ್ನಡ ಸತ್ಯವೇದವು J.V. (BSI)1 ಸಹೋದರರೇ, ನಾನಂತೂ ದೇವರಾತ್ಮನಿಂದ ನಡಿಸಿಕೊಳ್ಳುವವರಿಗೆ ತಕ್ಕಂತೆ ನಿಮ್ಮ ಸಂಗಡ ಮಾತಾಡಲಾರದೆ ಪ್ರಾಪಂಚಿಕರೂ ಕ್ರಿಸ್ತನ ವಿಷಯದಲ್ಲಿ ಎಳೆಗೂಸುಗಳೂ ಆಗಿರುವಂಥವರಿಗೆ ತಕ್ಕಂತೆ ನಿಮ್ಮ ಸಂಗಡ ಮಾತಾಡಬೇಕಾಯಿತು. 2 ನಿಮಗೆ ಹಾಲು ಕುಡಿಸಿದೆನು, ಅನ್ನಾ ಕೊಡಲಿಲ್ಲ; ಅನ್ನಾ ತಿನ್ನುವದಕ್ಕೆ ನಿಮಗೆ ಇನ್ನೂ ಶಕ್ತಿ ಇರಲಿಲ್ಲ, ಈಗಲಾದರೂ ಶಕ್ತಿಯಿಲ್ಲ; 3 ಯಾಕಂದರೆ ಇನ್ನೂ ಶರೀರಾಧೀನಸ್ವಭಾವವುಳ್ಳವರಾಗಿದ್ದೀರಿ. ನಿಮ್ಮೊಳಗೆ ಹೊಟ್ಟೇಕಿಚ್ಚು ಜಗಳಗಳು ಇರುವಲ್ಲಿ ನೀವು ಶರೀರಾಧೀನಸ್ವಭಾವವುಳ್ಳವರಾಗಿದ್ದು ಕೇವಲ ನರಪ್ರಾಣಿಗಳಂತೆ ನಡೆಯುತ್ತೀರಲ್ಲವೇ. 4 ಒಬ್ಬನು - ನಾನು ಪೌಲನವನು ಎಂದು ಮತ್ತೊಬ್ಬನು - ನಾನು ಅಪೊಲ್ಲೋಸನವನು ಎಂದು ಹೇಳುತ್ತಿರುವಾಗ ನೀವು ಕೇವಲ ನರಪ್ರಾಣಿಗಳಾಗಿದ್ದೀರಲ್ಲವೇ. ಸುವಾರ್ತೆಯನ್ನು ಸಾರುವವರು ದೇವರ ಕೈಯಲ್ಲಿ ಬರೀ ಸಾಧನಗಳಷ್ಟೆ; ಕಾರ್ಯಕರ್ತನು ದೇವರೇ 5 ಹಾಗಾದರೆ ಅಪೊಲ್ಲೋಸನು ಏನು? ಪೌಲನು ಏನು? ಅವರು ಸೇವಕರು; ಅವರ ಮುಖಾಂತರ ನೀವು ಕ್ರಿಸ್ತನನ್ನು ನಂಬುವವರಾದಿರಿ; ಕರ್ತನು ಒಬ್ಬೊಬ್ಬನಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆಮಾಡುವವರಾಗಿದ್ದಾರೆ. 6 ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋಸನು ನೀರು ಹೊಯಿದನು, ಆದರೆ ಬೆಳೆಸುತ್ತಾ ಬಂದವನು ದೇವರು. 7 ಹೀಗಿರಲಾಗಿ ನೆಡುವವನಾಗಲಿ ನೀರು ಹೊಯ್ಯುವವನಾಗಲಿ ವಿಶೇಷವಾದವನಲ್ಲ, ಬೆಳೆಸುವ ದೇವರೇ ವಿಶೇಷವಾದವನು. 8 ನೆಡುವವನೂ ನೀರು ಹೊಯ್ಯುವವನೂ ಒಂದೇ ಆಗಿದ್ದಾರೆ. ಆದರೂ ಪ್ರತಿಯೊಬ್ಬನಿಗೆ ಅವನವನ ಕಷ್ಟಕ್ಕೆ ತಕ್ಕಹಾಗೆ ಕೂಲಿಯು ದೊರೆಯುವದು. 9 ನಾವು ದೇವರ ಜೊತೆ ಕೆಲಸದವರು; ನೀವು ದೇವರ ಹೊಲವೂ ದೇವರ ಕಟ್ಟಡವೂ ಆಗಿದ್ದೀರಿ. 10 ದೇವರು ನನಗೆ ಕೃಪೆಯಿಂದ ಒಪ್ಪಿಸಿದ ಕೆಲಸವನ್ನು ನಡಿಸಿ ನಾನು ಪ್ರವೀಣಶಿಲ್ಪಿಯಂತೆ ಅಸ್ತಿವಾರ ಹಾಕಿದೆನು, ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ. ಪ್ರತಿಯೊಬ್ಬನು ತಾನು ಅದರ ಮೇಲೆ ಎಂಥದನ್ನು ಕಟ್ಟುತ್ತಾನೋ ಎಚ್ಚರಿಕೆಯಾಗಿರಬೇಕು. 11 ಹಾಕಿರುವ ಅಸ್ತಿವಾರವು ಯೇಸು ಕ್ರಿಸ್ತನೇ; ಆ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ. 12 ಆ ಅಸ್ತಿವಾರದ ಮೇಲೆ ಚಿನ್ನ ಬೆಳ್ಳಿ ರತ್ನ ಕಟ್ಟಿಗೆ ಹುಲ್ಲು ಆಪು ಮುಂತಾದವುಗಳಲ್ಲಿ ಯಾವದರಿಂದ ಕಟ್ಟಿದರೂ ಅವನವನ ಕೆಲಸವು ವ್ಯಕ್ತವಾಗುವದು. 13 ಕ್ರಿಸ್ತನು ಬರುವ ದಿನವು ಬೆಂಕಿಯೊಡನೆ ಉದಯವಾಗಿ ಆ ಕೆಲಸವನ್ನು ಸ್ಪಷ್ಟವಾಗಿ ತೋರಿಸುವದು; ಅವನವನ ಕೆಲಸವೆಂಥದೋ ಆ ಬೆಂಕಿ ಶೋಧಿಸುವದು. 14 ಒಬ್ಬನು ಆ ಅಸ್ತಿವಾರದ ಮೇಲೆ ಕಟ್ಟಿದ್ದು ಉಳಿದರೆ ಅವನಿಗೆ ಸಂಬಳ ಬರುವದು. 15 ಒಬ್ಬನು ಕಟ್ಟಿದ್ದು ಸುಟ್ಟುಹೋದರೆ ಅವನಿಗೆ ಸಂಬಳವು ನಷ್ಟವಾಗುವದು. ತಾನಾದರೋ ರಕ್ಷಣೆ ಹೊಂದುವನು. ಆದರೆ ಬೆಂಕಿಯೊಳಗಿಂದ ತಪ್ಪಿಸಿಕೊಂಡವನ ಹಾಗಿರುವನು. 16 ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ? 17 ಯಾವನಾದರೂ ದೇವರ ಆಲಯವನ್ನು ಕೆಡಿಸಿದರೆ ದೇವರು ಅವನನ್ನು ಕೆಡಿಸುವನು. ಯಾಕಂದರೆ ದೇವರ ಆಲಯವು ಪವಿತ್ರವಾದದ್ದು, ಆ ಆಲಯವು ನೀವೇ. 18 ಯಾವನೂ ತನ್ನನ್ನು ತಾನೇ ಮೋಸಗೊಳಿಸದಿರಲಿ. ತಾನು ನಿಮ್ಮಲ್ಲಿ ಲೋಕ ಸಂಬಂಧವಾಗಿ ಜ್ಞಾನಿಯಾಗಿದ್ದೇನೆಂದು ಭಾವಿಸಿಕೊಳ್ಳುವವನು ಜ್ಞಾನಿಯಾಗುವಂತೆ ಹುಚ್ಚನಾಗಲಿ. 19 ಯಾಕಂದರೆ ಇಹಲೋಕ ಜ್ಞಾನವು ದೇವರ ಮುಂದೆ ಹುಚ್ಚುತನವಾಗಿದೆ. ಆತನು ಜ್ಞಾನಿಗಳನ್ನು ಅವರ ತಂತ್ರಗಳಲ್ಲಿಯೇ ಹಿಡುಕೊಳ್ಳುತ್ತಾನೆಂತಲೂ 20 ಜ್ಞಾನಿಗಳ ಯೋಚನೆಗಳು ನಿಷ್ಫಲವಾದವುಗಳೆಂದು ಕರ್ತನು ತಿಳುಕೊಳ್ಳುತ್ತಾನೆಂತಲೂ ಬರೆದದೆಯಲ್ಲಾ. 21 ಆದಕಾರಣ ಮನುಷ್ಯಮಾತ್ರದವರ ವಿಷಯದಲ್ಲಿ ಯಾರೂ ಹಿಗ್ಗದಿರಲಿ. ಯಾಕಂದರೆ ಸಮಸ್ತವೂ ನಿಮ್ಮದು; 22 ಪೌಲನಾಗಲಿ ಅಪೊಲ್ಲೋಸನಾಗಲಿ ಕೇಫನಾಗಲಿ, ಲೋಕವಾಗಲಿ ಜೀವವಾಗಲಿ ಮರಣವಾಗಲಿ, ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಸಮಸ್ತವೂ ನಿಮ್ಮದೇ; 23 ನೀವಂತೂ ಕ್ರಿಸ್ತನವರು, ಕ್ರಿಸ್ತನು ದೇವರವನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India