1 ಕೊರಿಂಥದವರಿಗೆ 2 - ಕನ್ನಡ ಸತ್ಯವೇದವು J.V. (BSI)1 ಸಹೋದರರೇ, ನಾನಂತೂ ದೇವರು ಹೇಳಿಕೊಟ್ಟ ಮಾತನ್ನು ತಿಳಿಸುವವನಾಗಿ ನಿಮ್ಮ ಬಳಿಗೆ ಬಂದಾಗ ವಾಕ್ಚಾತುರ್ಯದಿಂದಾಗಲಿ ಜ್ಞಾನಾಡಂಬರದಿಂದಾಗಲಿ ಬರಲಿಲ್ಲ. 2 ನಾನು ಶಿಲುಬೆಗೆ ಹಾಕಲ್ಪಟ್ಟವನಾದ ಯೇಸು ಕ್ರಿಸ್ತನನ್ನೇ ಹೊರತು ಬೇರೆ ಯಾವದನ್ನೂ ತಿಳಿಯದವನಾಗಿ ನಿಮ್ಮಲ್ಲಿ ಇರುವೆನೆಂದು ತೀರ್ಮಾನಿಸಿಕೊಂಡೆನು. 3 ಇದಲ್ಲದೆ ನಾನು ನಿಮ್ಮಲ್ಲಿಗೆ ಬಂದಾಗ ನಿಮ್ಮ ಬಳಿಯಲ್ಲಿ ಬಲಹೀನನೂ ಭಯಪಡುವವನೂ ಬಹು ನಡುಗುವವನೂ ಆಗಿದ್ದೆನು. 4-5 ನಿಮ್ಮ ನಂಬಿಕೆಯು ಮಾನುಷಜ್ಞಾನವನ್ನು ಆಧಾರಮಾಡಿಕೊಳ್ಳದೆ ದೇವರ ಶಕ್ತಿಯನ್ನು ಆಧಾರಮಾಡಿಕೊಂಡಿರಬೇಕೆಂದು ನನ್ನ ಬೋಧನೆಯಲ್ಲಿಯೂ ಪ್ರಸಂಗದಲ್ಲಿಯೂ ಮನವೊಲಿಸುವ ಜ್ಞಾನವಾಕ್ಯಗಳನ್ನು ನಾನು ಪ್ರಯೋಗಿಸದೆ ದೇವರಾತ್ಮನ ಬಲವನ್ನು ತೋರ್ಪಡಿಸುವ ವಾಕ್ಯಗಳನ್ನೇ ಪ್ರಯೋಗಿಸಿದೆನು. 6 ಆದರೂ ಪ್ರವೀಣರಲ್ಲಿ ಜ್ಞಾನವನ್ನೇ ಹೇಳುತ್ತೇವೆ. ಅದು ಇಹಲೋಕದ ಜ್ಞಾನವಲ್ಲ, ಇಲ್ಲದೆ ಹೋಗುವ ಇಹಲೋಕಾಧಿಕಾರಿಗಳ ಜ್ಞಾನವೂ ಅಲ್ಲ. 7 ಇದುವರೆಗೆ ಗುಪ್ತವಾಗಿದ್ದ ಸತ್ಯಾರ್ಥವನ್ನು ತಿಳಿಸುವಲ್ಲಿ ದೇವರ ಜ್ಞಾನವನ್ನೇ ಹೇಳುತ್ತೇವೆ. ಅದು ಯಾವದಂದರೆ ದೇವರು ನಮ್ಮ ಮಹಿಮೆಗಾಗಿ ಲೋಕೋತ್ಪತ್ತಿಗಿಂತ ಮೊದಲೇ ನೇವಿುಸಿ ಇದುವರೆಗೆ ಮರೆಮಾಡಿದ ಜ್ಞಾನವೇ. 8 ಇದನ್ನು ಇಹಲೋಕಾಧಿಕಾರಿಗಳಲ್ಲಿ ಯಾರೂ ಅರಿಯಲಿಲ್ಲ; ಅರಿತಿದ್ದರೆ ಅವರು ಮಹಿಮೆಯುಳ್ಳ ಕರ್ತನನ್ನು ಶಿಲುಬೆಗೆ ಹಾಕಿಸುತ್ತಿರಲಿಲ್ಲ; 9 ಆದರೆ ಬರೆದಿರುವ ಪ್ರಕಾರ - ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥದೆಲ್ಲವನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಅದರ ಭಾವನೆಯು ಮನುಷ್ಯನ ಹೃದಯದಲ್ಲಿ ಹುಟ್ಟಲಿಲ್ಲ. 10 ನಮಗಾದರೋ ದೇವರು ತನ್ನ ಆತ್ಮನ ಮೂಲಕ ಅದನ್ನು ಪ್ರಕಟಿಸಿದನು. ಆ ಆತ್ಮನು ಎಲ್ಲಾ ವಿಷಯಗಳನ್ನು, ದೇವರ ಅಗಾಧವಾದ ವಿಷಯಗಳನ್ನು ಕೂಡ ಪರಿಶೋಧಿಸುವವನಾಗಿದ್ದಾನೆ. 11 ಮನುಷ್ಯನ ಒಳಗಿನ ಆಲೋಚನೆಗಳು ಅವನಲ್ಲಿರುವ ಜೀವಾತ್ಮಕ್ಕೆ ಹೊರತು ಮತ್ತಾರಿಗೆ ತಿಳಿಯುವದು? ಹಾಗೆಯೇ ದೇವರ ಆಲೋಚನೆಗಳನ್ನು ದೇವರ ಆತ್ಮನೇ ಹೊರತು ಬೇರೆ ಯಾರೂ ಗ್ರಹಿಸುವದಿಲ್ಲ. 12 ನಾವು ಪ್ರಾಪಂಚಿಕ ಆತ್ಮವನ್ನು ಹೊಂದದೆ ದೇವರು ನಮಗೆ ದಯಪಾಲಿಸಿರುವ ಕೃಪಾವರಗಳನ್ನು ತಿಳುಕೊಳ್ಳುವದಕ್ಕಾಗಿ ದೇವರಿಂದ ಬಂದ ಆತ್ಮವನ್ನೇ ಹೊಂದಿದೆವು. 13 ಇವುಗಳನ್ನು ಮಾನುಷಜ್ಞಾನವು ಕಲಿಸಿದ ಮಾತುಗಳಿಂದ ಹೇಳದೆ ದೇವರಾತ್ಮನೇ ಕಲಿಸಿಕೊಟ್ಟ ಮಾತುಗಳಿಂದ ಹೇಳಿ ಆತ್ಮಸಂಬಂಧವಾದವುಗಳನ್ನು ಆತ್ಮನಿಗೆ ಯುಕ್ತವಾದ ರೀತಿಯಲ್ಲಿ ವಿವರಿಸುತ್ತೇವೆ. 14 ಪ್ರಾಕೃತಮನುಷ್ಯನು ದೇವರಾತ್ಮನ ವಿಷಯಗಳನ್ನು ಬೇಡವೆನ್ನುತ್ತಾನೆ; ಅವು ಅವನಿಗೆ ಹುಚ್ಚುಮಾತಾಗಿ ತೋರುತ್ತವೆ; ಅವು ಆತ್ಮವಿಚಾರದಿಂದ ತಿಳಿಯ ತಕ್ಕವುಗಳಾಗಿರಲಾಗಿ ಅವನು ಅವುಗಳನ್ನು ಗ್ರಹಿಸಲಾರನು. 15 ದೇವರಾತ್ಮನಿಂದ ನಡಿಸಿಕೊಳ್ಳುವವನೋ ಎಲ್ಲವನ್ನೂ ವಿಚಾರಿಸಿ ತಿಳುಕೊಳ್ಳುತ್ತಾನೆ; ಆದರೆ ಇವನನ್ನು ಯಾವನಾದರೂ ವಿಚಾರಿಸಿ ತಿಳಿಕೊಳ್ಳುವದಿಲ್ಲ. 16 ಕರ್ತನ ಮನಸ್ಸನ್ನು ತಿಳುಕೊಂಡು ಆತನಿಗೆ ಉಪದೇಶಿಸುವವನಾರು ಎಂದು ಬರೆದದೆಯಲ್ಲಾ. ನಮಗಾದರೋ ಕ್ರಿಸ್ತನ ಮನಸ್ಸು ದೊರಕಿತು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India