Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಕೊರಿಂಥದವರಿಗೆ 16 - ಕನ್ನಡ ಸತ್ಯವೇದವು J.V. (BSI)


ಯೆರೂಸಲೇವಿುನಲ್ಲಿದ್ದ ಬಡ ಕ್ರೈಸ್ತರಿಗೋಸ್ಕರ ಧರ್ಮದ ಹಣ ಕೂಡಿಸುವದನ್ನು ಕುರಿತದ್ದು

1 ದೇವಜನರಿಗೋಸ್ಕರ ಹಣ ವಸೂಲುಮಾಡುವದನ್ನು ಕುರಿತು ನಾನು ಹೇಳುವದೇನಂದರೆ, ಗಲಾತ್ಯದ ಸಭೆಗಳಿಗೆ ನಾನು ಹೇಳಿಕೊಟ್ಟ ಕ್ರಮದಂತೆ ನೀವೂ ಮಾಡಿರಿ.

2 ನಾನು ಬಂದಾಗ ಹಣ ವಸೂಲುಮಾಡಬೇಕಾದ ಅವಶ್ಯವಾಗದಂತೆ ನಿಮ್ಮಲ್ಲಿ ಪ್ರತಿಯೊಬ್ಬನು ತನಗೆ ಬಂದ ಸಂಪಾದನೆಯ ಮೇರೆಗೆ ವಾರವಾರದ ಮೊದಲನೆಯ ದಿನದಲ್ಲಿ ಗಂಟುಮಾಡಿ ತನ್ನ ಮನೆಯಲ್ಲಿಟ್ಟುಕೊಂಡಿರಬೇಕು.

3 ನಾನು ಬಂದ ಮೇಲೆ ನೀವು ಯಾರನ್ನು ಯೋಗ್ಯರೆಂದು ಸೂಚಿಸುವಿರೋ ಅವರನ್ನು ಯೆರೂಸಲೇವಿುಗೆ ನಿಮ್ಮ ಉಪಕಾರದ್ರವ್ಯವನ್ನು ತೆಗೆದುಕೊಂಡು ಹೋಗುವದಕ್ಕೆ ಪತ್ರಗಳನ್ನು ಕೊಟ್ಟು ಕಳುಹಿಸುವೆನು.

4 ನಾನು ಸಹ ಹೋಗುವದು ಯುಕ್ತವಾಗಿ ತೋರಿದರೆ ಅವರು ನನ್ನ ಜೊತೆಯಲ್ಲಿ ಬರಬಹುದು.

5 ನಾನು ಹಾದುಹೋಗಬೇಕೆಂದಿರುವ ಮಕೆದೋನ್ಯ ಸೀಮೆಯನ್ನು ದಾಟಿದ ಮೇಲೆ ನಿಮ್ಮ ಬಳಿಗೆ ಬಂದು ನಿಮ್ಮ ಬಳಿಯಲ್ಲೇ ಇಳುಕೊಳ್ಳುವೆನು.

6 ನಿಮ್ಮಲ್ಲಿ ಹಿಮಕಾಲವನ್ನಾದರೂ ಕಳೆದೇನು; ಮತ್ತು ನಾನು ಹೋಗಬೇಕಾದ ಸ್ಥಳಕ್ಕೆ ನೀವು ನನ್ನನ್ನು ಸಾಗಕಳುಹಿಸಬೇಕು.

7 ಈ ಸಮಯದಲ್ಲಿ ಹೋಗುಹೋಗುತ್ತಾ ನಿಮ್ಮನ್ನು ನೋಡುವದಕ್ಕೆ ನನಗೆ ಇಷ್ಟವಿಲ್ಲ; ಕರ್ತನ ಅಪ್ಪಣೆಯಾದರೆ ನಿಮ್ಮ ಬಳಿಯಲ್ಲಿ ಕೆಲವು ಕಾಲ ಇರುವೆನೆಂದು ನಿರೀಕ್ಷಿಸುತ್ತೇನೆ.

8 ಪಂಚಾಶತ್ತಮ ದಿನದ ಹಬ್ಬದ ತನಕ ಎಫೆಸದಲ್ಲಿರುವೆನು;

9 ಯಾಕಂದರೆ ಕಾರ್ಯಕ್ಕೆ ಅನುಕೂಲವಾದ ಮಹಾಸಂದರ್ಭವು ನನಗುಂಟು ಮತ್ತು ವಿರೋಧಿಗಳು ಬಹಳ ಮಂದಿ ಇದ್ದಾರೆ.


ವಂದನೆಗಳೂ ಆಶೀರ್ವಚನವೂ

10 ತಿಮೊಥೆಯನು ಬಂದರೆ ಅವನು ನಿಮ್ಮ ಬಳಿಯಲ್ಲಿ ಭಯವಿಲ್ಲದೆ ಇರುವಂತೆ ನೋಡಿಕೊಳ್ಳಿರಿ; ನನ್ನ ಹಾಗೆಯೇ ಕರ್ತನ ಕೆಲಸವನ್ನು ನಡಿಸುತ್ತಾನೆ;

11 ಆದದರಿಂದ ಯಾರೂ ಅವನನ್ನು ಹೀನೈಸಬಾರದು. ಮತ್ತು ಅವನು ನನ್ನ ಬಳಿಗೆ ಬರುವಂತೆ ಅವನನ್ನು ಸಮಾಧಾನದಿಂದ ಸಾಗಕಳುಹಿಸಿರಿ; ಅವನು ಸಹೋದರರೊಂದಿಗೆ ಬರುವದನ್ನು ಎದುರುನೋಡುತ್ತಾ ಇದ್ದೇವೆ.

12 ಸಹೋದರನಾದ ಅಪೊಲ್ಲೋಸನ ಸಂಗತಿಯೇನಂದರೆ ಸಹೋದರರೊಂದಿಗೆ ನಿಮ್ಮ ಬಳಿಗೆ ಹೋಗಬೇಕೆಂದು ಅವನನ್ನು ಬಹಳವಾಗಿ ಬೇಡಿಕೊಂಡೆನು. ಈಗ ಬರುವದಕ್ಕೆ ಅವನಿಗೆ ಸ್ವಲ್ಪವೂ ಮನಸ್ಸಿರಲಿಲ್ಲ. ಒಳ್ಳೇ ಸಮಯ ಸಿಕ್ಕಿದಾಗ ಬರುವನು.

13 ಎಚ್ಚರವಾಗಿರಿ, ಕ್ರಿಸ್ತನಂಬಿಕೆಯಲ್ಲಿ ದೃಢವಾಗಿ ನಿಲ್ಲಿರಿ.

14 ಶೂರರಾಗಿರಿ, ಬಲಗೊಳ್ಳಿರಿ. ನೀವು ಮಾಡುವದನ್ನೆಲ್ಲಾ ಪ್ರೀತಿಯಿಂದ ಮಾಡಿರಿ.

15 ಸ್ತೆಫನನ ಮನೆಯವರು ಅಖಾಯದಲ್ಲಿನ ಪ್ರಥಮಫಲವೆಂದೂ ಅವರು ದೇವಜನರಿಗೆ ಸೇವೆಮಾಡುವದಕ್ಕಾಗಿ ಕೈಹಾಕಿದರೆಂದೂ ನೀವು ಬಲ್ಲಿರಷ್ಟೆ.

16 ಸಹೋದರರೇ, ನೀವು ಇಂಥವರಿಗೂ ಕೆಲಸದಲ್ಲಿ ಸಹಾಯಮಾಡುತ್ತಾ ಪ್ರಯಾಸಪಡುತ್ತಾ ಇರುವವರೆಲ್ಲರಿಗೂ ಒಳಗಾಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

17 ಸ್ತೆಫನನೂ ಫೊರ್ತುನಾತನೂ ಅಖಾಯಿಕನೂ ಬಂದದರಿಂದ ನನಗೆ ಸಂತೋಷವಾಯಿತು. ನೀವು ಇಲ್ಲದ್ದರಿಂದ ನನಗುಂಟಾದ ಕೊರತೆಯನ್ನು ಅವರು ನೀಗಿದರು;

18 ಅವರು ನನ್ನ ಆತ್ಮವನ್ನೂ ನಿಮ್ಮ ಆತ್ಮಗಳನ್ನೂ ಉಪಶಮನ ಮಾಡಿದರು. ಇಂಥವರನ್ನು ಸನ್ಮಾನಿಸಿರಿ.

19 ಆಸ್ಯಸೀಮೆಯ ಸಭೆಗಳವರು ನಿಮಗೆ ವಂದನೆ ಹೇಳುತ್ತಾರೆ. ಅಕ್ವಿಲನೂ ಪ್ರಿಸ್ಕಳೂ ತಮ್ಮ ಮನೆಯಲ್ಲಿ ಕೂಡುವ ಸಭೆಯವರೊಂದಿಗೆ ಕರ್ತನ ಹೆಸರಿನಲ್ಲಿ ಅನೇಕ ವಂದನೆಗಳನ್ನು ಹೇಳುತ್ತಾರೆ.

20 ಸಹೋದರರೆಲ್ಲರು ನಿಮ್ಮನ್ನು ವಂದಿಸುತ್ತಾರೆ. ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.

21 ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆಯನ್ನು ಬರೆದಿದ್ದೇನೆ.

22 ಯಾವನಾದರೂ ಕರ್ತನನ್ನು ಪ್ರೀತಿಸದಿದ್ದರೆ ಅವನು ಶಾಪಗ್ರಸ್ತನಾಗಲಿ. ಕರ್ತನು ಬರುತ್ತಾನೆ.

23 ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ.

24 ಕ್ರಿಸ್ತ ಯೇಸುವಿನಲ್ಲಿ ನಿಮ್ಮೆಲ್ಲರ ಮೇಲೆ ನನ್ನ ಪ್ರೀತಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು