Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಕೊರಿಂಥದವರಿಗೆ 12 - ಕನ್ನಡ ಸತ್ಯವೇದವು J.V. (BSI)


ಪವಿತ್ರಾತ್ಮದಿಂದುಂಟಾಗುವ ವರಗಳನ್ನು ಕುರಿತದ್ದು ಪವಿತ್ರಾತ್ಮದಿಂದುಂಟಾಗುವ ವರಗಳು ಅನೇಕವಾಗಿದ್ದರೂ ಅವೆಲ್ಲಾ ಸಭೆಯ ಹಿತಕ್ಕೋಸ್ಕರ ಕೊಡಲ್ಪಟ್ಟವೆ ಎಂಬದು
( 12.1—14.40 )

1 ಸಹೋದರರೇ, ಪವಿತ್ರಾತ್ಮದಿಂದುಂಟಾಗುವ ವರಗಳನ್ನು ಕುರಿತು ನಿಮಗೆ ತಿಳಿಯದಿರಬಾರದೆಂದು ಅಪೇಕ್ಷಿಸುತ್ತೇನೆ.

2 ನೀವು ಅಜ್ಞಾನಿಗಳಾಗಿದ್ದಾಗ ನಿಮಗೆ ಪ್ರೇರಣೆಯಾದ ಹಾಗೆ ಮೂಕ ವಿಗ್ರಹಗಳ ಬಳಿಗೆ ಹೋಗುತ್ತಿದ್ದಿರೆಂದು ಬಲ್ಲಿರಿ.

3 ಹೀಗಿರುವದರಿಂದ ನಾನು ನಿಮಗೆ ತಿಳಿಸುವದನ್ನು ಕೇಳಿರಿ; ದೇವರಾತ್ಮನ ಪ್ರೇರಣೆಯಿಂದ ಮಾತಾಡುವ ಯಾವ ಮನುಷ್ಯನಾದರೂ ಯೇಸುವನ್ನು ಶಾಪಗ್ರಸ್ತನೆಂದು ಹೇಳುವದಿಲ್ಲ, ಮತ್ತು ಪವಿತ್ರಾತ್ಮನ ಪ್ರೇರಣೆಯಿಂದಲೇ ಹೊರತು ಯಾವ ಮನುಷ್ಯನಾದರೂ ಯೇಸುವನ್ನು ಕರ್ತನೆಂದು ಹೇಳಲಾರನು.

4 ವರಗಳಲ್ಲಿ ಬೇರೆ ಬೇರೆ ವಿಧಗಳುಂಟು, ದೇವರಾತ್ಮನು ಒಬ್ಬನೇ;

5 ಸೇವೆಗಳಲ್ಲಿ ಬೇರೆ ಬೇರೆ ವಿಧಗಳುಂಟು, ಕರ್ತನು ಒಬ್ಬನೇ;

6 ಕಾರ್ಯಗಳಲ್ಲಿ ಬೇರೆ ಬೇರೆ ವಿಧಗಳುಂಟು, ಸರ್ವರಲ್ಲಿಯೂ ಸರ್ವಕಾರ್ಯಗಳನ್ನು ಸಾಧಿಸುವ ದೇವರು ಒಬ್ಬನೇ.

7 ಆದರೆ ಪ್ರತಿಯೊಬ್ಬನಲ್ಲಿ ತೋರಿಬರುವ ದೇವರಾತ್ಮನ ವರಗಳು ಸರ್ವರ ಪ್ರಯೋಜನಾರ್ಥವಾಗಿ ಕೊಡಲ್ಪಟ್ಟಿವೆ.

8 ಒಬ್ಬನಿಗೆ ದೇವರಾತ್ಮನ ಮೂಲಕ ಜ್ಞಾನವಾಕ್ಯವು, ಒಬ್ಬನಿಗೆ ಆ ಆತ್ಮನಿಗೆ ಅನುಗುಣವಾಗಿ ವಿದ್ಯಾವಾಕ್ಯವು,

9 ಒಬ್ಬನಿಗೆ ಆ ಆತ್ಮನಿಂದಲೇ ನಂಬಿಕೆಯು, ಒಬ್ಬನಿಗೆ ಆ ಒಬ್ಬ ಆತ್ಮನಿಂದಲೇ ನಾನಾ ರೋಗಗಳನ್ನು ವಾಸಿಮಾಡುವ ವರವು,

10 ಒಬ್ಬನಿಗೆ ಮಹತ್ತುಗಳನ್ನು ಮಾಡುವ ವರವು, ಒಬ್ಬನಿಗೆ ಪ್ರವಾದನೆಯ ವರವು, ಒಬ್ಬನಿಗೆ ಸತ್ಯಾಸತ್ಯಾತ್ಮಗಳನ್ನು ವಿವೇಚಿಸುವ ವರವು, ಒಬ್ಬನಿಗೆ ವಿವಿಧ ವಾಣಿಗಳನ್ನಾಡುವ ವರವು, ಒಬ್ಬನಿಗೆ ವಾಣಿಗಳ ಅರ್ಥವನ್ನು ಹೇಳುವ ವರವು ಕೊಡಲ್ಪಡುತ್ತವೆ.

11 ಈ ವರಗಳನ್ನೆಲ್ಲಾ ಆ ಒಬ್ಬ ಆತ್ಮನೇ ತನ್ನ ಚಿತ್ತಕ್ಕೆ ಬಂದ ಹಾಗೆ ಒಬ್ಬೊಬ್ಬನಿಗೆ ಹಂಚಿಕೊಟ್ಟು ನಡಿಸುತ್ತಾನೆ.

12 ಹೇಗೆ ದೇಹವು ಒಂದಾಗಿದ್ದರೂ ಅದಕ್ಕಿರುವ ಅಂಗಗಳು ಅನೇಕವಾಗಿವೆಯೋ, ಹೇಗೆ ದೇಹದ ಅಂಗಗಳೆಲ್ಲವು ಅನೇಕವಾಗಿದ್ದು ಒಂದೇ ದೇಹವಾಗಿರುವದೋ, ಹಾಗೆಯೇ ಕ್ರಿಸ್ತನು.

13 ಯೆಹೂದ್ಯರಾಗಲಿ ಗ್ರೀಕರಾಗಲಿ ದಾಸರಾಗಲಿ ಸ್ವತಂತ್ರರಾಗಲಿ ನಾವೆಲ್ಲರು ಒಂದೇ ದೇಹವಾಗುವದಕ್ಕಾಗಿ ಒಂದೇ ಆತ್ಮನಲ್ಲಿ ದೀಕ್ಷಾಸ್ನಾನಮಾಡಿಸಿಕೊಂಡೆವು; ಒಂದೇ ಆತ್ಮ ನಮ್ಮೆಲ್ಲರಿಗೂ ಪಾನವಾಗಿ ಕೊಡಲ್ಪಟ್ಟಿತು.

14 ದೇಹವು ಒಂದೇ ಅಂಗವಲ್ಲ, ಅನೇಕ ಅಂಗಗಳುಳ್ಳದ್ದಾಗಿದೆ.

15 ಕಾಲು - ನಾನು ಕೈಯಲ್ಲದ ಕಾರಣ ದೇಹಕ್ಕೆ ಸೇರಿದ್ದಲ್ಲವೆಂದು ಹೇಳಿದರೂ ಅದು ದೇಹಕ್ಕೆ ಸೇರದೆ ಇರುವದೋ?

16 ಕಿವಿ - ನಾನು ಕಣ್ಣಲ್ಲದ ಕಾರಣ ನಾನು ದೇಹಕ್ಕೆ ಸೇರಿದ್ದಲ್ಲವೆಂದು ಹೇಳಿದರೂ ಅದು ದೇಹಕ್ಕೆ ಸೇರದೆ ಇರುವದೋ?

17 ದೇಹವೆಲ್ಲಾ ಕಣ್ಣಾದರೆ ಕಿವಿಯೆಲ್ಲಿ? ಅದೆಲ್ಲಾ ಕಿವಿಯಾದರೆ ಮೂಗೆಲ್ಲಿ?

18 ಆದರೆ ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು ತನಗೆ ಸರಿಯಾಗಿ ತೋಚಿದ ಪ್ರಕಾರ ದೇಹದೊಳಗೆ ಇಟ್ಟಿದ್ದಾನೆ.

19 ಅವೆಲ್ಲವು ಒಂದೇ ಅಂಗವಾಗಿದ್ದರೆ ದೇಹವೆಲ್ಲಿರುವದು?

20 ಆದರೆ ಅಂಗಗಳೇನೋ ಅನೇಕ, ದೇಹವು ಒಂದೇ.

21 ಕಣ್ಣು ಕೈಗೆ - ನೀನು ನನಗೆ ಅವಶ್ಯವಿಲ್ಲವೆಂದೂ, ತಲೆಯು ಕಾಲುಗಳಿಗೆ - ನೀವು ನನಗೆ ಅವಶ್ಯವಿಲ್ಲವೆಂದೂ ಹೇಳುವದಕ್ಕಾಗುವದಿಲ್ಲ.

22 ದೇಹದಲ್ಲಿ ಅಲ್ಪಬಲವುಳ್ಳವುಗಳಾಗಿ ಕಾಣುವ ಅಂಗಗಳನ್ನು ಅತ್ಯವಶ್ಯವೆಂದು ತಿಳಿಯಬೇಕಲ್ಲವೋ?

23 ಮತ್ತು ನಾವು ದೇಹದಲ್ಲಿ ಅಲ್ಪಮಾನವುಳ್ಳವುಗಳೆಂದೆಣಿಸುವ ಭಾಗಗಳಿಗೆ ಉಡಿಗೆಯಿಂದ ಹೆಚ್ಚಾದ ಮಾನವನ್ನು ಕೊಡುವದುಂಟಲ್ಲಾ; ಹೀಗೆ ಅಂದವಿಲ್ಲದ ಅಂಗಗಳಿಗೆ ಹೆಚ್ಚಾದ ಅಂದವುಂಟಾಗುತ್ತದೆ.

24-25 ಅಂದವುಳ್ಳ ಅಂಗಗಳಿಗೆ ಏನೂ ಅವಶ್ಯವಿಲ್ಲ. ದೇಹದಲ್ಲಿ ಭೇದವೇನೂ ಇರದೆ ಅಂಗಗಳು ಒಂದಕ್ಕೊಂದರ ಹಿತವನ್ನು ಚಿಂತಿಸುವ ಹಾಗೆ ದೇವರು ಕೊರತೆಯುಳ್ಳದ್ದಕ್ಕೆ ಹೆಚ್ಚಾದ ಮಾನವನ್ನು ಕೊಟ್ಟು ದೇಹವನ್ನು ಹದವಾಗಿ ಕೂಡಿಸಿದ್ದಾನೆ.

26 ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ; ಒಂದು ಅಂಗಕ್ಕೆ ಮರ್ಯಾದೆ ಬಂದರೆ ಎಲ್ಲಾ ಅಂಗಗಳಿಗೂ ಸಂತೋಷವಾಗುತ್ತದೆ.

27 ನೀವು ಕ್ರಿಸ್ತನ ದೇಹವು, ಮತ್ತು ಒಬ್ಬೊಬ್ಬರಾಗಿ ಅದಕ್ಕೆ ಅಂಗಗಳಾಗಿದ್ದೀರಿ.

28 ದೇವರು ತನ್ನ ಸಭೆಯಲ್ಲಿ ಮೊದಲನೇದಾಗಿ ಅಪೊಸ್ತಲರನ್ನು, ಎರಡನೇದಾಗಿ ಪ್ರವಾದಿಗಳನ್ನು, ಮೂರನೇದಾಗಿ ಉಪದೇಶಕರನ್ನು ಇಟ್ಟಿದ್ದಾನೆ; ಆಮೇಲೆ ಮಹಾತ್ಕಾರ್ಯ ಮಾಡುವ ಶಕ್ತಿಯನ್ನೂ ನಾನಾ ರೋಗಗಳನ್ನು ವಾಸಿಮಾಡುವ ವರವನ್ನೂ ಪರಸಹಾಯ ಮಾಡುವ ಗುಣವನ್ನೂ ಕಾರ್ಯಗಳನ್ನು ನಿರ್ವಹಿಸುವ ಜ್ಞಾನವನ್ನೂ ವಿವಿಧ ವಾಣಿಗಳನ್ನಾಡುವ ವರವನ್ನೂ ಅವರವರಿಗೆ ಕೊಟ್ಟಿದ್ದಾನೆ.

29 ಎಲ್ಲರೂ ಅಪೊಸ್ತಲರೋ? ಎಲ್ಲರೂ ಪ್ರವಾದಿಗಳೋ? ಎಲ್ಲರೂ ಉಪದೇಶಕರೋ? ಎಲ್ಲರೂ ಮಹತ್ಕಾರ್ಯಗಳನ್ನು ಮಾಡುವವರೋ?

30 ರೋಗ ವಾಸಿಮಾಡುವ ವರಗಳು ಎಲ್ಲರಿಗೂ ಉಂಟೋ? ಎಲ್ಲರೂ ವಾಣಿಗಳನ್ನಾಡುವರೋ? ವಾಣಿಗಳ ಅರ್ಥವನ್ನು ಹೇಳುವದಕ್ಕೆ ಎಲ್ಲರಿಗೂ ಶಕ್ತಿಯುಂಟೋ?

31 ಇವುಗಳಲ್ಲಿ ಶ್ರೇಷ್ಠ ವರಗಳನ್ನು ಆಸಕ್ತಿಯಿಂದ ಅಪೇಕ್ಷಿಸಿರಿ. ಇನ್ನೂ ಉತ್ಕೃಷ್ಟವಾದ ಮಾರ್ಗವನ್ನು ನಿಮಗೆ ತೋರಿಸುತ್ತೇನೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು