Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

1 ಕೊರಿಂಥದವರಿಗೆ 11 - ಕನ್ನಡ ಸತ್ಯವೇದವು J.V. (BSI)

1 ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ.


ಸ್ತ್ರೀಯರು ಮುಸುಕಿಲ್ಲದೆ ಸಭೆಯಲ್ಲಿ ದೇವಾರಾಧನೆ ಮಾಡುವದು ಯುಕ್ತವಲ್ಲ

2 ನೀವು ಎಲ್ಲಾದರಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಂಡು ನಾನು ನಿಮಗೆ ತಿಳಿಸಿಕೊಟ್ಟ ಕಟ್ಟಳೆಗಳನ್ನು ಅನುಸರಿಸಿ ನಡಿಯುತ್ತೀರೆಂದು ನಿಮ್ಮನ್ನು ಹೊಗಳುತ್ತೇನೆ.

3 ಆದರೂ ಒಂದು ಸಂಗತಿಯನ್ನು ನೀವು ತಿಳಿಯಬೇಕೆಂದು ನನ್ನ ಇಷ್ಟ; ಅದೇನಂದರೆ ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.

4 ತಲೆಯನ್ನು ಮುಚ್ಚಿಕೊಂಡು ಪ್ರಾರ್ಥನೆಯನ್ನಾಗಲಿ ಪ್ರವಾದನೆಯನ್ನಾಗಲಿ ಮಾಡುವ ಪುರುಷನು ತನ್ನ ತಲೆಯನ್ನು ಅವಮಾನಪಡಿಸುತ್ತಾನೆ.

5 ತಲೆಯ ಮೇಲೆ ಮುಸುಕುಹಾಕಿಕೊಳ್ಳದೆ ಪ್ರಾರ್ಥನೆಯನ್ನಾಗಲಿ ಪ್ರವಾದನೆಯನ್ನಾಗಲಿ ಮಾಡುವ ಸ್ತ್ರೀಯು ತನ್ನ ತಲೆಯನ್ನು ಅವಮಾನಪಡಿಸುತ್ತಾಳೆ. ಸ್ತ್ರೀಯು ಮುಸುಕಿಲ್ಲದಿರುವದೂ ತಲೆಬೋಳಿಸಿಕೊಂಡಿರುವದೂ ಒಂದೇ.

6 ಸ್ತ್ರೀಯು ಮುಸುಕುಹಾಕಿಕೊಳ್ಳದಿದ್ದರೆ ಆಕೆಯು ಕೂದಲನ್ನು ತೆಗಿಸಿಬಿಡಬೇಕಷ್ಟೆ. ಆದರೆ ಕೂದಲನ್ನು ಕತ್ತರಿಸಿಕೊಳ್ಳುವದಾಗಲಿ ತಲೆಬೋಳಿಸಿಕೊಳ್ಳುವದಾಗಲಿ ಸ್ತ್ರೀಗೆ ಅವಮಾನಕರವಾಗಿದ್ದರೆ ಆಕೆಯು ಮುಸುಕನ್ನು ಹಾಕಿಕೊಳ್ಳಲಿ.

7 ಪುರುಷನು ದೇವರ ಪ್ರತಿರೂಪವೂ ಪ್ರಭಾವವೂ ಆಗಿರುವದರಿಂದ ತಲೆಯನ್ನು ಮುಚ್ಚಿಕೊಳ್ಳಕೂಡದು; ಸ್ತ್ರೀಯಾದರೋ ಪುರುಷನ ಪ್ರಭಾವವಾಗಿದ್ದಾಳೆ.

8 ಪುರುಷನು ಸ್ತ್ರೀಯಿಂದ ಉತ್ಪತ್ತಿಯಾಗಲಿಲ್ಲ; ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು.

9 ಇದಲ್ಲದೆ ಪುರುಷನು ಸ್ತ್ರೀನಿವಿುತ್ತವಾಗಿ ನಿರ್ಮಾಣವಾಗಲಿಲ್ಲ; ಸ್ತ್ರೀಯು ಪುರುಷನ ನಿವಿುತ್ತವಾಗಿ ನಿರ್ಮಾಣವಾದಳು.

10 ಹೀಗಿರುವದರಿಂದ ದೂತರ ನಿವಿುತ್ತವಾಗಿ ಸ್ತ್ರೀಯು ಪುರುಷನ ಅಧಿಕಾರ ಸೂಚಿಸುವ ಮುಸುಕನ್ನು ತಲೆಯ ಮೇಲೆ ಹಾಕಿಕೊಂಡಿರಬೇಕು.

11 ಆದರೂ ಕರ್ತನ ಸಂಬಂಧದಲ್ಲಿ ಪುರುಷರಿಲ್ಲದೆ ಸ್ತ್ರೀಯರೂ ಸ್ತ್ರೀಯರಿಲ್ಲದೆ ಪುರುಷರೂ ಸಂಪೂರ್ಣರಲ್ಲ.

12 ಸ್ತ್ರೀಯು ಪುರುಷನಿಂದ ಉತ್ಪತ್ತಿಯಾದಳು; ಹಾಗೆಯೇ ಪುರುಷನು ಸ್ತ್ರೀ ಮೂಲಕವಾಗಿ ಹುಟ್ಟುತ್ತಾನೆ; ಸಮಸ್ತಕ್ಕೂ ದೇವರೇ ಮೂಲಕಾರಣನು.

13 ನಿಮ್ಮೊಳಗೆ ನೀವೇ ಯೋಚಿಸಿ ತೀರ್ಮಾನಿಸಿಕೊಳ್ಳಿರಿ. ಸ್ತ್ರೀಯು ಮುಸುಕು ಹಾಕಿಕೊಳ್ಳದೆ ದೇವರಿಗೆ ಪ್ರಾರ್ಥನೆ ಮಾಡುವದು ಯುಕ್ತವೋ?

14 ಪುರುಷನು ಕೂದಲು ಬೆಳಸಿಕೊಂಡರೆ ಅದು ಅವನಿಗೆ ಅವಮಾನಕರವಾಗಿದೆಯೆಂದೂ

15 ಸ್ತ್ರೀಯು ಬೆಳಸಿಕೊಂಡರೆ ಕೂದಲು ಅವಳಿಗೆ ಮುಸುಕಿಗೆ ಬದಲಾಗಿ ಕೊಡಲ್ಪಟ್ಟಿರುವದರಿಂದ ಅದು ಅವಳಿಗೆ ಗೌರವವಾಗಿದೆಯೆಂದೂ ನಿಮಗೆ ಸ್ವಭಾವ ಸಿದ್ಧವಾಗಿ ತಿಳಿಯುತ್ತದಲ್ಲವೋ?

16 ಒಬ್ಬನು ವಾಗ್ವಾದಪ್ರಿಯನಾಗಿ ಕಾಣಿಸಿಕೊಂಡರೆ ಇಂಥ ಪದ್ಧತಿ ನಮ್ಮಲಿಲ್ಲ, ಮತ್ತು ದೇವರ ಸಭೆಗಳಲ್ಲಿಯೂ ಇಲ್ಲ ಎಂದು ತಿಳುಕೊಳ್ಳಲಿ.


ಕರ್ತನ ಭೋಜನವನ್ನು ಕ್ರಮತಪ್ಪಿ ಆಚರಿಸಿದ್ದನ್ನು ಕುರಿತದ್ದು

17 ನಾನು ಹೀಗೆ ನಿಮಗೆ ಅಪ್ಪಣೆಕೊಡುವಲ್ಲಿ ನಿಮ್ಮನ್ನು ಹೊಗಳುವದಿಲ್ಲ; ಯಾಕಂದರೆ ನೀವು ಕೂಡಿಬರುವದರಿಂದ ಕೇಡಾಗುತ್ತದೆಯೇ ಹೊರತು ಮೇಲಾಗುವದಿಲ್ಲ.

18 ಹೇಗಂದರೆ ಮೊದಲನೇದು ನೀವು ಸಭೆಯಾಗಿ ಕೂಡಿಬರುವಾಗ ನಿಮ್ಮಲ್ಲಿ ಭೇದಗಳು ಉಂಟಾಗುತ್ತವೆಂದು ಕೇಳುತ್ತೇನೆ; ಮತ್ತು ಇದು ನಿಜವೆಂದು ಸ್ವಲ್ಪಮಟ್ಟಿಗೆ ನಂಬುತ್ತೇನೆ.

19 ನಿಮ್ಮಲ್ಲಿ ಇಂಥಿಂಥವರು ಯೋಗ್ಯರೆಂದು ಕಾಣಬರುವಂತೆ ಭಿನ್ನಾಭಿಪ್ರಾಯಗಳೂ ಇರುವದು ಅವಶ್ಯವೇ.

20 ಪರಂತು ನೀವೆಲ್ಲರು ಕೂಡಿಬರುವಾಗ ನೀವು ಮಾಡುವ ಭೋಜನವು ಕರ್ತನ ಭೋಜನವಲ್ಲ.

21 ಭೋಜನವಾಗುವಲ್ಲಿ ಪ್ರತಿಯೊಬ್ಬನು ತಾನು ತಂದದ್ದನ್ನು ಮತ್ತೊಬ್ಬರಿಗಿಂತ ಮುಂದಾಗಿ ಊಟಮಾಡುತ್ತಾನೆ; ಹೀಗೆ ಒಬ್ಬನು ಹಸಿದಿರುತ್ತಾನೆ, ಮತ್ತೊಬ್ಬನು ಕುಡಿದು ಮತ್ತನಾಗಿರುತ್ತಾನೆ.

22 ಏನು, ಉಣ್ಣುವದಕ್ಕೂ ಕುಡಿಯುವದಕ್ಕೂ ಮನೆಗಳಿಲ್ಲದೆ ಇದ್ದೀರಾ? ಅಥವಾ ದೇವರ ಸಭೆಯನ್ನು ಅಸಡ್ಡೆಮಾಡಿ ಏನೂ ಇಲ್ಲದವರನ್ನು ನಾಚಿಕೆಪಡಿಸುತ್ತೀರಾ? ನಾನು ನಿಮಗೇನು ಹೇಳಲಿ? ನಿಮ್ಮನ್ನು ಹೊಗಳಲೋ? ಈ ವಿಷಯದಲ್ಲಿ ಹೊಗಳುವದಿಲ್ಲ.

23 ನಾನು ನಿಮಗೆ ತಿಳಿಸಿಕೊಟ್ಟ ಉಪದೇಶವನ್ನು ಕರ್ತನಿಂದ ಹೊಂದಿದೆನು. ಅದೇನಂದರೆ - ಕರ್ತನಾದ ಯೇಸು ತಾನು ಹಿಡಿದು ಕೊಡಲ್ಪಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು -

24 ಇದು ನಿಮಗೋಸ್ಕರವಾಗಿರುವ ನನ್ನ ದೇಹ; ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ ಅಂದನು.

25 ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು - ಈ ಪಾತ್ರೆಯು ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ; ನೀವು ಇದರಲ್ಲಿ ಪಾನಮಾಡುವಾಗೆಲ್ಲಾ ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಪಾನಮಾಡಿರಿ ಅಂದನು.

26 ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.

27 ಹೀಗಿರುವದರಿಂದ ಯಾವನಾದರೂ ಅಯೋಗ್ಯವಾಗಿ ಕರ್ತನ ರೊಟ್ಟಿಯನ್ನು ತಿಂದರೆ ಇಲ್ಲವೆ ಆತನ ಪಾತ್ರೆಯಲ್ಲಿ ಪಾನಮಾಡಿದರೆ ಅವನು ಕರ್ತನ ದೇಹಕ್ಕೂ ರಕ್ತಕ್ಕೂ ದ್ರೋಹಮಾಡಿದವನಾಗಿರುವನು.

28 ಪ್ರತಿಮನುಷ್ಯನು ತನ್ನನ್ನು ಪರೀಕ್ಷಿಸಿಕೊಂಡವನಾಗಿ ಆ ರೊಟ್ಟಿಯಲ್ಲಿ ತಕ್ಕೊಂಡು ತಿನ್ನಲಿ, ಆ ಪಾತ್ರೆಯಲ್ಲಿ ಕುಡಿಯಲಿ.

29 ಯಾಕಂದರೆ ಕರ್ತನ ದೇಹವೆಂದು ವಿವೇಚಿಸದೆ ತಿಂದು ಕುಡಿಯುವವನು ಹಾಗೆ ತಿಂದು ಕುಡಿಯುವದರಿಂದ ನ್ಯಾಯತೀರ್ಪಿಗೊಳಗಾಗುವನು.

30 ಈ ಕಾರಣದಿಂದಲೇ ನಿಮ್ಮಲ್ಲಿ ಬಹುಮಂದಿ ಬಲಹೀನರೂ ರೋಗಿಗಳೂ ಆಗಿದ್ದಾರೆ ಮತ್ತು ಅನೇಕರು ಸಾಯುತ್ತಾರೆ.

31 ನಮ್ಮನ್ನು ನಾವೇ ವಿಚಾರಿಸಿಕೊಂಡರೆ ನ್ಯಾಯವಿಚಾರಣೆಗೊಳಗಾಗುವದಿಲ್ಲ.

32 ಆದರೆ ನಾವು ಕರ್ತನ ನ್ಯಾಯವಿಚಾರಣೆಗೆ ಒಳಗಾಗಿರಲಾಗಿ ಆತನು - ಇವರಿಗೆ ಲೋಕದವರ ಸಂಗಡ ಅಪರಾಧಿಗಳೆಂಬ ನಿರ್ಣಯವಾಗಬಾರದೆಂದು ನಮ್ಮನ್ನು ಶಿಕ್ಷಿಸುತ್ತಾನೆ. ಆದಕಾರಣ ನನ್ನ ಸಹೋದರರೇ,

33 ಈ ಭೋಜನವನ್ನು ಮಾಡುವದಕ್ಕೆ ಕೂಡಿಬರುವಾಗ ಒಬ್ಬರನ್ನೊಬ್ಬರು ಕಾದುಕೊಳ್ಳಿರಿ.

34 ಒಬ್ಬನು ಹಸಿದರೆ ಅವನು ಮನೆಯಲ್ಲೇ ಊಟಮಾಡಲಿ; ನೀವು ಕೂಡಿ ಬಂದದ್ದು ನ್ಯಾಯತೀರ್ಪಿಗೊಳಗಾಗುವದಕ್ಕೆ ಕಾರಣವಾಗಬಾರದು. ವಿುಕ್ಕಾದ ಸಂಗತಿಗಳನ್ನು ನಾನು ಬಂದಾಗ ಕ್ರಮಪಡಿಸುತ್ತೇನೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು