1 ಕೊರಿಂಥದವರಿಗೆ 10 - ಕನ್ನಡ ಸತ್ಯವೇದವು J.V. (BSI)ಕ್ರೈಸ್ತರ ಎಚ್ಚರಿಕೆಗಾಗಿ ಪೌಲನು ಇಸ್ರಾಯೇಲ್ಯರ ದೃಷ್ಟಾಂತವನ್ನು ಸೂಚಿಸಿದ್ದು 1 ಸಹೋದರರೇ, ಮುಂದಿನ ಸಂಗತಿಯಲ್ಲಿ ನೀವು ಲಕ್ಷ್ಯವಿಡಬೇಕೆಂದು ನಾನು ಅಪೇಕ್ಷಿಸುತ್ತೇನೆ. ಅದೇನಂದರೆ, ನಮ್ಮ ಪಿತೃಗಳೆಲ್ಲರೂ ಮೇಘದ ನೆರಳಿನಲ್ಲಿದ್ದರು; 2 ಅವರೆಲ್ಲರೂ ಸಮುದ್ರವನ್ನು ದಾಟಿಹೋದರು; ಅವರೆಲ್ಲರೂ ಮೋಶೆಯ ಶಿಷ್ಯರಾಗುವದಕ್ಕಾಗಿ ಮೇಘದಲ್ಲಿಯೂ ಸಮುದ್ರದಲ್ಲಿಯೂ ದೀಕ್ಷಾಸ್ನಾನವನ್ನು ಹೊಂದಿದರು. 3 ಅವರೆಲ್ಲರೂ ದೈವಿಕವಾದ ಒಂದೇ ಆಹಾರವನ್ನು ತಿಂದರು; 4 ಅವರೆಲ್ಲರೂ ದೈವಿಕವಾದ ಒಂದೇ ನೀರನ್ನು ಕುಡಿದರು; ಹೇಗಂದರೆ ಅವರ ಹಿಂದೆ ಹೋಗುತ್ತಿದ್ದ ದೈವಿಕವಾದ ಬಂಡೆಯೊಳಗಿಂದ ಬಂದ ನೀರನ್ನು ಕುಡಿಯುತ್ತಿದ್ದರು; ಆ ಬಂಡೆ ಕ್ರಿಸ್ತನೇ. 5 ಆದರೂ ಅವರೊಳಗೆ ಬಹುಮಂದಿಯ ವಿಷಯದಲ್ಲಿ ದೇವರು ಸಂತೋಷಿಸಲಿಲ್ಲ. ಅವರು ಅಡವಿಯಲ್ಲಿ ಸಂಹರಿಸಲ್ಪಟ್ಟರೆಂದು ಬರೆದದೆಯಷ್ಟೆ. 6 ಅವರು ಕೆಟ್ಟ ವಿಷಯಗಳನ್ನು ಆಶಿಸಿದಂತೆ ನಾವು ಆಶಿಸುವವರಾಗಬಾರದೆಂಬದಕ್ಕಾಗಿ ಈ ಸಂಗತಿಗಳು ನಮಗೆ ನಿದರ್ಶನಗಳಾಗಿವೆ. 7 ಅವರಲ್ಲಿ ಕೆಲವರು ವಿಗ್ರಹಾರಾಧಕರಾಗಿದ್ದರು; ಜನರು ಉಣ್ಣುವದಕ್ಕೂ ಕುಡಿಯುವದಕ್ಕೂ ಕೂತುಕೊಂಡರು, ಕುಣಿದಾಡುವದಕ್ಕೆ ಎದ್ದರು ಎಂದು ಬರೆದದೆಯಲ್ಲಾ; ನೀವು ವಿಗ್ರಹಾರಾಧಕರಾಗಬೇಡಿರಿ. 8 ಅವರಲ್ಲಿ ಕೆಲವರು ಜಾರತ್ವಮಾಡಿ ಒಂದೇ ದಿನದಲ್ಲಿ ಇಪ್ಪತ್ತುಮೂರು ಸಾವಿರ ಮಂದಿ ಸತ್ತರು; ನಾವು ಜಾರತ್ವಮಾಡದೆ ಇರೋಣ. 9 ಅವರಲ್ಲಿ ಕೆಲವರು ಕರ್ತನನ್ನು ಪರೀಕ್ಷಿಸಿ ಸರ್ಪಗಳಿಂದ ನಾಶವಾದರು; ನಾವು ಪರೀಕ್ಷಿಸದೆ ಇರೋಣ. 10 ಇದಲ್ಲದೆ ಅವರಲ್ಲಿ ಕೆಲವರು ಗುಣುಗುಟ್ಟಿ ಸಂಹಾರಕನ ಕೈಯಿಂದ ನಾಶವಾದರು; ನೀವು ಗುಣುಗುಟ್ಟಬೇಡಿರಿ. 11 ಅವರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನರೂಪವಾಗಿವೆ; ಮತ್ತು ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಬುದ್ಧಿವಾದಗಳಾಗಿ ಬರೆದವೆ. 12 ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ. 13 ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು. ಕ್ರಿಸ್ತಸೇವೆಗೂ ವಿಗ್ರಹಾರಾಧನೆಗೂ ಸಂಸರ್ಗವೇನೂ ಇರಕೂಡದೆಂಬುವ ಬೋಧೆ 14 ಆದದರಿಂದ ಪ್ರಿಯ ಸಹೋದರರೇ, ವಿಗ್ರಹಾರಾಧನೆಯ ಗೊಡವೆಯನ್ನು ಸಂಪೂರ್ಣವಾಗಿ ತೊರೆದುಬಿಡಿರಿ. 15 ನೀವು ವಿವೇಕಿಗಳೆಂದು ಇದನ್ನು ಹೇಳುತ್ತೇನೆ; ನಾನು ಹೇಳುವದನ್ನು ನೀವೇ ಯೋಚಿಸಿರಿ. 16 ನಾವು ದೇವಸ್ತೋತ್ರಮಾಡಿ ಪಾತ್ರೆಯಲ್ಲಿ ಪಾನಮಾಡುವದು ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗಿದ್ದೇವೆಂಬದನ್ನು ಸೂಚಿಸುತ್ತದಲ್ಲವೇ. ನಾವು ರೊಟ್ಟಿಯನ್ನು ಮುರಿದು ತಿನ್ನುವದು ಕ್ರಿಸ್ತನ ದೇಹದಲ್ಲಿ ಪಾಲುಗಾರರಾಗಿದ್ದೇವೆಂಬದನ್ನು ಸೂಚಿಸುತ್ತದಲ್ಲವೇ. 17 ರೊಟ್ಟಿಯು ಒಂದೇಯಾಗಿರುವದರಿಂದ ಅನೇಕರಾಗಿರುವ ನಾವು ಒಂದೇ ದೇಹದಂತಿದ್ದೇವೆ; ಯಾಕಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಪಾಲುತಕ್ಕೊಂಡು ತಿನ್ನುತ್ತೇವೆ. 18 ವಂಶಕ್ರಮದಿಂದ ಇಸ್ರಾಯೇಲ್ಯರಾಗಿರುವವರನ್ನು ಯೋಚಿಸಿರಿ. ಯಜ್ಞಮಾಡಿದ್ದನ್ನು ತಿನ್ನುವವರು ಯಜ್ಞವೇದಿಯೊಡನೆ ಭಾಗಿಗಳಾಗಿದ್ದಾರಲ್ಲವೇ. 19 ಹೀಗೆ ಹೇಳುವದರಿಂದ ಏನು ಹೇಳಿದ ಹಾಗಾಯಿತು? ವಿಗ್ರಹಕ್ಕೆ ನೈವೇದ್ಯ ಮಾಡಿದ ಪದಾರ್ಥವು ವಾಸ್ತವವೆಂದು ಅಥವಾ ವಿಗ್ರಹವು ವಾಸ್ತವವೆಂದು ನನ್ನ ಅಭಿಪ್ರಾಯವೋ? ಅಲ್ಲ. 20 ಆದರೆ ಅನ್ಯಜನರು ತಾವು ಅರ್ಪಿಸುವ ಬಲಿಗಳನ್ನು ದೇವರಿಗಲ್ಲ ದೆವ್ವಗಳಿಗೆ ಅರ್ಪಿಸುತ್ತಾರೆಂದು ನನ್ನ ಅಭಿಪ್ರಾಯವು. ನೀವು ದೆವ್ವಗಳೊಡನೆ ಭಾಗಿಗಳಾಗಿರಬೇಕೆಂಬದು ನನ್ನ ಇಷ್ಟವಲ್ಲ. 21 ನೀವು ಕರ್ತನ ಪಾತ್ರೆ ಮತ್ತು ದೆವ್ವಗಳ ಪಾತ್ರೆ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಕುಡಿಯಲಾರಿರಿ; ಕರ್ತನ ಪಂಕ್ತಿ ಮತ್ತು ದೆವ್ವಗಳ ಪಂಕ್ತಿ ಇವುಗಳೊಳಗೆ ಒಂದರಲ್ಲಿಯೇ ಹೊರತು ಎರಡರಲ್ಲಿಯೂ ಊಟಮಾಡಲಾರಿರಿ. 22 ಕರ್ತನನ್ನು ರೇಗಿಸಬೇಕೆಂದಿದ್ದೇವೋ? ಆತನಿಗಿಂತಲೂ ನಾವು ಬಲಿಷ್ಠರೇನು? ವಿಗ್ರಹಕ್ಕೆ ಅರ್ಪಿತವಾದದ್ದನ್ನು ಉಣ್ಣಬಹುದೋ ಬಾರದೋ ಎಂಬುವ ವಿಚಾರದಲ್ಲಿ ಪರರ ಹಿತವನ್ನು ಲಕ್ಷಿಸುವದೇ ಮುಖ್ಯವಾದದ್ದು 23 ಎಲ್ಲಾ ಕಾರ್ಯಗಳನ್ನು ಮಾಡುವದಕ್ಕೆ ಸ್ವಾತಂತ್ರ್ಯವುಂಟು, ಆದರೆ ಎಲ್ಲವೂ ವಿಹಿತವಾಗಿರುವದಿಲ್ಲ. ಎಲ್ಲಾ ಕಾರ್ಯಗಳನ್ನು ಮಾಡುವದಕ್ಕೆ ಸ್ವಾತಂತ್ರ್ಯವುಂಟು, 24 ಆದರೆ ಎಲ್ಲವೂ ಭಕ್ತಿಯನ್ನು ಬೆಳಿಸುವದಿಲ್ಲ. 25 ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಲಿ. ಕಟುಕರ ಅಂಗಡಿಯಲ್ಲಿ ಮಾರುವಂಥದು ಏನಿದ್ದರೂ ಅದನ್ನು ಮನಸ್ಸಿನಲ್ಲಿ ಸಂಶಯ ಹುಟ್ಟಿಸುವ ವಿಚಾರಣೆಮಾಡದೆ ತಿನ್ನಿರಿ. 26 ಭೂವಿುಯೂ ಅದರಲ್ಲಿರುವ ಸಮಸ್ತವೂ ಕರ್ತನದಾಗಿದೆಯಲ್ಲವೇ. 27 ಕ್ರಿಸ್ತನನ್ನು ನಂಬದವರಲ್ಲಿ ಒಬ್ಬನು ನಿಮ್ಮನ್ನು ಊಟಕ್ಕೆ ಕರೆಯುವಾಗ ಹೋಗುವದಕ್ಕೆ ನಿಮಗಿಷ್ಟವಿದ್ದರೆ ನಿಮಗೇನು ಬಡಿಸಿದರೂ ಅದನ್ನು ಮನಸ್ಸಿನಲ್ಲಿ ಸಂಶಯ ಹುಟ್ಟಿಸುವ ವಿಚಾರಣೆಮಾಡದೆ ತಿನ್ನಿರಿ. 28 ಆದರೆ ಒಬ್ಬನು ನಿಮಗೆ - ಇದು ವಿಗ್ರಹಾಲಯದಲ್ಲಿ ಬಲಿಕೊಟ್ಟದ್ದು ಎಂದು ಹೇಳಿದರೆ ಈ ಸಂಗತಿಯನ್ನು ತಿಳಿಸಿದವನ ನಿವಿುತ್ತವಾಗಿಯೂ ಮನಸ್ಸಿನಲ್ಲಿ ಸಂಶಯಕ್ಕೆ ಸ್ಥಳಕೊಡಬಾರದೆಂಬ ಕಾರಣದಿಂದಲೂ ತಿನ್ನಬೇಡಿರಿ. 29 ಅದು ನಿನ್ನ ಮನಸ್ಸಿನ ಸಂಶಯವಲ್ಲ, ತಿಳಿಸಿದವನ ಮನಸ್ಸಿನಲ್ಲಿರುವ ಸಂಶಯವೇ. ಮತ್ತೊಬ್ಬನ ಮನಸ್ಸಿನಲ್ಲಿರುವ ಸಂಶಯದಿಂದ ನನ್ನ ಸ್ವಾತಂತ್ರ್ಯಕ್ಕೆ ಯಾಕೆ ತೀರ್ಪಾಗಬೇಕು? 30 ನಾನು ಕೃತಜ್ಞತೆಯೊಡನೆ ಊಟಮಾಡಿ ದೇವರನ್ನು ಸ್ತುತಿಸಿದ ಮೇಲೆ ಆ ಪದಾರ್ಥಗಳ ನಿವಿುತ್ತ ನನಗೆ ಯಾಕೆ ದೂಷಣೆಯಾಗಬೇಕು? 31 ಹೀಗಿರಲಾಗಿ ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ. 32 ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ವಿಘ್ನವಾಗಬೇಡಿರಿ. 33 ನಾನಂತೂ ಸ್ವಪ್ರಯೋಜನಕ್ಕಾಗಿ ಚಿಂತಿಸದೆ ಮನುಷ್ಯರೆಲ್ಲರೂ ರಕ್ಷಣೆಹೊಂದಬೇಕೆಂದು ಅವರ ಪ್ರಯೋಜನಕ್ಕಾಗಿ ಚಿಂತಿಸಿ ಎಲ್ಲರನ್ನೂ ಎಲ್ಲಾ ವಿಷಯಗಳಲ್ಲಿ ಮೆಚ್ಚಿಸುವವನಾಗಿದ್ದೇನೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India