1 ಅರಸುಗಳು 8 - ಕನ್ನಡ ಸತ್ಯವೇದವು J.V. (BSI)ದೇವಾಲಯ ಪ್ರತಿಷ್ಠೆಯು 1 ಅನಂತರ ಅರಸನಾದ ಸೊಲೊಮೋನನು ದಾವೀದನಗರವಾದ ಚೀಯೋನಿನಿಂದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಮೇಲೆ ತರುವದಕ್ಕಾಗಿ ಇಸ್ರಾಯೇಲ್ಯರ ಹಿರಿಯರು ಕುಲಾಧಿಪತಿಗಳು ಇವರೇ ಮೊದಲಾದ ಎಲ್ಲಾ ಇಸ್ರಾಯೇಲ್ ಪ್ರಧಾನ ಪುರುಷರನ್ನು ಯೆರೂಸಲೇವಿುಗೆ ತನ್ನ ಹತ್ತಿರಕ್ಕೆ ಕರಿಸಿಕೊಂಡನು. 2 ಇಸ್ರಾಯೇಲ್ಯರೆಲ್ಲರೂ ಏಳನೆಯ ತಿಂಗಳಾದ ಆಶ್ವೀಜಮಾಸದಲ್ಲಿ ಜಾತ್ರೆಗೋಸ್ಕರ ಅರಸನಾದ ಸೊಲೊಮೋನನ ಬಳಿಗೆ ಕೂಡಿಬಂದರು. 3 ಇಸ್ರಾಯೇಲ್ಯರ ಎಲ್ಲಾ ಹಿರಿಯರು ಕೂಡಿಬಂದಿರಲಾಗಿ ಯಾಜಕರು ಯೆಹೋವನ ಮಂಜೂಷವನ್ನು ಹೊತ್ತುಕೊಂಡರು. 4 ಉಳಿದ ಯಾಜಕರೂ ಲೇವಿಯರೂ ದೇವದರ್ಶನದ ಗುಡಾರ, ಅದರಲ್ಲಿದ್ದ ಪರಿಶುದ್ಧವಸ್ತು ಇವುಗಳನ್ನು ಹೊತ್ತರು. 5 ಅರಸನಾದ ಸೊಲೊಮೋನನೂ ಅಲ್ಲಿ ಕೂಡಿಬಂದಿದ್ದ ಎಲ್ಲಾ ಇಸ್ರಾಯೇಲ್ಯರೂ ಮಂಜೂಷದ ಮುಂದೆ ಅಸಂಖ್ಯವಾದ ಕುರಿದನಗಳನ್ನು ಯಜ್ಞಮಾಡಿದರು. 6 ಯಾಜಕರು ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತೆಗೆದುಕೊಂಡು ಬಂದು ಮಹಾಪರಿಶುದ್ಧ ಸ್ಥಳವೆನಿಸುವ ಗರ್ಭಗೃಹದಲ್ಲಿ ಕೆರೂಬಿಗಳ ರೆಕ್ಕೆಗಳ ಕೆಳಗೆ ಅದಕ್ಕೆ ನೇಮಕವಾದ ಸ್ಥಳದಲ್ಲಿ ಇಟ್ಟರು. 7 ಕೆರೂಬಿಗಳ ರೆಕ್ಕೆಗಳು ಮಂಜೂಷವಿದ್ದ ಸ್ಥಳದ ಮೇಲೆ ಚಾಚಿದವುಗಳಾಗಿದ್ದದರಿಂದ ಮಂಜೂಷವೂ ಅದರ ಕೋಲುಗಳೂ ಪೂರ್ಣವಾಗಿ ಅವುಗಳ ನೆರಳಿನಲ್ಲಿದ್ದವು. 8 ಆ ಕೋಲುಗಳು ಬಹಳ ಉದ್ದವಾಗಿದ್ದದರಿಂದ ಅವುಗಳ ತುದಿಗಳು ಗರ್ಭಗೃಹದ ಎದುರಿನಲ್ಲಿರುವ ಪರಿಶುದ್ಧಸ್ಥಳದಲ್ಲಿ ನಿಂತವರಿಗೆ ಕಾಣಿಸಿದರೂ ಹೊರಗೆ ನಿಂತವರಿಗೆ ಕಾಣಿಸುತ್ತಿರಲಿಲ್ಲ. ಅವು ಇಂದಿನವರೆಗೂ ಅಲ್ಲೇ ಇರುತ್ತವೆ. 9 ಮಂಜೂಷದಲ್ಲಿ ಎರಡು ಕಲ್ಲಿನ ಹಲಿಗೆಗಳ ಹೊರತಾಗಿ ಬೇರೇನೂ ಇರಲಿಲ್ಲ. ಯೆಹೋವನು ಐಗುಪ್ತದಿಂದ ಬಂದ ಇಸ್ರಾಯೇಲ್ಯರೊಡನೆ ಹೋರೇಬ್ ಬೆಟ್ಟದ ಬಳಿಯಲ್ಲಿ ಒಡಂಬಡಿಕೆ ಮಾಡಿಕೊಂಡ ಮೇಲೆ ಮೋಶೆಯು ಅವುಗಳನ್ನು ಅದರಲ್ಲಿಟ್ಟಿದ್ದನು. 10 ಯಾಜಕರು ಪರಿಶುದ್ಧಸ್ಥಳದಿಂದ ಹೊರಗೆ ಬಂದ ಕೂಡಲೆ ಮೇಘವು ಯೆಹೋವನ ಆಲಯವನ್ನು ತುಂಬಿಕೊಂಡಿತು. 11 ಯೆಹೋವನ ತೇಜಸ್ಸಿನಿಂದ ವ್ಯಾಪ್ತವಾಗಿದ್ದ ಮೇಘವು ಆಲಯವನ್ನು ತುಂಬಿಕೊಂಡದರಿಂದ ಯಾಜಕರು ಅಲ್ಲಿ ನಿಂತು ಸೇವೆ ಮಾಡಲಾರದವರಾದರು. 12 ತರುವಾಯ ಸೊಲೊಮೋನನು - ಯೆಹೋವನೇ, ಕಾರ್ಗತ್ತಲಲ್ಲಿ ವಾಸಿಸುತ್ತೇನೆಂದು ಹೇಳಿದ್ದೀ; 13 ನಾನು ನಿನಗೋಸ್ಕರ ಒಂದು ಮಂದಿರವನ್ನು ಕಟ್ಟಿಸಿದ್ದೇನೆ; ಅದು ನಿನಗೆ ಶಾಶ್ವತವಾದ ವಾಸಸ್ಥಳವಾಗಿರಲಿ ಎಂದು ಪ್ರಾರ್ಥನೆಮಾಡಿದನು. 14 ಇದಾದ ಮೇಲೆ ಅರಸನು ಎದ್ದುನಿಂತಿದ್ದ ಇಸ್ರಾಯೇಲ್ ಸಮೂಹದವರ ಕಡೆಗೆ ತಿರುಗಿಕೊಂಡು ಅವರನ್ನು ಆಶೀರ್ವದಿಸಿ - 15 ಇಸ್ರಾಯೇಲ್‍ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ; ನನ್ನ ತಂದೆಯಾದ ದಾವೀದನಿಗೆ ಆತನ ಬಾಯಿ ನುಡಿದದ್ದನ್ನು ಆತನ ಹಸ್ತವು ಈಗ ನೆರವೇರಿಸಿಯದೆ. 16 ಆತನು - ನಾನು ನನ್ನ ಜನರಾದ ಇಸ್ರಾಯೇಲ್ಯರನ್ನು ಐಗುಪ್ತದಿಂದ ಬರಮಾಡಿದಂದಿನಿಂದ ನನ್ನ ಪ್ರಜೆಗಳಾದ ಇಸ್ರಾಯೇಲ್ಯರನ್ನು ಆಳುವದಕ್ಕೋಸ್ಕರ ದಾವೀದನನ್ನು ಆರಿಸಿಕೊಂಡೆನೇ ಹೊರತು ನನ್ನ ನಾಮದ ನಿವಾಸಕ್ಕೋಸ್ಕರ ಆಲಯ ಸ್ಥಾನವನ್ನಾಗಿ ಇಸ್ರಾಯೇಲ್‍ಕುಲಗಳ ಯಾವ ಪಟ್ಟಣವನ್ನೂ ಆರಿಸಿಕೊಳ್ಳಲಿಲ್ಲ ಎಂದು ಹೇಳಿದ್ದನು. 17 ನನ್ನ ತಂದೆಯಾದ ದಾವೀದನು ಇಸ್ರಾಯೇಲ್‍ದೇವರಾದ ಯೆಹೋವನ ಹೆಸರಿಗೋಸ್ಕರ ಆಲಯವನ್ನು ಕಟ್ಟಬೇಕೆಂದು ಮನಸ್ಸುಮಾಡಿದಾಗ 18 ಆತನು ಅವನಿಗೆ - ನೀನು ನನ್ನ ಹೆಸರಿಗೋಸ್ಕರ ಒಂದು ಮನೆಯನ್ನು ಕಟ್ಟುವದಕ್ಕೆ ಮನಸ್ಸುಮಾಡಿದ್ದು ಒಳ್ಳೇದೇ ಸರಿ. 19 ಆದರೂ ನೀನು ಅದನ್ನು ಕಟ್ಟಬಾರದು; ನಿನ್ನಿಂದ ಹುಟ್ಟುವ ಮಗನು ನನ್ನ ಹೆಸರಿಗಾಗಿ ಒಂದು ಆಲಯವನ್ನು ಕಟ್ಟಬೇಕು ಎಂದು ಹೇಳಿದನು. 20 ಯೆಹೋವನು ತಾನು ಕೊಟ್ಟ ಮಾತನ್ನು ನೆರವೇರಿಸಿದನು. ಆತನ ವಾಗ್ದಾನದಂತೆ ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ಇಸ್ರಾಯೇಲ್‍ಸಿಂಹಾಸನದ ಮೇಲೆ ಅರಸನಾಗಿ ಕೂತುಕೊಂಡು ಇಸ್ರಾಯೇಲ್‍ದೇವರಾದ ಯೆಹೋವನ ಹೆಸರಿಗೋಸ್ಕರ ಈ ಆಲಯವನ್ನು ಕಟ್ಟಿದೆನು; 21 ಇದಲ್ಲದೆ ಐಗುಪ್ತದಿಂದ ಬಿಡುಗಡೆ ಹೊಂದಿದ ನಮ್ಮ ಪಿತೃಗಳಿಗೆ ಯೆಹೋವನಿಂದ ದೊರಕಿದ ನಿಬಂಧನಶಾಸನಗಳಿರುವ ಮಂಜೂಷಕ್ಕೆ ಸ್ಥಳವನ್ನು ಪ್ರತ್ಯೇಕಿಸಿ ಅಲ್ಲಿ ಅದನ್ನು ಇಟ್ಟೆನು ಎಂದು ಹೇಳಿದನು. 22 ತರುವಾಯ ಸೊಲೊಮೋನನು ಎಲ್ಲಾ ಇಸ್ರಾಯೇಲ್ಯರ ಎದುರಿನಲ್ಲಿ ಯೆಹೋವನ ಯಜ್ಞವೇದಿಯ ಮುಂದೆ ನಿಂತು ಆಕಾಶದ ಕಡೆಗೆ ಕೈಗಳನ್ನೆತ್ತಿ ಹೀಗೆ ಪ್ರಾರ್ಥಿಸಿದನು - 23 ಇಸ್ರಾಯೇಲ್‍ದೇವರಾದ ಯೆಹೋವನೇ, ಭೂಲೋಕದಲ್ಲಿಯೂ ಪರಲೋಕದಲ್ಲಿಯೂ ನಿನಗೆ ಸಮಾನನಾದ ದೇವರಿಲ್ಲ; ಪೂರ್ಣಮನಸ್ಸಿನಿಂದ ನಿನಗೆ ನಡೆದುಕೊಳ್ಳುವಂಥ ಸೇವಕರ ವಿಷಯದಲ್ಲಿ ನೀನು ನಿನ್ನ ಒಡಂಬಡಿಕೆಯನ್ನೂ ಕೃಪೆಯನ್ನೂ ನೆರವೇರಿಸುವವನು. 24 ನಿನ್ನ ಸೇವಕನೂ ನನ್ನ ತಂದೆಯೂ ಆದ ದಾವೀದನಿಗೆ ಕೊಟ್ಟ ಮಾತನ್ನು ಕೈಕೊಂಡಿ; ನಿನ್ನ ಬಾಯಿ ನುಡಿದದ್ದನ್ನು ನಿನ್ನ ಹಸ್ತವು ಈಗ ನೆರವೇರಿಸಿತು. 25 ಇಸ್ರಾಯೇಲ್‍ದೇವರಾದ ಯೆಹೋವನೇ, ನೀನು ನನ್ನ ತಂದೆಯಾದ ದಾವೀದನಿಗೆ - ನಿನ್ನ ಸಂತಾನದವರು ನಿನ್ನಂತೆ ಜಾಗರೂಕತೆಯಿಂದ ನನ್ನ ಮಾರ್ಗದಲ್ಲೇ ನಡೆದುಕೊಳ್ಳುವದಾದರೆ ಅವರು ತಪ್ಪದೆ ಇಸ್ರಾಯೇಲ್‍ಸಿಂಹಾಸನದ ಮೇಲೆ ಕೂತುಕೊಳ್ಳುವಂತೆ ಮಾಡುವೆನು ಎಂಬದಾಗಿ ವಾಗ್ದಾನ ಮಾಡಿದಿಯಲ್ಲಾ; ಅದನ್ನು ನೆರವೇರಿಸು. 26 ಇಸ್ರಾಯೇಲ್‍ದೇವರೇ, ನೀನು ನಿನ್ನ ಸೇವಕನೂ ನನ್ನ ತಂದೆಯೂ ಆದ ದಾವೀದನಿಗೆ ನುಡಿದದ್ದೆಲ್ಲವೂ ಸಾರ್ಥಕವಾಗಲಿ. 27 ದೇವರು ನಿಜವಾಗಿ ಭೂಲೋಕದಲ್ಲಿ ವಾಸಿಸುವನೋ? ಆಕಾಶವೂ ಉನ್ನತೋನ್ನತವಾದ ಆಕಾಶವೂ ನಿನ್ನ ವಾಸಕ್ಕೆ ಸಾಲವು; ಹೀಗಿರುವಲ್ಲಿ ನಾನು ಕಟ್ಟಿಸಿದ ಈ ಮಂದಿರವು ಹೇಗೆ ಸಾಕಾದೀತು! 28 ಆದರೂ ನನ್ನ ದೇವರೇ, ಯೆಹೋವನೇ, ನಿನ್ನ ಸೇವಕನ ಪ್ರಾರ್ಥನೆಗೂ ವಿಜ್ಞಾಪನೆಗೂ ಕಿವಿಗೊಡು; ಈಹೊತ್ತು ನಿನ್ನನ್ನು ಪ್ರಾರ್ಥಿಸುತ್ತಿರುವ ನಿನ್ನ ಸೇವಕನ ಮೊರೆಯನ್ನು ಲಾಲಿಸು. 29 ಈ ಸ್ಥಳವನ್ನು ಕುರಿತು - ನನ್ನ ನಾಮಪ್ರಭಾವವು ಇಲ್ಲಿ ವಾಸಿಸುವದು ಎಂದು ಹೇಳಿದವನೇ, ನಿನ್ನ ಕಟಾಕ್ಷವು ಹಗಲಿರುಳು ಈ ಮಂದಿರದ ಮೇಲಿರಲಿ; ಇಲ್ಲಿ ನಿನ್ನ ಸೇವಕನು ನಿನ್ನನ್ನು ಪ್ರಾರ್ಥಿಸುವಾಗೆಲ್ಲಾ ಅವನಿಗೆ ಸದುತ್ತರವನ್ನು ದಯಪಾಲಿಸು. 30 ನಿನ್ನ ಸೇವಕನಾದ ನಾನಾಗಲಿ ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರಾಗಲಿ ಈ ಸ್ಥಳದ ಕಡೆಗೆ ತಿರುಗಿಕೊಂಡು ನಿನ್ನನ್ನು ಪ್ರಾರ್ಥಿಸುವದಾದರೆ ನಿನ್ನ ನಿವಾಸವಾಗಿರುವ ಪರಲೋಕದಿಂದ ನಮ್ಮ ಬಿನ್ನಹವನ್ನು ಕೇಳಿ ಕ್ಷಮೆಯನ್ನು ಅನುಗ್ರಹಿಸು. 31 ನೆರೆಯವನಿಗೆ ವಿರೋಧವಾಗಿ ತಪ್ಪುಮಾಡಿದವನೆಂಬ ಸಂಶಯಕ್ಕೆ ಗುರಿಯಾದ ಮನುಷ್ಯನು ತಾನು ನಿರ್ದೋಷಿಯೆಂದು ಪ್ರಮಾಣಮಾಡಬೇಕಾದಾಗ ಅಂಥವನು ಈ ಆಲಯಕ್ಕೆ ಬಂದು ನಿನ್ನ ವೇದಿಯ ಮುಂದೆ ನಿಂತು ಪ್ರಮಾಣಮಾಡುವದಾದರೆ 32 ಪರಲೋಕದಲ್ಲಿರುವ ನೀನು ಅದನ್ನು ಕೇಳಿ ನಿನ್ನ ಸೇವಕರ ವ್ಯಾಜ್ಯವನ್ನು ತೀರಿಸು; ದುಷ್ಟನಿಗೆ ಅವನ ದುಷ್ಟತ್ವವನ್ನು ಅವನ ತಲೆಯ ಮೇಲೆಯೇ ಬರಮಾಡಿ ಅವನು ಅಪರಾಧಿಯೆಂದೂ ನೀತಿವಂತನಿಗೆ ಅವನ ನೀತಿಯ ಫಲವನ್ನು ಅನುಗ್ರಹಿಸಿ ಅವನು ನೀತಿವಂತನೆಂದೂ ತೋರಿಸಿಕೊಡು. 33 ತಮ್ಮ ಪಾಪಗಳ ಸಲುವಾಗಿ ಶತ್ರುಗಳಿಂದ ತಗ್ಗಿಸಲ್ಪಟ್ಟ ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರು ನಿನ್ನ ಕಡೆಗೆ ತಿರುಗಿಕೊಂಡು ನಿನ್ನ ನಾಮವನ್ನು ಎತ್ತಿ ಈ ಆಲಯದಲ್ಲಿ ನಿನಗೆ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಮಾಡುವದಾದರೆ 34 ಪರಲೋಕದಲ್ಲಿರುವ ನೀನು ಲಾಲಿಸಿ ಅವರ ಪಾಪಗಳನ್ನು ಕ್ಷವಿುಸಿ ಅವರ ಪಿತೃಗಳಿಗೆ ನೀನು ಕೊಟ್ಟ ದೇಶಕ್ಕೆ ಅವರನ್ನು ತಿರಿಗಿ ಬರಮಾಡು. 35 ಅವರ ಪಾಪಗಳ ನಿವಿುತ್ತವಾಗಿ ಆಕಾಶವು ಮಳೆಗರೆಯದಂತೆ ಮುಚ್ಚಿಕೊಂಡಾಗ ಅವರು ತಮ್ಮ ಪಾಪಗಳನ್ನು ಬಿಟ್ಟು ತಮ್ಮನ್ನು ತಗ್ಗಿಸಿದವನು ನೀನೇ ಎಂದು ನಿನ್ನ ನಾಮವನ್ನು ಎತ್ತಿ ಈ ಆಲಯದ ಕಡೆಗೆ ತಿರುಗಿಕೊಂಡು ಪ್ರಾರ್ಥಿಸುವದಾದರೆ 36 ಪರಲೋಕದಲ್ಲಿರುವ ನೀನು ಲಾಲಿಸಿ ನಿನ್ನ ಸೇವಕರೂ ಪ್ರಜೆಗಳೂ ಆದ ಇಸ್ರಾಯೇಲ್ಯರ ಪಾಪಗಳನ್ನು ಕ್ಷವಿುಸಿ ಅವರು ನಡೆಯಬೇಕಾದ ಮಾರ್ಗವನ್ನು ತೋರಿಸಿ ನಿನ್ನ ಪ್ರಜೆಗೆ ಸ್ವಾಸ್ತ್ಯವಾಗಿ ಕೊಟ್ಟ ದೇಶಕ್ಕೆ ಮಳೆಯನ್ನು ಅನುಗ್ರಹಿಸು. 37 ದೇಶಕ್ಕೆ ಕ್ಷಾಮ, ಘೋರವ್ಯಾಧಿ, ಬಿಸಿಗಾಳಿ, ಬೂದಿ, ವಿುಡಿತೆ, ಜಿಟ್ಟೇಹುಳ, ಪಟ್ಟಣಗಳಿಗೆ ಶತ್ರುಗಳ ಮುತ್ತಿಗೆ, ಅಂತು ಯಾವ ಉಪದ್ರವದಿಂದಾಗಲಿ 38 ವ್ಯಾಧಿಯಿಂದಾಗಲಿ ಬಾಧೆಯುಂಟಾಗುವಲ್ಲಿ ಮನಸ್ಸಾಕ್ಷಿ ಪೀಡಿತರಾದ ಎಲ್ಲಾ ಇಸ್ರಾಯೇಲ್ಯರಾಗಲಿ ಅವರಲ್ಲಿ ಒಬ್ಬನಾಗಲಿ ಈ ಆಲಯದ ಕಡೆಗೆ ಕೈಯೆತ್ತಿ ನಿನಗೆ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಮಾಡುವದಾದರೆ 39 ಮನುಷ್ಯರ ಹೃದಯಗಳನ್ನು ಬಲ್ಲಂಥ ನೀನು ನಿನ್ನ ನಿವಾಸವಾಗಿರುವ ಪರಲೋಕದಿಂದ ಲಾಲಿಸಿ ಅವರಿಗೆ ಪಾಪಪರಿಹಾರವನ್ನು ಅನುಗ್ರಹಿಸು; ನೀನೊಬ್ಬನೇ ಎಲ್ಲಾ ಮನುಷ್ಯರ ಹೃದಯಗಳನ್ನು ಬಲ್ಲವನಾಗಿರುವದರಿಂದ ಪ್ರತಿಯೊಬ್ಬನಿಗೂ ಅವನವನು ಹಿಡಿಯುವ ಮಾರ್ಗಕ್ಕೆ ತಕ್ಕ ಹಾಗೆ ಫಲವನ್ನು ಕೊಡು. 40 ಆಗ ನಮ್ಮ ಪಿತೃಗಳಿಗೆ ನೀನು ಕೊಟ್ಟ ದೇಶದಲ್ಲಿ ಅವರು ವಾಸಿಸುವ ಕಾಲದಲ್ಲೆಲ್ಲಾ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿರುವರು. 41 ನಿನ್ನ ನಾಮಮಹತ್ತು, ಭುಜಬಲ, ಶಿಕ್ಷಾಹಸ್ತ ಇವುಗಳ ವರ್ತಮಾನವು ಪರರಾಜ್ಯಗಳವರಿಗೂ ಗೊತ್ತಾಗುವದು. 42 ನಿನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ಸೇರದವನಾದ ಇಂಥ ಒಬ್ಬ ಪರದೇಶಿಯು ನಿನ್ನ ನಾಮಕ್ಕೋಸ್ಕರ ದೂರದೇಶದಿಂದ ಬಂದು ಈ ಆಲಯದ ಮುಂದೆ ನಿಂತು ನಿನ್ನನ್ನು ಪ್ರಾರ್ಥಿಸುವದಾದರೆ 43 ನಿನ್ನ ನಿವಾಸವಾಗಿರುವ ಪರಲೋಕದಿಂದ ಅವನ ಪ್ರಾರ್ಥನೆಯನ್ನು ಕೇಳಿ ಅವನು ಬೇಡಿಕೊಂಡದ್ದನ್ನು ಅನುಗ್ರಹಿಸು; ಆಗ ಲೋಕದ ಎಲ್ಲಾ ಜನರೂ ನಿನ್ನ ನಾಮಮಹತ್ತನ್ನು ತಿಳಿದು ನಿನ್ನ ಜನರಾದ ಇಸ್ರಾಯೇಲ್ಯರಂತೆ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿ ನಾನು ನಿನ್ನ ಹೆಸರಿಗಾಗಿ ಈ ಆಲಯವನ್ನು ಕಟ್ಟಿಸಿದ್ದೇನೆಂದು ತಿಳಿದುಕೊಳ್ಳುವರು. 44 ನೀನು ನಿನ್ನ ಜನರನ್ನು ಶತ್ರುಗಳೊಡನೆ ಯುದ್ಧಮಾಡುವದಕ್ಕೋಸ್ಕರ ಎಲ್ಲಿಗಾದರೂ ಕಳುಹಿಸಿದಾಗ ಅವರು ಅಲ್ಲಿಂದ ನೀನು ಆರಿಸಿಕೊಂಡ ಪಟ್ಟಣದ ಕಡೆಗೂ ನಾನು ನಿನ್ನ ಹೆಸರಿಗಾಗಿ ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು ಯೆಹೋವನಾದ ನಿನ್ನನ್ನು ಪ್ರಾರ್ಥಿಸುವದಾದರೆ 45 ಪರಲೋಕದಲ್ಲಿರುವ ನೀನು ಅವರ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಕೇಳಿ ಅವರ ನ್ಯಾಯವನ್ನು ಸ್ಥಾಪಿಸು. 46 ಅವರು ನಿನಗೆ ವಿರುದ್ಧವಾಗಿ ಪಾಪಮಾಡಾರು. ಪಾಪಮಾಡದ ಮನುಷ್ಯನು ಒಬ್ಬನೂ ಇಲ್ಲವಲ್ಲಾ. ನೀನು ಅವರ ಮೇಲೆ ಕೋಪಗೊಂಡು ಅವರನ್ನು ಶತ್ರುಗಳ ಕೈಗೆ ಒಪ್ಪಿಸಿದಾಗ ಮತ್ತು ಆ ಶತ್ರುಗಳು ಅವರನ್ನು ಸೆರೆಹಿಡಿದು ದೂರದಲ್ಲಾಗಲಿ ಸಮೀಪದಲ್ಲಾಗಲಿ ಇರುವ ತಮ್ಮ ದೇಶಕ್ಕೆ ಅವರನ್ನು ಒಯ್ದಾಗ 47 ತಾವು ಸೆರೆಯವರಾಗಿ ಬಿದ್ದುಕೊಂಡಿರುವ ದೇಶದಲ್ಲಿ ಅವರು ಪಶ್ಚಾತ್ತಾಪಪಟ್ಟು 48 ನಿನ್ನ ಅನುಗ್ರಹದಿಂದ ತಮ್ಮ ಪಿತೃಗಳಿಗೆ ದೊರಕಿದ ದೇಶದ ಕಡೆಗೂ ನೀನು ಆರಿಸಿಕೊಂಡ ಪಟ್ಟಣದ ಕಡೆಗೂ ನಾನು ನಿನ್ನ ಹೆಸರಿಗೋಸ್ಕರ ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು - ನಾವು ನಿನ್ನ ಆಜ್ಞೆಗಳನ್ನು ಮೀರಿ ಪಾಪಮಾಡಿ ದ್ರೋಹಿಗಳಾದೆವು ಎಂದು ಒಪ್ಪಿ ಪೂರ್ಣಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ನಿನ್ನನ್ನು ಪ್ರಾರ್ಥಿಸುವದಾದರೆ 49 ನೀನು ನಿನ್ನ ನಿವಾಸವಾಗಿರುವ ಪರಲೋಕದಿಂದ ಅವರ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಲಾಲಿಸಿ ಅವರ ನ್ಯಾಯವನ್ನು ಸ್ಥಾಪಿಸು. 50 ಕಬ್ಬಿಣ ಕರಗಿಸುವ ಕುಲಿಮೆಯೋಪಾದಿಯಲ್ಲಿದ್ದ ಐಗುಪ್ತ ದೇಶದಿಂದ ನೀನು ಬಿಡಿಸಿದ ಈ ಜನರು 51 ನಿನ್ನ ಸ್ವಕೀಯ ಜನರಾಗಿದ್ದಾರೆಂಬದನ್ನು ನೆನಸಿ ಅವರು ನಿನಗೆ ವಿರುದ್ಧವಾಗಿ ಮಾಡಿದ ಎಲ್ಲಾ ಅಪರಾಧ ದ್ರೋಹಗಳನ್ನು ಕ್ಷವಿುಸಿ ಅವರನ್ನು ಸೆರೆಯೊಯ್ದವರ ಮನಸ್ಸಿನಲ್ಲಿ ಅವರ ಮೇಲೆ ದಯೆ ಹುಟ್ಟಿಸು. 52 ನಿನ್ನ ಸೇವಕನ ಮೇಲೆಯೂ ಪ್ರಜೆಗಳಾದ ಇಸ್ರಾಯೇಲ್ಯರ ಮೇಲೆಯೂ ಕಟಾಕ್ಷವಿಟ್ಟು ಅವರು ಪ್ರಾರ್ಥಿಸುವಾಗೆಲ್ಲಾ ಅವರ ವಿಜ್ಞಾಪನೆಗಳನ್ನು ಲಾಲಿಸು. 53 ಕರ್ತನೇ, ಯೆಹೋವನೇ, ನೀನು ನಮ್ಮ ಪಿತೃಗಳನ್ನು ಐಗುಪ್ತದೇಶದಿಂದ ಬಿಡಿಸುವಾಗ ಅವರಿಗೆ - ನಾನು ನಿಮ್ಮನ್ನು ಎಲ್ಲಾ ಜನಾಂಗಗಳೊಳಗಿಂದ ಪ್ರತ್ಯೇಕಿಸಿ ಸ್ವಕೀಯ ಜನರನ್ನಾಗಿ ಮಾಡಿಕೊಂಡಿದ್ದೇನೆಂದು ಮೋಶೆಯ ಮುಖಾಂತರವಾಗಿ ಹೇಳಿದಿಯಲ್ಲವೇ ಎಂದು ದೇವರನ್ನು ಪ್ರಾರ್ಥಿಸಿದನು. 54 ಆಕಾಶದ ಕಡೆಗೆ ಕೈಯೆತ್ತಿ ಯೆಹೋವನ ಯಜ್ಞವೇದಿಯ ಮುಂದೆ ಮೊಣಕಾಲೂರಿದ್ದ ಸೊಲೊಮೋನನು ಈ ಪ್ರಕಾರವಾಗಿ ಯೆಹೋವನನ್ನು ಪ್ರಾರ್ಥಿಸಿದ ನಂತರ ಎದ್ದು ನಿಂತು 55 ಇಸ್ರಾಯೇಲ್ ಸರ್ವಸಮೂಹದವರನ್ನು ಆಶೀರ್ವದಿಸಿ ಗಟ್ಟಿಯಾಗಿ ಹೇಳಿದ್ದೇನಂದರೆ - 56 ತಾನು ವಾಗ್ದಾನಮಾಡಿದಂತೆ ತನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೆ ವಿಶ್ರಾಂತಿಯನ್ನು ಅನುಗ್ರಹಿಸಿದ ಯೆಹೋವನಿಗೆ ಸ್ತೋತ್ರವಾಗಲಿ. ಆತನು ತನ್ನ ಸೇವಕನಾದ ಮೋಶೆಯ ಮುಖಾಂತರವಾಗಿ ಮಾಡಿದ ಅತಿಶ್ರೇಷ್ಠವಾಗ್ದಾನಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ. 57 ನಮ್ಮ ದೇವರಾದ ಯೆಹೋವನು ನಮ್ಮ ಪಿತೃಗಳ ಸಂಗಡ ಇದ್ದ ಹಾಗೆ ನಮ್ಮ ಸಂಗಡಲೂ ಇರಲಿ; ಆತನು ನಮ್ಮನ್ನು ಕೈಬಿಡದಿರಲಿ, ತಳ್ಳದಿರಲಿ. 58 ನಾವು ನಮ್ಮ ಪಿತೃಗಳಿಗೆ ಕೊಡಲ್ಪಟ್ಟ ಆಜ್ಞಾನಿಯಮ ವಿಧಿಗಳನ್ನು ಕೈಕೊಂಡು ಆತನ ಮಾರ್ಗದಲ್ಲಿ ನಡೆಯುವಂತೆ ನಮ್ಮ ಮನಸ್ಸನ್ನು ತನ್ನ ಕಡೆಗೆ ತಿರುಗಿಸಿಕೊಳ್ಳಲಿ. 59 ನಾನು ಈಗ ನಮ್ಮ ದೇವರಾದ ಯೆಹೋವನಿಗೆ ಮಾಡಿದ ಪ್ರಾರ್ಥನೆಯು ಹಗಲಿರುಳು ಆತನ ಜ್ಞಾಪಕದಲ್ಲಿರಲಿ. 60 ಭೂಲೋಕದ ಜನರೆಲ್ಲರೂ ಯೆಹೋವನ ಹೊರತು ಬೇರೆ ದೇವರಿಲ್ಲವೆಂಬದನ್ನು ತಿಳಿದುಕೊಳ್ಳುವಂತೆ ಆತನು ಅವಶ್ಯವಿರುವಾಗೆಲ್ಲಾ ತನ್ನ ಸೇವಕನ ಮತ್ತು ಪ್ರಜೆಗಳಾದ ಇಸ್ರಾಯೇಲ್ಯರ ನ್ಯಾಯವನ್ನು ಸ್ಥಾಪಿಸುತ್ತಾ ಬರಲಿ. 61 ನೀವಾದರೋ ಈಗಿನಂತೆ ಮುಂದೆಯೂ ನಮ್ಮ ದೇವರಾದ ಯೆಹೋವನಲ್ಲಿ ಪೂರ್ಣಭಯಭಕ್ತಿಯುಳ್ಳವರಾಗಿ ಆತನ ವಿಧಿಗಳನ್ನು ಅನುಸರಿಸಿ ಆತನ ಆಜ್ಞೆಗಳನ್ನು ಕೈಕೊಳ್ಳಿರಿ ಎಂಬದೇ. 62 ಅರಸನೂ ಎಲ್ಲಾ ಇಸ್ರಾಯೇಲ್ಯರೂ ಯೆಹೋವನ ಸನ್ನಿಧಿಯಲ್ಲಿ ಯಜ್ಞಮಾಡಿದರು. 63 ಸೊಲೊಮೋನನು ಯೆಹೋವನಿಗೋಸ್ಕರ ಮಾಡಿದ ಸಮಾಧಾನಯಜ್ಞಕ್ಕಾಗಿ ವಧಿಸಿದ ಹೋರಿಗಳು ಇಪ್ಪತ್ತೆರಡು ಸಾವಿರ; ಕುರಿಗಳು ಲಕ್ಷದ ಇಪ್ಪತ್ತು ಸಾವಿರ. ಈ ಪ್ರಕಾರ ಅರಸನೂ ಎಲ್ಲಾ ಇಸ್ರಾಯೇಲ್ಯರೂ ಯೆಹೋವನ ಆಲಯವನ್ನು ಪ್ರತಿಷ್ಠಿಸಿದರು. 64 ಯೆಹೋವನ ಆಲಯದ ಮುಂದಿರುವ ತಾಮ್ರದ ಯಜ್ಞವೇದಿಯು ಈ ಎಲ್ಲಾ ಸರ್ವಾಂಗಹೋಮದ್ರವ್ಯಗಳನ್ನೂ ಧಾನ್ಯನೈವೇದ್ಯಗಳನ್ನೂ ಸಮಾಧಾನಯಜ್ಞದ ಕೊಬ್ಬನ್ನೂ ಹಿಡಿಯಲಾರದಷ್ಟು ಚಿಕ್ಕದಾಗಿದ್ದದರಿಂದ ಸೊಲೊಮೋನನು ಆ ದಿವಸ ದೇವಾಲಯದ ಮುಂದಿನ ಪ್ರಾಕಾರದ ಮಧ್ಯಸ್ಥಳವನ್ನು ಪ್ರತಿಷ್ಠಿಸಿ ಅಲ್ಲಿ ಇವುಗಳನ್ನೆಲ್ಲಾ ಸಮರ್ಪಿಸಿದನು. 65 ಈ ಪ್ರಕಾರ ಸೊಲೊಮೋನನೂ ಹಮಾತಿನ ದಾರಿಯಿಂದ ಐಗುಪ್ತದ ಹಳ್ಳದವರೆಗಿರುವ ಪ್ರಾಂತಗಳಿಂದ ಮಹಾ ಸಮೂಹವಾಗಿ ಕೂಡಿಬಂದಿದ್ದ ಎಲ್ಲಾ ಇಸ್ರಾಯೇಲ್ಯರೂ ಎರಡು ವಾರ ಅಂದರೆ ಹದಿನಾಲ್ಕು ದಿವಸಗಳವರೆಗೆ ನಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಹಬ್ಬಮಾಡಿದರು. 66 ಎಂಟನೆಯ ದಿವಸ ಜನರಿಗೆ ಹೋಗುವದಕ್ಕೆ ಅಪ್ಪಣೆಯಾಗಲು ಅವರು ಅರಸನನ್ನು ವಂದಿಸಿ ಯೆಹೋವನು ತನ್ನ ಸೇವಕನಾದ ದಾವೀದನಿಗೂ ತನ್ನ ಪ್ರಜೆಗಳಾದ ಇಸ್ರಾಯೇಲ್ಯರಿಗೂ ಮಾಡಿದ ಸರ್ವೋಪಕಾರಗಳನ್ನು ನೆನಸಿ ಆನಂದಚಿತ್ತರಾಗಿ ಹರ್ಷಿಸುತ್ತಾ ತಮ್ಮತಮ್ಮ ನಿವಾಸಗಳಿಗೆ ತೆರಳಿದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India