1 ಅರಸುಗಳು 6 - ಕನ್ನಡ ಸತ್ಯವೇದವು J.V. (BSI)ದೇವಾಲಯವನ್ನು ಕಟ್ಟಿದ್ದು 1 ಇಸ್ರಾಯೇಲ್ಯರು ಐಗುಪ್ತದೇಶವನ್ನು ಬಿಟ್ಟ ನಾನೂರ ಎಂಭತ್ತನೆಯ ವರುಷದ ಅಂದರೆ ಇಸ್ರಾಯೇಲ್ಯರ ಅರಸನಾದ ಸೊಲೊಮೋನನ ಆಳಿಕೆಯ ನಾಲ್ಕನೆಯ ವರುಷದ ಎರಡನೆಯ ತಿಂಗಳಾದ ವೈಶಾಖಮಾಸದಲ್ಲಿ ಅರಸನಾದ ಸೊಲೊಮೋನನು ಯೆಹೋವನ ಆಲಯವನ್ನು ಕಟ್ಟುವದಕ್ಕೆ ಪ್ರಾರಂಭಿಸಿದನು. 2 ಅವನು ಯೆಹೋವನಿಗೋಸ್ಕರ ಕಟ್ಟಿಸಿದ ದೇವಾಲಯದ ಉದ್ದವು ಅರುವತ್ತು ಮೊಳ; ಅಗಲವು ಇಪ್ಪತ್ತು ಮೊಳ; ಎತ್ತರವು ಮೂವತ್ತು ಮೊಳ. 3 ದೇವಾಲಯದ ಪರಿಶುದ್ಧ ಸ್ಥಳದ ಮುಂದುಗಡೆಯಲ್ಲಿ ಒಂದು ಮಂಟಪವಿತ್ತು; ಅದರ ಉದ್ದವು ದೇವಾಲಯದ ಅಗಲಕ್ಕೆ ಸರಿಯಾಗಿ ಇಪ್ಪತ್ತು ಮೊಳ, ಅಗಲವು ಹತ್ತು ಮೊಳ. 4 ಇದಲ್ಲದೆ ಅವನು ಆಲಯಕ್ಕೆ ತೆರೆಯಲಾರದ ಜಾಳಂಧರ ಕಿಟಕಿಗಳನ್ನಿಡಿಸಿದನು. 5 ದೇವಾಲಯದ ಗೋಡೆಯ ಸುತ್ತಲೂ ಅಂದರೆ ಪರಿಶುದ್ಧಸ್ಥಳ, ಮಹಾಪರಿಶುದ್ಧಸ್ಥಳ ಇವುಗಳ ಗೋಡೆಯ ಸುತ್ತಲೂ ಇನ್ನೊಂದು ಗೋಡೆಯನ್ನು ಕಟ್ಟಿಸಿ ಇವುಗಳ ನಡುವೆ ಅಂತಸ್ತುಗಳುಳ್ಳ ಕೊಠಡಿಗಳನ್ನು ಮಾಡಿಸಿದನು. 6 ಕೆಳಗಿನ ಕೊಠಡಿಗಳ ಅಗಲವು ಐದು ಮೊಳ; ಮೊದಲನೆಯ ಅಂತಸ್ತಿನ ಕೊಠಡಿಗಳ ಅಗಲವು ಆರು ಮೊಳ; ಎರಡನೆಯ ಅಂತಸ್ತಿನ ಕೊಠಡಿಗಳ ಅಗಲವು ಏಳು ಮೊಳ. ಅಂತಸ್ತಿನ ತೊಲೆಗಳನ್ನಿಡುವಾಗ ದೇವಾಲಯದ ಗೋಡೆಯಲ್ಲಿ ತೂತಾಗಬಾರದೆಂದು ಗೋಡೆಯ ಹೊರಮೈಯನ್ನು ಸೋಪಾನಾಕಾರವಾಗಿ ಮಾಡಿಸಿದನು. 7 ದೇವಾಲಯವನ್ನು ಕಟ್ಟುತ್ತಿರುವಾಗ ಕಲ್ಲುಗಳನ್ನು ಕಲ್ಲುಗಣಿಯಲ್ಲಿಯೇ ಸಿದ್ಧಮಾಡಿಕೊಂಡು ಬಂದು ಕಟ್ಟಿದ್ದರಿಂದ ಕಟ್ಟುವ ದಿವಸಗಳಲ್ಲೆಲ್ಲಾ ಸುತ್ತಿಗೆ, ಉಳಿ ಮುಂತಾದ ಕಬ್ಬಿಣದ ಸಾಮಾನುಗಳ ಶಬ್ದವು ಕೇಳಿಸಲಿಲ್ಲ. 8 ಕೆಳಗಿನ ಕೊಠಡಿಗಳಿಗೆ ಹೋಗುವ ಬಾಗಲು ಆಲಯದ ಬಲಪಾರ್ಶ್ವದಲ್ಲಿತ್ತು. ಅಲ್ಲಿಂದ ಮೊದಲನೆಯ ಅಂತಸ್ತಿಗೂ ಎರಡನೆಯ ಅಂತಸ್ತಿಗೂ ಹೋಗಬೇಕಾದರೆ ವಕ್ರಸೋಪಾನಗಳಿದ್ದವು. 9 ಈ ಪ್ರಕಾರ ಅವನು ಮನೆಯನ್ನು ಕಟ್ಟಿಸಿ ದೇವದಾರಿನ ತೊಲೆಹಲಿಗೆಗಳಿಂದ ಮಾಳಿಗೆಯನ್ನು ಮಾಡಿಸಿ ಕೆಲಸ ತೀರಿಸಿದನು. 10 ಅವನು ದೇವಾಲಯದ ಸುತ್ತಲೂ ಒಂದರ ಮೇಲೊಂದು ಐದೈದು ಮೊಳ ಎತ್ತರವಾದ ಕೊಠಡಿಗಳನ್ನು ಕಟ್ಟಿಸಿದನು. ಇವು ದೇವದಾರಿನ ತೊಲೆಗಳಿಂದ ದೇವಾಲಯಕ್ಕೆ ಸಂಬಂಧಿಸಲ್ಪಟ್ಟಿದ್ದವು. 11-12 ಯೆಹೋವನು ಸೊಲೊಮೋನನಿಗೆ - ನೀನು ಈಗ ಒಂದು ಆಲಯವನ್ನು ಕಟ್ಟಿಸುತ್ತಿರುತ್ತೀಯಷ್ಟೆ. ನೀನು ನನ್ನ ನಿಯಮ ವಿಧಿಗಳನ್ನು ಅನುಸರಿಸಿ ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವದಾದರೆ ನಾನು ನಿನ್ನನ್ನು ಕುರಿತು ನಿನ್ನ ತಂದೆಯಾದ ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು. 13 ನನ್ನ ಪ್ರಜೆಗಳಾದ ಇಸ್ರಾಯೇಲ್ಯರನ್ನು ಕೈಬಿಡದೆ ಅವರ ಮಧ್ಯದಲ್ಲೇ ವಾಸಿಸುವೆನು ಎಂದು ಹೇಳಿದನು. 14 ಸೊಲೊಮೋನನು ದೇವಾಲಯವನ್ನು ಕಟ್ಟಿಸಿದ ಮೇಲೆ 15 ಅದರ ಗೋಡೆಗಳ ಒಳಮೈಯನ್ನು ನೆಲದಿಂದ ಮಾಳಿಗೆಯವರೆಗೆ ದೇವದಾರಿನ ಹಲಿಗೆಗಳಿಂದ ಹೊದಿಸಿದನು. ನೆಲಕ್ಕೆ ತುರಾಯಿಮರದ ಹಲಿಗೆಗಳನ್ನು ಹಾಕಿಸಿದನು. 16 ಇದಲ್ಲದೆ ಅವನು ದೇವಾಲಯದೊಳಗೆ ಹಿಂದಿನ ಇಪ್ಪತ್ತು ಮೊಳ ಸ್ಥಳವನ್ನು ಬಿಟ್ಟು ನೆಲದಿಂದ ತೊಲೆಗಳವರೆಗೆ ದೇವದಾರಿನ ಹಲಿಗೆಗಳಿಂದ ಒಂದು ಗೋಡೆಯನ್ನು ಮಾಡಿಸಿ ಅದರ ಹಿಂದಿನ ಭಾಗವನ್ನು ಗರ್ಭಗೃಹ ಅಥವಾ ಮಹಾಪರಿಶುದ್ಧ ಸ್ಥಳವೆಂದು ಪ್ರತ್ಯೇಕಿಸಿದನು. 17 ದೇವಾಲಯದ ಪರಿಶುದ್ಧಸ್ಥಳವೆನಿಸಿಕೊಳ್ಳುವ ಮುಂದಿನ ಭಾಗವು ನಾಲ್ವತ್ತು ಮೊಳ ಉದ್ದವಿತ್ತು. 18 ದೇವಾಲಯದೊಳಗೆ ಕಲ್ಲು ಕಾಣಿಸದಂತೆ ಗೋಡೆಯನ್ನೆಲ್ಲಾ ಬಳ್ಳಿಗಳೂ ಹೂವುಗಳೂ ಕೆತ್ತಿರುವ ದೇವದಾರಿನ ಹಲಿಗೆಗಳಿಂದ ಹೊದಿಸಿದನು. 19 ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಇಡುವದಕ್ಕೋಸ್ಕರ ದೇವಾಲಯದೊಳಗೆ ಒಂದು ಭಾಗವನ್ನು ಗರ್ಭಗೃಹವೆಂದು ಪ್ರತ್ಯೇಕಿಸಿದನು. 20 ಆ ಗರ್ಭಗೃಹವು ಇಪ್ಪತ್ತು ಮೊಳ ಉದ್ದವೂ ಇಪ್ಪತ್ತು ಮೊಳ ಅಗಲವೂ ಇಪ್ಪತ್ತು ಮೊಳ ಎತ್ತರವೂ ಇತ್ತು. ಅದನ್ನು ಚೊಕ್ಕ ಬಂಗಾರದ ತಗಡಿನಿಂದಲೂ ವೇದಿಯನ್ನು ದೇವದಾರುಮರದಿಂದಲೂ ಹೊದಿಸಿದನು. 21 ಸೊಲೊಮೋನನು ದೇವಾಲಯದ ಒಳಮೈಯನ್ನು ಚೊಕ್ಕ ಬಂಗಾರದ ತಗಡಿನಿಂದ ಹೊದಿಸಿದನು. ಬಂಗಾರದ ತಗಡಿನಿಂದ ಹೊದಿಸಲ್ಪಟ್ಟ ಮಹಾಪರಿಶುದ್ಧಸ್ಥಳದ ಎದುರಿನಲ್ಲಿ ಒಂದು ಗೋಡೆಯಿಂದ ಇನ್ನೊಂದು ಗೋಡೆಗೆ ಬಂಗಾರದ ಸರಪಣಿಗಳನ್ನು ಕಟ್ಟಿಸಿದನು. 22 ದೇವಾಲಯದ ಎಲ್ಲಾ ಗೋಡೆಗಳನ್ನೂ ಮಹಾಪರಿಶುದ್ಧಸ್ಥಳಕ್ಕೆ ಸೇರಿದ ವೇದಿಯನ್ನೂ ಪೂರ್ಣವಾಗಿ ಬಂಗಾರದ ತಗಡಿನಿಂದ ಹೊದಿಸಿದನು. 23 ಇದಲ್ಲದೆ ಅವನು ಎಣ್ಣೇಮರದಿಂದ ಹತ್ತು ಮೊಳ ಎತ್ತರವಾದ ಎರಡು ಕೆರೂಬಿಗಳನ್ನು ಮಾಡಿಸಿ ಅವುಗಳನ್ನು ಗರ್ಭಗೃಹದಲ್ಲಿಡಿಸಿದನು. 24 ಪ್ರತಿಯೊಂದು ಕೆರೂಬಿಯ ರೆಕ್ಕೆಗಳು ಐದೈದು ಮೊಳ ಉದ್ದವಿದ್ದವು. ಎರಡು ರೆಕ್ಕೆಗಳ ಅಂತರವು ತುದಿಯಿಂದ ತುದಿಗೆ ಹತ್ತು ಮೊಳ. 25 ಇನ್ನೊಂದು ಕೆರೂಬಿಯ ರೆಕ್ಕೆಗಳ ಅಂತರವೂ ಹತ್ತು ಮೊಳ. ಎರಡೂ ಕೆರೂಬಿಗಳ ಅಳತೆಯೂ ಆಕಾರವೂ ಒಂದೇ. 26 ಅವೆರಡೂ ಹತ್ತತ್ತು ಮೊಳ ಎತ್ತರವಾಗಿದ್ದವು. 27 ಅವನು ಅವುಗಳನ್ನು ದೇವಾಲಯದ ಗರ್ಭಗೃಹದಲ್ಲಿಡಿಸಿದನು. ಅವುಗಳ ರೆಕ್ಕೆಗಳು ಚಾಚಿದವುಗಳಾಗಿದ್ದದರಿಂದ ಮೊದಲನೆಯ ಕೆರೂಬಿಯ ಒಂದು ರೆಕ್ಕೆಯು ಈಚೆಯ ಗೋಡೆಗೂ ಎರಡನೆಯ ಕೆರೂಬಿಯ ಒಂದು ರೆಕ್ಕೆಯು ಆಚೆಯ ಗೋಡೆಗೂ ತಗುಲಿದ್ದವು; ಅವುಗಳ ಬೇರೆ ಎರಡು ರೆಕ್ಕೆಗಳು ಮನೆಯ ಮಧ್ಯದಲ್ಲಿ ಒಂದನ್ನೊಂದು ತಗುಲಿದ್ದವು. 28 ಈ ಕೆರೂಬಿಗಳು ಬಂಗಾರದ ತಗಡುಗಳಿಂದ ಹೊದಿಸಲ್ಪಟ್ಟಿದ್ದವು. 29 ಅವನು ದೇವಾಲಯದ ಎಲ್ಲಾ ಗೋಡೆಗಳಲ್ಲಿ ಹೊರಗೂ ಒಳಗೂ ಕೆರೂಬಿ, ಖರ್ಜೂರವೃಕ್ಷ, ಹೂವು ಇವುಗಳ ಚಿತ್ರಗಳನ್ನು ಕೆತ್ತಿಸಿದನು. 30 ದೇವಾಲಯದ ಒಳಗಣ ಮತ್ತು ಹೊರಗಣ ನೆಲವನ್ನು ಬಂಗಾರದ ತಗಡುಗಳಿಂದ ಹೊದಿಸಿದನು. 31 ಗರ್ಭಗೃಹದ ಬಾಗಲಿಗೆ ಎಣ್ಣೇಮರದ ಕದಗಳನ್ನು ಹಚ್ಚಿಸಿದನು. 32 ಚೌಕಟ್ಟು ಪಂಚಕೋಣಗಳುಳ್ಳದಾಗಿತ್ತು. ಎಣ್ಣೇಮರದ ಆ ಎರಡು ಕದಗಳಲ್ಲಿಯೂ ಕೆರೂಬಿ, ಖರ್ಜೂರವೃಕ್ಷ, ಹೂವು ಇವುಗಳ ಚಿತ್ರಗಳನ್ನು ಕೆತ್ತಿಸಿ ಕದಗಳಿಗೆ ಬಂಗಾರದ ತಗಡನ್ನು ಹೊದಿಸಿ ಚಿತ್ರಗಳಿದ್ದಲ್ಲಿ ಆ ತಗಡನ್ನು ಬಡಿಸಿದನು. 33 ಇದಲ್ಲದೆ ಅವನು ಪರಿಶುದ್ಧಸ್ಥಳದ ಬಾಗಲಿಗೆ ಎಣ್ಣೇಮರದಿಂದ ಚತುಷ್ಕೋಣದ ಚೌಕಟ್ಟನ್ನು ಮಾಡಿಸಿ 34 ಅದಕ್ಕೆ ತುರಾಯಿ ಮರದ ಎರಡು ಕದಗಳನ್ನು ಹಚ್ಚಿಸಿದನು. ಪ್ರತಿಯೊಂದು ಕದವು ಎರಡು ಭಾಗವುಳ್ಳದಾಗಿ ಮಡಚುವದಕ್ಕೆ ಬರುತ್ತಿತ್ತು. 35 ಈ ಕದಗಳಲ್ಲಿ ಕೆರೂಬಿ, ಖರ್ಜೂರವೃಕ್ಷ, ಹೂವು ಇವುಗಳ ಚಿತ್ರಗಳನ್ನು ಕೆತ್ತಿಸಿ ಅವುಗಳಿಗೆ ಬಂಗಾರದ ತಗಡನ್ನು ಹೊದಿಸಿ ಕೆತ್ತನೆಯಿದ್ದಲ್ಲಿ ಆ ತಗಡನ್ನು ಬಡಿಸಿದನು. 36 ದೇವಾಲಯದ ಪ್ರಾಕಾರದಲ್ಲಿ ಮೂರು ಸಾಲು ಕಲ್ಲಿನ ಕಂಬಗಳನ್ನೂ ಒಂದು ಸಾಲು ದೇವದಾರುವಿನ ಕಂಬಗಳನ್ನೂ ಇರಿಸಿದನು. 37 ಸೊಲೊಮೋನನ ಆಳಿಕೆಯ ನಾಲ್ಕನೆಯ ವರುಷದ ವೈಶಾಖ ಮಾಸದಲ್ಲಿ ಯೆಹೋವನ ಆಲಯದ ಅಸ್ತಿವಾರವನ್ನು ಹಾಕಿದರು. 38 ಹನ್ನೊಂದನೆಯ ವರುಷದ ಎಂಟನೆಯ ತಿಂಗಳಾದ ಕಾರ್ತಿಕ ಮಾಸದಲ್ಲಿ ದೇವಾಲಯವೂ ಅದರ ಎಲ್ಲಾ ಕಟ್ಟಡಗಳೂ ನೇಮದ ಪ್ರಕಾರ ಸಿದ್ಧವಾದವು. ದೇವಾಲಯವನ್ನು ಕಟ್ಟುವದಕ್ಕೆ ಏಳು ವರುಷ ಹಿಡಿಯಿತು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India