1 ಅರಸುಗಳು 5 - ಕನ್ನಡ ಸತ್ಯವೇದವು J.V. (BSI)ದೇವಾಲಯವನ್ನು ಕಟ್ಟುವದಕ್ಕೋಸ್ಕರ ಸಾಮಾನುಗಳನ್ನು ಸಿದ್ಧಪಡಿಸಿದ್ದು 1 ದಾವೀದನ ಜೀವಮಾನದಲ್ಲೆಲ್ಲಾ ಅವನ ವಿುತ್ರನಾಗಿದ್ದ ತೂರಿನ ಅರಸನಾದ ಹೀರಾಮನು ಸೊಲೊಮೋನನು ತಂದೆಗೆ ಬದಲಾಗಿ ಅಭಿಷೇಕಿಸಲ್ಪಟ್ಟನೆಂದು ಕೇಳಿದಾಗ ಅವನ ಬಳಿಗೆ ತನ್ನ ಸೇವಕರನ್ನು ಕಳುಹಿಸಿದನು. 2 ಅನಂತರ ಸೊಲೊಮೋನನು ದೂತರ ಮುಖಾಂತರವಾಗಿ ಹೀರಾಮನಿಗೆ - 3 ಯೆಹೋವನ ಅನುಗ್ರಹದಿಂದ ತಮ್ಮ ತಂದೆಯಾದ ದಾವೀದನಿಗೆ ಎಲ್ಲಾ ಶತ್ರುಗಳು ವಶವಾಗುವವರೆಗೆ ಅವನು ಸುತ್ತಲೂ ಯುದ್ಧಗಳನ್ನು ನಡಿಸಬೇಕಾಗಿದ್ದದರಿಂದ ತನ್ನ ದೇವರಾದ ಯೆಹೋವನ ಹೆಸರಿಗೆ ಆಲಯವನ್ನು ಕಟ್ಟಿಸಲಾರದೆ ಹೋದನೆಂದು ನೀನು ಬಲ್ಲೆ. 4 ನನಗಾದರೋ ನನ್ನ ದೇವರಾದ ಯೆಹೋವನು ಎಲ್ಲಾ ಕಡೆಗಳಲ್ಲಿಯೂ ಸಮಾಧಾನವನ್ನು ಅನುಗ್ರಹಿಸಿದ್ದಾನೆ; ನನ್ನನ್ನು ವಿರೋಧಿಸುವವನು ಒಬ್ಬನೂ ಇಲ್ಲ; ಆಪತ್ತು ನನಗೆ ದೂರವಾಗಿದೆ. 5 ಯೆಹೋವನು ನನ್ನ ತಂದೆಯಾದ ದಾವೀದನಿಗೆ - ನಾನು ನಿನಗೆ ಬದಲಾಗಿ ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವ ನಿನ್ನ ಮಗನು ನನ್ನ ಹೆಸರಿಗೆ ಒಂದು ಆಲಯವನ್ನು ಕಟ್ಟಲಿ ಎಂದು ಹೇಳಿದ್ದರಿಂದ ನಾನು ನನ್ನ ದೇವರಾದ ಯೆಹೋವನ ಹೆಸರಿಗೆ ಒಂದು ಆಲಯವನ್ನು ಕಟ್ಟಬೇಕೆಂದಿರುತ್ತೇನೆ. 6 ಆದದರಿಂದ ನೀನು ನನಗೋಸ್ಕರ ಲೆಬನೋನಿನ ದೇವದಾರು ವೃಕ್ಷಗಳನ್ನು ಕೊಯ್ಯಬೇಕೆಂದು ನಿನ್ನ ಆಳುಗಳಿಗೆ ಆಜ್ಞಾಪಿಸು; ಅವರ ಜೊತೆಯಲ್ಲಿ ನನ್ನ ಆಳುಗಳನ್ನೂ ಕಳುಹಿಸುವೆನು. ಮತ್ತು ನಿನ್ನ ಆಳುಗಳಿಗೆ ನೀನು ಹೇಳುವಷ್ಟು ಸಂಬಳವನ್ನು ಕೊಡುತ್ತೇನೆ. ಚೀದೋನ್ಯರಂತೆ ಮರ ಕೊಯ್ಯುವದರಲ್ಲಿ ಜಾಣರು ನಮ್ಮಲ್ಲಿರುವದಿಲ್ಲವೆಂದು ನಿನಗೆ ಗೊತ್ತುಂಟಲ್ಲಾ ಎಂದು ಹೇಳಿಸಿದನು. 7 ಹೀರಾಮನು ಸೊಲೊಮೋನನ ಮಾತುಗಳನ್ನು ಕೇಳಿದಾಗ ಬಹಳವಾಗಿ ಸಂತೋಷಪಟ್ಟು - ಈ ಮಹಾಜನಾಂಗವನ್ನು ಆಳುವದಕ್ಕಾಗಿ ದಾವೀದನಿಗೆ ಒಬ್ಬ ಬುದ್ಧಿವಂತನಾದ ಮಗನನ್ನು ಅನುಗ್ರಹಿಸಿದ ಯೆಹೋವನಿಗೆ ಈಗ ಸ್ತೋತ್ರವಾಗಲಿ ಎಂದು ನುಡಿದನು. 8 ಇದಲ್ಲದೆ ಅವನು ಸೊಲೊಮೋನನಿಗೆ - ನೀನು ಹೇಳಿಕಳುಹಿಸಿದ್ದನ್ನು ಕೇಳಿದೆನು; ದೇವದಾರು ವೃಕ್ಷಗಳನ್ನೂ ತುರಾಯಿಮರಗಳನ್ನೂ ಕುರಿತು ನಿನ್ನ ಅಪೇಕ್ಷೆಯನ್ನು ನೆರವೇರಿಸುವೆನು. 9 ನನ್ನ ಸೇವಕರು ಅವುಗಳನ್ನು ಲೆಬನೋನಿನಿಂದ ಸಮುದ್ರಕ್ಕೆ ತೆಗೆದುಕೊಂಡು ಹೋಗುವರು. ನಾನು ಅವುಗಳನ್ನು ತೆಪ್ಪವನ್ನಾಗಿ ಕಟ್ಟಿಸಿ ಸಮುದ್ರಮಾರ್ಗವಾಗಿ ನೀನು ನೇವಿುಸುವ ಸ್ಥಳಕ್ಕೆ ಕಳುಹಿಸಿ ಅಲ್ಲಿ ಬಿಚ್ಚಿಸುವೆನು; ನೀನು ಅವುಗಳನ್ನು ತೆಗೆದುಕೊಂಡು ಅವುಗಳಿಗೆ ಬದಲಾಗಿ ನನ್ನ ಮನೆಯವರಿಗೆ ಆಹಾರಪದಾರ್ಥಗಳನ್ನು ಕೊಡಬೇಕೆಂಬದೇ ನನ್ನ ಅಪೇಕ್ಷೆಯಾಗಿದೆ ಎಂದು ಹೇಳಿ ಕಳುಹಿಸಿದನು. 10 ಹೀಗೆ ಹೀರಾಮನು ಸೊಲೊಮೋನನಿಗೆ ಬೇಕಾದಷ್ಟು ದೇವದಾರಿನ ಮರಗಳನ್ನೂ ತುರಾಯಿಮರಗಳನ್ನೂ ಕೊಡುತ್ತಿದ್ದನು. 11 ಸೊಲೊಮೋನನಾದರೋ ಪ್ರತಿವರುಷ ಅವನ ಮನೆಯವರ ಆಹಾರಕ್ಕಾಗಿ ಇಪ್ಪತ್ತು ಸಾವಿರ ಕೋರ್ ಗೋದಿಯನ್ನೂ ಇಪ್ಪತ್ತು ಕೋರ್ ನಿರ್ಮಲವಾದ ಎಣ್ಣೆಯನ್ನೂ ಕೊಡುತ್ತಿದ್ದನು. 12 ಯೆಹೋವನು ತಾನು ವಾಗ್ದಾನಮಾಡಿದಂತೆ ಸೊಲೊಮೋನನಿಗೆ ಜ್ಞಾನವನ್ನು ಅನುಗ್ರಹಿಸಿದನು. ಸೊಲೊಮೋನನಿಗೂ ಹೀರಾಮನಿಗೂ ಸಮಾಧಾನವಿತ್ತು; ಅವರು ಒಡಂಬಡಿಕೆ ಮಾಡಿಕೊಂಡರು. 13 ಅರಸನಾದ ಸೊಲೊಮೋನನು ಎಲ್ಲಾ ಇಸ್ರಾಯೇಲ್ಯರಲ್ಲಿ ಮೂವತ್ತು ಸಾವಿರ ಮಂದಿಯನ್ನು ಬಿಟ್ಟಿಹಿಡಿದು 14 ಅವರಲ್ಲಿ ತಿಂಗಳೊಂದಕ್ಕೆ ಹತ್ತುಸಾವಿರ ಮಂದಿಯಂತೆ ಲೆಬನೋನಿಗೆ ಕಳುಹಿಸುತ್ತಿದ್ದನು. ಅವರು ಒಂದು ತಿಂಗಳು ಲೆಬನೋನಿನಲ್ಲಿದ್ದರೆ ಎರಡು ತಿಂಗಳು ಮನೆಯಲ್ಲಿರುತ್ತಿದ್ದರು. ಅದೋನೀರಾಮನು ಇವರ ಮುಖ್ಯಸ್ಥನಾಗಿದ್ದನು. 15 ಇದಲ್ಲದೆ ಸೊಲೊಮೋನನಿಗೆ ಎಪ್ಪತ್ತು ಸಾವಿರ ಮಂದಿ ಹೊರೆಹೊರುವವರೂ ಎಂಭತ್ತು ಸಾವಿರ ಮಂದಿ ಕಲ್ಲುಗಣಿಯಲ್ಲಿ ಕೆಲಸ ಮಾಡುವವರೂ ಇದ್ದರು. 16 ಈ ಕೆಲಸದವರ ಮೇಲ್ವಿಚಾರಣೆಗಾಗಿ ಅವನು ಮೂರು ಸಾವಿರದ ಮುನ್ನೂರು ಮಂದಿ ಮೇಸ್ತ್ರಿಗಳನ್ನು ನೇವಿುಸಿದನು. 17 ಕೆತ್ತಿದ ಕಲ್ಲುಗಳಿಂದ ಹಾಕಬೇಕಾದ ದೇವಾಲಯದ ಅಸ್ತಿವಾರಕ್ಕಾಗಿ ಆಳುಗಳು ಸೊಲೊಮೋನನ ಅಪ್ಪಣೆಯಂತೆ ಶ್ರೇಷ್ಠವಾದ ದೊಡ್ಡಕಲ್ಲುಗಳನ್ನು ಕೊರೆಯುತ್ತಿದ್ದರು. 18 ಸೊಲೊಮೋನನ ಮತ್ತು ಹೀರಾಮನ ಶಿಲ್ಪಿಗಳೂ ಗೆಬಾಲ್ಯರೂ ಅವುಗಳನ್ನು ಕೆತ್ತುತ್ತಿದ್ದರು. ದೇವಾಲಯ ಕಟ್ಟುವದಕ್ಕಾಗಿ ಬೇಕಾದ ಕಲ್ಲು ಮರಗಳನ್ನು ಸಿದ್ಧಪಡಿಸಿದವರು ಇವರೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India