1 ಅರಸುಗಳು 17 - ಕನ್ನಡ ಸತ್ಯವೇದವು J.V. (BSI)ಎಲೀಯನು ಕೆರೀತ್‍ಹಳ್ಳದಲ್ಲಿಯೂ ಚಾರೆಪ್ತದಲ್ಲಿಯೂ ಇದ್ದದ್ದು 1 ಗಿಲ್ಯಾದಿನ ಪ್ರವಾಸಿಗಳಲ್ಲಿ ತಿಷ್ಬೀಯನಾದ ಎಲೀಯ ಎಂಬವನು ಅಹಾಬನಿಗೆ - ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಾಯೇಲ್‍ದೇವರಾದ ಯೆಹೋವನಾಣೆ, ನಾನು ಸೂಚಿಸಿದ ಹೊರತು ಇಂದಿನಿಂದ ಕೆಲವು ವರುಷಗಳವರೆಗೆ ಮಳೆಯಾಗಲಿ ಮಂಜಾಗಲಿ ಬೀಳುವದಿಲ್ಲ ಅಂದನು. 2-3 ತರುವಾಯ ಯೆಹೋವನು ಎಲೀಯನಿಗೆ - ನೀನು ಈ ಸ್ಥಳವನ್ನು ಬಿಟ್ಟು ಪೂರ್ವದಿಕ್ಕಿಗೆ ಹೋಗಿ ಯೊರ್ದನ್‍ಹೊಳೆಯ ಆಚೆಯಲ್ಲಿರುವ ಕೆರೀತ್‍ಹಳ್ಳದಲ್ಲಿ ಅಡಗಿಕೋ. 4 ಆ ಹಳ್ಳದ ನೀರು ನಿನಗೆ ಪಾನವಾಗಿರುವದು; ನಿನಗೆ ಆಹಾರತಂದುಕೊಡಬೇಕೆಂದು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ ಎಂದು ಹೇಳಿದನು. 5 ಅವನು ಯೆಹೋವನ ಅಪ್ಪಣೆಯಂತೆ ಯೊರ್ದನಿನ ಪೂರ್ವಕ್ಕಿರುವ ಕೆರೀತ್‍ಹಳ್ಳದಲ್ಲಿ ವಾಸಿಸಿದನು. 6 ಕಾಗೆಗಳು ಅವನಿಗೆ ಪ್ರಾತಃಕಾಲದಲ್ಲಿಯೂ ಸಾಯಂಕಾಲದಲ್ಲಿಯೂ ರೊಟ್ಟಿ, ಮಾಂಸ ಇವುಗಳನ್ನು ತಂದುಕೊಡುತ್ತಿದ್ದವು. ಅವನು ಇವುಗಳನ್ನು ತಿನ್ನುತ್ತಿದ್ದನು; ಹಳ್ಳದ ನೀರು ಅವನಿಗೆ ಪಾನವಾಗಿತ್ತು. 7 ದೇಶದಲ್ಲಿ ಮಳೆಯಿಲ್ಲದ್ದರಿಂದ ಕೆಲವು ದಿವಸಗಳಾದನಂತರ ಹಳ್ಳವು ಬತ್ತಿಹೋಯಿತು. 8-9 ಆಗ ಯೆಹೋವನು ಅವನಿಗೆ - ನೀನು ಇಲ್ಲಿಂದ ಚೀದೋನ್ಯರ ಚಾರೆಪ್ತಾ ಊರಿಗೆ ಹೊರಟುಹೋಗಿ ಅಲ್ಲಿ ವಾಸಿಸು. ನಿನ್ನನ್ನು ಸಾಕಬೇಕೆಂದು ಅಲ್ಲಿನ ಒಬ್ಬ ವಿಧವೆಗೆ ಆಜ್ಞಾಪಿಸಿದ್ದೇನೆ ಅಂದನು. 10 ಅವನು ಅಲ್ಲಿಂದ ಹೊರಟು ಚಾರೆಪ್ತದ ಊರುಬಾಗಲಿನ ಸಮೀಪಕ್ಕೆ ಬಂದಾಗ ಸೌದೆಯನ್ನು ಕೂಡಿಸುತ್ತಿರುವ ಒಬ್ಬ ವಿಧವೆಯನ್ನು ಕಂಡು ಆಕೆಯನ್ನು ಕೂಗಿ - ದಯವಿಟ್ಟು ಕುಡಿಯುವದಕ್ಕೆ ಒಂದು ತಂಬಿಗೆಯಲ್ಲಿ ನೀರು ತೆಗೆದುಕೊಂಡು ಬಾ ಎಂದು ಹೇಳಿದನು. 11 ಆಕೆಯು ಹೋಗುತ್ತಿರುವಾಗ ತಿರಿಗಿ ಆಕೆಯನ್ನು ಕರೆದು - ನೀನು ಬರುವಾಗ ನನಗೋಸ್ಕರ ಒಂದು ತುಂಡು ರೊಟ್ಟಿಯನ್ನೂ ತೆಗೆದುಕೊಂಡು ಬಾ ಅಂದನು. 12 ಆಕೆಯು ಅವನಿಗೆ - ನಿನ್ನ ದೇವರಾದ ಯೆಹೋವನಾಣೆ, ನನ್ನ ಹತ್ತಿರ ರೊಟ್ಟಿಯಿರುವದಿಲ್ಲ. ಮಡಕೆಯಲ್ಲಿ ಒಂದು ಹಿಡಿ ಹಿಟ್ಟು, ಮೊಗೆಯಲ್ಲಿ ಸ್ವಲ್ಪ ಎಣ್ಣೆ ಇವುಗಳ ಹೊರತಾಗಿ ಬೇರೇನೂ ಇರುವದಿಲ್ಲ. ಈಗ ಎರಡು ಕಟ್ಟಿಗೆಗಳನ್ನು ಹೆಕ್ಕಿ ನನಗೋಸ್ಕರವೂ ನನ್ನ ಮಗನಿಗೋಸ್ಕರವೂ ರೊಟ್ಟಿ ಮಾಡುತ್ತೇನೆ. ಅದನ್ನು ತಿಂದ ಮೇಲೆ ನಾವು ಸಾಯಬೇಕೇ ಹೊರತು ಬೇರೆ ಗತಿಯಿಲ್ಲ ಎಂದು ಉತ್ತರಕೊಟ್ಟಳು. 13 ಆಗ ಎಲೀಯನು ಆಕೆಗೆ - ಹೆದರಬೇಡ; ನೀನು ಹೇಳಿದಂತೆ ಮಾಡು, ಆದರೆ ಮೊದಲು ಅದರಿಂದ ನನಗೋಸ್ಕರ ಒಂದು ಚಿಕ್ಕ ರೊಟ್ಟಿಯನ್ನು ಮಾಡಿಕೊಂಡು ಬಾ; ತರುವಾಯ ನಿನಗೂ ನಿನ್ನ ಮಗನಿಗೂ ಮಾಡಿಕೋ. 14 ಇಸ್ರಾಯೇಲ್ ದೇವರಾದ ಯೆಹೋವನು ನಿನಗೆ - ನಾನು ದೇಶಕ್ಕೆ ಮಳೆಯನ್ನು ಕಳುಹಿಸುವವರೆಗೆ ನಿನ್ನ ಮಡಕೆಯಲ್ಲಿರುವ ಹಿಟ್ಟು ತೀರುವದಿಲ್ಲ, ಮೊಗೆಯಲ್ಲಿರುವ ಎಣ್ಣೆಯು ಮುಗಿದುಹೋಗುವದಿಲ್ಲ ಎಂದು ಹೇಳುತ್ತಾನೆ ಅಂದನು. 15 ಆಕೆಯು ಹೋಗಿ ಅವನು ಹೇಳಿದಂತೆಯೇ ಮಾಡಿದಳು; ಆಕೆಯೂ ಆಕೆಯ ಮನೆಯವರೂ ಎಲೀಯನೂ ಅದನ್ನು ಅನೇಕ ದಿವಸಗಳವರೆಗೆ ಊಟಮಾಡಿದರು. 16 ಯೆಹೋವನು ಎಲೀಯನ ಮುಖಾಂತರವಾಗಿ ಹೇಳಿದಂತೆ ಮಡಕೆಯಲ್ಲಿದ್ದ ಹಿಟ್ಟು ತೀರಲಿಲ್ಲ; ಮೊಗೆಯಲ್ಲಿದ್ದ ಎಣ್ಣೆಯು ಮುಗಿದುಹೋಗಲಿಲ್ಲ. 17 ಕೆಲವು ದಿನಗಳಾದನಂತರ ಮನೆಯ ಯಜಮಾನಿಯಾದ ಆ ಸ್ತ್ರೀಯ ಮಗನು ಅಸ್ವಸ್ಥನಾದನು; ಹುಡುಗನಿಗೆ ರೋಗವು ಹೆಚ್ಚಾದದರಿಂದ ಉಸಿರಾಡುವುದು ನಿಂತು ಹೋಯಿತು. 18 ಆಗ ಆ ಸ್ತ್ರೀಯು ಎಲೀಯನಿಗೆ - ದೇವರ ಮನುಷ್ಯನೇ, ನನ್ನ ಗೊಡವೆ ನಿನಗೇಕೆ? ನೀನು ನನ್ನ ಪಾಪವನ್ನು [ದೇವರ] ನೆನಪಿಗೆ ತಂದು ನನ್ನ ಮಗನನ್ನು ಸಾಯಿಸುವದಕ್ಕೆ ಬಂದಿಯೋ ಎನ್ನಲು ಅವನು ಆಕೆಗೆ - 19 ನಿನ್ನ ಮಗನನ್ನು ನನಗೆ ಕೊಡು ಎಂದು ಹೇಳಿ ಅವನನ್ನು ಆಕೆಯ ಉಡಿಲಿನಿಂದ ತೆಗೆದುಕೊಂಡು ತಾನು ವಾಸವಾಗಿದ್ದ ಮೇಲಿನ ಕೋಣೆಗೆ ಹೋಗಿ ತನ್ನ ಮಂಚದ ಮೇಲೆ ಮಲಗಿಸಿದನು. ಅನಂತರ ಅವನು ಯೆಹೋವನಿಗೆ - 20 ನನ್ನ ದೇವರಾದ ಯೆಹೋವನೇ, ನನಗೆ ಸ್ಥಳಕೊಟ್ಟ ಈ ವಿಧವೆಯ ಮಗನನ್ನು ನೀನು ಸಾಯಿಸಿ ಆಕೆಗೂ ಕೇಡನ್ನುಂಟುಮಾಡಿದ್ದೇನು ಎಂದು ಹೇಳಿ 21 ಹುಡುಗನ ಮೇಲೆ ಮೂರು ಸಾರಿ ಬೋರ್ಲಬಿದ್ದು - ನನ್ನ ದೇವರಾದ ಯೆಹೋವನೇ, ಈ ಹುಡುಗನ ಪ್ರಾಣವು ತಿರಿಗಿ ಬರುವಂತೆ ಮಾಡು ಎಂಬದಾಗಿ ಆತನಿಗೆ ಮೊರೆಯಿಟ್ಟನು. 22 ಯೆಹೋವನು ಅವನ ಪ್ರಾರ್ಥನೆಯನ್ನು ಕೇಳಿದದರಿಂದ ಹುಡುಗನ ಪ್ರಾಣವು ತಿರಿಗಿ ಬಂದು ಅವನು ಉಜ್ಜೀವಿಸಿದನು. ಎಲೀಯನು ಆ ಹುಡುಗನನ್ನು ಅಲ್ಲಿಂದ ಕೆಳಗೆ ತೆಗೆದುಕೊಂಡುಹೋಗಿ 23 ಅವನ ತಾಯಿಗೆ ಒಪ್ಪಿಸಿ - ಇಗೋ, ನೋಡು; ನಿನ್ನ ಮಗನು ಜೀವಿಸುತ್ತಾನೆ ಅಂದನು. 24 ಆಗ ಆಕೆಯು ಅವನಿಗೆ - ನೀನು ದೇವರ ಮನುಷ್ಯನೆಂದೂ ನಿನ್ನ ಬಾಯಿಂದ ಬಂದ ಯೆಹೋವನ ಮಾತು ಸತ್ಯವೆಂದೂ ಈಗ ನನಗೆ ಗೊತ್ತಾಯಿತು ಎಂದು ಹೇಳಿದಳು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India