ಮುನ್ನುಡಿ
ಇಸ್ರಯೇಲಿನ ದಕ್ಷಿಣಭಾಗವಾದ ಜುದೇಯದಲ್ಲಿ ಈ ಮೊದಲೇ ಬೋಧನೆಮಾಡಿದವನು ಪ್ರವಾದಿ ಆಮೋಸನು. ಅವನು ಕಾಲವಾದ ನಂತರ ಪ್ರವಾದಿ ಹೊಶೇಯನು ಇಸ್ರಯೇಲಿನ ಉತ್ತರಭಾಗದಲ್ಲಿ ಪ್ರವಾದನೆಮಾಡಲು ಆರಂಭಿಸಿದನು. ಕ್ರಿ. ಪೂ. 721ರಲ್ಲಿ ಸಮಾರ್ಯ ರಾಜ್ಯವು ಪತನವಾಯಿತು. ಅದಕ್ಕೆ ಮುಂಚೆ ಸನ್ನಿವೇಶವು ಬಹಳ ಬಿಕ್ಕಟ್ಟಿನಿಂದ ಕೂಡಿತ್ತು. ಅಂಥ ಸಂದರ್ಭದಲ್ಲಿ ಹೊಶೇಯನು ಪ್ರವಾದನೆಯ ಕಾರ್ಯವನ್ನು ಕೈಗೊಳ್ಳಬೇಕಾಯಿತು.
ಇಸ್ರಯೇಲ್ ಜನರು ದೇವರಿಗೆ ವಿಮುಖರಾಗಿ ವಿಗ್ರಹಾರಾಧನೆ ಮಾಡತೊಡಗಿದ್ದರು. ಅವರ ಅಪ್ರಾಮಾಣಿಕತೆಯನ್ನೂ ಭಕ್ತಿಹೀನತೆಯನ್ನೂ ಕಂಡು ಪ್ರವಾದಿ ಕುಪಿತನಾಗುತ್ತಾನೆ. ತನ್ನ ಧರ್ಮಪತ್ನಿಯಾದ ಗೋಮೆರಳೇ ತನಗೆ ಅಪ್ರಾಮಾಣಿಕಳಾಗಿ ನಡೆದುಕೊಂಡ ಕಹಿ ಅನುಭವವನ್ನು ಈಗಾಗಲೇ ಅವನು ಸವಿದಿದ್ದನು. ಈಗ ತನ್ನ ಇಡೀ ಜನಾಂಗವೇ ದೇವರಿಗೆ ಅಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿರುವುದನ್ನು ಕಂಡು ರೋಷಾವೇಶಗೊಳ್ಳುತ್ತಾನೆ. ದೇವರ ಶಾಪ ಇಸ್ರಯೇಲಿನ ಮೇಲೆ ಬಂದೇ ತೀರುವುದು ಎಂದು ಎಚ್ಚರಿಸುತ್ತಾನೆ.
ಆದರೂ ದೇವರಿಗೆ ತನ್ನ ಪ್ರಜೆಯ ಮೇಲಿರುವ ಪ್ರೀತಿ ಅಚಲವಾದುದು. ಆ ಪ್ರಿತಿಗೆ ಜಯ ಖಚಿತವಾದುದು. ಎಂತಲೇ ಇಸ್ರಯೇಲ್ ಜನತೆಯನ್ನು ದೇವರು ಪುನರುದ್ಧಾರಗೊಳಿಸುವರು. ಅವರೊಡನೆ ಸತ್ಸಂಬಂಧವನ್ನು ಮತ್ತೆ ಬೆಳೆಸುವರು ಎಂದು ಆಶ್ವಾಸನೆ ನೀಡುತ್ತಾನೆ. ದೇವರಿಗೆ ಜನರ ಮೇಲಿರುವ ಪ್ರೀತಿ ಎಷ್ಟು ಅಮೋಘವಾದುದು ಎಂಬುದನ್ನು ಹೊಶೇಯನ ಈ ವಚನ ವ್ಯಕ್ತಪಡಿಸುತ್ತದೆ:
“ಇಸ್ರಯೇಲ್, ನಿನ್ನನ್ನು ಹೇಗೆ ಕೈಬಿಡಲಿ
ನನ್ನ ಮನಸ್ಸು ಮರುಗಿತು, ನನ್ನ ಕರುಳು ಕರಗಿತು” (11:8)
ಪರಿವಿಡಿ
ಹೊಶೇಯನ ಮಡದಿ ಮಕ್ಕಳು 1:1—3:5
ಭಕ್ತಿಹೀನ ಇಸ್ರಯೇಲರ ಖಂಡನೆ 4:1—13:16
ಪಶ್ಚಾತ್ತಾಪಕ್ಕೆ ಕರೆ - ಆಶ್ವಾಸನೆ 14:1-9