ಹೋಶೇಯ 9 - ಕನ್ನಡ ಸತ್ಯವೇದವು C.L. Bible (BSI)ಇಸ್ರಯೇಲಿಗೆ ಬರಲಿರುವ ದುರವಸ್ಥೆ 1 ಇಸ್ರಯೇಲ್, ಹರ್ಷಿಸದಿರು; ಇತರ ರಾಷ್ಟ್ರಗಳೊಡನೆ ಆನಂದಿಸದಿರು. ನಿನ್ನ ದೇವರನ್ನು ತೊರೆದು ವ್ಯಭಿಚಾರ ಮಾಡಿರುವೆ. ಇತರರ ಕಣಗಳಿಂದ ದೊರಕುವ ಕಾಳು ನಿನ್ನ ವ್ಯಭಿಚಾರದ ಸಂಭಾವನೆಯೆಂದು ಹಂಬಲಿಸಿರುವೆ. 2 ಸುಗ್ಗಿಯ ಕಣವೂ ದ್ರಾಕ್ಷಾರಸದ ತೊಟ್ಟಿಯೂ ನಿನ್ನ ಜನರಿಗೆ ಜೀವನಾಧಾರವಾಗವು. ಹೊಸದ್ರಾಕ್ಷಾರಸದ ನಿರೀಕ್ಷೆ ಅವರನ್ನು ನಿರಾಶೆಗೊಳಿಸುವುದು. 3 ಅವರು ಸರ್ವೇಶ್ವರಸ್ವಾಮಿಯ ನಾಡಿನಲ್ಲಿ ವಾಸಮಾಡುವುದಿಲ್ಲ. ಎಫ್ರಯಿಮರು ಈಜಿಪ್ಟಿಗೆ ಹಿಂದಿರುಗುವರು. ಅಸ್ಸೀರಿಯದಲ್ಲಿ ಅವರು ತಿನ್ನುವ ಆಹಾರ ಹೊಲಸಾಗುವುದು. 4 ಇನ್ನವರು ಸರ್ವೇಶ್ವರಸ್ವಾಮಿಗೆ ನೈವೇದ್ಯವಾಗಿ ದ್ರಾಕ್ಷಾರಸವನ್ನು ಸುರಿಯರು. ಅವರ ಯಜ್ಞಗಳು ಆ ಸ್ವಾಮಿಗೆ ಮೆಚ್ಚುಗೆಯಾಗುವುದಿಲ್ಲ. ಅವರ ಆಹಾರ ಹೆಣದ ಮನೆಯ ಆಹಾರದಂತಿರುವುದು. ಅದನ್ನು ತಿನ್ನುವವರೆಲ್ಲರು ಅಶುದ್ಧರಾಗುವರು. ಅದು ಹೊಟ್ಟೆತುಂಬಲು ಮಾತ್ರ ಸರಿಯೇ ಹೊರತು ದೇವಾಲಯದಲ್ಲಿ ಮಾಡುವ ಅರ್ಪಣೆಗೆ ಸಲ್ಲದು. 5 ಹಬ್ಬದ ದಿನಗಳಲ್ಲಿ ಅವರೇನು ಮಾಡುವರು? ಸರ್ವೇಶ್ವರಸ್ವಾಮಿಯ ಮಹೋತ್ಸವಗಳನ್ನು ಹೇಗೆ ಆಚರಿಸುವರು? 6 ವಿನಾಶದ ದೇಶವನ್ನು ಅವರು ಬಿಟ್ಟುಹೋಗಬಹುದು. ಆದರೆ ಈಜಿಪ್ಟ್ ಅವರಿಗೆ ಸ್ಮಶಾನವಾಗುವುದು.ಮೋಫ್ ಪಟ್ಟಣದಲ್ಲಿ ಅವರಿಗೆ ಸಮಾಧಿಯಾಗುವುದು. ಅವರ ಬೆಳ್ಳಿಯ ಒಡವೆಗಳು ಮುಳ್ಳುಪೊದೆಗಳ ಪಾಲಾಗುವುವು; ಅವರ ಗುಡಾರಗಳಲ್ಲಿ ಕಳೆಗಳು ಬೆಳೆಯುವುವು. 7 ಇಗೋ, ದಂಡನೆಯ ದಿನಗಳು ಸಮೀಪಿಸಿವೆ; ಮುಯ್ಯಿ ತೀರಿಸುವ ದಿನಗಳು ಬಂದಿವೆ. ಇಸ್ರಯೇಲರಿಗೆ ಇದು ತಿಳಿದಿರಲಿ. “ಪ್ರವಾದಿಯು ಹುಚ್ಚನು; ದೇವರಾತ್ಮಪ್ರೇರಿತನು ಮೂರ್ಖನು,” ಎಂದು ಹೇಳಿಕೊಳ್ಳುತ್ತೀರಿ. ಅತ್ಯಧಿಕವಾಗಿರುವ ನಿಮ್ಮ ಅಧರ್ಮ, ಮಿತಿಮೀರಿರುವ ನಿಮ್ಮ ದ್ವೇಷ ಇದಕ್ಕೆ ಕಾರಣ. 8 ಎಫ್ರಯಿಮನ ದೇವಜನರಿಗೆ ಪ್ರವಾದಿಯೇ ಕಾವಲುಗಾರ. ಆದರೂ ಅವನ ಹಾದಿಯಲ್ಲೆಲ್ಲ ಬೇಟೆಯ ಬಲೆ ಒಡ್ಡಲಾಗಿದೆ. ದೇವರ ಆಲಯದಲ್ಲೂ ಅವನಿಗೆ ಹಗೆತನ ಕಾದಿದೆ. 9 ಪೂರ್ವದಲ್ಲಿ ಗಿಬ್ಯದವರು ಭ್ರಷ್ಟರಾದಂತೆ ಎಫ್ರಯಿಮಿನವರು ಅತಿ ಭ್ರಷ್ಟರಾಗಿದ್ದಾರೆ. ದೇವರು ಅವರ ಅಪರಾಧವನ್ನು ನೆನಪಿಗೆ ತಂದುಕೊಳ್ಳುವರು. ಅವರ ಪಾಪಕ್ಕೆ ತಕ್ಕ ದಂಡನೆಯನ್ನು ವಿಧಿಸುವರು. ಎಫ್ರಯಿಮಿಗೆ ಪುತ್ರಶೋಕ 10 ಬೆಂಗಾಡಿನಲ್ಲಿ ದ್ರಾಕ್ಷೆ ಸಿಕ್ಕಿದಂತೆ ಇಸ್ರಯೇಲ್ ನನಗೆ ಸಿಕ್ಕಿತು. ಅಂಜೂರದ ಮರದ ಮೊತ್ತಮೊದಲ ಹಣ್ಣು ಕಣ್ಣಿಗೆ ಬೀಳುವಂತೆ ನಿಮ್ಮ ಪಿತೃಗಳು ನನಗೆ ಕಾಣಿಸಿಕೊಂಡರು. ಆದರೆ ಅವರು ಬಾಳ್‍ಪೆಗೋರಿಗೆ ಬಂದು ಬಾಳ್ ದೇವತೆಯ ಭಕ್ತರಾದರು. ಅವರು ನೆಚ್ಚಿಕೊಂಡ ದೇವತೆಯಂತೆ ನೀಚರಾದರು. 11 ಎಫ್ರಯಿಮರ ಮಹಿಮೆ ಪಕ್ಷಿಯಂತೆ ಹಾರಿಹೋಗುವುದು. ಅಲ್ಲಿ ಯಾರೂ ಮಕ್ಕಳನ್ನು ಹೆರುವುದಿಲ್ಲ; ಯಾರೂ ಗರ್ಭಿಣಿಯಾಗುವುದಿಲ್ಲ; ಯಾರೂ ಗರ್ಭ ಧರಿಸುವುದಿಲ್ಲ. 12 ಒಂದು ವೇಳೆ ಮಕ್ಕಳನ್ನು ಹೆತ್ತು ಸಾಕಿದರೂ ಅವರಾರೂ ಉಳಿಯದಂತೆ ಅವರಿಗೆ ನಿರಂತರವಾಗಿ ಪುತ್ರಶೋಕವನ್ನುಂಟುಮಾಡುವೆನು. ನಾನು ಅವರಿಗೆ ವಿಮುಖನಾಗುವೆನು. ಅವರ ಗತಿ ಹೇಳತೀರದಂತಾಗುವುದು. 13 ಎಫ್ರಯಿಮಿನ ಮಕ್ಕಳು ಬೇಟೆಗೆ ಗುರಿ ಆದವರಂತೆ ಕಾಣಿಸುತ್ತಾರೆ. ಎಫ್ರಯಿಮ್ ತನ್ನ ಪುತ್ರರನ್ನು ವಧ್ಯಸ್ಥಾನಕ್ಕೆ ಕರೆದೊಯ್ಯಬೇಕಾಗುವುದು. 14 ಸರ್ವೇಶ್ವರಾ, ಇವರಿಗೆ ಏನನ್ನು ವಿಧಿಸುವೆ? ಇವರಿಗೆ ಎಂಥ ಗತಿಯನ್ನು ಬರಮಾಡುವೆ? ಅವರ ಮಹಿಳೆಯರಿಗೆ ಗರ್ಭಪಾತವಾಗಲಿ! ಅವರ ಮೊಲೆ ಬತ್ತಿಹೋಗಲಿ! ಇಸ್ರಯೇಲರು ಅಲೆಮಾರಿಗಳಾಗುವರು 15 “ಅವರ ದುಷ್ಟತನ ಗಿಲ್ಗಾಲಿನಲ್ಲೇ ಪ್ರಾರಂಭವಾಯಿತು. ಅಲ್ಲೇ ಅವರು ನನ್ನ ದ್ವೇಷಕ್ಕೆ ಗುರಿಯಾದರು. ಅವರ ಪಾಪಕೃತ್ಯಗಳ ನಿಮಿತ್ತ ನನ್ನ ಆಲಯದಿಂದ ಹೊರಗಟ್ಟುವೆನು. ಅವರನ್ನು ಇನ್ನು ಪ್ರೀತಿಸೆನು; ಅವರ ಅಧಿಕಾರಿಗಳೆಲ್ಲ ದ್ರೋಹಿಗಳೇ. 16 ಎಫ್ರಯಿಮಿಗೆ ಏಟು ಬಿದ್ದಿದೆ; ಅವರ ವಂಶದ ಬೇರು ಬತ್ತಿಹೋಗಿದೆ. ಅವರು ಫಲಹೀನರಾಗಿದ್ದಾರೆ. ಮಕ್ಕಳನ್ನು ಹೆತ್ತರೂ ಅವಳ ಕರುಳ ಕುಡಿಯನ್ನು ಕತ್ತರಿಸಿಹಾಕುವೆನು.” 17 ತಮ್ಮ ಮಾತಿಗೆ ಕಿವಿಗೊಡದ ಈ ಜನರನ್ನು ಸರ್ವೇಶ್ವರ ತಳ್ಳಿಬಿಡುವರು. ಇತರ ಜನಾಂಗಗಳ ಮಧ್ಯೆ ಅವರು ಅಲೆಮಾರಿಗಳಂತೆ ಇರುವರು. |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India