ಹೋಶೇಯ 7 - ಕನ್ನಡ ಸತ್ಯವೇದವು C.L. Bible (BSI)1 “ನಾನು ನನ್ನ ಜನರ ದುರವಸ್ಥೆಯನ್ನು ನೀಗಿಸಿ ಇಸ್ರಯೇಲನ್ನು ಸ್ವಸ್ಥಗೊಳಿಸಬೇಕೆಂದಿರುವಾಗ ಎಫ್ರಯಿಮಿನ ಅಕ್ರಮ ಮತ್ತು ಸಮಾರ್ಯದ ದುಷ್ಟತನ ಬಯಲಿಗೆ ಬರುತ್ತವೆ. ಅವರು ಒಬ್ಬರಿಗೊಬ್ಬರು ಮೋಸಮಾಡುತ್ತಾರೆ. ಕಳ್ಳರಂತೆ ನುಗ್ಗಿ ಕನ್ನಹಾಕುತ್ತಾರೆ. ದರೋಡೆಗಾರರಂತೆ ದಾರಿಯಲ್ಲೇ ಸುಲಿಗೆಮಾಡುತ್ತಾರೆ. 2 ಆದರೆ ಅವರ ದುಷ್ಕೃತ್ಯಗಳೆಲ್ಲ ಸರ್ವೇಶ್ವರಸ್ವಾಮಿಯ ಜ್ಞಾಪಕದಲ್ಲಿ ಇರುತ್ತವೆ ಎಂಬುದನ್ನು ಅವರು ಮನದಟ್ಟುಮಾಡಿಕೊಂಡಿಲ್ಲ. ಅವರ ನೀಚಕೃತ್ಯಗಳು ಅವರನ್ನು ಆವರಿಸಿಕೊಂಡಿವೆ; ನನ್ನ ಕಣ್ಮುಂದೆಯೇ ಇವೆ. ಅರಮನೆಯಲ್ಲೇ ಒಳಸಂಚು 3 “ಅವರು ಅಧರ್ಮದಿಂದ ಅರಸನನ್ನು ಆನಂದಗೊಳಿಸುತ್ತಾರೆ; ಅಸತ್ಯದಿಂದ ಅಧಿಕಾರಿಗಳನ್ನು ಸಂತೋಷಪಡಿಸುತ್ತಾರೆ. 4 ಅವರೆಲ್ಲರು ವ್ಯಭಿಚಾರಿಗಳೇ; ಅವರು ಉರಿಯುವ ಒಲೆಗೆ ಸಮಾನರು. ರೊಟ್ಟಿಸುಡುವವನು ನಾದಿದ ಹಿಟ್ಟು ಹುಳಿಯಾಗುವವರೆಗೂ ಬಿಟ್ಟಿರುವ ಬೂದಿ ಮುಚ್ಚಿದ ಕೆಂಡಕ್ಕೆ ಸಮಾನರು. 5 ಅರಸನ ಹಬ್ಬದ ದಿನಗಳಲ್ಲಿ ಅಧಿಕಾರಿಗಳು ದ್ರಾಕ್ಷಾರಸವನ್ನು ಕುಡಿದು ಮತ್ತರಾಗುವಂತೆ ಮಾಡಿದರು. ಅರಸನು ಅಪಹಾಸ್ಯಮಾಡುವ ತುಂಟರ ಸಂಗಡ ಬೆರೆತುಕೊಂಡನು. 6 ಒಳಸಂಚಿನಿಂದ ಕೂಡಿದ ಅವರ ಹೃದಯ ಒಲೆಯಂತೆ ಉರಿಯುತ್ತದೆ. ಅವರ ಕೋಪಾಗ್ನಿ ರಾತ್ರಿಯೆಲ್ಲ ಹೊತ್ತಿಕೊಂಡೇ ಇರುತ್ತದೆ. ಬೆಳಗಾದದ್ದೇ ಧಗಧಗನೆ ಭುಗಿಲೇರುತ್ತದೆ. 7 “ಎಲ್ಲರು ಒಲೆಯಂತೆ ಉರಿಯುತ್ತ ತಮ್ಮ ಅಧಿಕಾರಿಗಳನ್ನೇ ನುಂಗಿಬಿಡುತ್ತಾರೆ. ಅವರ ಅರಸರೆಲ್ಲ ಸತ್ತುಬಿದ್ದಿದ್ದಾರೆ. ನನಗೆ ಮೊರೆಯಿಡುವವರು ಅವರಲ್ಲಿ ಯಾರೂ ಇಲ್ಲ.” ಇಸ್ರಯೇಲ್ ಮತ್ತು ಇತರ ರಾಷ್ಟ್ರಗಳು 8 “ಎಪ್ರಯಿಮ್ ಅನ್ಯರಾಷ್ಟ್ರಗಳೊಂದಿಗೆ ಬೆರೆತುಕೊಳ್ಳುತ್ತದೆ. ಅದು ತಿರುವಿಹಾಕಿದ ರೊಟ್ಟಿ. 9 ಅನ್ಯಜನರು ಅದರ ಶಕ್ತಿಯನ್ನು ಹೀರಿಕೊಂಡರೂ ಅದಕ್ಕೆ ಅರಿವಿಲ್ಲ. ಅದರ ತಲೆಗೂದಲು ನೆರೆತುಹೋದರೂ ಅದಕ್ಕೆ ಪ್ರಜ್ಞೆ ಇಲ್ಲ. 10 ಇಸ್ರಯೇಲಿನ ಅಹಂಕಾರವೇ ಅದರ ವಿರುದ್ಧ ಸಾಕ್ಷಿ ನುಡಿಯುತ್ತದೆ. ಇಷ್ಟೆಲ್ಲ ಸಂಭವಿಸಿದರೂ ಅದು ತನ್ನ ದೇವರಾದ ಸರ್ವೇಶ್ವರಸ್ವಾಮಿಯ ಬಳಿಗೆ ಹಿಂದಿರುಗುವುದಿಲ್ಲ; ಅವರನ್ನು ಆಶ್ರಯಿಸುವುದಿಲ್ಲ. 11 ಎಫ್ರಯಿಮ್ ಬುದ್ಧಿವಿವೇಕವಿಲ್ಲದ ಪಾರಿವಾಳದಂತೆ; ಅದರ ಜನರು ಈಜಿಪ್ಟನ್ನು ಸಹಾಯಕ್ಕೆ ಕರೆಯುತ್ತಾರೆ. ಅಸ್ಸೀರಿಯದ ಆಶ್ರಯಕ್ಕೆ ಓಡುತ್ತಾರೆ. 12 ಅವರು ಹೋಗುವಾಗ ನನ್ನ ಬಲೆಯನ್ನು ಅವರ ಮೇಲೆ ಬೀಸುವೆನು. ಆಕಾಶದ ಪಕ್ಷಿಗಳಂತೆ ಅವರನ್ನು ಕೆಳಕ್ಕೆ ಎಳೆದುಬಿಡುವೆನು. ಅವರ ದುಷ್ಕೃತ್ಯಗಳಿಗನುಸಾರ ಅವರನ್ನು ದಂಡಿಸುವೆನು. 13 “ನನ್ನನ್ನು ತೊರೆದುಬಿಟ್ಟದ್ದರಿಂದ ಅವರು ಹಾಳಾಗಲಿ, ನನಗೆ ದ್ರೋಹವೆಸಗಿದ್ದರಿಂದ ಅವರು ನಾಶವಾಗಲಿ! ನಾನು ಅವರನ್ನು ಉದ್ಧರಿಸಬೇಕೆಂದಿದ್ದರೂ ಅವರು ನನಗೆ ತಪ್ಪಾಗಿ ನಡೆದುಕೊಂಡಿದ್ದಾರೆ. 14 ಅವರು ಹೃದಯಪೂರ್ವಕವಾಗಿ ನನಗೆ ಪ್ರಾರ್ಥನೆಮಾಡುವುದಿಲ್ಲ. ಬದಲಿಗೆ ಅವರ ಹಾಸಿಗೆಗಳ ಮೇಲೆ ಬಿದ್ದು ಅರಚುತ್ತಾರೆ. ಧಾನ್ಯದ್ರಾಕ್ಷಾರಸಗಳಿಗಾಗಿ ಕಿರಿಚಿಕೊಳ್ಳುತ್ತಾರೆ. ನನಗೆ ವಿರುದ್ಧವಾಗಿ ಪ್ರತಿಭಟಿಸುತ್ತಾ ತಮ್ಮ ದೇಹಗಳನ್ನು ಪರಚಿಕೊಳ್ಳುತ್ತಾರೆ. 15 ನಾನೇ ಅವರಿಗೆ ಯುದ್ಧಾಭ್ಯಾಸ ಮಾಡಿಸಿ, ಅವರ ಭುಜಬಲವನ್ನು ಬೆಳೆಸಿದರೂ ನನ್ನ ವಿರುದ್ಧ ಕೇಡನ್ನು ಕಲ್ಪಿಸುತ್ತಾರೆ. 16 ಅವರು ಅತ್ತಿತ್ತ ತಿರುಗಿಕೊಳ್ಳುತ್ತಾರೆ. ದೇವರ ಕಡೆ ತಿರುಗಿಕೊಳ್ಳುವುದಿಲ್ಲ. ಅವರು ಮೋಸದ ಬಿಲ್ಲಿಗೆ ಸಮಾನರು. ಸೊಕ್ಕಿನ ನಾಲಿಗೆಯ ನಿಮಿತ್ತ ಅವರ ಮುಖಂಡರು ಹತರಾಗುವರು. ಅವರ ಪತನ ಈಜಿಪ್ಟಿಗೆ ಹಾಸ್ಯಾಸ್ಪದವಾಗುವುದು.” |
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.
Bible Society of India